ಭಾನುವಾರ, ಜೂನ್ 16, 2013

ಚಟ್ಟೇಶ್ವರ ದೇವಾಲಯ - ಚಟಚಟ್ಟಿಹಳ್ಳಿ


ಇನ್ನೊಂದು ಹತ್ತು-ಹದಿನೈದು ವರ್ಷಗಳ ನಂತರ ’ಇಲ್ಲಿ ದೇವಾಲಯವಿತ್ತು’ ಎಂದು ಹೇಳುವ ದುರ್ಗತಿ ಬರಬಹುದು ಚಟಚಟ್ಟಿಹಳ್ಳಿಯ ಚಟ್ಟೇಶ್ವರ ದೇವಾಲಯಕ್ಕೆ. ದೇವಾಲಯ ಪಾಳು ಬೀಳುತ್ತಿದೆ. ಮುಖಮಂಟಪ ಶಿಥಿಲಗೊಂಡಿದ್ದು, ಕುಸಿಯುತ್ತಿದೆ. ಗಿಡಗಂಟಿಗಳು ನಿಧಾನವಾಗಿ ಹೊರಗೋಡೆಯನ್ನೇರುತ್ತಿವೆ. ಮಾಡಿನ ಮೇಲೂ ಗಿಡಗಂಟಿಗಳು ರಾರಾಜಿಸಲು ಆರಂಭಿಸಿವೆ.


೨೦೦೯ರ ಸೆಪ್ಟೆಂಬರ್ ತಿಂಗಳಲ್ಲಿ ಬಿದ್ದ ಭಾರಿ ಮಳೆಗೆ ಗೋಪುರ ಹಾನಿಗೊಂಡಿದ್ದು ಒಂದು ಪಾರ್ಶ್ವ ಕುಸಿದಿದೆ. ಪರಿಣಾಮ ದೇವಾಲಯದ ಗೋಡೆಗಳಿಗೆ ಅಳವಡಿಸಲಾಗಿರುವ ಕಲ್ಲುಗಳು ಸಡಿಲಗೊಂಡು ಬೀಳುವ ಸ್ಥಿತಿಯಲ್ಲಿವೆ. ಕಳೆದ ಹತ್ತು ವರ್ಷಗಳಿಂದ ದೇವಾಲಯದ ದುರಸ್ತಿಗೆ ಮನವಿ ಸಲ್ಲಿಸಿದರೂ ಏನೂ ಪರಿಣಾಮವಾಗಿಲ್ಲ ಎಂದು ಗ್ರಾಮಸ್ಥರು ಹೇಳಿದರು. ಒಟ್ಟಾರೆ ಚಟ್ಟೇಶ್ವರನ ಭವಿಷ್ಯ ಆಶಾದಾಯಕವಾಗಿ ಕಾಣುತ್ತಿಲ್ಲ.


ದೇವಾಲಯದ ಮುಂಭಾಗದಲ್ಲೇ ಇರುವ ಬಿಲ್ವ ಪತ್ರೆ ಮರವೊಂದು ಹೆಮ್ಮರವಾಗಿ ಬೆಳೆದಿದ್ದು, ಮುಖಮಂಟಪವನ್ನೇ ಕಬಳಿಸುತ್ತಿದೆ! ಈ ಮರದ ಗೆಲ್ಲುಗಳು ಮುಖಮಂಟಪದ ಮೇಲ್ಭಾಗವನ್ನು ಸಂಪೂರ್ಣವಾಗಿ ಆವರಿಸಿಕೊಂಡಿವೆ. ಊರವರು ದೇವಾಲಯದ ಪರಿಸರವನ್ನು ಸ್ವಚ್ಛವಾಗಿ ಇಟ್ಟುಕೊಂಡಿಲ್ಲ. ದೇವಾಲಯದ ಒಳಗೂ ಸ್ವಚ್ಛತೆಯ ಕೊರತೆ. ಎಲ್ಲಾ ಕಡೆ ಧೂಳು. ಮುಜರಾಯಿ ಇಲಾಖೆಗೆ ಒಳಪಟ್ಟಿರುವ ಈ ದೇವಾಲಯದಲ್ಲಿ ದಿನಾಲೂ ಪೂಜೆ ನಡೆಯುತ್ತಿದ್ದರೂ ದೇವಾಲಯವನ್ನು ಸ್ವಚ್ಚವಾಗಿರಿಸಲು ಅಸಡ್ಡೆ. 


೧೧ನೇ ಶತಮಾನದಲ್ಲಿ ನಿರ್ಮಿಸಲಾಗಿರುವ ಈ ತ್ರಿಕೂಟ ದೇವಾಲಯದ ಎಲ್ಲಾ ೩ ಗರ್ಭಗುಡಿಗಳಿಗೆ ಸಾಮಾನ್ಯ ನವರಂಗವಿದೆ. ಪ್ರಮುಖ ಗರ್ಭಗುಡಿಯಲ್ಲಿ ಶಿವಲಿಂಗವಿದ್ದು ಉಳಿದೆರಡು ಗರ್ಭಗುಡಿಗಳಲ್ಲಿ ಹರಿಹರ ಮತ್ತು ೬ ಅಡಿ ಎತ್ತರವಿರುವ ಸೂರ್ಯನಾರಾಯಣ ದೇವರ ಮೂರ್ತಿಗಳಿವೆ. ಪ್ರಮುಖ ಗರ್ಭಗುಡಿಯ ದ್ವಾರದ ಮೇಲೆ ಇರುವ ಗಜಲಕ್ಷ್ಮೀಯ ಕೆತ್ತನೆ ಮತ್ತು ಕೆಳಗೆ ಇಕ್ಕೆಲಗಳಲ್ಲಿರುವ ದ್ವಾರಪಾಲಕರ ಕೆತ್ತನೆ ಅಳಿಸಿಹೋಗುತ್ತಿವೆ.


ದೇವಾಲಯದ ಹೊರಗೋಡೆಯಲ್ಲಿ ಭಿತ್ತಿಚಿತ್ರಗಳಿಲ್ಲ. ಎರಡು ಕಂಬಗಳ ಹೊರಚಾಚು ಮುಖಮಂಟಪದಲ್ಲಿ ಕಲ್ಲಿನ ಆಸನಗಳ ವ್ಯವಸ್ಥೆಯಿದೆ. ದೇವಾಲಯದ ಉಳಿದೆರಡು ಗರ್ಭಗುಡಿಗಳಿಗೂ ಗೋಪುರವಿದ್ದು ಅವು ಬಹಳ ಹಿಂದೆನೇ ಬಿದ್ದುಹೋಗಿವೆ ಎನ್ನಲಾಗುತ್ತದೆ. ಹೊಯ್ಸಳರ ದಂಡನಾಯಕನಾಗಿದ್ದ ಕೇತುಮಲ್ಲನು, ರಾಜ ವಿಷ್ಣುವರ್ಧನ ಹಾಗೂ ಪಟ್ಟದರಾಣಿ ಶಾಂತಲೆಯ ಬಗ್ಗೆ ಇದ್ದಂತಹ ಅಪಾರ ಗೌರವ ಹಾಗೂ ಅಭಿಮಾನದಿಂದ ರಾಜ ರಾಣಿಯರ ನೆನಪಿಗಾಗಿ ಈ ದೇವಾಲಯವನ್ನು ಚೆಟ್ಟಯ್ಯ ಪೆರುಮಾಳ್ ಎಂಬವನಿಂದ ಕಟ್ಟಿಸಿದನು ಎಂದು ಹೇಳುವ ಐತಿಹಾಸಿಕ ದಾಖಲೆ ಚಟ್ಟೇಶ್ವರ ದೇವಾಲಯದಲ್ಲಿರುವ ಶಾಸನದಲ್ಲಿ ಲಭ್ಯವಾಗಿದೆ.


ಚಟ್ಟೇಶ್ವರ ದೇವಾಲಯವನ್ನು ಪುರಾತತ್ವ ಇಲಾಖೆಯ ಆದಷ್ಟು ಬೇಗ ತನ್ನ ಸುಪರ್ದಿಗೆ ತೆಗೆದುಕೊಂಡರೆ ದೇವಾಲಯಕ್ಕೆ ಉಳಿಗಾಲ. ಇಲ್ಲವಾದಲ್ಲಿ ೯೦೦ ವರ್ಷಗಳಷ್ಟು ಕಾಲ ಉಳಿದ ಇತಿಹಾಸ ನಿಧಾನವಾಗಿ ಮರೆಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ. (ಈ ಲೇಖನ ೨೦೧೦ ಜನವರಿಯಲ್ಲಿ ಬರೆದದ್ದು. ಈಗ ಪ್ರಸ್ತುತ ದೇವಾಲಯವನ್ನು ದುರಸ್ತಿ ಮಾಡಲಾಗಿದೆ. ವಿವರಗಳನ್ನು ಇಲ್ಲಿ ಮತ್ತು ಇಲ್ಲಿ ಓದಬಹುದು).

5 ಕಾಮೆಂಟ್‌ಗಳು:

Teamgsquare ಹೇಳಿದರು...

Sad to see a beautiful temple crumble down . Hope we can do something to bring up this temple .

Ashok ಹೇಳಿದರು...

Nice article. We pray at least now, the Archaeological department wake up and preserve the temple..

Srik ಹೇಳಿದರು...

Chatachattihalli - a beautiful name!!

NANJUNDARAJU ಹೇಳಿದರು...

ಮಾನ್ಯರೇ, ಇಲ್ಲಿ ಒಂದು ವಿಷಯ ತಿಳಿಸಲಿಚ್ಚಿಸುತ್ತೇನೆ. ಅದು ದೇವಾಲಯ. ಪವಿತ್ರವಾದ ಸ್ಠಳ. ಸ್ಠಳೀಯರಾದ ನಾವು ಅದನ್ನು ಶುಚಿಯಾಗಿಟ್ಟುಕೊಳ್ಳಬೇಕು. ಆಗಾಗ ದೇವಾಲಯದ ಗೋಪುರದ ಮೇಲೆ, ಛಾವಣಿಯ ಮೇಲೆ ಬೆಳೆಯುವ ಕಳೆ ಸಸ್ಯಗಳನ್ನು ಕಿತ್ತು ರಕ್ಷಿಸಿದ್ದರೆ ಈ ಗತಿ ಬರುತ್ತಿರಲಿಲ್ಲ. ಅದೃಷ್ಟವಶಾತ್ ಪುರಾತತ್ವ ಇಲಾಖೆಯವರು ಕ್ರಮ ತೆಗೆದುಕೊಂಡಿದ್ದರಿಂದ ದೇವಸ್ತಾನ ಉಳಿಯಿತು ಇಲ್ಲವಾದರೆ, ಆ ದೇವಸ್ಠಾನದ ಕುರುಹು ಇರುತ್ತಿರಲಿಲ್ಲ. ಈ ವಿಷಯ ಸ್ಠಳಿಯರಿಗೆ ಬೇಸರವಾಗಬಹುದು.ಆದರೂ ನಮ್ಮ ಊರು ಎಂಬ ಅಭಿಮಾನ ಅವರಿಗಿರಬೇಕಲ್ಲವೇ? ಇನ್ನು ಮುಂದಾದ್ರೂ ಆ ದೇವಸ್ಠಾನವನ್ನು ಕಾಲಕಾಲಕ್ಕೆ ಶುಚಿಗೊಳಿಸಿದರೆ ಇನ್ನೂ ಸಾವಿರ ವರುಷ ಉತ್ತಮ ರೀತಿಯಲ್ಲಿಟ್ಟುಕೊಳ್ಳಬಹುದು ಅಲ್ಲವೇ? ವಂದನೆಗಳು.

ರಾಜೇಶ್ ನಾಯ್ಕ ಹೇಳಿದರು...

ಧೀರಜ್ಅಮೃತಾ,
ದೇವಾಲಯದ ಜೀರ್ಣೋದ್ಧಾರ ಕಾರ್ಯ ನಡೆಯುತ್ತಿದೆ.

ಅಶೋಕ್,
ಧನ್ಯವಾದ.

ಶ್ರೀಕಾಂತ್,
ನನಗೂ ಹಾಗೇ ಅನಿಸಿತ್ತು!

ನಂಜುಂಡರಾಜು,
ನೀವು ಹೇಳುವುದು ನಿಜ. ಆದರೆ ಅಷ್ಟು ಕಾಳಜಿವಹಿಸಿ ತಮ್ಮೂರಿನ ದೇವಾಲಯ ಕಾಪಾಡಿಕೊಳ್ಳಬೇಕೆಂಬ ಅರಿವು ಹೆಚ್ಚಿನ ಊರಿನವರಿಗೆ ಇರುವುದಿಲ್ಲ. ಧನ್ಯವಾದ.