ಭಾನುವಾರ, ಏಪ್ರಿಲ್ 27, 2014

ನನೇಶ್ವರ ದೇವಾಲಯ - ಲಕ್ಕುಂಡಿ


ನನೇಶ್ವರ ದೇವಾಲಯವು ಮುಖಮಂಟಪ, ನವರಂಗ, ತೆರೆದ ಅಂತರಾಳ ಹಾಗೂ ಗರ್ಭಗುಡಿಯನ್ನೊಳಗೊಂಡಿದೆ. ಹೆಚ್ಚೇನು ಹಾನಿಯಾಗದೆ ಮೂಲ ರೂಪದಲ್ಲೇ ಉಳಿದಿರುವ ಕೆಲವು ದೇವಾಲಯಗಳಲ್ಲಿ ಇದೂ ಒಂದು. ಲಕ್ಕುಂಡಿಯ ಬಗ್ಗೆ ವಿವರವಾಗಿ ಈ ಮೊದಲೇ ಬರೆದಿರುವುದನ್ನು ಇಲ್ಲಿ ಓದಬಹುದು.


ಮುಖಮಂಟಪದಲ್ಲಿ ೨೦ ಕಂಬಗಳಿವೆ. ಈ ೨೦ ಕಂಬಗಳಲ್ಲಿ ನಾಲ್ಕು ತರಹದ ವಿನ್ಯಾಸಗಳನ್ನು ಕಾಣಬಹುದು. ಮುಖಮಂಟಪದ ನಡುವೆ ಎರಡು ಇಂಚು ಎತ್ತರದ ಚಚ್ಚೌಕವಿದ್ದು, ಇದರ ನಾಲ್ಕು ಮೂಲೆಗಳಲ್ಲಿ ಚಾಲುಕ್ಯ ಶೈಲಿಯ ಕಂಬಗಳನ್ನು ಕಾಣಬಹುದು.


ಮುಖಮಂಟಪದಲ್ಲಿರುವ ಕಂಬಗಳಲ್ಲಿ, ಕೊನೆಯ ಸಾಲಿನ ನಾಲ್ಕು ಕಂಬಗಳ ನವರಂಗದ ಹೊರಭಾಗಕ್ಕೆ ಬಹಳ ಸಮೀಪದಲ್ಲಿವೆ. ಮನುಷ್ಯ ನುಸುಳುವಷ್ಟು ಸ್ಠಳ ಕೂಡಾ ಇಲ್ಲ. ಇವುಗಳಲ್ಲಿ ಎರಡು ಕಂಬಗಳು ನವರಂಗದ ದ್ವಾರದ ಇಕ್ಕೆಲಗಳಿದ್ದು, ದ್ವಾರದ ಅಂದಕ್ಕೆ ಇಂಬು ನೀಡುತ್ತವೆ. ಈ ಎರಡು ಕಂಬಗಳ ತಳಭಾಗದಲ್ಲಿ ಮಾನವ ರೂಪದ ಕೆತ್ತನೆಗಳಿವೆ.


ನವರಂಗದ ದ್ವಾರವು ಪಂಚಶಾಖೆಗಳನ್ನು ಹೊಂದಿದೆ. ಲಲಾಟದಲ್ಲಿ ಗಜಲಕ್ಷ್ಮೀಯ ಕೆತ್ತನೆಯಿದೆ. ಗಜಲಕ್ಷ್ಮೀಯ ಮೇಲೆ ಹಾರತೋರಣವಿದೆ.


ದ್ವಾರದ ಐದು ಶಾಖೆಗಳಲ್ಲಿ ಬಳ್ಳಿ ತೋರಣ, ನಾಗದೇವ, ಜೋಡಿ ನೃತ್ಯಗಾರರು, ಪೂರ್ಣಕುಂಭ ಕಲಶ ಹಾಗೂ ಕೀರ್ತಿಮುಖದಿಂದ ಅಲಂಕೃತ ಸ್ತಂಭ ಮತ್ತು ಹೂತೋರಣವಿರುವ ಸ್ತಂಭಗಳ ಕೆತ್ತನೆಯನ್ನು ಕಾಣಬಹುದು. ಇದರಲ್ಲಿ ನಾಗದೇವನನ್ನು ತೋರಿಸಿರುವ ರೀತಿ ಸೃಜನಾತ್ಮಕವಾಗಿದೆ.


ದ್ವಾರದ ತಳಭಾಗದಲ್ಲಿ ಶಾಖೆಗೊಂದರಂತೆ ೧೦ ಮನುಷ್ಯ ರೂಪದ ಕೆತ್ತನೆಗಳನ್ನು ಕಾಣಬಹುದು. ಇವು ಯಾರ ಕೆತ್ತನೆಗಳು ಎಂದು ಗೊತ್ತಾಗಲಿಲ್ಲ. ಹೆಚ್ಚಾಗಿ ರತಿ ಮನ್ಮಥರನ್ನು ಇಲ್ಲಿ ತೋರಿಸಲಾಗುತ್ತದೆ. ಆದರೆ ಎಲ್ಲಾ ದೇವಾಲಯಗಳಲ್ಲಿ ಹಾಗಿರುವುದಿಲ್ಲ.


ನವರಂಗಕ್ಕೆ ದಕ್ಷಿಣದಿಂದಲೂ ಒಂದು ದ್ವಾರವಿದ್ದು, ಈ ದ್ವಾರಕ್ಕೆ ಎರಡು ಕಂಬಗಳ ಹೊರಚಾಚು ಮುಖಮಂಟಪವಿದೆ. ಈ ದ್ವಾರವು ಅಲಂಕಾರರಹಿತ ಪಂಚಶಾಖೆಗಳನ್ನು ಮತ್ತು ಲಲಾಟದಲ್ಲಿ ಗಜಲಕ್ಷ್ಮೀಯನ್ನು ಹೊಂದಿದೆ. ಎರಡೂ ಕಂಬಗಳ ತಳಭಾಗದಲ್ಲಿ ಮನುಷ್ಯ ರೂಪದ ಸುಂದರ ಕೆತ್ತನೆಗಳಿವೆ.


ನವರಂಗದಲ್ಲಿ ನಾಲ್ಕು ಅತ್ಯಾಕರ್ಷಕ ಕಂಬಗಳಿವೆ. ಇವುಗಳು ಪ್ರಭಾವಳಿ ಕೆತ್ತನೆಯಿಂದ ಸುಂದರವಾಗಿ ಅಲಂಕೃತಗೊಂಡಿವೆ. ಈ ಪ್ರಭಾವಳಿ ಕೆತ್ತನೆಯಲ್ಲಿ, ದಿಕ್ಕಿಗೊಂದರಂತೆ ಎಂಟು ಗೋಪುರಗಳಿವೆ. ಇವುಗಳಲ್ಲಿ ಪೂ.ಪ.ಉ.ದ ದಿಕ್ಕುಗಳಲ್ಲಿ ಮಂಟಪ ಗೋಪುರಗಳಿದ್ದರೆ, ಆ.ವಾ.ಈ.ನೈ ದಿಕ್ಕುಗಳಲ್ಲಿ ಸ್ತಂಭ ಮಂಟಪಗಳಿವೆ.


ನವರಂಗದ ಒಂದು ಕಂಬದಲ್ಲಿರುವ ಶಾಸನದಲ್ಲಿ, ದೇವಾಲಯದ ಪೂಜಾ ಖರ್ಚು ವೆಚ್ಚಗಳಿಗಾಗಿ, ಬಂಡಿ ಬಸವಿ ಸೆಟ್ಟಿ ಎಂಬವನ ಮಗನಾಗಿದ್ದ ಶಂಕರ ಸೆಟ್ಟಿ ಎಂಬ ವರ್ತಕನು, ಹಣವನ್ನು ನೀಡಿದ ಬಗ್ಗೆ ಹೇಳಲಾಗಿದೆ. ಈ ಶಾಸನವು ಚಾಲುಕ್ಯ ದೊರೆ ನಾಲ್ಕನೇ ಸೋಮೇಶ್ವರನ ಆಳ್ವಿಕೆಯ ಕಾಲದ್ದಾಗಿದ್ದು, ಈ ಆಧಾರದ ಮೇಲೆ ಇತಿಹಾಸಕಾರರು, ದೇವಾಲಯದ ನಿರ್ಮಾಣ ಇಸವಿ ೧೧೮೬ಕ್ಕಿಂತಲೂ ಮೊದಲೇ ಆಗಿದೆ ಎಂಬ ನಿರ್ಣಯಕ್ಕೆ ಬಂದಿದ್ದಾರೆ. ನಿರ್ಮಾಣದ ನಿಖರ ವರ್ಷ ತಿಳಿಸುವ ಶಾಸನ ದೊರಕಿಲ್ಲ.


ಗರ್ಭಗುಡಿಯಲ್ಲಿ ಶಿವಲಿಂಗವಿದ್ದು, ದ್ವಾರವು ಅಲಂಕಾರವಿಲ್ಲದ ಐದು ಶಾಖೆಗಳನ್ನು ಹಾಗೂ ಲಲಾಟದಲ್ಲಿ ಗಜಲಕ್ಷ್ಮೀಯನ್ನು ಹೊಂದಿದೆ. ಇಲ್ಲಿ ಗಜಗಳು ಹೂಮಾಲೆಯನ್ನು ಎತ್ತಿ ಹಿಡಿದಿರುವುದನ್ನು ಚೆನ್ನಾಗಿ ತೋರಿಸಲಾಗಿದೆ. ಅಂತರಾಳದ ಮೇಲ್ಛಾವಣಿಯಲ್ಲಿ ಕಮಲವನ್ನು ಕೆತ್ತಲಾಗಿದೆ.


ಶಿಖರವು ಗೋಪುರಗಳ ಹಾಗೂ ಕೀರ್ತಿಮುಖಗಳ ಕೆತ್ತನೆಯನ್ನು ಹೊಂದಿದ್ದು, ತುದಿಯಲ್ಲಿರುವ ಕಲಶ ಹಾನಿಯಾಗದೆ ಉಳಿದಿದೆ.


ಹೊರಗೋಡೆಯ ತಳಭಾಗದಲ್ಲಿರುವ ಪಟ್ಟಿಕೆಗಳಲ್ಲಿ, ಒಂದರಲ್ಲಿ ಮಾತ್ರ ಆನೆಗಳನ್ನು ಹೊರಗೋಡೆಯುದ್ದಕ್ಕೂ ಕೆತ್ತಲಾಗಿದೆ.


ದೇವಾಲಯದ ಹೊರಗೋಡೆಯ ಮೂರೂ ಪಾರ್ಶ್ವಗಳಲ್ಲಿ ಒಂದೊಂದು ಮಂಟಪವನ್ನು ಕೆತ್ತಲಾಗಿದೆ. ಇಳಿಜಾರಿನ ಮಾಡು, ಶಿಖರ ಹಾಗೂ ಕಲಶವನ್ನು ಹೊಂದಿರುವ ಈ ಮಂಟಪಗಳು ಈಗ ಖಾಲಿಯಿವೆ. ಉಳಿದಂತೆ ಹೊರಗೋಡೆಯಲ್ಲಿ ಹಲವಾರು ಸ್ತಂಭ ಗೋಪುರಗಳನ್ನು ಮತ್ತು ಕೆಲವು ಕೀರ್ತಿಮುಖಗಳ ಕೆತ್ತನೆಯನ್ನು ಕಾಣಬಹುದು.

2 ಕಾಮೆಂಟ್‌ಗಳು:

Unknown ಹೇಳಿದರು...

very Good & I will try to visit all these temples nest year - nlraju3@gmail.com

ರಾಜೇಶ್ ನಾಯ್ಕ ಹೇಳಿದರು...

ರಾಜು,
ಧನ್ಯವಾದ.