ಭಾನುವಾರ, ಫೆಬ್ರವರಿ 28, 2010

ರಾಹುಲ್ ದ್ರಾವಿಡ್ - ಶ್ರೇಷ್ಠತೆಯ ಪ್ರತೀಕ (೧)


ರಾಹುಲ್ ದ್ರಾವಿಡ್. ಹೆಸರು ಕೇಳಿದ ಕೂಡಲೇ ಮನಸಿಗೆ ಬರುವ ಚಿತ್ರಣವೇನು? ಶಿಸ್ತು, ಸಂಯಮ, ತಾಳ್ಮೆ, ಏಕಾಗ್ರತೆ, ಬುದ್ಧಿವಂತಿಕೆ, ಇತ್ಯಾದಿ. ಶ್ರೇಷ್ಠತೆಯ ಪರಾಕಾಷ್ಠೆಯನ್ನು ತಲುಪಿಯೂ ಇನ್ನೂ ಮುಂದಕ್ಕೆ ಹೋಗಬೇಕು ಎಂದು ಸದಾ ಹಂಬಲಿಸುತ್ತಿರುವ, ತಾನಿನ್ನೂ ಕ್ರೀಡೆಯ ವಿದ್ಯಾರ್ಥಿ ಎಂದು ತನ್ನನ್ನು ತಾನು ಪರಿಗಣಿಸುವ ಅಪರೂಪದ ಕ್ರೀಡಾಳು. ಯಾವುದರಲ್ಲಿ ನಾವು ಪರಿಪಕ್ವವಾಗಿಲ್ಲವೋ ಅದನ್ನು ಪ್ರಯತ್ನಿಸಲೂಬಾರದು ಎಂಬ ಧೋರಣೆಯೊಂದಿಗೆ ತನ್ನ ಕ್ರೀಡಾ ಜೀವನದ ಅತ್ಯುನ್ನತ ಮಟ್ಟ ತಲುಪಿರುವ ವ್ಯಕ್ತಿ ದ್ರಾವಿಡ್.

ದ್ರಾವಿಡ್ ಯಶಸ್ಸಿಗೆ ಮುಖ್ಯ ಕಾರಣ ಅವರು ಜೀವನದಲ್ಲಿ ಅಳವಡಿಸಿಕೊಂಡಿರುವ ಶಿಸ್ತು. ಏನೇ ಮಾಡಲಿ ಅದರಲ್ಲೊಂದು ಶಿಸ್ತು ಇದ್ದೇ ಇದೆ. ಒಂದು ನಿಯಮ ಇದ್ದೇ ಇದೆ. ಆ ಶಿಸ್ತು ಮತ್ತು ನಿಯಮ ದಾಟಿ ಒಂದು ಹೆಜ್ಜೆ ಆಚೀಚೆ ದ್ರಾವಿಡ್ ಇಡುವುದೇ ಇಲ್ಲ. ಆ ಕೆಲಸ ಬ್ಯಾಟಿಂಗ್ ಮಾಡುವುದಿರಲಿ, ಪಂದ್ಯದ ಮುಂಚಿನ ತಯಾರಿ ಇರಲಿ, ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುವುದಿರಲಿ, ವೈಯುಕ್ತಿಕ ಸಂದರ್ಶನ ಕೊಡುವುದಿರಲಿ, ಹೀಗೆ ಎಲ್ಲೆಲ್ಲೂ ಆ ಶಿಸ್ತು ಮತ್ತು ತನಗೆ ತಾನೇ ವಿಧಿಸಿದ ನಿಯಮದ ಪ್ರಕಾರ ದ್ರಾವಿಡ್ ನಡೆದುಕೊಳ್ಳುತ್ತಾರೆ. ಕೆಲವೊಂದು ಪ್ರಶ್ನೆಗಳಿಗೆ ತಾನು ಉತ್ತರ ನೀಡಲೇಬಾರದು ಎಂದು ದ್ರಾವಿಡ್ ಮುಂಚಿತವಾಗಿಯೇ ನಿರ್ಧರಿಸಿರುತ್ತಾರೆ. ಆಗ, ಜಪ್ಪಯ್ಯ ಎಂದರೂ ವರದಿಗಾರರಿಗೆ ದ್ರಾವಿಡ್-ನಿಂದ ಆ ಪ್ರಶ್ನೆಗಳಿಗೆ ಎಷ್ಟೇ ತಿರುಚಿ ಕೇಳಿದರೂ ಉತ್ತರ ಸಿಗುವುದಿಲ್ಲ. ಗಾಸಿಪ್ ಮಾಡಲು ಯಾವುದೆ ’ಸೌಂಡ್ ಬೈಟ್’ ದ್ರಾವಿಡ್ ನಿಂದ ಹೊರಬರುವುದಿಲ್ಲ. ಅವರದ್ದೇನಿದ್ದರೂ ನೇರ ಸರಳ ಸುಲಭ ಮಾತು. ಆಡುವ ಪ್ರತಿ ಮಾತಿನ ಹಿಂದೆ ಟನ್ನುಗಟ್ಟಲೆ ಬುದ್ಧಿವಂತಿಕೆಯಿರುತ್ತದೆ. ಆದ್ದರಿಂದಲೇ ದ್ರಾವಿಡ್ ರಾಷ್ಟ್ರೀಯ ತಂಡಕ್ಕೆ ಆಡಲು ಒಂದುವರೆ ದಶಕಗಳಾದರೂ ಇದುವರೆಗೆ ಒಂದೇ ಒಂದು ವಿವಾದವಾಗಲಿ, ತಪ್ಪು ಹೇಳಿಕೆಯಾಗಲಿ ಅವರ ಸುತ್ತ ಸುಳಿದಿಲ್ಲ.

ಶಾಲಾ ದಿನಗಳಿಂದಲೂ ದ್ರಾವಿಡ್ ಜೀವನದಲ್ಲಿದ್ದದ್ದು ಕ್ರಿಕೆಟ್ ಮತ್ತು ಓದು. ಗೆಳೆಯರು, ಸಹಪಾಠಿಗಳೆಲ್ಲಾ ಮೋಜು ಮಾಡಲೋ ಅಥವಾ ತಿರುಗಾಡಲೋ ತೆರಳಿದರೆ ದ್ರಾವಿಡ್ ತೆರಳುತ್ತಿದ್ದುದು ಕ್ರಿಕೆಟ್ ನೆಟ್ಸ್-ಗೆ. ಶಾಲೆ/ಕಾಲೇಜು, ಕ್ರಿಕೆಟ್ ಮೈದಾನ ಮತ್ತು ಮನೆ ಇವೇ ದ್ರಾವಿಡ್ ಓಡಾಡುತ್ತಿದ್ದ ಜಾಗಗಳು. ಗುಲಾಮ್ ಅಹ್ಮದ್ ಅಂಡರ್ ೧೫ ದಕ್ಷಿಣ ವಲಯ ಪಂದ್ಯಾವಳಿಯಲ್ಲಿ ಪ್ರಥಮ ಬಾರಿಗೆ ದ್ರಾವಿಡ್ ರಾಜ್ಯ ತಂಡವನ್ನು ಪ್ರತಿನಿಧಿಸಿದರು. ನಂತರ ೧೬ರ ಹರೆಯದಲ್ಲಿ ಅಂಡರ್ ೧೭, ಅಂಡರ್ ೧೯ ಮತ್ತು ಅಂಡರ್ ೨೧ ಹೀಗೆ ಈ ೩ ಪಂದ್ಯಾವಳಿಗಳಲ್ಲೂ ರಾಜ್ಯ ತಂಡವನ್ನು ಪ್ರತಿನಿಧಿಸಿದ್ದರು. ದ್ರಾವಿಡ್ ಪ್ರತಿಭೆಯನ್ನು ಕಣ್ಣಾರೆ ಕಂಡಿದ್ದ ಆಯ್ಕೆಗಾರರು ಎಲ್ಲಾ ವಯೋಮಿತಿಯಲ್ಲೂ ಅವರನ್ನು ಆಡಿಸಿದರು. ಎಲ್ಲೆಡೆಯೂ ದ್ರಾವಿಡ್ ಯಶಸ್ಸನ್ನು ಕಂಡರು. ಎಲ್ಲಾ ವಯೋಮಿತಿಗಳ ಪಂದ್ಯಾವಳಿಗಳಲ್ಲಿ ದ್ರಾವಿಡ್ ರನ್ನುಗಳ ಪ್ರವಾಹ ಇನ್ನು ಈತನನ್ನು ರಾಜ್ಯ ರಣಜಿ ತಂಡದಿಂದ ದೂರವಿಡಲು ಅಸಾಧ್ಯ ಎಂಬ ಮಟ್ಟಕ್ಕೆ ತಲುಪಿತ್ತು.

ಆಗ ಸಯ್ಯದ್ ಕಿರ್ಮಾನಿ ನೇತೃತ್ವದ ಕರ್ನಾಟಕ ಆ ಋತುವಿನ (೧೯೯೦-೯೧) ಲೀಗ್ ಪಂದ್ಯಗಳನ್ನು ಮುಗಿಸಿ ನಾಕ್ ಔಟ್ ಹಂತ ತಲುಪಿತ್ತು. ನಾಕ್ ಔಟ್ ಪಂದ್ಯಗಳಿಗಾಗಿ ತಂಡದ ಘೋಷಣೆ ಮಾಡಿದಾಗ ಅಲ್ಲಿ ಎರಡು ಪ್ರಮುಖ ಬದಲಾವಣೆಗಳಿದ್ದವು. ರಮೇಶ್ ರಾವ್ ಮತ್ತು ಕೆ.ಜಿ.ಶೇಖರ್ ಅವರನ್ನು ತಂಡದಿಂದ ಕೈಬಿಡಲಾಗಿತ್ತು. ಇವರಿಬ್ಬರ ಸ್ಥಾನ ತುಂಬಲು ಆಯ್ಕೆಯಾದವರು ರಾಹುಲ್ ದ್ರಾವಿಡ್ ಮತ್ತು ಸುಜಿತ್ ಸೋಮಸುಂದರ್! ಹೀಗೆ ತನ್ನ ೧೮ನೇ ವಯಸ್ಸಿನಲ್ಲಿ ಮಹಾರಾಷ್ಟ್ರ ವಿರುದ್ಧ ಪುಣೆಯಲ್ಲಿ ರಾಹುಲ್ ದ್ರಾವಿಡ್ ತನ್ನ ಚೊಚ್ಚಲ ರಣಜಿ ಪಂದ್ಯವನ್ನು ಆಡಿದರು. ಆಗ ತಂಡ ಹೀಗಿತ್ತು - ಕಾರ್ಲ್ಟನ್ ಸಲ್ಡಾನಾ, ಪಿ.ವಿ.ಶಶಿಕಾಂತ್, ವಿಜಯ್ ಅರ್ಜುನ್ ರಾಜಾ, ಸಯ್ಯದ್ ಕಿರ್ಮಾನಿ, ಕಾರ್ತಿಕ್ ಜೆಶ್ವಂತ್, ಅನಿಲ್ ಕುಂಬ್ಳೆ, ಜಾವಗಲ್ ಶ್ರೀನಾಥ್, ರಘುರಾಮ್ ಭಟ್, ವೆಂಕಟೇಶ್ ಪ್ರಸಾದ್, ರಾಹುಲ್ ದ್ರಾವಿಡ್ ಮತ್ತು ಸುಜಿತ್ ಸೋಮಸುಂದರ್.

ಈ ಪಂದ್ಯದಲ್ಲಿ ಕರ್ನಾಟಕದ ಐದನೇ ವಿಕೆಟ್ ೨೦೦ರ ಮೊತ್ತಕ್ಕೆ ಪತನಗೊಂಡಾಗ ಕ್ರೀಸಿಗೆ ದ್ರಾವಿಡ್ ಆಗಮಿಸಿ ಸೇರಿಕೊಂಡದ್ದು ಹಿರಿಯ ಅನುಭವಿ ಆಟಗಾರ ಮತ್ತು ’ಕರ್ನಾಟಕದ ಆಪತ್ಬಾಂಧವ’ ಎಂದೇ ಪ್ರಸಿದ್ಧಿ ಪಡೆದಿದ್ದ ಕಾರ್ತಿಕ್ ಜೆಶ್ವಂತ್ ಅವರನ್ನು. ತನ್ನ ಮೊದಲ ಪಂದ್ಯ ಆಡುತ್ತಿರುವ ಯುವ ಪ್ರತಿಭಾವಂತ ಕ್ರಿಕೆಟಿಗ ದ್ರಾವಿಡ್-ಗೆ ಜೆಶ್ವಂತ್-ರಂತಹ ಹೋರಾಟ ಮನೋಭಾವದ ಆಟಗಾರ ಜೊತೆಯಲ್ಲಿ ದೊರಕಿದ್ದು ಅದೃಷ್ಟ. ಇಬ್ಬರೂ ಜೊತೆಗೂಡಿ ಆರನೇ ವಿಕೆಟಿಗೆ ಸೇರಿಸಿದ್ದು ೨೩೮ ರನ್ನುಗಳನ್ನು! ಜೆಶ್ವಂತ್ ೧೭೫ ರನ್ನುಗಳನ್ನು ಗಳಿಸಿದರೆ, ಚೊಚ್ಚಲ ಪಂದ್ಯ ಆಡುತ್ತಿದ್ದ ದ್ರಾವಿಡ್ ೮೨ ರನ್ನುಗಳನ್ನು ಗಳಿಸಿದರು. ನಂತರ ಬಂಗಾಲ ವಿರುದ್ಧ ಕೊಲ್ಕತ್ತಾದಲ್ಲಿ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ದ್ರಾವಿಡ್ (ತನ್ನ ದ್ವಿತೀಯ ರಣಜಿ ಪಂದ್ಯದಲ್ಲಿ) ತನ್ನ ಪ್ರಥಮ ರಣಜಿ ಶತಕವನ್ನು ಗಳಿಸಿದರು.

ಮೊದಲ ಋತುವಿನಲ್ಲಿ ಆಡಿದ ಎರಡು ಪಂದ್ಯಗಳ ಎರಡು ಇನ್ನಿಂಗ್ಸ್-ಗಳಲ್ಲಿ ಒಂದು ಶತಕ ಮತ್ತು ಒಂದು ಅರ್ಧ ಶತಕಗಳ ಉತ್ತಮ ಪ್ರದರ್ಶನ. ೧೦೮.೦೦ರ ಸರಾಸರಿ! ಒಬ್ಬ ಗ್ರೇಟ್ ಕ್ರಿಕೆಟ್ ಆಟಗಾರನ ಅನಾವರಣ ಇಲ್ಲಿಂದಲೇ ಆಯಿತು ಎನ್ನಬಹುದು. ಆಗಿನ್ನೂ ದ್ರಾವಿಡ್-ಗೆ ೧೮ರ ಹರೆಯ. ’ಟೆಕ್ನಿಕಲಿ ಕರೆಕ್ಟ್’ ಆಟಗಾರನೊಬ್ಬ ಕರ್ನಾಟಕ ತಂಡದಲ್ಲಿ ಆಡುತ್ತಿದ್ದಾನೆ ಎಂಬ ಮಾತು ದ್ರಾವಿಡ್ ಆಡಿದ ಮೊದಲ ಋತುವಿನಿಂದಲೇ ಎಲ್ಲೆಡೆ ಹಬ್ಬತೊಡಗಿತು. ಮುಂದಿನ ೫ ಋತುಗಳಲ್ಲಿ (೧೯೯೫-೯೬ ವರೆಗೆ) ದ್ರಾವಿಡ್ ರಣಜಿ ಟ್ರೋಫಿ ಅಲ್ಲದೆ, ದುಲೀಪ್ ಟ್ರೋಫಿ ಮತ್ತು ದೇವಧರ್ ಟ್ರೋಫಿ ಪಂದ್ಯಗಳಲ್ಲೂ ಉತ್ತಮ ಪ್ರದರ್ಶನ ನೀಡಿದರು.

೧೯೯೦-೯೧ ಋತುವಿನಲ್ಲಿ ಕರ್ನಾಟಕಕ್ಕೆ ಆಡಿದ ದ್ರಾವಿಡ್ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗುವ ಮುನ್ನ ಸತತವಾಗಿ ೬ ಋತುಗಳಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ್ದಾರೆ. ರಾಜ್ಯಕ್ಕೆ ಆಡಿದ ಈ ೬ ಋತುಗಳಲ್ಲಿ ಅವರ ಸರಾಸರಿ ಹೀಗಿತ್ತು - ೧೦೮, ೬೩, ೮೩, ೮೧, ೧೯೧ ಮತ್ತು ೫೮. ಮೊದಲ ಋತುವಿನಲ್ಲಿ ೨ ಪಂದ್ಯಗಳನ್ನು ಆಡಿದರೆ, ೫ ನೇ ಋತುವಿನಲ್ಲಿ ಭಾರತ ’ಎ’ ತಂಡಕ್ಕೆ ಆಯ್ಕೆಯಾಗಿದ್ದ ಕಾರಣ ಒಂದೇ ಪಂದ್ಯದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಲು ಸಾಧ್ಯವಾಯಿತು. ೧೯೯೬ರ ಜುಲಾಯಿ ತಿಂಗಳಲ್ಲಿ ಭಾರತ ತಂಡದ ಇಂಗ್ಲಂಡ್ ಪ್ರವಾಸಕ್ಕೆ ದ್ರಾವಿಡ್ ಆಯ್ಕೆಯಾದರು. ಆದ್ದರಿಂದ ಆ ಋತುವಿನಲ್ಲಿ (೧೯೯೬-೯೭) ರಾಜ್ಯ ತಂಡಕ್ಕೆ ಯಾವ ಪಂದ್ಯವನ್ನೂ ದ್ರಾವಿಡ್ ಆಡಲಿಲ್ಲ. ಮುಂದಿನ ವರ್ಷ (೧೯೯೭-೯೮) ದ್ರಾವಿಡ್ ನನ್ನು ರಾಷ್ಟ್ರೀಯ ತಂಡದಿಂದ ಕೈಬಿಡಲಾಯಿತು. ಪರಿಣಾಮ ರಾಜ್ಯ ತಂಡದ ಚುಕ್ಕಾಣಿ ವಹಿಸಿಕೊಂಡ ದ್ರಾವಿಡ್ ಎಲ್ಲಾ ರಣಜಿ ಪಂದ್ಯಗಳಲ್ಲೂ ಆಡಿ ತಂಡ ರಣಜಿ ಪ್ರಶಸ್ತಿ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಗಳಿಸಿದ ರನ್ನುಗಳ ಸರಾಸರಿ ೭೩. ನಂತರ ಮತ್ತೆ ರಾಷ್ಟ್ರ ತಂಡಕ್ಕೆ ಆಯ್ಕೆಯಾದ ದ್ರಾವಿಡ್ ಅಲ್ಲೇ ತಳವಾಗಿ ಬೇರೂರಿಬಿಟ್ಟರು. ರಣಜಿ ಟ್ರೋಫಿಯಲ್ಲಿ ೧೭ ಶತಕಗಳನ್ನು (೫ ದ್ವಿಶತಕಗಳು) ಮತ್ತು ೨೩ ಅರ್ಧ ಶತಕಗಳನ್ನು ದ್ರಾವಿಡ್ ಗಳಿಸಿದ್ದಾರೆ. ೫೮ ಕ್ಯಾಚುಗಳನ್ನು ಹಿಡಿದಿದ್ದಾರೆ.

೧೯೯೩ರಲ್ಲಿ ಇಂಗ್ಲಂಡ್ ತಂಡ ಭಾರತ ಪ್ರವಾಸ ಕೈಗೊಂಡಿತ್ತು. ಅಭ್ಯಾಸ ಪಂದ್ಯವಾದ ಮಂಡಳಿ ಅಧ್ಯಕ್ಷರ ತಂಡದ ವಿರುದ್ಧದ ಪಂದ್ಯ ಲಕ್ನೋದಲ್ಲಿ ನಡೆಯುತ್ತಿತ್ತು. ದ್ರಾವಿಡ್ ಮಂಡಳಿ ಅಧ್ಯಕ್ಷರ ತಂಡಕ್ಕೆ ಆಯ್ಕೆಯಾಗಿದ್ದರು. ಮೊದಲ ಇನ್ನಿಂಗ್ಸಿನಲ್ಲಿ ದ್ರಾವಿಡ್ ಗಳಿಸಿದ್ದು ಕೇವಲ ೨೭ ರನ್ನುಗಳನ್ನು. ಆದರೆ ದ್ರಾವಿಡ್ ಆ ೨೭ ರನ್ನುಗಳನ್ನು ಗಳಿಸಿದ ರೀತಿ ನೋಡಿ ತುಂಬಾ ಪ್ರಭಾವಿತರಾದ ಇಂಗ್ಲಂಡ್ ತಂಡದ ಕೋಚ್ ಡಂಕನ್ ಫ್ಲೆಚರ್ ಹೇಳಿದ್ದು, "ಈ ಹುಡುಗನಿಗೆ ಅದ್ಭುತ ಭವಿಷ್ಯವಿದೆ. ಈತ ಮುಂದೊಂದು ದಿನ ಭಾರತಕ್ಕೆ ಆಡುತ್ತಾನೆ ಮತ್ತು ತುಂಬಾ ಕಾಲ ಆಡುತ್ತಾನೆ. ಉತ್ತಮ ಕ್ರಿಕೆಟ್ ಆಟಗಾರನಾಗುವ ಎಲ್ಲಾ ಗುಣಗಳು ಈತನಲ್ಲಿವೆ ಮತ್ತು ಮುಖ್ಯವಾಗಿ ಈತನ ಆಟದಲ್ಲಿದೆ". ಆ ದಿನ ಫ್ಲೆಚರ್ ಹೇಳಿದ ಮಾತು ಮುಂದೆ ನಿಜವಾಗಿ ಸಾಬೀತಾಯಿತು.

ರಣಜಿ ಪಂದ್ಯಗಳನ್ನು ಆಡತೊಡಗಿದ ದಿನಗಳಿಂದಲೇ ದ್ರಾವಿಡ್ ಆಟವನ್ನು ಎಲ್ಲರೂ ಮೆಚ್ಚಲಾರಂಭಿಸಿದರು. ಕೇವಲ ಒಂದು ಇನ್ನಿಂಗ್ಸ್, ಅದು ಕೂಡಾ ೨೭ ರನ್ನುಗಳನ್ನು ಗಳಿಸಿದ ರೀತಿ ನೋಡಿ ಫ್ಲೆಚರ್ ಪ್ರಭಾವಿತರಾದರೆಂದರೆ ದ್ರಾವಿಡ್ ತನ್ನ ಆಟವನ್ನು ಹೇಗೆ ಬೆಳೆಸಿಕೊಂಡಿದ್ದರು ಎಂಬುವುದು ಸ್ಪಷ್ಟವಾಗುತ್ತದೆ. ರನ್ನು ಗಳಿಸುವುದು ಮಾತ್ರ ಮುಖ್ಯವಲ್ಲ, ಹೇಗೆ ಗಳಿಸಲಾಯಿತು ಎಂಬುವುದೂ ಮುಖ್ಯ.

ಎಷ್ಟು ಆಗುತ್ತೋ ಅಷ್ಟು ಬಾರಿ ದ್ರಾವಿಡ್ ಆಟವನ್ನು ಇನ್ನು ನೋಡುವುದು ಒಳ್ಳೆಯದು. ಆ ಟೆಕ್ನಿಕ್, ಆ ಎಲೆಗನ್ಸ್, ಆ ಕಂಪೋಷರ್ ... ಸಾಧ್ಯನೇ ಇಲ್ಲ. ಯಾರಿಗೂ ಇವನ್ನೆಲ್ಲಾ ಮೈಗೂಡಿಸಿಕೊಳ್ಳಲು ಸಾಧ್ಯನೇ ಇಲ್ಲ. ಅಷ್ಟು ಕಷ್ಟಪಟ್ಟು ಅಭ್ಯಾಸ ಮಾಡುವವರು ಈಗ ಯಾರಿದ್ದಾರೆ? ಒಂದೆರಡು ಋತುಗಳಲ್ಲಿ ಉತ್ತಮವಾಗಿ ಆಡಿದ ಕೂಡಲೇ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗುವವರೇ ಹೆಚ್ಚು. ಆದರೆ ದ್ರಾವಿಡ್ ಭಾರತಕ್ಕೆ ಆಡಲು ಆಯ್ಕೆಯಾಗುವ ಮೊದಲು ಬರೋಬ್ಬರಿ ೬ ರಣಜಿ ಋತುಗಳನ್ನು ಆಡಿದ್ದಾರೆ. ’ಇಂಡಿಯಾ ಎ’ ತಂಡದೊಂದಿಗೆ ’ಎ’ ತಂಡಗಳ ಏಷ್ಯಾ ಕಪ್-ನಲ್ಲಿ ಆಡಿದ್ದಾರೆ. ’ಎ’ ತಂಡದೊಂದಿಗೆ ಕೀನ್ಯಾ ಪ್ರವಾಸ ಕೈಗೊಂಡಿದ್ದಾರೆ. ರಣಜಿ ಸೀಸನ್ ಆಡಿದ ಎಲ್ಲಾ ಋತುಗಳಲ್ಲಿ ದುಲೀಪ್ ಟ್ರೋಫಿ ಮತ್ತು ದೇವಧರ್ ಟ್ರೋಫಿಗಳಲ್ಲಿ ಆಡಿದ್ದಾರೆ. ಇವೆಲ್ಲಾ ಅತ್ಯಮೂಲ್ಯ ಅನುಭವಗಳು. ತನ್ನ ಆಟವನ್ನು ಅತ್ಯುನ್ನತ ಮಟ್ಟಕ್ಕೆ ಸುಧಾರಿಸಲು ದ್ರಾವಿಡ್-ಗೆ ಬೇಕಾದಷ್ಟು ಸಮಯಾವಕಾಶ ದೊರಕಿತು.

ಹೆಚ್ಚಿನ ಆಟಗಾರರು ೫-೬ ವರ್ಷಗಳ ಕಾಲ ದೇಶೀಯ ಕ್ರಿಕೆಟ್ ಪಂದ್ಯಾವಳಿಗಳಲ್ಲಿ ಆಡಿದರೂ ತಮ್ಮ ಆಟದ ರೀತಿಯನ್ನು ಸುಧಾರಿಸಿಕೊಳ್ಳುವಲ್ಲಿ ವಿಫಲರಾಗಿರುತ್ತಾರೆ. ಆದರೆ ದ್ರಾವಿಡ್ ಈ ೬ ವರ್ಷಗಳಲ್ಲಿ ಒಂದು ’ಕಂಪ್ಲೀಟ್ ಕ್ರಿಕೆಟರ್’ ಆಗಿ ರೂಪುಗೊಂಡರು. ಇಲ್ಲದಿದ್ದರೆ ’ಸ್ವಿಂಗ್ ಕ್ರೀಡಾಂಗಣ’ ಎಂದೇ ಪ್ರಸಿದ್ಧಿ ಪಡೆದಿರುವ ’ಲಾರ್ಡ್ಸ್’ನಲ್ಲಿ ತನ್ನ ಚೊಚ್ಚಲ ಟೆಸ್ಟ್ ಪಂದ್ಯದಲ್ಲಿ ೯೫ ರನ್ನು ಗಳಿಸುವುದು ಸುಲಭದ ಮಾತಲ್ಲ. ಇದೇ ಪಂದ್ಯದಲ್ಲಿ ಸೌರವ್ ಗಂಗೂಲಿ ಕೂಡಾ ತನ್ನ ಚೊಚ್ಚಲ ಪಂದ್ಯವನ್ನು ಆಡಿದ್ದರು. ಸೌರವ್ ಶತಕದ ಬಾರಿ ಆಡಿದರೆ ದ್ರಾವಿಡ್ ೫ ರನ್ನುಗಳಿಂದ ಶತಕ ವಂಚಿತರಾದರು. ಕೀಪರ್ ಕೈಗೆ ಕ್ಯಾಚು ನೀಡಿ ದ್ರಾವಿಡ್ ಔಟಾದಾಗ ಅವರಲ್ಲಿ ಕೇಳಲಾದ ಪ್ರಶ್ನೆ, ’ಅಂಪಾಯರ್ ಕಡೆ ನೋಡದೇ ಯಾಕೆ ಹಿಂತಿರುಗಿದಿರಿ? ಅಲ್ಲೇ ನಿಂತಲ್ಲಿ ಅಂಪಾಯರ್ ನಾಟ್ ಔಟ್ ಕೊಡುವ ಸಾಧ್ಯತೆ ಇತ್ತಲ್ಲವೇ? ಪ್ರಥಮ ಪಂದ್ಯದಲ್ಲೇ ಶತಕ ಗಳಿಸುವ ಹೆಗ್ಗಳಿಕೆ ನಿಮ್ಮದಾಗಿರುತ್ತಿತ್ತು’ ಎಂದು. ಅದಕ್ಕೆ ದ್ರಾವಿಡ್ ಉತ್ತರ - ’ಹ್ಹಾ... ಪ್ರೇಕ್ಷಕರಿಗೂ ಚೆಂಡು ಬ್ಯಾಟನ್ನು ಸವರಿದ ಸದ್ದು ಕೇಳಿರಬೇಕು. ಹಾಗಿರುವಾಗ ಅಲ್ಲಿ ನಿಂತು ನಾನೇನು ಮಾಡಲಿ?’

ಜಗತ್ತಿನ ಸಮಕಾಲೀನ ಕ್ರಿಕೆಟಿಗರಲ್ಲಿ ರಾಹುಲ್ ದ್ರಾವಿಡ್ ತುಂಬಾ ’ಬುದ್ಧಿವಂತ ಕ್ರಿಕೆಟಿಗ’ ಎಂದು ಗುರುತಿಸಲ್ಪಡುತ್ತಾರೆ. ಆಸ್ಟ್ರೇಲಿಯಾದ ಮಾಜಿ ನಾಯಕ ಸ್ಟೀವ್ ವಾ ಕ್ರಿಕೆಟಿನಿಂದ ನಿವೃತ್ತಿ ಪಡೆದ ಬಳಿಕ ’ಔಟ್ ಆಫ್ ಮೈ ಕಂಫರ್ಟ್ ಝೋನ್’ ಎಂಬ ಪುಸ್ತಕ ಬರೆದರು. ಆಗಿನ್ನೂ ದ್ರಾವಿಡ್-ಗೆ ೩೨ರ ವಯಸ್ಸು. ಸ್ವತ: ಸ್ಟೀವ್ ವಾ ಕ್ರಿಕೆಟ್ ಜಗತ್ತಿನಲ್ಲಿ ಎಲ್ಲರಿಂದಲೂ ಗೌರವಿಸಲ್ಪಡುವಂತಹ ಸಾಧನೆ ಮಾಡಿರುವ ಆಟಗಾರ. ಅಂತಹ ಸ್ಟೀವ್ ವಾ, ತನ್ನ ಪುಸ್ತಕಕ್ಕೆ ಮುನ್ನುಡಿಯನ್ನು ಬರೆಯುವಂತೆ ಕೋರಿದ್ದು ರಾಹುಲ್ ದ್ರಾವಿಡ್-ನನ್ನು! ಇದಕ್ಕಿಂತ ಮಿಗಿಲಾದ ಗೌರವ ಇನ್ನೇನಿದೆ. ವಿದೇಶದಲ್ಲಿ ಅತ್ಯಂತ ಹೆಚ್ಚು ಗೌರವ ಪಡೆಯುವ ಭಾರತದ ಕ್ರಿಕೆಟಿಗ ರಾಹುಲ್ ದ್ರಾವಿಡ್. ಆದರೆ ಭಾರತದಲ್ಲಿ ’ನಿಧಾನವಾಗಿ ಆಡುತ್ತಾರೆ’, ’ಬೋರ್ ಹೊಡೆಸುತ್ತಾರೆ’ ಎಂದು ನಾವು ಅವರನ್ನು ಕಡೆಗಣಿಸುತ್ತೇವೆ. ದ್ರಾವಿಡ್-ನ ಇದೇ ಶೈಲಿಯ ಆಟ ನಮಗದೆಷ್ಟೋ ಪಂದ್ಯಗಳನ್ನು ಗೆಲ್ಲುವ ಅವಕಾಶ ಮಾಡಿಕೊಟ್ಟಿದೆ ಎಂದು ನಾವು ಮರೆಯಬಾರದು. ದ್ರಾವಿಡ್ ಆಟದ ಶೈಲಿ ಅಪ್ರತಿಮ. ನಮಗದರ ಬೆಲೆ ಗೊತ್ತಿಲ್ಲ ಎಂಬುವುದು ದೊಡ್ಡ ದುರಂತ.

ದ್ರಾವಿಡ್ ಬುದ್ಧಿವಂತಿಕೆ ಮತ್ತು ಇಂಟೆಲಿಜೆನ್ಸ್ ಕೋಷಂಟ್ ಎಷ್ಟು ಉನ್ನತ ಮಟ್ಟದಲ್ಲಿದೆ ಎಂದರೆ ಅದನ್ನು ಊಹಿಸುವುದೇ ಅಸಾಧ್ಯ. ದಿನದ ಆಟ ಮುಗಿದಾಗ ಎಲ್ಲರೂ ಚಲನಚಿತ್ರ ನೋಡಲೋ, ಶಾಪಿಂಗ್ ಮಾಡಲೋ, ಪಾರ್ಟಿಗೋ ತೆರಳಿದರೆ, ದ್ರಾವಿಡ್ ತಾನು ಮೊದಲೇ ನಿರ್ಧರಿಸಿರುವ ಪುಸ್ತಕವನ್ನು ಓದುತ್ತಿರುತ್ತಾರೆ. ಅಲ್ಲೂ ಪ್ಲ್ಯಾನಿಂಗ್ ಇದೆಯೋ ಏನೋ. ಈ ಪಂದ್ಯ ಮುಗಿಯುವಷ್ಟರಲ್ಲಿ ಇಂತಹ ಪುಸ್ತಕ ಓದಿ ಮುಗಿಸಬೇಕೆಂದು!

ದ್ರಾವಿಡ್ ಆಡುವ ಮಾತುಗಳು ಅರ್ಥಗರ್ಭೀತವಾಗಿರುತ್ತವೆ. ಅವರ ಅನಿಸಿಕೆಗಳನ್ನು ಕೇಳಿದವರಿಗೆ ’ಹೌದಲ್ವೇ’ ಎಂದೇ ಅನಿಸುತ್ತದೆ. ಆ ಅನಿಸಿಕೆಗಳಲ್ಲಿ ಗೊಂದಲ ಇರುವುದಿಲ್ಲ. ಆಸ್ಟ್ರೇಲಿಯಾದ ಮಾಜಿ ಆರಂಭ ಆಟಗಾರ ಮ್ಯಾಥ್ಯೂ ಹೇಯ್ಡನ್ ಭಾರತದಲ್ಲಿ ಕ್ರಿಕೆಟ್ ಅಕಾಡೆಮಿಯೊಂದನ್ನು ಆರಂಭಿಸುವ ಇರಾದೆ ಹೊಂದಿದ್ದರು. ಆ ಬಗ್ಗೆ ಅವರು ಚರ್ಚಿಸಿದ್ದು ರಾಹುಲ್ ದ್ರಾವಿಡ್-ನೊಂದಿಗೆ ಮಾತ್ರ. ಬುದ್ಧಿವಂತಿಕೆಯ ಬಗ್ಗೆ ಡಂಗುರ ಬಾರಿಸಬೇಕಾಗಿಲ್ಲ. ಅದು ಇದ್ದಲ್ಲಿ ಉಳಿದವರು ಹುಡುಕಿಕೊಂಡು ಬರುತ್ತಾರೆ. ದ್ರಾವಿಡ್-ನ ಯಾವುದೇ ಸಂದರ್ಶನವನ್ನು ನಾನು ಮಿಸ್ ಮಾಡಿಕೊಳ್ಳುವುದಿಲ್ಲ. ನಾವು ಎಷ್ಟೇ ಮಟ್ಟಿಗೆ ಕ್ರಿಕೆಟ್ ಆಟವನ್ನು ಫಾಲೋ ಮಾಡುತ್ತಿದ್ದರೂ ನಮಗೆ ಅರಿಯದ ವಿಷಯಗಳು ಎಷ್ಟೋ ಇರುತ್ತವೆ. ದ್ರಾವಿಡ್ ಸಂದರ್ಶನದಲ್ಲಿ ಇಂತಹ ವಿಷಯಗಳ ಬಗ್ಗೆ ಮಾತುಗಳಿರುತ್ತವೆ. ಅವರ ಅನಿಸಿಕೆಗಳಿರುತ್ತವೆ. ಕಳೆದ ವಾರ ಕ್ರಿಕಿನ್ಫೋ ಅಂತರ್ಜಾಲ ತಾಣದಲ್ಲಿ ಅವರ ಸಂದರ್ಶನವೊಂದು ಪ್ರಸಾರವಾಗಿತ್ತು. ಆ ಸಂದರ್ಶನದಲ್ಲಿ ದ್ರಾವಿಡ್ ಆಡಿರುವ ಮಾತುಗಳನ್ನು ಇಲ್ಲಿ ಓದಬಹುದು ಮತ್ತು ಕೇಳಬಹುದು.

ಭಾಗ ಎರಡು.

8 ಕಾಮೆಂಟ್‌ಗಳು:

ಅನಾಮಧೇಯ ಹೇಳಿದರು...

ತುಂಬಾ ಚೆನ್ನಾಗಿ ಬರೆದಿದ್ದಿರ. ಸಚಿನ್ ಒಂದು ದಂತ ಕಥೆಯಾಗಿರಬಹುದು ಆದರೆ ದ್ರಾವಿಡ್ ಮನಸಿನಲ್ಲಿ ನಿಲ್ಲುತ್ತಾರೆ. ಬೆಂಗಳೂರಲ್ಲಿ ಒಂದು ಟೆಸ್ಟ್ ಮ್ಯಾಚ್ ಆದರೆ ನಾನು ನೋಡಲೇಬೇಕು, ಇಲ್ಲಿಯವರ್ಗು ದ್ರಾವಿಡ್ ಆಟ ನನಗೆ ನೋಡಲು ಸಿಕ್ಕಿದ್ದು ಬರಿ ಟ್ವೆಂಟಿ ಟ್ವೆಂಟಿಯಲ್ಲಿ

sunaath ಹೇಳಿದರು...

ರಾಹುಲ ದ್ರಾವಿಡರ ಬಗೆಗೆ ತುಂಬ ಉತ್ತಮ ಲೇಖನ ಬರೆದಿದ್ದೀರಿ.

Parisarapremi ಹೇಳಿದರು...

ದಿನವನ್ನು ಆರಂಭಿಸಲು ದ್ರಾವಿಡ್ ಬಗೆಗಿನ ಸೊಗಸಾದ ಲೇಖನಕ್ಕಿಂತ ಶುಭಕರವು ಇನ್ನೇನಿದೆ.. ತುಂಬಾ ಧನ್ಯವಾದಗಳು ರಾಜೇಶ್ ನಾಯ್ಕ್ರೇ.... :-) :-)

prasca ಹೇಳಿದರು...

ಅತ್ಯುತ್ತಮ ಲೇಖನ ಸಾರ್,
ಇದೂ ನಿಮ್ಮ ಚಾರಣಗಳ ಲೇಖನದಂತೆ ಓದಿಸಿಕೊಂಡು ಹೋಯ್ತು.
ಬೋರ್ ಹೊಡೆಸ್ತರೆ, ನಿದ್ದೆ ಬರುತ್ತೆ ಎನ್ನುವ ಅಭಿಪ್ರಾಯಗಳೂ ನನಗ ಇತ್ತು ಆದರೆ ಆತ ೧೯೯೯ ರ ವಿಶ್ವಕಪ್ನಲ್ಲಿ ಆಡಿದ ರೀತಿ ಅದನ್ನು ಸುಳ್ಳಾಗಿಸಿತು. ತಾನು ಔಟಾಗಿ ಬಂದ ನಂತರ ಅಥವ ತಾನು ಬ್ಯಾಟಂಗ್ ಬರುವ ಮುಂಚೆ ಬಹುತೇಕರು ಪೇಪರ್ ಓದುತ್ತಲೊ ಹಾಡು ಕೇಳುತ್ತಲೊ ಕುಳಿತಿರುತ್ತಾರೆ. ಆದರೆ ದ್ರಾವಿಡ್ ಎಂದೂ ಆ ರೀತಿ ನಾನು ನೋಡಿಲ್ಲ.
ಒಬ್ಬ ಸನ್ನಡತೆಯ ಆಟಗಾರನ ಬಗ್ಗೆ ಬರೆದಿದ್ದಕ್ಕೆ ಧನ್ಯವಾದಗಳು

ಸಾಗರದಾಚೆಯ ಇಂಚರ ಹೇಳಿದರು...

'ದ್ರಾವಿಡ್ ಭಾರತ ಕಂಡ ಪ್ರತಿಭಾವಂತ ಮಾತ್ರವಲ್ಲ ಸಭ್ಯತೆಯ
ಸಾಕಾರ ಮೂರ್ತಿ ಕೂಡಾ
ಅವರು ಇನ್ನಷ್ಟು ಕಾಲ ಕ್ರಿಕೆಟ್ಟಿನಲ್ಲಿ ಮೆರೆಯುವಂತಾಗಲಿ

ರಾಜೇಶ್ ನಾಯ್ಕ ಹೇಳಿದರು...

ಮನೋಜ್,
ಅವಕಾಶ ಸಿಕ್ಕಿದ್ರೆ ಟೆಸ್ಟ್ ಪಂದ್ಯಗಳಲ್ಲಿ ದ್ರಾವಿಡ್ ಆಟ ನೋಡಿಬಿಡಿ. ಅಪರೂಪದ ಆಟಗಾರ. ಈಗಿನ್ನು ಐ.ಪಿ.ಎಲ್ ಶುರು. ಆಗ ವಿಭಿನ್ನ ದ್ರಾವಿಡ್-ನನ್ನು ಆನಂದಿಸಬಹುದು.

ಸುನಾಥ,
ಧನ್ಯವಾದ.

ಅರುಣ್,
ನಿಮ್ಮ ಬ್ಲಾಗಿನಲ್ಲಿ ’ದ್ರಾವಿಡ್ ಆಡುತ್ತಿದ್ದರೆ ಮಾತ್ರ ಕ್ರಿಕೆಟ್ ನೋಡುವುದು’ ಎಂಬ ಒಂದು ವಾಕ್ಯ ಎಲ್ಲೋ ಓದಿದ ನೆನಪು. ಹಾಗಿದ್ದಲ್ಲಿ ನೀವೂ ನನ್ನಂತೆ ದ್ರಾವಿಡ್ ಅಭಿಮಾನಿ.

ಪ್ರಸನ್ನ,
ದ್ರಾವಿಡ್ ಆಟದ ಬೆಲೆ ನಮಗೆ ತಿಳಿದಿಲ್ಲ. ’ಕುಟ್ಟುತ್ತಾನೆ’ ಎಂದೇ ಅವನ ಆಟವನ್ನು ಕಡೆಗಣಿಸುತ್ತೇವೆ. ಆದರೆ ಕುಟ್ಟುವ ಅಂದವನ್ನು ನೋಡುವ ತಾಳ್ಮೆ ಯಾರಲ್ಲೂ ಇಲ್ಲ ಎಂಬುವುದೇ ಸೋಜಿಗ!

ಗುರು,
ಆತ ಇನ್ನಷ್ಟು ಕಾಲ ಆಡಲಿ ಎನ್ನುವುದು ನನ್ನ ಆಶಯವೂ ಹೌದು. ಧನ್ಯವಾದ.

ಜಿತ ಹೇಳಿದರು...

ನಾನು ನಿಮ್ಮ ತರಾನೇ. ಆತನ ಆಟನ ತುಂಬಾ ಖುಶಿಪಡ್ತೀನಿ. ಎಷ್ಟೋ ಸಲ ಅವನು ಔಟ್ ಆದ ಕೂಡಲೆ tv off ಮಾಡಿದ್ದಿದೆ. He is really perfectionist. Very gud article. Thanks and keep it up.

ರಾಜೇಶ್ ನಾಯ್ಕ ಹೇಳಿದರು...

ಜಿತ,
ಧನ್ಯವಾದ. ದ್ರಾವಿಡ್ ನಿವೃತ್ತಿ ಆದ ಮೇಲಂತೂ ಕ್ರಿಕೆಟ್ ಸ್ವಲ್ಪ ಬೋರ್ ಅನಿಸಲಿದೆ.