ಬುಧವಾರ, ಡಿಸೆಂಬರ್ 10, 2014

ಭಾನುವಾರ, ನವೆಂಬರ್ 09, 2014

ಶಾಂತಪ್ಪ ನಾಯಕ ತಿರುಮಲ ದೇವಾಲಯ ಹಾಗೂ ರಘುನಾಥ ದೇವಾಲಯ - ಭಟ್ಕಳ


ಇಸವಿ ೧೫೫೫ರಲ್ಲಿ ಶಾಂತಪ್ಪ ನಾಯಕ ಎಂಬವರು ನಿರ್ಮಿಸಿದ್ದರಿಂದ, ಈ ದೇವಾಲಯವನ್ನು ಶಾಂತಪ್ಪ ನಾಯಕ ತಿರುಮಲ ದೇವಾಲಯವೆಂದು ಕರೆಯಲಾಗುತ್ತದೆ. ಗೌಡ ಸಾರಸ್ವತ ಬ್ರಾಹ್ಮಣರ ಪ್ರಿಯ ದೇವರಾದ ವೆಂಕಟರಮಣನ ಸನ್ನಿಧಿಯಿದು.


ಈ ದೇವಾಲಯ ರಚನೆಯಲ್ಲಿ ಎಲ್ಲಾ ರೀತಿಯಿಂದಲೂ ಸಮೀಪದಲ್ಲೇ ಇರುವ ಹಾಗೂ ಹೆಚ್ಚು ಪ್ರಸಿದ್ಧಿ ಪಡೆದಿರುವ ಖೇತ್ ಪೈ ನಾರಾಯಣ ದೇವಾಲಯವನ್ನು ಹೋಲುತ್ತದೆ. ಈ ದೇವಾಲಯ ನಿರ್ಮಿಸಿದ ಶಾಂತಪ್ಪ ನಾಯಕನು, ನಾರಾಯಣ ದೇವಾಲಯದ ನಿರ್ಮಾತೃ ಖೇತ್ ಪೈಯ ಸಮೀಪದ ಸಂಬಂಧಿಯಾಗಿದ್ದನು.

 

ನಾನು ತೆರಳಿದಾಗ, ಮನೆಯವರು ವಾರದ ಪೂಜೆ ಕಾರ್ಯಕ್ರಮಗಳನ್ನು ನಡೆಸುತ್ತಿದ್ದರಿಂದ ನನಗೆ ದೇವಾಲಯದ ಒಳಗೆ ಪ್ರವೇಶ ನಿರ್ಬಂಧಿಸಲಾಗಿತ್ತು. ದ್ವಾರದಿಂದಲೇ ವೆಂಕಟರಮಣನಿಗೆ ನಮಸ್ಕರಿಸಿದೆ ಮತ್ತು ಅಲ್ಲಿಂದಲೇ ದೇವಾಲಯದ ಒಳಗಿನ ಕೆಲವು ಚಿತ್ರಗಳನ್ನು ತೆಗೆದೆ.


ನವರಂಗ, ಅಂತರಾಳ ಮತ್ತು ಗರ್ಭಗುಡಿ ಇರುವ ದೇವಾಲಯದ ನವರಂಗದ ನೆಲಕ್ಕೆ ಮಾರ್ಬಲ್ ಹಾಸಲಾಗಿದೆ. ನವರಂಗದ ನಾಲ್ಕೂ ಕಂಬಗಳು ಪ್ರಭಾವಳಿ ಕೆತ್ತನೆಗಳನ್ನು ಹೊಂದಿವೆ. ಛಾವಣಿಯಲ್ಲಿ ಕಮಲದ ಸುಂದರ ಕೆತ್ತನೆಯ ಸುತ್ತಲೂ ಅಷ್ಟದಿಕ್ಪಾಲಕರನ್ನು ಕಾಣಬಹುದು.


ಅಂತರಾಳದ ದ್ವಾರದ ಲಲಾಟದಲ್ಲಿ ಗಜಲಕ್ಷ್ಮೀಯ ಕೆತ್ತನೆಯಿದ್ದು, ಇಕ್ಕೆಲಗಳಲ್ಲಿ ಹನುಮಂತನ ಹಾಗೂ ದೇವಿಯೊಬ್ಬಳ ಕೆತ್ತನೆಯಿದೆ. ಧ್ವಜಸ್ತಂಭದ ಮುಂಭಾಗದಲ್ಲಿ ತಿರುಮಲನಿಗೆ ನಮಸ್ಕರಿಸುವ ಭಂಗಿಯಲ್ಲಿ ಇರುವ ವ್ಯಕ್ತಿಯ ಕೆತ್ತನೆ ಶಾಂತಪ್ಪ ನಾಯಕನದ್ದು ಎಂದು ನಂಬಲಾಗಿದೆ.


ಪೌಳಿಯ ಸುತ್ತಲೂ, ಅಂದಿನ ಜಮಜೀವನದ ಚಿತ್ರಣ ನೀಡುವ ಕೆತ್ತನೆಗಳನ್ನು ಕಾಣಬಹುದು.


ದೇವಾಲಯದ ಪೌಳಿಯನ್ನೇ ವಿಸ್ತರಿಸಿಕೊಂಡು, ದೇವಾಲಯದ ಸುತ್ತಲೂ ಮನೆಯನ್ನು ರಚಿಸಲಾಗಿದ್ದು, ಅಲ್ಲಿ ದೇವಾಲಯದ ನಿರ್ಮಾತೃ ಶಾಂತಪ್ಪ ನಾಯಕರ ಕುಟುಂಬದವರು ವಾಸಿಸುತ್ತಿದ್ದಾರೆ. ದೈನಂದಿನ ಪೂಜಾ ಕಾರ್ಯಕ್ರಮಗಳನ್ನೂ ಈ ಮನೆಯವರೇ ನಿರ್ವಹಿಸುತ್ತಾರೆ. ಇದೊಂದು ಕೂಡು ಕುಟುಂಬವಾಗಿದ್ದು, ದೇವಾಲಯದ ಸುತ್ತಲೂ ಮನೆಯವರು ಓಡಾಡುತ್ತಿರುವುದು, ಮಕ್ಕಳು ಪಾಠ ಅಭ್ಯಾಸ ಮಾಡುವುದು, ಕೂಸು ಅಳುವುದು, ಇತ್ಯಾದಿ ಕೇಳುತ್ತಾ ದೇವಾಲಯ ನೋಡಬಹುದು.

ರಘುನಾಥ ದೇವಾಲಯ


ಈ ದೇವಾಲಯವನ್ನು ಇಸವಿ ೧೫೬೭ರಲ್ಲಿ ಬಾಳ ಕಿಣಿ ಮತ್ತು ನಾರಾಯಣ ಕಿಣಿ ಎಂಬ ಸಹೋದರರಿಬ್ಬರು ನಿರ್ಮಿಸಿದರು. ಈ ವಿಷಯವನ್ನು ಹೇಳುವ ಶಾಸನ ದೇವಾಲಯದಲ್ಲಿ ದೊರಕಿದೆ.


ರಘುನಾಥ ದೇವಾಲಯವನ್ನು ಹುಡುಕುವುದು ಸ್ವಲ್ಪ ಕಷ್ಟದ ಕೆಲಸ. ಮನೆಯೊಂದರ ನಟ್ಟನಡುವೆ ಅಂಗಳದಲ್ಲಿ ಈ ದೇವಾಲಯವಿರುವುದರಿಂದ, ದೇವಾಲಯದ ಗೋಪುರದ ಮೇಲ್ಭಾಗ ಮಾತ್ರ ಹೊರಗಿನಿಂದ ಗೋಚರಿಸುತ್ತದೆ.


ದೇವಾಲಯವನ್ನು ಸುಮಾರು ೩ ಅಡಿ ಎತ್ತರದ ಜಗತಿಯ ಮೇಲೆ ನಿರ್ಮಿಸಲಾಗಿದೆ. ಮುಖಮಂಟಪ, ಅಂತರಾಳ ಮತ್ತು ಗರ್ಭಗುಡಿಯನ್ನು ಹೊಂದಿರುವ ಈ ದೇವಾಲಯದ ಹೊರಗೋಡೆಯುಲ್ಲಿ ಅಲಂಕಾರಿಕಾ ಬಳ್ಳಿಗಳು, ಸಣ್ಣ ಸಣ್ಣ ಗೋಪುರಗಳು, ಮಂಟಪಗಳು, ಯಕ್ಷ-ಯಕ್ಷಿಯರು, ದೇವತೆಗಳು, ಇತ್ಯಾದಿಗಳ ಕೆತ್ತನೆಗಳನ್ನು ಕಾಣಬಹುದು.


ಗೋಪುರದ ರಚನೆಯು ಸಣ್ಣದಾಗಿ ಅಚ್ಚುಕಟ್ಟಾಗಿದ್ದು, ಹಲವಾರು ಸುಂದರ ಕೆತ್ತನೆಗಳನ್ನು ಕಾಣಬಹುದು. ನವೀಕರಿಸಲಾಗಿರುವ ಮುಖಮಂಟಪದ ಮೆಲೆ ಯಜ್ಞಕುಂಡವನ್ನು ಹೋಲುವ ರಚನೆಯೊಂದನ್ನು ಕಂಡು ಸೋಜಿಗವಾಯಿತು.

ಶುಕ್ರವಾರ, ಅಕ್ಟೋಬರ್ 31, 2014

ಬ್ರಹ್ಮೇಶ್ವರ ದೇವಾಲಯ - ಅಬಲೂರು


ಕನ್ನಡದ ಪ್ರಖ್ಯಾತ ವಚನ ಕವಿ ಸರ್ವಜ್ಞನ ಹುಟ್ಟೂರು ಈ ಅಬಲೂರು. ೧೭ನೇ ಶತಮಾನದಲ್ಲಿ ಸರ್ವಜ್ಞ ಜೀವಿಸಿರಬಹುದು ಎಂದು ಇತಿಹಾಸತಜ್ಞರ ಅಭಿಪ್ರಾಯ. ಶಾಸನಗಳಲ್ಲಿ ಈ ಊರನ್ನು ’ಅಂಬಲೂರು’ ಎಂದು ಕರೆಯಲಾಗಿದೆ. ಇಲ್ಲಿರುವ ಚಾಲುಕ್ಯ ಶೈಲಿಯ ಬ್ರಹ್ಮೇಶ್ವರ ದೇವಾಲಯವನ್ನು ೧೧-೧೨ನೇ ಶತಮಾನದ ಸಮಯದಲ್ಲಿ ನಿರ್ಮಿಸಿರಬಹುದು. ನಿಖರವಾಗಿ ಇಸವಿಯನ್ನು ತಿಳಿಸಲು ಎಲ್ಲೂ ಮಾಹಿತಿ ಸಿಗಲಿಲ್ಲ.


ಬ್ರಹ್ಮೇಶ್ವರ ದೇವಾಲಯದಲ್ಲಿ ನಂದಿಯ ಸುಂದರ ಮೂರ್ತಿಯಿರುವುದರಿಂದ ಊರವರು ಇದನ್ನು ಬಸವೇಶ್ವರ ದೇವಾಲಯವೆಂದು ಕರೆಯುತ್ತಾರೆ. ’ಅಬಲೂರು ಬಸವಣ್ಣ’ ಎಂದೇ ಖ್ಯಾತಿ ಪಡೆದಿರುವ ಈ ಬಸವಣ್ಣನಿಗೆ ವಾರ್ಷಿಕ ಜಾತ್ರೆ ನಡೆಯುತ್ತದೆ.


ಈ ತ್ರಿಕೂಟ ದೇವಾಲಯ ಸಾಮಾನ್ಯ ನವರಂಗವನ್ನು ಹೊಂದಿದೆ. ನವರಂಗದಲ್ಲಿ ಒಟ್ಟು ೧೨ ಕಂಬಗಳಿವೆ. ಪಶ್ಚಿಮದ ಗರ್ಭಗುಡಿಯಲ್ಲಿ ಶಿವಲಿಂಗವಿದೆ. ಪೂರ್ವದ ಗರ್ಭಗುಡಿಯಲ್ಲಿ ಸೂರ್ಯದೇವನ ವಿಗ್ರಹವಿದ್ದು ಉತ್ತರದಲ್ಲಿ ವಿಷ್ಣುವಿನ ಮೂರ್ತಿಯಿದೆ. ಎಲ್ಲಾ ಗರ್ಭಗುಡಿಗಳಿಗೆ ಪ್ರತ್ಯೇಕ ಅಂತರಾಳಗಳಿವೆ. ಸೂರ್ಯದೇವನ ಅಂತರಾಳ ದ್ವಾರರಹಿತವಾಗಿದ್ದರೆ ಉಳಿದೆರಡು ಅಂತರಾಳಗಳು ಜಾಲಂಧ್ರಗಳಿಂದ ಮತ್ತು ಮಕರತೋರಣದಿಂದ ಅಲಂಕೃತ ಸುಂದರ ತ್ರಿಶಾಖ ದ್ವಾರಗಳನ್ನು ಹೊಂದಿವೆ. ಪ್ರತಿ ಶಾಖೆಯಲ್ಲಿ ಬಳ್ಳಿತೋರಣಗಳಿದ್ದು ಲಲಾಟದಲ್ಲಿ ಗಜಲಕ್ಷ್ಮೀಯ ಕೆತ್ತನೆಯಿದೆ.


ಇಲ್ಲೊಂದು ವೈಶಿಷ್ಟ್ಯವೆಂದರೆ ವಿಷ್ಣುವಿನ ಅಂತರಾಳದ ಮಕರತೋರಣದಲ್ಲಿ ವೇಣುಗೋಪಾಲ ಮತ್ತು ಆತನ ಇಕ್ಕೆಲಗಳಲ್ಲಿ ತಲಾ ಇಬ್ಬರು ಸ್ತ್ರೀಯರನ್ನು (ಗೋಪಿಕೆಯರು?) ತೋರಿಸಿರುವುದು. ವಿಷ್ಣುವಿನ ಗರ್ಭಗುಡಿಯಾಗಿರುವುದರಿಂದ ಆತನದ್ದೇ ಅವತಾರವೊಂದನ್ನು ತೋರಿಸುವ ಉದ್ದೇಶವಿದ್ದಿರಬಹುದು. ಶಿವಲಿಂಗದ ಅಂತರಾಳದ ಮಕರತೋರಣದಲ್ಲಿ ಗಣೇಶ, ಬ್ರಹ್ಮ, ನಟರಾಜ (ಶಿವ), ವಿಷ್ಣು ಮತ್ತು ಮಹಿಷಮರ್ದಿನಿಯ ಕೆತ್ತನೆಯಿದೆ.


ಸೂರ್ಯದೇವನ ಗರ್ಭಗುಡಿಯು ೫ ಶಾಖೆಗಳನ್ನು ಹೊಂದಿದ್ದರೆ, ಶಿವಲಿಂಗ ಮತ್ತು ವಿಷ್ಣು ಗರ್ಭಗುಡಿಗಳು ೬ ಶಾಖೆಗಳನ್ನು ಹೊಂದಿವೆ. ಶಾಖೆಗಳಲ್ಲಿರುವ ಕೆತ್ತನೆ ಅಪ್ರತಿಮ ಶೈಲಿಯದ್ದಾಗಿದ್ದು ಅತ್ಯಂತ ಮನೋಹರವಾಗಿವೆ. ಎಲ್ಲಾ ಗರ್ಭಗುಡಿಗಳು ಲಲಾಟದಲ್ಲಿ ಗಜಲಕ್ಷ್ಮೀಯನ್ನು ಹೊಂದಿವೆ.


ಶಿವಲಿಂಗ ಮತ್ತು ವಿಷ್ಣು ಗರ್ಭಗುಡಿಗಳ ಶಾಖಾ ಕೆತ್ತನೆ ಏಕಪ್ರಕಾರವಾಗಿದೆ. ಇವುಗಳಲ್ಲಿ ಕ್ರಮವಾಗಿ - ವಜ್ರತೋರಣ, ನಾಗದೇವರು, ನರ್ತಕ ಹಾಗೂ ನರ್ತಕಿ, ವಿವಿಧ ಪ್ರಾಣಿಗಳು, ನೇರ ಬಳ್ಳಿ ಮತ್ತು ಯಕ್ಷ ಯಕ್ಷಿಯರನ್ನು ಕೆತ್ತಲಾಗಿದೆ.


ಎರಡನೇ ಮತ್ತು ಮೂರನೇ ಶಾಖೆಯಲ್ಲಿರುವ ಕೆತ್ತನೆಗಳನ್ನು ಕೆತ್ತಿರುವ ರೀತಿಯೂ ಅತ್ಯದ್ಭುತ. ಈ ಕೆತ್ತನೆಗಳಿರುವ ಫಲಕವನ್ನು ಪ್ರತ್ಯೇಕವಾಗಿ ಕೆತ್ತಿ ನಂತರ ಶಾಖೆಗಳಿಗೆ ತಾಗಿಸಿ ಕೂರಿಸಿರುವಂತೆ ಅನುಭವ ನೀಡುವ ರೀತಿಯಲ್ಲಿ ಕೆತ್ತಲಾಗಿದೆ. ಇದೇ ಕಾರಣದಿಂದ ನಡುವೆ ಅಂತರವಿರುವುದನ್ನು ಕಾಣಬಹುದು.


ಪ್ರಭಾವಳಿಯಲ್ಲಿ ಮಕರತೋರಣದಿಂದ ಅಲಂಕೃತ, ಶಂಖಚಕ್ರಗದಾಪದ್ಮಧಾರಿಯಾಗಿರುವ ಸುಮಾರು ೬ ಅಡಿ ಎತ್ತರದ ವಿಷ್ಣುವಿನ ಮೂರ್ತಿಯು ಗಮನ ಸೆಳೆಯುತ್ತದೆ. ಗರುಡಪೀಠದ ಮೇಲಿರುವ ವಿಷ್ಣುವಿನ ಇಕ್ಕೆಲಗಳಲ್ಲಿ ಶ್ರೀದೇವಿ ಮತ್ತು ಭೂದೇವಿಯರಿದ್ದಾರೆ.


ಪ್ರಮುಖ ಗರ್ಭಗುಡಿಯಲ್ಲಿ ಪಾಣಿಪೀಠದ ಮೇಲೆ ಒಂದು ಅಡಿ ಎತ್ತರದ ಶಿವಲಿಂಗವಿದೆ. ಈ ಗರ್ಭಗುಡಿಯ ಮೇಲಿನ ಶಿಖರ ಮಾತ್ರ ಉಳಿದಿದೆ. ಶಿಖರವನ್ನು ೩ ತಾಳಗಳಲ್ಲಿ ನಿರ್ಮಿಸಲಾಗಿದ್ದು ಮೇಲ್ಗಡೆ ಸುಂದರ ಕಲಶವಿದೆ. ಶಿಖರದ ಎಲ್ಲಾ ಸ್ತರಗಳಲ್ಲಿಯೂ ಶಿವನ ಕುಳಿತಿರುವ ಭಂಗಿಯಲ್ಲಿರುವ ಶಿಲ್ಪದ ಕೆತ್ತನೆಗಳನ್ನು ಕಾಣಬಹುದು. ನವರಂಗಕ್ಕೆ ಅರ್ಧ ಕಂಬಗಳಿರುವ ಕಕ್ಷಾಸನವಿದೆ. ಈ ಕಕ್ಷಾಸನ ಮತ್ತು ಛಾವಣಿಯ ನಡುವಿನ ತೆರೆದ ಜಾಗದಲ್ಲಿ ಊರವರು ಕಿಟಕಿಗಳನ್ನು ಕೂರಿಸಿಬಿಟ್ಟಿದ್ದಾರೆ! ಕಕ್ಷಾಸನದ ತಳಭಾಗದಲ್ಲಿ ಯುದ್ಧದೃಶ್ಯಗಳ ಕೆತ್ತನೆಯಿದೆ.


ಈ ದೇವಾಲಯದಲ್ಲಿ ನನ್ನನ್ನು ಬಹಳ ಆಕರ್ಷಿಸಿದ್ದು ನವರಂಗದಲ್ಲಿರುವ ಗಣೇಶನ, ಮಹಿಷಮರ್ದಿನಿಯ ಮತ್ತು ಬ್ರಹ್ಮನ ಅದ್ಭುತ ಮೂರ್ತಿಗಳು. ಗಣೇಶನ ವಿಗ್ರಹ ಹಾನಿಗೊಳಗಾಗಿದ್ದರೂ ಆಕರ್ಷಕವಾಗಿ ಕಾಣುತ್ತಿದೆ. ಗಣೇಶ ಆಸೀನನಾಗಿರುವ ಪೀಠವನ್ನು ಮೂಷಿಕಪೀಠವೆಂದು ಕರೆಯಬಹುದೇ? ಪೀಠದ ಮುಂಭಾಗದಲ್ಲಿ ಮೂಷಿಕನ ಕೆತ್ತನೆಯಿರುವುದನ್ನು ಗಮನಿಸಿ.


ಮಹಿಷಮರ್ದಿನಿ ಮತ್ತು ಬ್ರಹ್ಮನ ಮೂರ್ತಿಗಳು ಹಾನಿಗೊಳಗಾಗದೇ ಇರುವುದು ನಮ್ಮ ಅದೃಷ್ಟ. ಅವುಗಳ ಸ್ಪಷ್ಟತೆ ಮತ್ತು ಅಂದ ಸುಮಾರು ಸಮಯ ನನ್ನನ್ನು ಸೆರೆಹಿಡಿಯಿತು.


ಶಿವಲಿಂಗಕ್ಕೆ ಮುಖ ಮಾಡಿ ಸೂರ್ಯದೇವನಿದ್ದಾನೆ. ಸೂರ್ಯದೇವನ ಅಂತರಾಳದಲ್ಲಿಯೇ ಬಸವಣ್ಣನ ದೊಡ್ಡ ಮೂರ್ತಿಯಿರುವುದರಿಂದ ಸೂರ್ಯದೇವರನ್ನು ನೋಡಬೇಕಾದರೆ ಬಸವಣ್ಣನನ್ನು ದಾಟಿ ಹೋಗಬೇಕು. ಆದರೆ ಊರವರಿಗೆ ಬಸವಣ್ಣನೇ ಪ್ರಮುಖ ದೇವರಾಗಿರುವುದರಿಂದ ಬಸವಣ್ಣನ ಮುಂದೆಯೇ ಕಟಕಟೆಯನ್ನು ನಿರ್ಮಿಸಿ ಸಾರ್ವಜನಿಕರಿಗೆ ಸೂರ್ಯದೇವನ ಅಂತರಾಳಕ್ಕೆ ಪ್ರವೇಶವನ್ನು ನಿರ್ಬಂಧಿಸಲಾಗಿದೆ! ವಿದ್ಯುತ್ ಇಲ್ಲದಿದ್ದರೆ ಸೂರ್ಯದೇವ ಕಾಣುವುದೇ ಇಲ್ಲ. ವಿದ್ಯುತ್ ಇದ್ದರೆ ನಂದಿಯ ಮುಂದಿನಿಂದಲೇ (ನವರಂಗದಿಂದ) ಸೂರ್ಯದೇವನನ್ನು ನೋಡಿ ತೃಪ್ತಿಪಡಬೇಕು. ’ಉಡುಪಿಯಿಂದ ಬಂದಿದ್ದೇನೆ, ಸೂರ್ಯದೇವರನ್ನು ಸಮೀಪದಿಂದ ನೋಡಲು ಅನುವು ಮಾಡಿ ಕೊಡಿ’ ಎಂದು ಅರ್ಚಕರನ್ನು ವಿನಂತಿಸಿದರೂ ಅವರು ಒಪ್ಪಲಿಲ್ಲ. ಅಲ್ಲಿದ್ದ ಊರಿನ ಹಿರಿಯರಿಬ್ಬರೂ ನನ್ನ ಪರವಾಗಿ ಅರ್ಚಕರಲ್ಲಿ ಕೇಳಿಕೊಂಡರೂ ಆ ಮನುಷ್ಯ ಒಪ್ಪಲೇ ಇಲ್ಲ. ಆ ಹಿರಿಯರು ನನ್ನಲ್ಲಿ - ’ಸರ, ನೀವ ಮುಂಜಾನೆ ಜಲ್ದಿ ಬಂದಿರಂದ್ರೆ ಪೂಜಾರಿ ಮತ್ತೊಬ್ಬ ಇರ್ತಾನ್ರಿ, ಅಂವ ಮಂದಿ ಕೇಳಿದ್ರ ಒಳಗ ಬಿಡ್ತಾನ್ರಿ. ಕರೆಂಟ ಇತ್ತೂ ಅಂದ್ರ ನೀವ ಇಲ್ಲಿಂದಾದ್ರೂ (ನವರಂಗದಿಂದ) ನೋಡಾಕ ಆಗ್ತಿತ್ತ...’ ಎಂದರು. ಆ ಅರ್ಚಕನಿಗೆ ಸೂರ್ಯದೇವ ಸ್ವಲ್ಪ ಒಳ್ಳೆಯ ಬುದ್ಧಿ ನೀಡಿದರೆ ಚೆನ್ನಾಗಿತ್ತು. ಅರ್ಚಕ ಇರದಿದ್ದರೆ ಕಟಕಟೆಯನ್ನು ಹಾರಿ ಒಳಗೆ ಹೋಗಬಹುದು!


ಈ ದೇವಾಲಯದ ಮುಂದೆ ಸರಸ್ವತಿ ದೇವಿಯ ದೇವಾಲಯವಿದೆ. ಮುಖಮಂಟಪ ಮತ್ತು ಗರ್ಭಗುಡಿಯನ್ನು ಹೊಂದಿರುವ ಸಣ್ಣ ದೇವಾಲಯ. ಸರಸ್ವತಿಯ ವಿಗ್ರಹ ಆಕರ್ಷಕವಾಗಿದ್ದು ಹಳದಿ ಸೀರೆಯನ್ನು ಉಡಿಸಲಾಗಿತ್ತು.

ಮಂಗಳವಾರ, ಸೆಪ್ಟೆಂಬರ್ 30, 2014

ಸಿದ್ಧೇಶ್ವರ ದೇವಾಲಯ - ಶಿವಪುರ


ಊರಿನ ಹೊರಗಿರುವ ಕೆರೆಯ ತಟದಲ್ಲಿ ನಿರ್ಜನ ಪ್ರದೇಶದಲ್ಲಿ ಸಿದ್ಧೇಶ್ವರ ದೇವಾಲಯವಿದೆ. ದೇವಾಲಯ ಸಂಪೂರ್ಣವಾಗಿ ನವೀಕರಣಗೊಂಡಿದೆ. ಹೊರಗಿನಿಂದ ನೋಡಿದರೆ ’ಪುರಾತನ’ ದೇವಾಲಯವೆಂಬ ಯಾವ ಕುರುಹೂ ದೊರೆಯದು. ದೇವಾಲಯದ ನಿರ್ಮಾಣದ ಶೈಲಿ ಸ್ವಲ್ಪ ಭಿನ್ನವಾಗಿದೆ. ನೇರವಾಗಿ ಮೇಲೆದ್ದಿರುವ ಗೋಡೆಗಳು, ಆಯತಾಕಾರವಾಗಿ ಕಾಣುವ ದೇವಾಲಯ, ಮೇಲೆ ಕಾಣಬರುವ ವೃತ್ತಾಕಾರದ ಗೋಪುರ, ಗೋಪುರದ ಕೆಳಗಿರುವ ಚೌಕಾಕಾರದ ಕೋಣೆ, ಈ ಕೋಣೆಗಿರುವ ೮ ಕಮಾನುಗಳು, ಇವನ್ನೆಲ್ಲ ಮೂಲ ದೇವಾಲಯ ಹೊಂದಿತ್ತೋ ಅಥವಾ ನಂತರದ ದಿನಗಳಲ್ಲಿ ಸೇರಿಸಲಾಯಿತೋ ಎಂಬ ಮಾಹಿತಿ ದೊರಕಲಿಲ್ಲ.


ನವರಂಗ, ಅಂತರಾಳ ಮತ್ತು ಗರ್ಭಗುಡಿಯನ್ನು ಹೊಂದಿರುವ ದೇವಾಲಯದ ನಿರ್ಮಾಣದ ವರ್ಷದ ಬಗ್ಗೆ ಮಾಹಿತಿ ದೊರಕಿಲ್ಲ. ಆದರೆ ಹಿಂದಿನ ಕಾಲದ ಪ್ರಸಿದ್ಧ ಶರಣರಾದ ’ಸಿದ್ಧರಾಮ’ರ ನೆನಪಿನಲ್ಲಿ ಈ ದೇವಾಲಯವನ್ನು ನಿರ್ಮಿಸಲಾಗಿದೆ ಎನ್ನಲಾಗುತ್ತದೆ.


ಪೂರ್ವದ ಪ್ರಮುಖ ದ್ವಾರವನ್ನು ಹೊರತುಪಡಿಸಿ, ದೇವಾಲಯಕ್ಕೆ ಉತ್ತರದಿಂದ ಇನ್ನೊಂದು ದ್ವಾರವಿದೆ. ಎರಡೂ ದ್ವಾರಗಳು ಐದು ತೋಳುಗಳನ್ನು ಹೊಂದಿದ್ದು, ನವರಂಗಕ್ಕೆ ತೆರೆದುಕೊಳ್ಳುತ್ತವೆ. ಅಲ್ಲದೆ, ಈ ಎರಡೂ ದ್ವಾರಗಳ ದ್ವಾರದ ಇಕ್ಕೆಲಗಳಲ್ಲಿ ಚಾಮರ ಬೀಸುತ್ತಿರುವ ಪರಿಚಾರಿಕೆಯರ (ಶ್ರೀದೇವಿ ಹಾಗೂ ಭೂದೇವಿಯರಿರಬಹುದು) ನಡುವೆ ಇರುವ ವಿಷ್ಣುವಿನ ಮೂರ್ತಿಯನ್ನು ಕಾಣಬಹುದು.


ಪ್ರಮುಖ ದ್ವಾರದ ಸಮೀಪದಲ್ಲಿರುವ ಕವಾಟವೊಂದರಲ್ಲಿ ಉಮಾಮಹೇಶ್ವರನ ಮೂರ್ತಿಯಿದೆ. ಭೈರವನ ಮೂರ್ತಿಯೊಂದನ್ನು ಪ್ರಮುಖ ದ್ವಾರದ ಬಳಿಯಲ್ಲಿ ಇರಿಸಲಾಗಿದೆ.


ನವರಂಗಲ್ಲಿರುವ ನಾಲ್ಕು ಕಂಬಗಳು ಈಗ ವರ್ಣಮಯವಾಗಿಬಿಟ್ಟಿವೆ. ಈ ನಾಲ್ಕು ಕಂಬಗಳಲ್ಲಿ, ಗರ್ಭಗುಡಿಯ ದ್ವಾರಕ್ಕೆ ಸಮೀಪದಲ್ಲಿರುವ ಎರಡು ಕಂಬಗಳು ಭಿನ್ನವಾಗಿದ್ದು, ಸುಂದರ ಅಲಂಕಾರಿಕಾ ಕೆತ್ತನೆಗಳನ್ನು ಹೊಂದಿರುವುದನ್ನು ಕಾಣಬಹುದು. ನವರಂಗದ ಛಾವಣಿಯಲ್ಲೂ ಉತ್ತಮ ಕೆತ್ತನೆಯಿದ್ದು, ದೇವಾಲಯಕ್ಕೆ ಬೀಗ ಹಾಕಲಾಗಿದ್ದರಿಂದ ನನಗೆ ಅವನ್ನು ನೋಡಲಾಗಲಿಲ್ಲ.


ದೇವಾಲಯದ ಮುಂದೆ ಪುಷ್ಕರಿಣಿಯೊಂದಿದೆ. ಈಗ ಪಾಳುಬಿದ್ದಿರುವ ಈ ಪುಷ್ಕರಿಣಿ ಕಸಕಡ್ಡಿಗಳಿಂದ ತುಂಬಿಹೋಗಿದೆ. ದೇವಾಲಯದಿಂದ ಪುಷ್ಕರಿಣಿಗೆ ಇಳಿಯಲು ಮಾಡಿರುವ ಮೆಟ್ಟಿಲುಗಳ ವ್ಯವಸ್ಥಿತ ರಚನೆ ಈಗಲೂ ಉಳಿದುಕೊಂಡಿದೆ.


ಈ ಪುಷ್ಕರಿಣಿಯ ಸುತ್ತಲೂ ದೇವಾಲಯದ ವೈಭವದ ದಿನದ ಕುರುಹುಗಳನ್ನು ಕಾಣಬಹುದು. ಅಲ್ಲಲ್ಲಿ ತುಂಡಾಗಿ ಬಿದ್ದಿರುವ ಕೆತ್ತನೆಗಳು ರಾಶಿಯೇ ಇಲ್ಲಿದೆ.


ಸಮೀಪದಲ್ಲೇ ಎರಡು ಸಣ್ಣ ಗುಡಿಗಳಿವೆ. ದೇವಾಲಯದ ಮುಂದೆ ದೀಪಸ್ತಂಭವಿದೆ. ಹಿಂಭಾಗದಲ್ಲಿ ಕುದುರೆಲಾಯವನ್ನು ಹೋಲುವ ಕಟ್ಟಡವಿದೆ. ಕನ್ನಡ ಮಹಾಕವಿ ಹರಿಹರನು ತನ್ನ ಕಾವ್ಯವೊಂದರಲ್ಲಿ ಈ ದೇವಾಲಯವನ್ನು ಉಲ್ಲೇಖಿಸಿದ್ದಾನೆ.

ಮಾಹಿತಿ: ಪುರಾತತ್ವ ಇಲಾಖೆ

ಭಾನುವಾರ, ಸೆಪ್ಟೆಂಬರ್ 21, 2014

ಆಂಗ್ಲರ ಸಮಾಧಿಗಳು - ಕುಮಟಾ


ಕುಮಟಾದಲ್ಲಿ ಇಬ್ಬರು ಬ್ರಿಟಿಷ್ ಅಧಿಕಾರಿಗಳು ಶಾಶ್ವತವಾಗಿ ಮಲಗಿರುವ ಸ್ಥಳವನ್ನು ಪುರಾತತ್ವ ಇಲಾಖೆ ಜತನದಿಂದ ಕಾಯ್ದುಕೊಂಡಿದೆ! ಈ ಪುರಾತತ್ವ ಇಲಾಖೆ ಹಾಗೂ ಲೋಕೋಪಯೋಗಿ ಇಲಾಖೆ ಇವೆರಡನ್ನು ಹುಟ್ಟುಹಾಕಿದವರು ಆಂಗ್ಲರು. ಅವರು ಇಟ್ಟ ಸುದೃಢ ತಳಪಾಯವೇ ಈ ಎರಡೂ ಇಲಾಖೆಗಳು ಇಂದಿಗೂ ಸಶಕ್ತವಾಗಿ ಕಾರ್ಯನಿರ್ವಹಿಸಲು ಮೂಲ ಕಾರಣ.


ಪಟ್ಟಣದ ನಟ್ಟನಡುವೆ ಸುಮಾರಾಗಿ ವಿಶಾಲವಾಗಿರುವ ಸ್ಥಳದ ನಡುವೆ ಆಯತಾಕಾರದ ಪ್ರಾಂಗಣದ ಒಳಗೆ ಈ ಎರಡು ಸಮಾಧಿಗಳಿವೆ. ಒಬ್ಬ ಲೋಕೋಪಯೋಗಿ ಇಲಾಖೆಯ ಸಹಾಯಕ ಅಭಿಯಂತನಾಗಿದ್ದರೆ ಇನ್ನೊಬ್ಬ ಬ್ರಿಟಿಷ್ ಸಂಸ್ಥೆಯೊಂದರ ಅಭಿಯಂತನಾಗಿದ್ದ.


ಲೋಕೋಪಯೋಗಿ ಇಲಾಖೆಯ ವ್ಯಕ್ತಿ ತನ್ನ ೩೮ನೇ ವಯಸ್ಸಿನಲ್ಲಿ ಗತಿಸಿದ್ದು, ಆತನ ಸಮಾಧಿಯ ಮೇಲಿರುವ ಫಲಕದಲ್ಲಿ ಈ ಕೆಳಗಿನ ಮಾಹಿತಿಯನ್ನು ನೀಡಲಾಗಿದೆ.


In Memory Of
Henry Jesson
Sub Engineer
P.W.D.
Born Warwick
24 Nov 1839
Died Coompta
10 May 1877
 

ಇನ್ನೊಬ್ಬ ವ್ಯಕ್ತಿ ತನ್ನ ೫೨ನೇ ವಯಸ್ಸಿನಲ್ಲಿ ಮೃತಪಟ್ಟಿದ್ದು, ಆತನ ಸಮಾಧಿಯ ಮೇಲೆ ಈ ಕೆಳಗಿನ ಮಾಹಿತಿಯಿದೆ.


Sacred to the Memory of
John Albert Cope
Eng. - Wests Press Co
Born London
15th June 1828
Died Coompta
11th April 1880