ಭಾನುವಾರ, ಏಪ್ರಿಲ್ 13, 2014

ವೀರಭದ್ರ ದೇವಾಲಯ - ಕಲ್ಲಾಪುರ


ಕದಂಬರ ಕಾಲದಲ್ಲಿ ನಿರ್ಮಿಸಲಾಗಿರುವ ಈ ದೇವಾಲಯದ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಲಿಲ್ಲ. ಪ್ರಶಾಂತ ಸ್ಥಳದಲ್ಲಿ ವಿಶಾಲ ಕೆರೆಯ ಸಮೀಪ ನೆಲೆಗೊಂಡಿರುವ ವೀರಭದ್ರನ ಸನ್ನಿಧಿಗೆ ಬರುವ ಸಂದರ್ಶಕರು ವಿರಳ. ಆರು ಕಿಮಿ ದೂರದಲ್ಲೇ ತಾಲೂಕು ಕೇಂದ್ರವಿದ್ದರೂ ಹೆಚ್ಚಿನವರಿಗೆ ಈ ದೇವಾಲಯದ ಬಗ್ಗೆ ಅರಿವಿಲ್ಲ. ಕಲ್ಲಾಪುರ ಮತ್ತು ಸಮೀಪದ ಹಳ್ಳಿಗಳ ಜನರು ಬಂದು ಪೂಜೆ ಸಲ್ಲಿಸಿ ಹೋಗುತ್ತಾರೆ.


ಮುಖಮಂಟಪ, ನವರಂಗ, ಅಂತರಾಳ ಮತ್ತು ಗರ್ಭಗುಡಿಯನ್ನು ಹೊಂದಿರುವ ದೇವಾಲಯದ ಗೋಪುರವು ಕದಂಬ ಶೈಲಿಯಲ್ಲಿದೆ. ಗೋಪುರದ ಮುಂದೆ ಬಸವನ ಕೆತ್ತನೆಯಿದೆ. ದೇವಾಲಯದ ಮುಂದೆ ಕುದುರೆ ಮೇಲೆ ಸವಾರಿ ಹೊರಟ ದೇವಿಯೊಬ್ಬಳ ಕೆತ್ತನೆಯಿರುವ ಕಲ್ಲನ್ನು ಇರಿಸಲಾಗಿದೆ.


ಇಳಿಜಾರು ಮಾಡನ್ನು ಹೊಂದಿರುವ ಮುಖಮಂಟಪದೊಳಗೆ ೧೨ ಕಂಬಗಳಿವೆ. ಇವುಗಳಲ್ಲಿ ೮ ಕಂಬಗಳು ಅರ್ಧಕಂಬಗಳಾಗಿದ್ದು, ಮುಖಮಂಟಪದ ತುದಿಯುದ್ದಕ್ಕೂ ಇರುವ ಕಲ್ಲಿನ ಆಸನದ ಮೇಲೆ ಇವೆ. ಉಳಿದ ನಾಲ್ಕು ಕಂಬಗಳು ಮುಖಮಂಟಪದ ನಟ್ಟನಡುವೆ ನವರಂಗದಲ್ಲಿವೆ. 


ನವರಂಗದಲ್ಲಿರುವ ನಾಲ್ಕೂ ಕಂಬಗಳು ಅಲಂಕಾರಿಕಾ ಕೆತ್ತನೆಗಳನ್ನು ಹೊಂದಿದ್ದು, ಮುಂದಿನ ಎರಡು ಕಂಬಗಳ ವಿನ್ಯಾಸ ಹಿಂದಿನ ಎರಡು ಕಂಬಗಳ ವಿನ್ಯಾಸಕ್ಕಿಂತ ಭಿನ್ನವಾಗಿದೆ. ನವರಂಗದ ಮೇಲ್ಛಾವಣಿಯಲ್ಲಿ ಕಮಲದ ಸುಂದರ ಕೆತ್ತನೆಯನ್ನು ಕಾಣಬಹುದು.


ನವರಂಗ ತುದಿಯಲ್ಲಿ, ಅಂತರಾಳದ ದ್ವಾರಕ್ಕೆ ಸ್ವಲ್ಪ ಮೊದಲು, ನೆಲದಲ್ಲಿ ವ್ಯಕ್ತಿಯೊಬ್ಬನ ಸಾಷ್ಟಾಂಗ ನಮಸ್ಕಾರ ಮಾಡುವ ಭಂಗಿಯಲ್ಲಿ ಕೆತ್ತನೆಯಿದೆ. ಕದಂಬರು ನಿರ್ಮಿಸುವ ಹೆಚ್ಚಿನ ದೇವಾಲಯಗಳಲ್ಲಿ ಈ ರೀತಿಯ ಕೆತ್ತನೆಗಳನ್ನು ಕಾಣಬಹುದು. ಇದು ದೇವಾಲಯ ನಿರ್ಮಿಸಿದವರು, ತಮ್ಮದೇ ಅಥವಾ ತಮ್ಮ ಪರಿವಾರದವರ ಅಥವಾ ತಮ್ಮ ಆಪ್ತರ ಚಿತ್ರಗಳನ್ನು ದೇವಾಲಯವನ್ನು ಅಥವಾ ಗರ್ಭಗುಡಿಯನ್ನು ಪ್ರವೇಶಿಸುವ ದ್ವಾರದ ಮೂದಲು ಕೆತ್ತಲು ಅಪ್ಪಣೆ ನೀಡುತ್ತಿದ್ದರು. ದೇವಾಲಯದೊಳಗೆ ಬರುವವರು ಈ ಕೆತ್ತನೆಗಳನ್ನು ಮೆಟ್ಟಿಯೇ ಒಳಬರಬೇಕು ಎನ್ನುವ ಧೋರಣೆ. ಹಾಗೆ ಮಾಡುವುದರಿಂದ, ದೇವಾಲಯ ನಿರ್ಮಾಣದ ಸಮಯದಲ್ಲಿ ಏನಾದರೂ ಪ್ರಾಣ ಹಾನಿ ಅಥವಾ ಯಾರಿಗಾದರೂ ನೋವು ಉಂಟಾಗಿದ್ದರೆ ಅಥವಾ ತಮ್ಮ ಜೀವಿತ ಕಾಲದಲ್ಲಿ ತಾವು ಮಾಡಿರಬಹುದಾದ ಪಾಪ ಕಾರ್ಯಗಳಿಗೆ ಈ ರೀತಿ ಪಶ್ಚಾತ್ತಾಪ ಪಟ್ಟಂತಾಗುತ್ತದೆ ಎಂಬ ನಂಬಿಕೆ ಕದಂಬ ಅರಸರಲ್ಲಿತ್ತು.


ಅಂತರಾಳದ ದ್ವಾರವು ಮೂರು ಶಾಖೆಗಳನ್ನು ಹೊಂದಿದೆ. ಲಲಾಟದಲ್ಲಿ ಲಕ್ಷ್ಮೀಯ ಕೆತ್ತನೆಯಿದ್ದು, ತಳಭಾಗದಲ್ಲಿ ಇಕ್ಕೆಲಗಳಲ್ಲಿ ದ್ವಾರಪಾಲಕರಿದ್ದಾರೆ. ದ್ವಾರದ ಶಾಖೆಗಳು ಅಂದವಾದ ಅಲಂಕಾರಿಕಾ ಕೆತ್ತನೆಗಳನ್ನು ಹೊಂದಿವೆ. ಲಕ್ಷ್ಮೀಯ ಇಕ್ಕೆಲಗಳಲ್ಲಿ ಕಮಲದ ಮೊಗ್ಗುಗಳಿವೆ.


ಗರ್ಭಗುಡಿಯ ದ್ವಾರವು ಸಾಮಾನ್ಯವಾಗಿದ್ದು ಲಲಾಟದಲ್ಲಿ ಗಣೇಶನ ಕೆತ್ತನೆಯಿದೆ. ನೇರಲಿಗೆ ಈಶ್ವರ ದೇವಾಲಯದಲ್ಲೂ ಇದೇ ರೀತಿ ಗರ್ಭಗುಡಿಯ ಲಲಾಟದಲ್ಲಿ ಗಣೇಶನನ್ನು ಕೆತ್ತಲಾಗಿದೆ. ಹೀಗೆ ಕಾಣಬರುವುದು ಬಹಳ ಅಪರೂಪ. ಗರ್ಭಗುಡಿಯಲ್ಲಿ ವೀರಭದ್ರನ ಸುಮಾರು ನಾಲ್ಕು ಅಡಿ ಎತ್ತರದ ಮೂರ್ತಿಯಿದೆ.


ಮುಖಮಂಟಪವನ್ನು ಪ್ರವೇಶಿಸುವಲ್ಲಿ ಇಕ್ಕೆಲಗಳಲ್ಲಿ ಖಡ್ಗ ಹಿಡಿದು ಹೋರಾಡುವ ಮಹಿಳೆಯರ ಚಿತ್ರಣವಿದೆ. ಮುಖಮಂಟಪದ ಹೊರಭಾಗದಲ್ಲಿ ಕೆಲವು ಕೆತ್ತನೆಗಳನ್ನು ಕಾಣಬಹುದು. ಇವುಗಳಲ್ಲಿ ಹೆಚ್ಚಿನವು ಜನಜೀವನಕ್ಕೆ ಸಂಬಂಧಪಟ್ಟವುಗಳಾಗಿವೆ.


ಡೋಲು ಬಾರಿಸುವವನು, ಪ್ರಾಣಿಗಳ ಮಿಥುನ ಕ್ರಿಯೆ, ಸೌಂದರ್ಯ ಹಾಗೂ ಮೈಮಾಟ ಪ್ರದರ್ಶಿಸುತ್ತಿರುವ ಯುವತಿಯರು, ಮಗು ಹೆರುವ ದೃಶ್ಯ, ಮನುಷ್ಯರ ಮಿಲನ ಕ್ರಿಯೆ ಇತ್ಯಾದಿ ಕೆತ್ತನೆಗಳಿವೆ.

4 ಕಾಮೆಂಟ್‌ಗಳು:

siddeshwar ಹೇಳಿದರು...

This is a beautiful little temple. Combination of your pictures and notes are a joy to read, as always.

Srik ಹೇಳಿದರು...

This blog is slowly becoming an encyclopaedia of ancient and extraordinary temples of Karnataka.

I mean it.

Take a bow, Rajesh.

ರಾಜೇಶ್ ನಾಯ್ಕ ಹೇಳಿದರು...

ಸಿದ್ಧೇಶ್ವರ,ಶ್ರೀಕಾಂತ್
ಧನ್ಯವಾದ.

ಅನಾಮಧೇಯ ಹೇಳಿದರು...

ಯಾವ ಜಿಲ್ಲೆ ಇದು