ಮಂಗಳವಾರ, ಸೆಪ್ಟೆಂಬರ್ 30, 2014

ಸಿದ್ಧೇಶ್ವರ ದೇವಾಲಯ - ಶಿವಪುರ


ಊರಿನ ಹೊರಗಿರುವ ಕೆರೆಯ ತಟದಲ್ಲಿ ನಿರ್ಜನ ಪ್ರದೇಶದಲ್ಲಿ ಸಿದ್ಧೇಶ್ವರ ದೇವಾಲಯವಿದೆ. ದೇವಾಲಯ ಸಂಪೂರ್ಣವಾಗಿ ನವೀಕರಣಗೊಂಡಿದೆ. ಹೊರಗಿನಿಂದ ನೋಡಿದರೆ ’ಪುರಾತನ’ ದೇವಾಲಯವೆಂಬ ಯಾವ ಕುರುಹೂ ದೊರೆಯದು. ದೇವಾಲಯದ ನಿರ್ಮಾಣದ ಶೈಲಿ ಸ್ವಲ್ಪ ಭಿನ್ನವಾಗಿದೆ. ನೇರವಾಗಿ ಮೇಲೆದ್ದಿರುವ ಗೋಡೆಗಳು, ಆಯತಾಕಾರವಾಗಿ ಕಾಣುವ ದೇವಾಲಯ, ಮೇಲೆ ಕಾಣಬರುವ ವೃತ್ತಾಕಾರದ ಗೋಪುರ, ಗೋಪುರದ ಕೆಳಗಿರುವ ಚೌಕಾಕಾರದ ಕೋಣೆ, ಈ ಕೋಣೆಗಿರುವ ೮ ಕಮಾನುಗಳು, ಇವನ್ನೆಲ್ಲ ಮೂಲ ದೇವಾಲಯ ಹೊಂದಿತ್ತೋ ಅಥವಾ ನಂತರದ ದಿನಗಳಲ್ಲಿ ಸೇರಿಸಲಾಯಿತೋ ಎಂಬ ಮಾಹಿತಿ ದೊರಕಲಿಲ್ಲ.


ನವರಂಗ, ಅಂತರಾಳ ಮತ್ತು ಗರ್ಭಗುಡಿಯನ್ನು ಹೊಂದಿರುವ ದೇವಾಲಯದ ನಿರ್ಮಾಣದ ವರ್ಷದ ಬಗ್ಗೆ ಮಾಹಿತಿ ದೊರಕಿಲ್ಲ. ಆದರೆ ಹಿಂದಿನ ಕಾಲದ ಪ್ರಸಿದ್ಧ ಶರಣರಾದ ’ಸಿದ್ಧರಾಮ’ರ ನೆನಪಿನಲ್ಲಿ ಈ ದೇವಾಲಯವನ್ನು ನಿರ್ಮಿಸಲಾಗಿದೆ ಎನ್ನಲಾಗುತ್ತದೆ.


ಪೂರ್ವದ ಪ್ರಮುಖ ದ್ವಾರವನ್ನು ಹೊರತುಪಡಿಸಿ, ದೇವಾಲಯಕ್ಕೆ ಉತ್ತರದಿಂದ ಇನ್ನೊಂದು ದ್ವಾರವಿದೆ. ಎರಡೂ ದ್ವಾರಗಳು ಐದು ತೋಳುಗಳನ್ನು ಹೊಂದಿದ್ದು, ನವರಂಗಕ್ಕೆ ತೆರೆದುಕೊಳ್ಳುತ್ತವೆ. ಅಲ್ಲದೆ, ಈ ಎರಡೂ ದ್ವಾರಗಳ ದ್ವಾರದ ಇಕ್ಕೆಲಗಳಲ್ಲಿ ಚಾಮರ ಬೀಸುತ್ತಿರುವ ಪರಿಚಾರಿಕೆಯರ (ಶ್ರೀದೇವಿ ಹಾಗೂ ಭೂದೇವಿಯರಿರಬಹುದು) ನಡುವೆ ಇರುವ ವಿಷ್ಣುವಿನ ಮೂರ್ತಿಯನ್ನು ಕಾಣಬಹುದು.


ಪ್ರಮುಖ ದ್ವಾರದ ಸಮೀಪದಲ್ಲಿರುವ ಕವಾಟವೊಂದರಲ್ಲಿ ಉಮಾಮಹೇಶ್ವರನ ಮೂರ್ತಿಯಿದೆ. ಭೈರವನ ಮೂರ್ತಿಯೊಂದನ್ನು ಪ್ರಮುಖ ದ್ವಾರದ ಬಳಿಯಲ್ಲಿ ಇರಿಸಲಾಗಿದೆ.


ನವರಂಗಲ್ಲಿರುವ ನಾಲ್ಕು ಕಂಬಗಳು ಈಗ ವರ್ಣಮಯವಾಗಿಬಿಟ್ಟಿವೆ. ಈ ನಾಲ್ಕು ಕಂಬಗಳಲ್ಲಿ, ಗರ್ಭಗುಡಿಯ ದ್ವಾರಕ್ಕೆ ಸಮೀಪದಲ್ಲಿರುವ ಎರಡು ಕಂಬಗಳು ಭಿನ್ನವಾಗಿದ್ದು, ಸುಂದರ ಅಲಂಕಾರಿಕಾ ಕೆತ್ತನೆಗಳನ್ನು ಹೊಂದಿರುವುದನ್ನು ಕಾಣಬಹುದು. ನವರಂಗದ ಛಾವಣಿಯಲ್ಲೂ ಉತ್ತಮ ಕೆತ್ತನೆಯಿದ್ದು, ದೇವಾಲಯಕ್ಕೆ ಬೀಗ ಹಾಕಲಾಗಿದ್ದರಿಂದ ನನಗೆ ಅವನ್ನು ನೋಡಲಾಗಲಿಲ್ಲ.


ದೇವಾಲಯದ ಮುಂದೆ ಪುಷ್ಕರಿಣಿಯೊಂದಿದೆ. ಈಗ ಪಾಳುಬಿದ್ದಿರುವ ಈ ಪುಷ್ಕರಿಣಿ ಕಸಕಡ್ಡಿಗಳಿಂದ ತುಂಬಿಹೋಗಿದೆ. ದೇವಾಲಯದಿಂದ ಪುಷ್ಕರಿಣಿಗೆ ಇಳಿಯಲು ಮಾಡಿರುವ ಮೆಟ್ಟಿಲುಗಳ ವ್ಯವಸ್ಥಿತ ರಚನೆ ಈಗಲೂ ಉಳಿದುಕೊಂಡಿದೆ.


ಈ ಪುಷ್ಕರಿಣಿಯ ಸುತ್ತಲೂ ದೇವಾಲಯದ ವೈಭವದ ದಿನದ ಕುರುಹುಗಳನ್ನು ಕಾಣಬಹುದು. ಅಲ್ಲಲ್ಲಿ ತುಂಡಾಗಿ ಬಿದ್ದಿರುವ ಕೆತ್ತನೆಗಳು ರಾಶಿಯೇ ಇಲ್ಲಿದೆ.


ಸಮೀಪದಲ್ಲೇ ಎರಡು ಸಣ್ಣ ಗುಡಿಗಳಿವೆ. ದೇವಾಲಯದ ಮುಂದೆ ದೀಪಸ್ತಂಭವಿದೆ. ಹಿಂಭಾಗದಲ್ಲಿ ಕುದುರೆಲಾಯವನ್ನು ಹೋಲುವ ಕಟ್ಟಡವಿದೆ. ಕನ್ನಡ ಮಹಾಕವಿ ಹರಿಹರನು ತನ್ನ ಕಾವ್ಯವೊಂದರಲ್ಲಿ ಈ ದೇವಾಲಯವನ್ನು ಉಲ್ಲೇಖಿಸಿದ್ದಾನೆ.

ಮಾಹಿತಿ: ಪುರಾತತ್ವ ಇಲಾಖೆ

ಭಾನುವಾರ, ಸೆಪ್ಟೆಂಬರ್ 21, 2014

ಆಂಗ್ಲರ ಸಮಾಧಿಗಳು - ಕುಮಟಾ


ಕುಮಟಾದಲ್ಲಿ ಇಬ್ಬರು ಬ್ರಿಟಿಷ್ ಅಧಿಕಾರಿಗಳು ಶಾಶ್ವತವಾಗಿ ಮಲಗಿರುವ ಸ್ಥಳವನ್ನು ಪುರಾತತ್ವ ಇಲಾಖೆ ಜತನದಿಂದ ಕಾಯ್ದುಕೊಂಡಿದೆ! ಈ ಪುರಾತತ್ವ ಇಲಾಖೆ ಹಾಗೂ ಲೋಕೋಪಯೋಗಿ ಇಲಾಖೆ ಇವೆರಡನ್ನು ಹುಟ್ಟುಹಾಕಿದವರು ಆಂಗ್ಲರು. ಅವರು ಇಟ್ಟ ಸುದೃಢ ತಳಪಾಯವೇ ಈ ಎರಡೂ ಇಲಾಖೆಗಳು ಇಂದಿಗೂ ಸಶಕ್ತವಾಗಿ ಕಾರ್ಯನಿರ್ವಹಿಸಲು ಮೂಲ ಕಾರಣ.


ಪಟ್ಟಣದ ನಟ್ಟನಡುವೆ ಸುಮಾರಾಗಿ ವಿಶಾಲವಾಗಿರುವ ಸ್ಥಳದ ನಡುವೆ ಆಯತಾಕಾರದ ಪ್ರಾಂಗಣದ ಒಳಗೆ ಈ ಎರಡು ಸಮಾಧಿಗಳಿವೆ. ಒಬ್ಬ ಲೋಕೋಪಯೋಗಿ ಇಲಾಖೆಯ ಸಹಾಯಕ ಅಭಿಯಂತನಾಗಿದ್ದರೆ ಇನ್ನೊಬ್ಬ ಬ್ರಿಟಿಷ್ ಸಂಸ್ಥೆಯೊಂದರ ಅಭಿಯಂತನಾಗಿದ್ದ.


ಲೋಕೋಪಯೋಗಿ ಇಲಾಖೆಯ ವ್ಯಕ್ತಿ ತನ್ನ ೩೮ನೇ ವಯಸ್ಸಿನಲ್ಲಿ ಗತಿಸಿದ್ದು, ಆತನ ಸಮಾಧಿಯ ಮೇಲಿರುವ ಫಲಕದಲ್ಲಿ ಈ ಕೆಳಗಿನ ಮಾಹಿತಿಯನ್ನು ನೀಡಲಾಗಿದೆ.


In Memory Of
Henry Jesson
Sub Engineer
P.W.D.
Born Warwick
24 Nov 1839
Died Coompta
10 May 1877
 

ಇನ್ನೊಬ್ಬ ವ್ಯಕ್ತಿ ತನ್ನ ೫೨ನೇ ವಯಸ್ಸಿನಲ್ಲಿ ಮೃತಪಟ್ಟಿದ್ದು, ಆತನ ಸಮಾಧಿಯ ಮೇಲೆ ಈ ಕೆಳಗಿನ ಮಾಹಿತಿಯಿದೆ.


Sacred to the Memory of
John Albert Cope
Eng. - Wests Press Co
Born London
15th June 1828
Died Coompta
11th April 1880