ಭಾನುವಾರ, ಆಗಸ್ಟ್ 10, 2014

ಕಾರ್ಗದ್ದೆ...


ಅಕ್ಟೋಬರ್ ೨೦೦೪. ಅಂದು ದೂರದಿಂದ ಈ ಜಲಧಾರೆಯನ್ನು ನೋಡಿದಾಗ, ಸಮೀಪ ತೆರಳಲು ದಾರಿ ಕೇಳೋಣವೆಂದು ರಸ್ತೆ ಸಮೀಪದಲ್ಲಿದ್ದ ಮನೆಯೊಂದಕ್ಕೆ ತೆರಳಿದೆವು. ’ದಾರಿಯಲ್ಲಿ ದೊಡ್ಡ ದೊಡ್ಡ ಬಂಡೆಗಳಿವೆ. ಅವುಗಳನ್ನು ದಾಟಲು ಅಸಾಧ್ಯ. ದಾರಿ ತುಂಬಾ ಹೆಬ್ಬಾವುಗಳಿವೆ. ಬೇರೆ ಹಾವುಗಳೂ ಇವೆ’ ಎಂದು ಆ ಮನೆಯ ಯಜಮಾನ ತಿಳಿಸಿದ. ಆತ ಮಾತನಾಡಿದ ರೀತಿ ನೋಡಿ, ಆತ ಹೇಳಿದ್ದೆಲ್ಲಾ ಸುಳ್ಳು ಎಂದು ಅರಿಯಲು ನಮಗೆ ಹಚ್ಚು ಸಮಯ ಬೇಕಾಗಲಿಲ್ಲ. ಮುಂದಿನ ವರ್ಷ ಇನ್ನೊಂದು ಸಲ ಪ್ರಯತ್ನಿಸುವ ಎಂದು ಅಲ್ಲಿಂದ ಹಿಂತಿರುಗಿದೆವು.


ಆ ಸೀಮೆಯ ನನ್ನ ಗೆಳೆಯರೊಬ್ಬರು, ’ಇಲ್ಲೊಂದು ಫಾಲ್ಸ್ ಇದೆ, ಬನ್ನಿ, ತೋರಿಸ್ತೀನಿ’ ಎಂದು ನಾಲ್ಕಾರು ವರ್ಷಗಳಿಂದ ಹೇಳುತ್ತಿದ್ದರು. ಅವರು ಹೇಳುತ್ತಿದ್ದ ಫಾಲ್ಸ್ ಕೂಡಾ ಇದೇ ಎಂದು ನನಗೆ ಅರಿವಾಗಲಿಲ್ಲ. ಒಟ್ಟು ೨ ಫಾಲ್ಸ್ ನೋಡೋದಿದೆ ಎಂದು ಸಂತೋಷದಿಂದ ಇದ್ದೆ. ಅಂತೂ ಮೊದಲ ಪ್ರಯತ್ನದ ಒಂಬತ್ತು ವರ್ಷಗಳ ಬಳಿಕ, ೨೦೧೩ರಲ್ಲಿ ಆ ನನ್ನ ಗೆಳೆಯರ ಒತ್ತಾಯಕ್ಕೆ ಮಣಿದು ಅವರು ಹೇಳುತ್ತಿದ್ದ ಫಾಲ್ಸ್ ನೋಡೋಣವೆಂದು ಅತ್ತ ಕಡೆ ಹೊರಟೆವು. ಅವರ ಹಳ್ಳಿಯ ಬಳಿ ನಾವು ಬಸ್ಸಿನಿಂದ ಇಳಿದೆವು.
 

ಈ ಜಲಧಾರೆಗೆ ತೆರಳಲು ಚಾರಣ ದಾರಿಯೂ ಇದ್ದು ಅದು ಬಹಳ ಕಷ್ಟಕರವೆಂದು ನನ್ನ ಗೆಳೆಯ ತಿಳಿಸಿದರು. ಇನ್ನೊಂದು ಸುಲಭದ ದಾರಿಯಿದ್ದು, ರಸ್ತೆಯಿಂದ ೧೦ ನಿಮಿಷ ನಡೆದರಾಯಿತು ಎಂದೂ ತಿಳಿಸಿದರು. ಆರು ತಾಸು ಬಸ್ಸು ಪ್ರಯಾಣ ಮಾಡಿ ಸುಸ್ತಾಗಿದ್ದ ನಾವು ಆ ಸುಲಭದ ದಾರಿಯನ್ನೇ ಆಯ್ದುಕೊಂಡೆವು. ದಾರಿಯಲ್ಲಿ ಒಂದೆಡೆ ನಿಲ್ಲಿಸಿ, ದೂರದಲ್ಲಿ ಕಾಣುತ್ತಿದ್ದ ಜಲಧಾರೆಯನ್ನು ತೋರಿಸಿ,  ’ಅದೇ ನಾವು ಹೋಗುವ ಫಾಲ್ಸ್’ ಎಂದು ತೋರಿಸಿದರು. ಅದು ೨೦೦೪ರಲ್ಲಿ ದೂರದಿಂದ ನಾನು ನೋಡಿದ ಫಾಲ್ಸ್! 


ರಸ್ತೆಯ ಬದಿಯಿಂದ ಅಸ್ಪಷ್ಟವಾಗಿ ಗೋಚರಿಸುತ್ತಿದ್ದ ಜಲಧಾರೆಯೆಡೆ ನಡೆಯಲಾರಂಭಿಸಿದೆವು. ಅಬ್ಬಾ! ಅದು ದಾರಿಯೇ? ಫಿಟ್ ಇದ್ದ ಯುವಕರಿಗೇ ಸವಾಲೆಸೆಯುವ ದಾರಿಯಾಗಿತ್ತದು. ಇನ್ನು ಅತ್ತ ಯುವಕರೂ ಅಲ್ಲದ ಇತ್ತ ಅಷ್ಟಾಗಿ ಫಿಟ್ಟೂ ಇಲ್ಲದ ನಮಗೆ ಇದೊಂದು ಹರಸಾಹಸ ಪಡುವ ಬಹಳ ಬಹಳ ಬಹಳ ಕಷ್ಟದ ದಾರಿಯಾಗಿತ್ತು. ಎಲ್ಲೆಂದರಲ್ಲಿ ಕೈಯಿಡುವಂತಿಲ್ಲ, ಎಲ್ಲೆಂದರಲ್ಲಿ ಕಾಲಿಡುವಂತಿಲ್ಲ. ಅಷ್ಟೇ ಅಲ್ಲದೆ, ಹಿಡಿದುಕೊಳ್ಳಲು ಸರಿಯಾದ ಆಧಾರವಿಲ್ಲ, ಕಾಲಿಡಲು ಸರಿಯಾದ ಸ್ಥಳವಿಲ್ಲ. ಸುಲಭದ ಹೆಜ್ಜೆಯೇ ಇರಲಿಲ್ಲ. ಪ್ರತೀ ಹೆಜ್ಜೆ ನಮಗೆ ಸವಾಲೆಸೆಯುತ್ತಿತ್ತು. ನೆಲವೆಲ್ಲಾ ತೇವದಿಂದ ಕೂಡಿದ್ದರಿಂದ ಎಲ್ಲೆಡೆ ಜಾರುತ್ತಿತ್ತು ಕೂಡಾ. ಎಷ್ಟೇ ಕಷ್ಟದ ದಾರಿಯನ್ನೂ ಸಲೀಸಾಗಿ ದಾಟುವ ಮಾದಣ್ಣ ಕೂಡಾ ಅಂದು, ’ಉಂದು ಬೊಡ್ಚಿತ್ತಂಡ್ ಯಂಕ್ಲೆಗ್ (ಇದು ಬೇಡಾಗಿತ್ತು ನಮಗೆ)’ ಎಂದು ಉದ್ಗರಿಸಿದರು.

 

ಬೆಟ್ಟದ ಕಡಿದಾದ ಇಳಿಜಾರನ್ನು ಅಡ್ಡವಾಗಿ ಸೀಳಿ ಜಲಧಾರೆಯತ್ತ ಹೋಗಬೇಕಾಗಿದ್ದರಿಂದ, ಈ ೧೦ ನಿಮಿಷದ ದಾರಿ (ನನ್ನ ಗೆಳೆಯನ ಪ್ರಕಾರ) ಕ್ರಮಿಸಲು, ನಮಗೆ ೫೦ ನಿಮಿಷಗಳು ಬೇಕಾದವು! ಇದು ಸುಲಭದ ದಾರಿ? ಹ್ಹಾ, ಯಾವನೋ ಹೇಳಿದ್ದು?!!


ಆದರೆ ಜಲಧಾರೆಯ ನೋಟವಿದೆಯಲ್ಲ..... ಅಷ್ಟು ಕಷ್ಟಪಟ್ಟು, ಮೈಕೈ ಎಲ್ಲಾ ನೋಯಿಸಿಕೊಂಡು ಬಂದಿದ್ದು ಸಾರ್ಥಕವೆನಿಸಿತು. ಅತ್ಯದ್ಭುತ ಜಲಧಾರೆ. ಮೂರು ಹಂತಗಳಲ್ಲಿ ಸುಮಾರು ೨೦೦ ಅಡಿ ಆಳಕ್ಕೆ ಬೀಳುವ ಈ ಜಲಧಾರೆಯ ನೋಟ ಅಯಾಸ ಹಾಗೂ ದಣಿವನ್ನು ದೂರ ಮಾಡಿತು. ನಾವು ಬಂದ ದಾರಿ ಜಲಧಾರೆಯ ಎರಡನೇ ಹಂತದ ಬುಡಕ್ಕೆ ಬಂದು ತಲುಪುತ್ತದೆ.
 

ಪ್ರಕೃತಿ ವೈಭವವೇ ಕಣ್ಮುಂದೆ ಅನಾವರಣಗೊಂಡಿತ್ತು. ಜಲಧಾರೆಯ ಮೊದಲ ಹಂತವೇ ನಾವು ಈ ಮೊದಲು ರಸ್ತೆಯ ಬದಿಯಿಂದ ದೂರದಿಂದ ನೋಡಿದ್ದು. ಈ ಹಂತವು ಸುಮಾರು ೯೦-೧೦೦ ಅಡಿಯಷ್ಟು ಎತ್ತರವಿದೆ. ಒಂದು ಪಾರ್ಶ್ವದಲ್ಲಿ ಹಸಿರು ತುಂಬಿದ್ದ ಬೆಟ್ಟದ ಕಮರಿ. ಇನ್ನೊಂದು ಪಾರ್ಶ್ವದಲ್ಲಿ ಕಲ್ಲಿನ ಅಭೇದ್ಯ ಗೋಡೆ. ಮಾದಣ್ಣ ಹಾಗೂ ನನ್ನ ಗೆಳೆಯರು ಮೇಲೇರಿ ಈ ಮೊದಲ ಹಂತದ ಬುಡಕ್ಕೆ ತೆರಳಿದರೂ, ನಾನು ಹಾಗೂ ರಾಘಣ್ಣ ಆ ಸಾಹಸಕ್ಕೆ ಮುಂದಾಗಲಿಲ್ಲ.
 

ಅಲ್ಲಿ ಸುಮಾರು ೯೦ ನಿಮಿಷಗಳಷ್ಟು ಸಮಯ ಕಳೆದರೂ, ಮೂರನೇ ಹಂತದ ಬುಡಕ್ಕೆ ತೆರಳುವ ಯೋಚನೆ ನಮಗೆ ಬರಲೇ ಇಲ್ಲ. ಉಡುಪಿಗೆ ಹಿಂತಿರುಗುವಾಗ ಹಾಗೆ ಅನಿಸಿ ಬಹಳ ನಿರಾಸೆಯಾಯಿತು. ಕೆಳಗೆ ತೆರಳಿದ್ದಿದ್ದರೆ, ಜಲಧಾರೆಯ ಎಲ್ಲಾ ಮೂರು ಹಂತಗಳ ದೃಶ್ಯವನ್ನು ನೋಡುವ ಅವಕಾಶವಿತ್ತು.


ಅಂದು ಮುಂಜಾನೆ ಉಡುಪಿಯಿಂದ ಹೊರಡುವಾಗ, ಅಮ್ಮ ೨೦ ಚಪಾತಿ ಹಾಗೂ ಪಲ್ಯ ಮಾಡಿ ಕೊಟ್ಟಿದ್ದರು. ಅದನ್ನು ಈಗ ನಾವು ೬ ಮಂದಿ ಕುಳಿತು ಖಾಲಿ ಮಾಡಲಾರಂಭಿಸಿದೆವು. ಜಲಧಾರೆಯ ಹನಿ ಹನಿ ಸಿಂಚನದಲ್ಲೇ ನಮ್ಮ ಊಟ ನಡೆದಿತ್ತು. ಅದೊಂದು ಮರೆಯಲಾಗದ ಕ್ಷಣ. ಎಷ್ಟೇ ಹಣ ನೀಡಿದರೂ ಸಿಗದಂತಹ ಪರಮಾನಂದದ ಅನುಭವ.


ಈಗ ಮತ್ತೆ ಅದೇ ದಾರಿಯಲ್ಲಿ ಹಿಂತಿರುಗಿ ಬರುವ ಸಮಯ ಬಂತು. ನಮ್ಮ ಪಾದರಕ್ಷೆಗಳು ಒದ್ದೆಯಾಗಿದ್ದರಿಂದ ಮತ್ತು ಮಣ್ಣು ಕೂಡಾ ಜಾರುತ್ತಿದ್ದರಿಂದ ಇನ್ನಷ್ಟು ಕಷ್ಟವಾಗತೊಡಗಿತು. ಆದರೆ, ಈಗ ಯಾವ ಬೇರನ್ನು ಯಾವ ಬೀಳನ್ನು ಯಾವ ಬಲ್ಲೆಯನ್ನು ಯಾವ ಮರವನ್ನು ಯಾವ ಪೊದೆಯನ್ನು ಎಲ್ಲೆಲ್ಲಿ ಯಾವಾಗ ಹಿಡಿದುಕೊಳ್ಳಬೇಕು ಎಂದು ಗೊತ್ತಾಗಿದ್ದರಿಂದ, ೩೦ ನಿಮಿಷಗಳಲ್ಲಿ ರಸ್ತೆ ತಲುಪಿದೆವು.


ನಾವು ಆಯ್ದುಕೊಂಡ ’ಸುಲಭದ ದಾರಿ’ ನಮಗೆ ಒಂದು ರೋಚಕ ಅನುಭವವನ್ನು ನೀಡಲಿದೆ ಎಂದು ನಾವು ಕಲ್ಪಿಸಿರಲಿಲ್ಲ. ಯಾವುದೇ ಚಾರಣದಲ್ಲಿ ಸ್ವಲ್ಪ ರಿಲ್ಯಾಕ್ಸ್ ಮಾಡಿ ಹೆಜ್ಜೆ ಹಾಕಬಹುದಾದ ಅವಕಾಶ ಇರುತ್ತದೆ. ಇಲ್ಲಿ ಅಂತಹ ಅವಕಾಶವೇ ಇರಲಿಲ್ಲ ಎನ್ನುವುದೇ ವಿಶೇಷ. ಈ ರೋಚಕ ಅನುಭವ ಸಾಲದೆಂಬಂತೆ ನನ್ನ ಸಹಚಾರಣಿಗರಿಬ್ಬರಿಗೆ ಎರಡು ದಿನಗಳ ಬಳಿಕ ಇನ್ನೊಂದು ರೋಚಕ ಅನುಭವ ಕಾದಿತ್ತು.


ಒಂದೆರಡು ದಿನ ಏನೂ ಆಗಲಿಲ್ಲ. ಆದರೆ ಮೂರನೇ ದಿನ ಶುರುವಾಯಿತು ರಿಯಾಕ್ಷನ್. ಗುರುವಾರ ಸಂಜೆ ರಾಘಣ್ಣ ತನ್ನ ಅಂಗಡಿಯಲ್ಲಿ ಕಪ್ಪು ಕನ್ನಡಕ ಧರಿಸಿಕೊಂಡು ಕುಳಿತಿದ್ದಾರೆ ಎಂಬ ಸುದ್ದಿ ಬಂತು! ಫೋನಾಯಿಸಿದಾಗ ತಿಳಿದು ಬಂದ ವಿಷಯವೆಂದರೆ, ಬುಧವಾರ ಬೆಳಗ್ಗೆಯಿಂದ ಅವರಿಗೆ ಮೈ ಕೈಯೆಲ್ಲಾ ತುರಿಕೆ. ಕಣ್ಣು ಸುಮಾರಾಗಿ ಬಾತುಕೊಂಡಿತ್ತು. ಅತ್ತ ಮಾದಣ್ಣನ ಕೈ ಹಾಗೂ ಮುಖವೆಲ್ಲಾ ಬಾತು, ನಾಚಿಕೆಯಿಂದ ಅವರು ಮನೆ ಬಿಟ್ಟು ಹೊರಬರದೇ ೨ ದಿನಗಳಾಗಿದ್ದವು! ಮೂರನೇ ದಿನದ ಮುಸ್ಸಂಜೆ ಹೊತ್ತಿಗೆ, ಯಾರಿಗೂ ಕಾಣದಂತೆ ವೈದ್ಯರ ಬಳಿ ತೆರಳಿ ಮದ್ದು ತರಿಸಿಕೊಂಡರು. ನಾನು ಅದೃಷ್ಟವಂತ. ನನಗೇನೂ ಆಗಲಿಲ್ಲ!!

5 ಕಾಮೆಂಟ್‌ಗಳು:

siddeshwar ಹೇಳಿದರು...

what a beautiful cascade! lovely spot indeed. thank you for sharing these lovely pictures, waterfall expert.

Ashok ಹೇಳಿದರು...

Falls and narration superb..!

Aravind GJ ಹೇಳಿದರು...

ಸೊಗಸಾದ ಜಲಪಾತ ಮತ್ತು ಸೊಗಸಾದ ನಿರೂಪಣೆ. ಚಿತ್ರಗಳು ಚೆನ್ನಾಗಿ ಬಂದಿದೆ.

ರಾಜೇಶ್ ನಾಯ್ಕ ಹೇಳಿದರು...

ಸಿದ್ಧೇಶ್ವರ, ಅಶೋಕ್, ಅರವಿಂದ್

ಪ್ರೋತ್ಸಾಹಕ್ಕಾಗಿ ಧನ್ಯವಾದ.

Unknown ಹೇಳಿದರು...

me and my friends are planning for this place next month. can we get some more information sir.