ಮಂಗಳವಾರ, ಏಪ್ರಿಲ್ 12, 2016

ಹೂಲಿಯ ಇತರ ದೇವಾಲಯಗಳು


ರಾಮೇಶ್ವರ ದೇವಾಲಯ:

ನನ್ನ ಮೊದಲ ಭೇಟಿಯಲ್ಲಿ ಈ ದೇವಾಲಯದತ್ತ ತೆರಳುವುದು ಅಸಾಧ್ಯವಾಗಿತ್ತು. ಗಿಡಗಂಟಿ ಮತ್ತು ಪೊದೆಗಳಿಂದ ಸುತ್ತುವರಿದಿದ್ದ ದೇವಾಲಯದ ಸಮೀಪ ಸುಳಿಯುವುದು ಕೂಡಾ ಕಷ್ಟಕರವಾಗಿತ್ತು. ಎರಡನೇ ಭೇಟಿಯ ಸಮಯದಲ್ಲಿ ಎಲ್ಲವೂ ಬದಲಾಗಿತ್ತು. ದೇವಾಲಯಕ್ಕೆ ತೆರಳಲು ದಾರಿಯಿತ್ತು. ದೇವಾಲಯದೊಳಗೆ ದಿಬ್ಬದಂತೆ ರಾಶಿಬಿದ್ದಿದ್ದ ಮಣ್ಣನ್ನು ತೆಗೆದು ಹೊರಹಾಕಿ ಸ್ವಚ್ಛ ಮಾಡಲಾಗಿತ್ತು.



ಈ ದೇವಾಲಯವಿರುವ ಕೆರೆಯ ಏರಿ ಮತ್ತು ಭೀಮೇಶ್ವರ ದೇವಾಲಯವಿರುವ ಪ್ರಾಂಗಣ ಎದುರುಬದುರಾಗಿದ್ದು ನಡುವೆ ಕೆರೆಯಿದೆ. ಮೊದಲ ಸಲ ಬಂದಾಗ ಭೀಮೇಶ್ವರ ದೇವಾಲಯದ ಪ್ರಾಂಗಣದಿಂದ ಈ ದೇವಾಲಯ ಕಾಣಿಸುತ್ತಿರಲಿಲ್ಲ. ಅಷ್ಟು ದಟ್ಟವಾಗಿ ಬೆಳೆದಿದ್ದ ಗಿಡಗಂಟಿಗಳು ದೇವಾಲಯವನ್ನು ಸುತ್ತುವರೆದು ಮರೆಮಾಚಿದ್ದವು. ಈಗ ಮೇಲಿನ ಚಿತ್ರದಲ್ಲಿರುವಂತೆ ರಾಮೇಶ್ವರ ದೇವಾಲಯ ಸುಂದರವಾಗಿ ಗೋಚರಿಸುತ್ತದೆ.


ನಾಲ್ಕು ಕಂಬಗಳ ನವರಂಗ, ತೆರೆದ ಅಂತರಾಳ ಮತ್ತು ಗರ್ಭಗುಡಿಯನ್ನು ಹೊಂದಿರುವ ದೇವಾಲಯವಿದು. ಈ ದೇವಾಲಯಕ್ಕಿದ್ದ ಮುಖಮಂಟಪ ಈಗ ಬಿದ್ದುಹೋಗಿದೆ ಎಂದು ನಂಬಲಾಗಿದೆ. ನಂದಿಯ ಮೂರ್ತಿಯನ್ನು ಅಂತರಾಳದಲ್ಲಿ ಕಾಣಬಹುದು. ಗರ್ಭಗುಡಿಯು ಅಲಂಕಾರರಹಿತ ಪಂಚಶಾಖಾ ದ್ವಾರವನ್ನು ಹೊಂದಿದ್ದು ಲಲಾಟದಲ್ಲಿ ಗಜಲಕ್ಷ್ಮೀಯ ಕೆತ್ತನೆಯಿದೆ.



ಈ ದೇವಾಲಯದಲ್ಲಿ ದೊರಕಿರುವ ಶಿಲಾಶಾಸನವೊಂದನ್ನು ನವರಂಗದಲ್ಲಿರಿಸಲಾಗಿದೆ. ಇದರಲ್ಲಿ ವಿಷ್ಣುವಿನ ಶೇಷಶಯನ ರೂಪದ ಕೆತ್ತನೆಯನ್ನು ಕಾಣಬಹುದು. ಈ ಕೆತ್ತನೆಯಲ್ಲಿ ಬ್ರಹ್ಮ, ಲಕ್ಷ್ಮೀ ಮತ್ತು ಭೂದೇವಿಯರಿದ್ದಾರೆ. ಕಳಚೂರಿ ದೊರೆ ಬಿಜ್ಜಳನ ಆಳ್ವಿಕೆಯ ಸಮಯದಲ್ಲಿ ಇಸವಿ ೧೧೬೨ರಲ್ಲಿ ಈ ಶಾಸನವನ್ನು ಬರೆಯಲಾಗಿದೆ.



ಕೆರೆ ಸಿದ್ಧೇಶ್ವರ ದೇವಾಲಯ:

ಕೆರೆಯ ಏರಿಯ ಮೇಲೆ ಇರುವ ಈ ದೇವಾಲಯ ದೂರದಿಂದ ಉಗ್ರಾಣದಂತೆ ತೋರುತ್ತದೆ. ಸಂಪೂರ್ಣವಾಗಿ ಬಿದ್ದುಹೋಗಿದ್ದ ದೇವಾಲಯವನ್ನು ಬದಲಿ ಕಲ್ಲುಗಳನ್ನು ಬಳಸಿ ಪುನ: ನಿರ್ಮಿಸಲಾಗಿದೆ. ಸಭಾಮಂಟಪ, ಅಂತರಾಳ ಮತ್ತು ಗರ್ಭಗುಡಿಯನ್ನು ಹೊಂದಿರುವ ದೇವಾಲಯದ ಮುಖಮಂಟಪ ಎಂದೋ ಬಿದ್ದುಹೋಗಿದೆ.


ಸಭಾಮಂಟಪದ ನಡುವೆ ನಾಲ್ಕು ಕಂಬಗಳ ನವರಂಗ ಇದೆ. ಅಂತರಾಳದ ತ್ರಿಶಾಖಾ ದ್ವಾರವನ್ನು ಹೊಂದಿದ್ದು ಜಾಲಂಧ್ರಗಳನ್ನೂ ಹೊಂದಿದೆ. ದ್ವಾರದ ಇಕ್ಕೆಲಗಳಲ್ಲಿ ದೇವಕೋಷ್ಠಗಳಿದ್ದು ಖಾಲಿಯಿವೆ. ದೊರಕಿರುವ ಶಾಸನವೊಂದನ್ನು ಇಲ್ಲೇ ಇರಿಸಲಾಗಿದೆ.


ಗರ್ಭಗುಡಿಯಲ್ಲೇ ಶಿವಲಿಂಗದ ಜೊತೆಗೆ ನಂದಿಯೂ ಇದೆ. ಅಂತರಾಳವಿದ್ದರೂ ನಂದಿ ಗರ್ಭಗುಡಿಯಲ್ಲೇ ಆಸೀನನಾಗಿರುವುದು ಗಮನಾರ್ಹ. ಈ ದೇವಾಲಯಕ್ಕೂ ಒಳಗಡೆ ಎಲ್ಲೆಡೆ ಸುಣ್ಣ ಬಳಿಯಲಾಗಿದೆ.


ಗರ್ಭಗುಡಿಯು ಸುಂದರ ಕೆತ್ತನೆಗಳುಳ್ಳ ಪಂಚಶಾಖಾ ದ್ವಾರವನ್ನು ಹೊಂದಿದೆ. ಇಲ್ಲಿ ಜೋಡಿ ನೃತ್ಯಗಾರರ ಹಲವಾರು ಭಂಗಿಗಳನ್ನು ಕೆತ್ತಲಾಗಿದೆ. ಲಲಾಟದಲ್ಲಿ ಗಜಲಕ್ಷ್ಮೀಯ ಸುಂದರ ಕೆತ್ತನೆಯಿದೆ. ಇಕ್ಕೆಲಗಳಲ್ಲಿ ಅಷ್ಟದಿಕ್ಪಾಲಕರಿದ್ದಾರೆ, ಅಲಂಕಾರಿಕಾ ಕೆತ್ತನೆಗಳಿವೆ.



ಶಾಖೆಗಳ ತಳಭಾಗದಲ್ಲಿರುವ ಮಾನವರೂಪದ ಕೆತ್ತನೆಗಳೂ ಆಕರ್ಷಕವಾಗಿವೆ. ಆದರೆ ಈ ಎಲ್ಲಾ ಕೆತ್ತನೆಗಳು ಸುಣ್ಣದಲ್ಲಿ ಮುಳುಗಿಹೋಗಿದ್ದು ತಮ್ಮ ಆಕರ್ಷಣೆಯನ್ನು ಕಳಕೊಂಡಿವೆ.



ಸೂರ್ಯನಾರಾಯಣ ದೇವಾಲಯ:

ಕೆರೆಯ ಏರಿಯ ಮೇಲೆಯೇ ಇದೆ ಸೂರ್ಯನಾರಾಯಣ ದೇವಾಲಯ. ದೇವಾಲಯದ ಒಂದೊಂದೇ ಕಲ್ಲುಗಳು ಈಗಲೂ ನಿಧಾನವಾಗಿ ಕಳಚಿ ಊರಿನ ಮನೆಗಳನ್ನು ಸೇರಿಕೊಳ್ಳುತ್ತಿವೆ! ಗರ್ಭಗುಡಿ ಮತ್ತು ನವರಂಗಗಳನ್ನು ಮಾತ್ರ ಹೊಂದಿರುವ ಸಣ್ಣ ದೇವಾಲಯವಿದು.


ದೇವಾಲಯವನ್ನು ಗಮನಿಸಿದರೆ ಮುಖಮಂಟಪ ಬಹಳ ಹಿಂದೆನೇ ಕುಸಿದುಬಿದ್ದಿರುವಂತೆ ತೋರುತ್ತದೆ. ದೇವಾಲಯದ ಈಗ ಇರುವ ದ್ವಾರಕ್ಕೆ ಇಕ್ಕೆಲಗಳಲ್ಲಿ ಜಾಲಂಧ್ರಗಳಿವೆ ಮತ್ತು ಈ ಜಾಲಂಧ್ರಗಳಿಗೆ ತಾಗಿಕೊಂಡೇ ಒಂದೊಂದು ಕಲಾತ್ಮಕ ಕಂಬಗಳಿವೆ. ಹೆಚ್ಚಾಗಿ ನವರಂಗದ ದ್ವಾರಗಳು ಹೀಗಿರುತ್ತವೆ. ಸಣ್ಣ ಮುಖಮಂಟಪ ಇದ್ದ ಎಲ್ಲಾ ಕುರುಹುಗಳು ಕಾಣಬರುತ್ತವೆ. ಆದರೆ ಈಗ ಅಲ್ಲೇ ರಸ್ತೆ ಹಾದುಹೋಗಿದೆ ಮತ್ತು ರಸ್ತೆಯಿಂದ ಎರಡು ಹೆಜ್ಜೆ ಇಟ್ಟರೆ ದೇವಾಲಯದ ಒಳಗೆ ಬಂದು ಮುಟ್ಟಬಹುದು!



ದೇವಾಲಯದ ಪಾರ್ಶ್ವಗಳಲ್ಲಿ ಮಣ್ಣಿನ ರಾಶಿಯಿದೆ. ದೇವಾಲಯಕ್ಕೆ ಯಾವಾಗಲೂ ಬೀಗ ಹಾಕಿರುತ್ತದೆ. ಗರ್ಭಗುಡಿಯ ಮೇಲಿರುವ ಕದಂಬ ನಗರ ಶೈಲಿಯ ಶಿಖರದ ಮೇಲೆ ಹುಲ್ಲು ಬೆಳೆದಿರುವುದು ಬಿಟ್ಟರೆ ಇನ್ನೂ ಸುಸ್ಥಿತಿಯಲ್ಲಿದೆ. ಹೊರಗೋಡೆಯಲ್ಲಿ ಮಕರತೋರಣ ಮತ್ತು ಗೋಪುರಗಳ ಕೆತ್ತನೆಗಳಿವೆ.


ರುದ್ರಪಾದ ದೇವಾಲಯ:

ಸಂಪೂರ್ಣವಾಗಿ ಪಾಳುಬಿದ್ದ ದೇವಾಲಯವನ್ನು ಇತ್ತೀಚೆಗಷ್ಟೇ ಸ್ವಚ್ಚಗೊಳಿಸಲಾಗಿದೆ. ನನ್ನ ಮೊದಲ ಭೇಟಿಯಲ್ಲಿ ಇಲ್ಲಿಗೆ ಬರಲು ಸಾಧ್ಯವೇ ಆಗದಷ್ಟು ಮುಳ್ಳುಗಿಡಗಳು ದೇವಾಲಯವನ್ನು ಆವರಿಸಿಬಿಟ್ಟಿದ್ದವು.


ಶಿಥಿಲಗೊಂಡು ಜರ್ಝರಿತಗೊಂಡಿರುವ ದೇವಾಲಯದೊಳಗೆ ನವರಂಗ ಯಾವುದು ಗರ್ಭಗುಡಿ ಯಾವುದು ಎಂದೇ ಗೊಂದಲ ಉಂಟಾಗುತ್ತದೆ. ಸಣ್ಣ ಶಿವಲಿಂಗವೊಂದರ ಮುಂದೆ ಪಾದಗಳ ರಚನೆಯಿರುವ ಚೌಕಾಕಾರದ ಕಲ್ಲಿದೆ. ಇದೇ ಕಾರಣಕ್ಕೆ ಈ ದೇವಾಲಯವನ್ನು ರುದ್ರಪಾದ ದೇವಾಲಯವೆಂದು ಕರೆಯುತ್ತಾರೆ. ಪಾದಗಳ ಮುಂದೆ ಕಲ್ಲಿನ ಅಂಚಿನಲ್ಲಿ ಏನೋ ಬರೆದಿರುವುದನ್ನು ಕಾಣಬಹುದು.



ಇದೇ ರೀತಿ ಇನ್ನೊಂದು ಕಲ್ಲಿನ ಮೇಲೆ ನಾಲ್ಕು ಸಣ್ಣ ಪಾದರಕ್ಷೆಗಳ ಕೆತ್ತನೆಯಿದೆ. ಈ ಪಾದರಕ್ಷೆಗಳ ಮುಂದೆ ಶಂಖ ಚಕ್ರಗಳ ಕೆತ್ತನೆಯಿದ್ದು, ಹಿಂದೆ ಗದೆ ಮತ್ತು ಪದ್ಮಗಳ ಕೆತ್ತನೆಯಿದೆ ಹಾಗೂ ಸುತ್ತಲೂ ಕಮಲಗಳ ಕೆತ್ತನೆಯಿದೆ.


ರೇವಣಸಿದ್ಧೇಶ್ವರ ದೇವಾಲಯ:

ಶಿವಕಾಶಿ ಕಣಿವೆಯ ಪಾರ್ಶ್ವದಲ್ಲಿ ಹೂಲಿಯ ಇತರ ದೇವಾಲಯಗಳೆಡೆ ಮುಖಮಾಡಿ ಬೆಟ್ಟದ ಮೇಲೆ ರೇವಣಸಿದ್ಧೇಶ್ವರ ನೆಲೆಗೊಂಡಿದ್ದಾನೆ.


ಸಭಾಮಂಟಪ ಮತ್ತು ಗರ್ಭಗುಡಿ ಹೊಂದಿರುವ ಸರಳ ದೇವಾಲಯವಿದು. ೧೬ ಕಂಬಗಳ ಸಭಾಮಂಟಪದ ಒಂದು ಭಾಗದ ಗೋಡೆ ನೆಲಕಚ್ಚಿದೆ. ಇನ್ನೊಂದು ಪಾರ್ಶ್ವದ ಗೋಡೆ ಅರ್ಧಭಾಗದಷ್ಟು ಧರಾಶಾಯಿಯಾಗಿದೆ.


ಲಲಾಟದಲ್ಲಿ ಗಜಲಕ್ಷ್ಮೀಯ ಕೆತ್ತನೆಯುಳ್ಳ ತ್ರಿಶಾಖಾ ದ್ವಾರವನ್ನು ಗರ್ಭಗುಡಿಯು ಹೊಂದಿದೆ. ದ್ವಾರದ ಮೇಲ್ಭಾಗದಲ್ಲಿ ಮೂರು ಸಣ್ಣ ಗೋಪುರಗಳ ರಚನೆಯಿದೆ.


ಗರ್ಭಗುಡಿಯೊಳಗೆ ಪೀಠದ ಮೇಲೆ ರೇವಣಸಿದ್ಧೇಶ್ವರನ ಮೂರ್ತಿಯಿದೆ. ಇಲ್ಲಿ ದಿನಾಲೂ ಪೂಜೆ ಸಲ್ಲಿಸಲಾಗುತ್ತದೆ. ದೇವಾಲಯದ ಮುಂದೆನೇ ಹರಿದುಹೋಗುವ ಶಿವಕಾಶಿ ಹಳ್ಳ ಮಳೆ ಇದ್ದಾಗ ಇಲ್ಲೊಂದು ಸಣ್ಣ ಜಲಧಾರೆಯನ್ನು ನಿರ್ಮಿಸುತ್ತದೆ. ಹೂಲಿಗೆ ರವಿವಾರದಂದು ಕುಟುಂಬ ಸಮೇತ ವಿಹಾರಕ್ಕೆ ಬರುವವರಿದ್ದಾರೆ. ಅವರೆಲ್ಲಾ ನೇರವಾಗಿ ಬಂದು ವಿಶ್ರಮಿಸುವುದೇ ಈ ದೇವಾಲಯದ ಮುಂದೆ ಇರುವ ಮರಗಳ ನೆರಳಿನಲ್ಲಿ. ಇಲ್ಲೊಂದು ಎಂದೂ ಬತ್ತದ ಸಣ್ಣ ಬಾವಿಯಿದೆ. ಈ ಬಾವಿಯ ನೀರನ್ನು ಬಳಸಿ ಅಡುಗೆ ಮಾಡಿ, ಊಟ ಮುಗಿಸಿ, ಹೇರಳವಾಗಿ ಲಭ್ಯವಿರುವ ನೆರಳಿನಲ್ಲಿ ಮಧ್ಯಾಹ್ನದ ನಿದ್ದೆ ಮುಗಿಸಿ, ವಿಹಾರ(?) ಮುಗಿಸಿ ಹೋಗುವವರೂ ಇದ್ದಾರೆ.


ಮೈಲಾರಲಿಂಗೇಶ್ವರ ದೇವಾಲಯ:

ಬೆಟ್ಟದ ನಡುವೆ ತುಸು ಮೇಲ್ಭಾಗದಲ್ಲಿ ಇರುವ ಈ ದೇವಾಲಯು ಮುಖಮಂಟಪ ಮತ್ತು ಗರ್ಭಗುಡಿಯನ್ನು ಹೊಂದಿದೆ. ಈ ದೇವಾಲಯದ ಪರಿಸರವನ್ನು ಕೂಡಾ ಇತ್ತೀಚೆಗೆ ಸ್ವಚ್ಛ ಮಾಡಲಾಗಿದೆ.


ಭರಮಪ್ಪ ದೇವಾಲಯ:

ಕಲ್ಲುಗಳನ್ನು ಪೇರಿಸಿ ಇಡಲಾಗಿರುವ ಸಣ್ಣ ಗುಡಿಯೊಳಗಿರುವ ಶಿವಲಿಂಗವೊಂದನ್ನು ಊರವರು ’ಭರಮಪ್ಪ’ ಎಂದು ಪೂಜಿಸುತ್ತಾರೆ. ಹೊರಗೆ ಹಾನಿಗೊಂಡಿರುವ ಗಣೇಶನ ಮೂರ್ತಿಯೊಂದನ್ನು ಇರಿಸಲಾಗಿದೆ.


ಚನ್ನಮ್ಮಾ ದೇವಾಲಯ:

ಗರ್ಭಗುಡಿ ಮಾತ್ರ ಹೊಂದಿರುವ ಈ ದೇವಾಲಯ ಸಣ್ಣ ಜಗತಿಯ ಮೇಲಿದೆ. ಚನ್ನಮ್ಮನ ಸಣ್ಣ ವಿಗ್ರಹವನ್ನು ಇಲ್ಲಿ ಪೂಜಿಸಲಾಗುತ್ತದೆ. ಚನ್ನಮ್ಮನ ಬಳಿಯಲ್ಲೇ ಬಸವನ ಮೂರ್ತಿಯಿದೆ.


ಬನಶಂಕರಿ ದೇವಾಲಯ:

ಸಂಪೂರ್ಣವಾಗಿ ನವೀಕರಿಸಲಾಗಿರುವ ಬನಶಂಕರಿ ದೇವಾಲಯದಲ್ಲಿನ ವಿಗ್ರಹವನ್ನು ವಿಜಯನಗರ ಕಾಲದ್ದು ಎಂದು ನಂಬಲಾಗಿದೆ. ದಿನಾಲೂ ಪೂಜೆ ನಡೆಯುವ ಈ ದೇವಾಲಯದಲ್ಲಿ ಎರಡು ಶಾಸನಗಳು ದೊರಕಿವೆ.


ತ್ರಿಕೂಟೇಶ್ವರ ದೇವಾಲಯ:

ಊರಿನ ಹೊರಗೆ ಇರುವ ಈ ತ್ರಿಕೂಟ ದೇವಾಲಯ ನವೀನ ದೇವಾಲಯವೋ ಅಥವಾ ಪ್ರಾಚೀನ ದೇವಾಲಯವೋ ಎಂಬ ಮಾಹಿತಿ ದೊರಕಲಿಲ್ಲ. ಗೋಪುರಗಳನ್ನು ಕಂಡರೆ ಪ್ರಾಚೀನ ದೇವಾಲಯದಂತೆ ತೋರುತ್ತದೆ. ದೇವಾಲಯದ ನವೀಕರಣದ ಕೆಲಸ ಇನ್ನೂ ನಡೆಯುತ್ತಿತ್ತು. ದೇವಾಲಯಕ್ಕೆ ಬೀಗ ಜಡಿಯಲಾಗಿತ್ತು.

ಮಾಹಿತಿ: ಪ್ರಾಚ್ಯ ವಸ್ತು ಇಲಾಖೆ

4 ಕಾಮೆಂಟ್‌ಗಳು:

Aravind GJ ಹೇಳಿದರು...

ದೇವಾಲಯಗಳ ಪರಿಸರ ಸ್ವಚ್ಛವಾಗುತ್ತಿರುವುದು ಉತ್ತಮ ಬೆಳವಣಿಗೆ.

ಸೊಗಸಾದ ಲೇಖನ.

ರಾಜೇಶ್ ನಾಯ್ಕ ಹೇಳಿದರು...

ಅರವಿಂದ,
ಧನ್ಯವಾದ.

Unknown ಹೇಳಿದರು...

ASI ಹೂಲಿಯ ದೇವಾಲಯಗಳ ಸಂರಕ್ಷಣೆ ಶುರು ಮಾಡಿದೆ ಎಂದು ಓದಿದ ನೆನಪು, ನಿಜವೆ?

ರಾಜೇಶ್ ನಾಯ್ಕ ಹೇಳಿದರು...

ಸುರೇಶ್,
ಹೌದು. ASI ಹೂಲಿಯ ದೇವಾಲಯಗಳ ಸಂರಕ್ಷಣೆಯನ್ನು ಶುರು ಮಾಡಿದೆ.