ಭಾನುವಾರ, ಅಕ್ಟೋಬರ್ 25, 2015

ಸಿದ್ಧೇಶ್ವರ - ಮಳೆ - ಜಲಧಾರೆ


ಅದು ಅಗಸ್ಟ್ ತಿಂಗಳು, ೨೦೧೩. ಮಳೆಯಲ್ಲೇ ಚಾರಣ ಮಾಡುವ ಇರಾದೆ ಬಹಳ ದಿನಗಳಿಂದ ಇದ್ದರೂ, ನಾವು ಚಾರಣ ಮಾಡುವಾಗ ಎಡೆಬಿಡದೆ ಮಳೆ ಸುರಿಯಬೇಕಲ್ಲವೆ? ಆದರೆ ಈ ಚಾರಣದಲ್ಲಿ ಮಳೆ ನಮ್ಮ ಬೆನ್ನು ಬಿಡಲೇ ಇಲ್ಲ. ಮೂರು ಸಲ ಐದು ಹತ್ತು ನಿಮಿಷದ ಬಿಡುವು ಪಡೆದ ಮಳೆ ದಿನವಿಡೀ ಎಡೆಬಿಡದೆ ಸುರಿಯುತ್ತಿತ್ತು. ಅದು ಸಾಧಾರಣ ಮಳೆಯಾಗಿರಲಿಲ್ಲ. ಭರ್ಜರಿ ಮಳೆಯಾಗಿತ್ತು. ಜೊತೆಗೆ ಚಳಿಗಾಳಿಯ ಲೇಪನ. ಮೂರು ತಾಸಿನ ಚಾರಣದ ಬಳಿಕ ನಾವೆಲ್ಲಾ ತೊಯ್ದು ಗಡಗಡನೆ ನಡುಗುತ್ತಿದ್ದವು.


ಅಂದಿನ ಚಾರಣದಲ್ಲಿ ಮೊದಲ ಗುರಿ ಸಿದ್ಧೇಶ್ವರ ದೇವಸ್ಥಾನ. ಕರ್ನಾಟಕದ ತುತ್ತತುದಿ ಎಂದು ಈ ಸ್ಥಳವನ್ನು ನಕ್ಷೆಯಲ್ಲಿ ಗುರುತಿಸಲಾಗಿದೆ. ಆದರೆ ನನಗೆ ಈ ವಿಷಯದಲ್ಲಿ ಸ್ವಲ್ಪ ಸಂದೇಹವಿದೆ. ನನ್ನ ಪ್ರಕಾರ ಆ ಶ್ರೇಯ ಮುಳ್ಳಯ್ಯನಗಿರಿಗೆ ಸಲ್ಲುತ್ತದೆ. ಬಲ್ಲವರು ತಿಳಿಸಿದರೆ ಒಳ್ಳೆಯದು.


ಬೆಟ್ಟದ ತುದಿಯಲ್ಲಿ ನೆಲೆಗೊಂಡಿರುವ ಸಿದ್ಧೇಶ್ವರನ ಸುತ್ತಮುತ್ತಲಿನ ಪರಿಸರ ಸುಂದರವಾಗಿದೆ. ನಾವು ಸಿದ್ಧೇಶ್ವರ ದೇವಸ್ಥಾನ ಸಮೀಪಿಸಿದಂತೆ ಮಳೆ ತನ್ನ ಮೊದಲ ಬಿಡುವು ಪಡೆದಿತ್ತು. ಮಂಜು ಪಸರಿಸಿದ್ದ ವಾತಾವರಣದಲ್ಲಿ ಸುಮಾರು ಸಮಯ ಕಳೆದೆವು. ವಾತಾವರಣ ಎಷ್ಟು ಹಿತವಾಗಿತ್ತೆಂದರೆ ಅಲ್ಲಿಂದ ಕದಲಲು ಮನಸಾಗುತ್ತಿರಲಿಲ್ಲ.


ನಂತರ ಹಾಗೇ ಕಾಡಿನಲ್ಲಿ ಮುಂದೆ ಸಾಗಿದೆವು. ಮತ್ತೆ ಮಳೆ ತನ್ನ ಆರ್ಭಟ ಮುಂದುವರೆಸಿತು. ಕಾಡಿನ ನಡುವೆ ಸದ್ದುಮಾಡುತ್ತಾ ತೊರೆಯೊಂದು ಹರಿದು ಬರುತ್ತಿತ್ತು.


ಈ ತೊರೆಗೆ ಅಲ್ಲೊಂದು ಒಡ್ಡು ನಿರ್ಮಿಸಿ ನೀರನ್ನು ತಡೆಹಿಡಿಯಲಾಗಿತ್ತು. ಅಲ್ಲೊಂದಷ್ಟು ಸಮಯ ಕಳೆದೆವು.


ನಂತರ ಮುಂದೆ ಸಾಗಿದ ಚಾರಣ ಸುಂದರ ಸ್ಥಳಗಳ ಮೂಲಕ ಹಾದುಹೋದರೂ, ಮಳೆ ನಮ್ಮ ಕ್ಯಾಮರಾಗಳನ್ನು ಹೊರಗೆ ತೆಗೆಯಲು ಬಿಡಲೇ ಇಲ್ಲ. ಒಂದೆಡೆ ವಿಶಾಲವಾದ ಬಯಲು ಪ್ರದೇಶದ ಮೂಲಕ ಹಾದುಹೋದೆವು. ಇಲ್ಲಿ ಮಳೆಯ ನಿಜವಾದ ಶಕ್ತಿ ಮತ್ತು ತಾಕತ್ತಿನ ಬಗ್ಗೆ ನಮಗೆ ಅರಿವಾಯಿತು. ಒಂದು ಹೆಜ್ಜೆ ಇಡಲೂ ಪರದಾಡಬೇಕಾಯಿತು. ಹತ್ತಡಿ ಮುಂದೆ ಏನಿದೆ ಎಂದು ಕಾಣುತ್ತಿರಲಿಲ್ಲ. ಬಾಣದಂತೆ ಮಳೆಯ ದೊಡ್ಡ ಹನಿಗಳು ನಮ್ಮನ್ನು ಎಲ್ಲೆಂದರಂತೆ ಚುಚ್ಚುತ್ತಿದ್ದವು. ಅಂದು ಆಕಾಶವೇ ಬಾಣಭರಿತ ಬತ್ತಳಿಕೆಯಾಗಿತ್ತು. ಆ ಬಯಲು ಪ್ರದೇಶ ದಾಟಲು ನಮಗೆ ೨೦ ನಿಮಿಷಗಳು ಬೇಕಾದವು. ಮತ್ತೆ ಕಾಡನ್ನು ಹೊಕ್ಕಾಗ ನಿಟ್ಟುಸಿರುಬಿಟ್ಟೆವು.


ನಮ್ಮಲ್ಲಿ ಯಾರಿಗೂ ಅಂತಹ ಅನುಭವ ಆಗಿರಲಿಲ್ಲ. ಬಿರುಬಿಸಿಲಿನಲ್ಲಿ ನಡೆದು ದಣಿದಂತೆ, ಆ ಬಯಲುಪ್ರದೇಶ ದಾಟುವಾಗ ದಣಿದಿದ್ದೆವು. ಕಾಡು ಮತ್ತೆ ಆರಂಭವಾದಲ್ಲಿ, ಮಳೆ ಆ ಬಯಲುಪ್ರದೇಶವನ್ನು ಚಿಂದಿ ಮಾಡುವುದನ್ನು ನೋಡುತ್ತಾ ಒಂದೈದು ನಿಮಿಷ ವಿಶ್ರಮಿಸಿದೆವು.


ತದನಂತರ ಬೆಟ್ಟವನ್ನು ಇಳಿದು ಒಂದು ಊರನ್ನು ಹೊಕ್ಕೆವು. ಊರನ್ನು ದಾಟಿ, ಊರಿನ ಹೊರವಲಯದ ಮೂಲಕ ಹಾದುಹೋಗುವಾಗ ಅಲ್ಲಿ ಮತ್ತೆ ಸುಂದರ ದೃಶ್ಯಾವಳಿ. ಆದರೆ ಮಳೆ ಮತ್ತೆ ನಮಗೆ ಚಿತ್ರಗಳನ್ನು ತೆಗೆಯಲು ಅವಕಾಶ ನೀಡಲೇ ಇಲ್ಲ.


ಸುಮಾರು ದೂರ ಕ್ರಮಿಸಿದ ಬಳಿಕ ಕಣಿವೆಯೊಂದರ ಅಂಚಿಗೆ ಬಂದೆವು. ಬಲಭಾಗದಲ್ಲಿ ಜಲಧಾರೆ ನಿರ್ಮಿಸುವ ಹಳ್ಳವು ಧುಮುಕುತ್ತಿತ್ತು. ಮರ, ಗಿಡ, ಬೇರು ಇತ್ಯಾದಿಗಳನ್ನು ಹಿಡಿದು ಕೆಳಗಿಳಿಯಲಾರಂಭಿಸಿದೆವು. ಮಳೆಯ ಇರುವಿಕೆ, ಕೆಳಗಿಳಿಯುವುದನ್ನು ಇನ್ನಷ್ಟು ತ್ರಾಸದಾಯಕವನ್ನಾಗಿ ಮಾಡಿತ್ತು. ಸುಮಾರು ಇಪ್ಪತ್ತು ನಿಮಿಷಗಳ ಬಳಿಕ ಮತ್ತದೇ ಹಳ್ಳ ಎದುರಾಯಿತು. ಹಳ್ಳವನ್ನು ದಾಟಿ ಆ ದಟ್ಟ ಕಾಡಿನ ನಡುವೆ ನಡೆದು ಜಲಧಾರೆಯ ಬುಡಕ್ಕೆ ತಲುಪಿದೆವು.


ಸುಮಾರು ೪೦ ಅಡಿ ಎತ್ತರವಿರುವ ಜಲಧಾರೆ ಎರಡು ಕವಲುಗಳಲ್ಲಿ ಧುಮುಕುತ್ತಿತ್ತು. ಒಂದು ಕವಲು ರೌದ್ರವಾಗಿದ್ದರೆ ಇನ್ನೊಂದು ಸೌಮ್ಯವಾಗಿತ್ತು.


ಜಲಧಾರೆಯ ತಳದಲ್ಲಿ ಹೆಚ್ಚು ಸ್ಥಳವಿಲ್ಲ. ಆದರೆ ಕಾಡಿನ ಪ್ರಾಕೃತಿಕ ಛಾವಣಿ ನಮಗೆ ಮಳೆಯಿಂದ ಸುಮಾರಾಗಿ ರಕ್ಷಣೆಯನ್ನು ನೀಡಿತ್ತು. ಮುಖ್ಯವಾಗಿ ಚಿತ್ರಗಳನ್ನು ತೆಗೆಯಲು ನಮಗೆ ಸ್ವಲ್ಪ ಆಸ್ಪದ ನೀಡಿತ್ತು.


ನೆಲಕ್ಕಪಳಿಸಿದ ಕೂಡಲೇ ಹಳ್ಳವು ಎಡಕ್ಕೆ ತಿರುವು ಪಡೆದು ನಂತರ ಮತ್ತೆ ಬಲಕ್ಕೆ ತಿರುವು ಪಡೆದು ಹಾಗೇ ಕಾಡಿನಲ್ಲಿ ಮುಂದಕ್ಕೆ ಸಾಗುತ್ತದೆ.


ಕಣಿವೆಯನ್ನೇರಿ ಹಳ್ಳಿಯ ಹೊರವಲಯ ಪ್ರವೇಶಿಸುವಷ್ಟರಲ್ಲಿ ಮಳೆ ಸಂಪೂರ್ಣವಾಗಿ ನಿಂತುಬಿಟ್ಟಿತು. ಜಲಧಾರೆಯೆಡೆ ಸಾಗುವಾಗ ಮಳೆಯ ಕಾರಣ ಚಿತ್ರಗಳನ್ನು ತೆಗೆಯಲಾಗದ ನಮಗೆ ಈಗ ಚಿತ್ರಗಳನ್ನು ತೆಗೆಯಲು ಫುಲ್ ಟೈಮ್. ಮಳೆ ನಿಂತ ಕೂಡಲೇ ಇರುವ ವಾತಾವರಣವೇ ವಿಶಿಷ್ಟವಾದದ್ದು. ಕೆಲವು ಚಿತ್ರಗಳನ್ನು ತೆಗೆದು ಮುನ್ನಡೆದೆವು.


ನಮ್ಮ ವಾಹನ ಇರುವಲ್ಲಿ ತಲುಪಿದಾಗ ಚಾರಣ ಆರಂಭಿಸಿ ಮೂರುವರೆ ತಾಸುಗಳಾಗಿದ್ದವು. ಅಲ್ಲಿ ರಸ್ತೆಯ ಬದಿಯಲ್ಲಿದ್ದ ದೇವಾಲಯದ ಆವರಣದಲ್ಲಿ ಉದರ ಪೋಷಣೆ ಮುಗಿಸಿ ಹಿಂತಿರುಗಿದೆವು.

ಸೋಮವಾರ, ಅಕ್ಟೋಬರ್ 19, 2015

ಮೇಲುಕೋಟೆ ಮೆಲುಕು...


ಮೇಲುಕೋಟೆ. ಇನ್ನೂ ತನ್ನ ಪುರಾತನ ವೈಭವದಿಂದ ಹೊರಬರದೇ, ಆ ಛಾಯೆಯಿಂದ ಹೊರಬರಲೂ ಇಚ್ಛಿಸದೆ, ತಾನಿನ್ನೂ ತನ್ನ ಗತಕಾಲದ ವೈಭವದಲ್ಲೇ ಇರಲು ಬಯಸುವ ಊರಿನಂತೆ ಕಂಡಿತು. ಕೆಲವು ಮೆಲುಕುಗಳು ಚಿತ್ರರೂಪದಲ್ಲಿ...