ಭಾನುವಾರ, ಸೆಪ್ಟೆಂಬರ್ 02, 2012

ಬಿಲ್ಲೇಶ್ವರ ಮತ್ತು ಗಣಪತಿ ದೇವಾಲಯಗಳು - ಹಾನಗಲ್


ಕೇವಲ ಗರ್ಭಗುಡಿ ಮಾತ್ರ ಇರುವ ದೇವಾಲಯವಾದರೂ ಬಾಗಿಲವಾಡದಲ್ಲಿ ಉತ್ಕೃಷ್ಟ ಕೆತ್ತನೆಗಳನ್ನು ಹೊಂದಿರುವ ದೇವಾಲಯವಿದು. ಗರ್ಭಗುಡಿಯಲ್ಲಿ ಬಿಲ್ಲೇಶ್ವರ ಎಂದು ಕರೆಯಲ್ಪಡುವ ಸುಂದರವಾದ ಲಿಂಗವಿದ್ದು, ದಿನಾಲೂ ಪೂಜೆ ಸಲ್ಲಿಸಲಾಗುತ್ತದೆ.


ದೇವಾಲಯದ ಮುಂಭಾಗ ಏನೂ ಉಳಿದಿರಲಿಲ್ಲ. ಪ್ರಾಚ್ಯ ವಸ್ತು ಇಲಾಖೆ ಬದಲಿ ಕಲ್ಲುಗಳನ್ನು ಬಳಸಿ ಪುನ: ನಿರ್ಮಿಸಿದೆ. ಕಲ್ಯಾಣ ಚಾಲುಕ್ಯ ಶೈಲಿಯ ಈ ದೇವಾಲಯದ ಹೊರಗೋಡೆಯಲ್ಲಿ ಕೆಲವು ಗೋಪುರಗಳನ್ನು ಕಾಣಬಹುದು. ಈ ಗೋಪುರಗಳ ಕೆಳಗೆ ಮಂಟಪಗಳಿದ್ದು, ಇವುಗಳ ಒಳಗೆ ಮೊದಲು ಭಿತ್ತಿಗಳಿದ್ದಿರಬಹುದು. ಈಗ ಏನೂ ಇಲ್ಲ.


ದೇವಾಲಯದ ದ್ವಾರವು ೫ ತೋಳುಗಳನ್ನು ಹೊಂದಿದ್ದು ಮನಮೋಹಕ ಕೆತ್ತನೆಗಳನ್ನು ಹೊಂದಿದೆ. ಈ ತೋಳುಗಳಲ್ಲಿ ಕ್ರಮವಾಗಿ ವಜ್ರತೋರಣ, ನಾಗ ನಾಗಿಣಿ, ನೃತ್ಯಗಾರರು ಸಂಗೀತಗಾರರು, ವಿವಿಧ ಪ್ರಾಣಿಗಳು ಮತ್ತು ಉದ್ದನೆಯ ಬಳ್ಳಿಯನ್ನು ಅದ್ಭುತವಾಗಿ ಕೆತ್ತಲಾಗಿದೆ.


ನಾಗದೇವ ಮತ್ತು ನಾಗದೇವತೆಯರ ಬಾಲದ ಭಾಗವನ್ನು ಸುರುಳಿ ಸುತ್ತಿ ಕೆತ್ತಿರುವುದು ಶಿಲ್ಪಿಯ ನೈಪುಣ್ಯತೆಗೆ ಸಾಕ್ಷಿ. ದ್ವಾರದ ಮೇಲಿರುವ ಗಜಲಕ್ಷ್ಮೀಯ ಕೆತ್ತನೆಯೂ ಸ್ಫುಟವಾಗಿದ್ದು ಆಕರ್ಷಕವಾಗಿದೆ.


ದ್ವಾರದ ತಳಭಾಗದಲ್ಲಿ ೫ ಶಿಲ್ಪಗಳಿವೆ. ನಡುವೆ ಇರುವುದು ಮನ್ಮಥ. ಈತನ ಒಂದು ಪಾರ್ಶ್ವದಲ್ಲಿ ರತಿ ಮತ್ತು ಇನ್ನೊಂದು ಪಾರ್ಶ್ವದಲ್ಲಿ ದಕ್ಷ (ಟಗರಿನ ತಲೆಯಿರುವ ದೇವತೆ). ದಕ್ಷನ ಬದಿಯಲ್ಲಿ ಆತನ ಸೇವಕ ಮತ್ತು ರತಿಯ ಪಕ್ಕ ಆಕೆಯ ಸೇವಕಿ.


 ನಿಬ್ಬೆರಗಿನಿಂದ ಆ ಕೆತ್ತನೆಗಳನ್ನು ಬಹಳಷ್ಟು ಸಮಯ ನೋಡುತ್ತಾ ಇದ್ದೆ. ಬಿಲ್ಲೇಶ್ವರನ ದ್ವಾರವನ್ನಾದರೂ ನೋಡಲು ಹಾನಗಲ್‍ಗೆ ಭೇಟಿ ನೀಡಬೇಕು.

ಅಂದು - ಇಂದು:


ವರ್ಣ ಚಿತ್ರ ೨೦೧೧ರದ್ದು. ಕಪ್ಪು ಬಿಳುಪು ಚಿತ್ರ ಇಸವಿ ೧೮೫೬ರಲ್ಲಿ ತೆಗೆದದ್ದು. ೧೫೬ ವರ್ಷಗಳ ಹಿಂದೆ ಬಿಲ್ಲೇಶ್ವರ ದೇವಾಲಯ ಹೀಗಿತ್ತು. ದ್ವಾರದ ಲಲಾಟ ದೇವಾಲಯದ ಮುಂದೆ ಬಿದ್ದಿರುವುದನ್ನು ಗಮನಿಸಿ. ಆಗ ಅದನ್ನೇ ಮೆಟ್ಟಿಲನ್ನಾಗಿ ಬಳಸಲಾಗುತ್ತಿತ್ತೇನೋ? ಪ್ರಾಚ್ಯ ವಸ್ತು ಇಲಾಖೆ ಎಂಬ ವಿಭಾಗ ಅಸ್ತಿತ್ವಕ್ಕೆ ಬರದೇ ಇದ್ದಿದ್ದರೆ ನಾವು ಎಷ್ಟನ್ನೆಲ್ಲಾ ಶಾಶ್ವತವಾಗಿ ಕಳೆದುಕೊಳ್ಳುತ್ತಿದ್ದೆವು!

ಗಣಪತಿ ದೇವಾಲಯ:


ರಾಜ್ಯದಲ್ಲಿ ಇಂತಹ ದೇವಾಲಯ ಬಹಳ ಅಪರೂಪ (ಇರಲಾರದು). ದಕ್ಷಿಣಾಭಿಮುಖವಾಗಿರುವ ಈ ದೇವಾಲಯದ ಪ್ರಮುಖ ವೈಶಿಷ್ಟ್ಯವೆಂದರೆ ಇದರ ಶಿಖರ. ’ಭೂಮಿಜ ಶಿಖರ’ ಶೈಲಿಯನ್ನು ಹೊಂದಿರುವ ಗಣಪತಿ ದೇವಾಲಯ ಮುಖಮಂಟಪ, ನವರಂಗ, ಅಂತರಾಳ ಮತ್ತು ಗರ್ಭಗುಡಿಯನ್ನು ಹೊಂದಿದೆ. ಇಂತಹ ಶಿಖರ ಶೈಲಿ ಹೆಚ್ಚಾಗಿ ಉತ್ತರ ಭಾರತದ ದೇವಾಲಯಗಳಲ್ಲಿ ಕಾಣಬರುತ್ತದೆ.


ಮುಖಮಂಟಪವು ಕಕ್ಷಾಸನವನ್ನು ಹೊಂದಿದೆ. ನವರಂಗದ ನಾಲ್ಕು ಕಂಬಗಳ ನಡುವಿರುವ ಅಂಕಣದಲ್ಲಿ ಸುಂದರ ತಾವರೆಯನ್ನು ಕೆತ್ತಲಾಗಿದೆ.


ನಾಲ್ಕು ತೋಳುಗಳ ದ್ವಾರವಿರುವ ಗರ್ಭಗುಡಿಯಲ್ಲಿ ಗಣೇಶನ ಮೂರ್ತಿಯಿದೆ. ಗಣೇಶನನ್ನು ಪದ್ಮದ ಮೇಲೆ ಕೂರಿಸಿರುವುದು ಈ ದೇವಾಲಯದ ಇನ್ನೊಂದು ಆಕರ್ಷಣೆ.

ಅಂದು - ಇಂದು:


೧೮೮೫ ರಲ್ಲಿ ಗಣಪತಿ ದೇವಾಲಯ ಹೀಗಿತ್ತು. ಇಂದಿಗೂ ಸ್ವಲ್ಪ ಬದಲಾವಣೆ ಕಂಡದ್ದು ಬಿಟ್ಟರೆ ಹಾಗೇ ಇದೆ. ಛಾವಣಿಯನ್ನು ಈಗ ಸಂಪೂರ್ಣವಾಗಿ ಕಾಂಕ್ರೀಟ್ ಹಾಕಿ ದುರಸ್ತಿ ಮಾಡಲಾಗಿದೆ. ಕಕ್ಷಾಸನ ಮತ್ತು ಛಾವಣಿಯ ನಡುವಿರುವ ಅಂತರವನ್ನು ಊರಿನವರೇ ಮುಚ್ಚಿರುವುದನ್ನು ಗಮನಿಸಿ. ದೇವಾಲಯ ’ಸೆಗಣಿ ರೊಟ್ಟಿ’ ಒಣಗಿಸಲು ಬಳಕೆಯಾಗುತ್ತಿದ್ದ ಸಮಯವದು. ಚಿತ್ರದಲ್ಲಿ ಕಟ್ಟಿಗೆಗಳ ರಾಶಿ ಇದ್ದಲ್ಲೇ ಈಗ ಮನೆಯಿರುವುದರಿಂದ ಇದೇ ಜಾಗದಲ್ಲಿ ನಿಂತು ಚಿತ್ರ ತೆಗೆಯುವುದು ಅಸಾಧ್ಯ.

2 ಕಾಮೆಂಟ್‌ಗಳು:

Aravind GJ ಹೇಳಿದರು...

ಉತ್ತಮ ಮಾಹಿತಿ. ಏನೇ ಆಗಲಿ ಪ್ರಾಚ್ಯ ವಸ್ತು ಇಲಾಖೆಯನ್ನು ಅಭಿನಂದಿಸಬೇಕು.

ಮುಂದಿನ ಬಾರಿ ಹಾನಗಲ್ಲಿಗೆ ಹೋದಾಗ ಈ ದೇವಾಲಯಗಳನ್ನು ನೋಡುವೆ.

ರಾಜೇಶ್ ನಾಯ್ಕ ಹೇಳಿದರು...

ಅರವಿಂದ್,
ಧನ್ಯವಾದ.