ಭಾನುವಾರ, ಮಾರ್ಚ್ 30, 2008

ಶಿಗ್ಗಾವಿ ಮಾಸ್ತರರು ಮತ್ತವರ ಪ್ರೀತಿಯ ಕೋತಿಗಳು ...


ಸುಮಾರು ೨ ವರ್ಷಗಳ ಹಿಂದೆ ಪ್ರಜಾವಾಣಿಯಲ್ಲಿ ಗುತ್ತಲದ ಶಿಗ್ಗಾವಿ ಮಾಸ್ತರರ ಬಗ್ಗೆ ಆರ್.ಎಸ್.ಪಾಟೀಲ ಎಂಬವರು ಬರೆದ ಲೇಖನ ಬಂದಿತ್ತು. ಶಿಗ್ಗಾವಿ ಮಾಸ್ತರರ ಮನೆಗೆ ಮುಂಜಾನೆ ೧೧ ಗಂಟೆಗೆ ಮತ್ತು ಸಂಜೆ ೪ ಗಂಟೆಗೆ ಕಾಡು ಕೋತಿಗಳು ಊಟಕ್ಕೆ ಬರುವುದರ ಬಗ್ಗೆ ಆ ಲೇಖನದಲ್ಲಿ ತಿಳಿಸಲಾಗಿತ್ತು.


ಅದೊಂದು ದಿನ ಶಿಗ್ಗಾವಿ ಮಾಸ್ತರರು ಮನೆಯ ಜಗುಲಿಯಲ್ಲಿ ಕುಳಿತು ಊಟ ಮಾಡುತ್ತಿದ್ದರಂತೆ. ಆಗ ಮರವೊಂದರ ಮೇಲೆ ೨ ಕೋತಿಗಳು ಕಂಡುಬಂದವು. ಸಣ್ಣ ರೊಟ್ಟಿ ಚೂರನ್ನು ಅವುಗಳೆಡೆ ಎಸೆದಾಗ ದಾಕ್ಷಿಣ್ಯದಿಂದ ಕಸಿದುಕೊಂಡವು. ನಂತರ ಮರುದಿನ ಮತ್ತವೇ ೨ ಕೋತಿಗಳು. ಮತ್ತೆ ಶಿಗ್ಗಾವಿ ಮಾಸ್ತರರು ರೊಟ್ಟಿ ಚೂರು ನೀಡಿದರು. ಮರುದಿನ ೫ ಕೋತಿಗಳು. ಹೀಗೆ ಕೋತಿಗಳ ಒಂದು ಗುಂಪೇ ಬರತೊಡಗಿತು. ಒಂದೇ ವಾರದೊಳಗೆ ದಾಕ್ಷಿಣ್ಯವೆಲ್ಲಾ ಮಾಯ. ಸೀದಾ ಜಗುಲಿಗೆ ಬಂದು ಶಿಗ್ಗಾವಿ ಮಾಸ್ತರರ ತೊಡೆಯೇರಿ ರೊಟ್ಟಿ ತಿನ್ನುವುದು, ನೇರ ಮನೆಯೊಳಗೆ ಬಂದು ಶಿಗ್ಗಾವಿ ಮಾಸ್ತರರ ಶ್ರೀಮತಿ ಅನುಸೂಯಮ್ಮನವರನ್ನು ತಿನ್ನಲು ಕೊಡುವಂತೆ ಪೀಡಿಸುವುದು, ಅಡಿಗೆ ಮನೆಗೆ ನುಗ್ಗಿ ತಿನ್ನಲು ಹುಡುಕಾಡುವುದು ಈ ಮಟ್ಟಿಗೆ ವಾನರರ ಸಲುಗೆ ಬೆಳೆಯಿತು.


ಪಡಸಾಲೆಯಲ್ಲಿ ಹಾಸಿದ ಚಾಪೆಯ ಮೇಲೆ ಸಾಲಲ್ಲಿ ಕುಳಿತ ಕೋತಿ ಕುಟುಂಬಕ್ಕೆ ಬಡಿಸುವ ಕಾರ್ಯ ಅನುಸೂಯಮ್ಮನವರದ್ದಾಗಿತ್ತು. ಕಿತ್ತಾಡದೇ, ಸದ್ದಿಲ್ಲದೇ ಕೊಟ್ಟದ್ದನ್ನು ತಿಂದು ಮನೆಯೊಳಗೆ ಒಂದಷ್ಟು ಸುತ್ತಾಡಿ ನಂತರ ನಿಧಾನಕ್ಕೆ ಹೊರಡುವ ಕೋತಿಗಳು ಮರುದಿನ ೧೧ಕ್ಕೆ ಅಥವಾ ಅದೇ ದಿನ ಸಂಜೆ ೪ಕ್ಕೆ ಮತ್ತೆ ಹಾಜರು. ಕೋತಿಗಳಿಗೆ ಅಡುಗೆ ತಯಾರಿಸುವುದು ಅನುಸೂಯಮ್ಮನವರಿಗೆ ಪ್ರತಿನಿತ್ಯದ ಕೆಲಸವಾಗಿತ್ತು. ದಿನಾಲೂ ಅವಲಕ್ಕಿ, ರೊಟ್ಟಿ, ಮಂಡಕ್ಕಿ, ಸೌತೆಕಾಯಿ ಇವುಗಳನ್ನು ನೀಡುವ ಬದಲು ಯಾವುದಾದರೂ ಹೊಸ ರುಚಿಯ ತಿಂಡಿಯನ್ನು ನೀಡಿದಾಗ, ಆ ಹೊಸ ರುಚಿ ಹಿಡಿಸದಿದ್ದರೆ ಕೋತಿಗಳ ರಂಪಾಟ. ಆಗ ಮತ್ತೆ ಅವೇ ಎಂದಿನ ತಿಂಡಿಗಳನ್ನು ನೀಡಿ ಅವುಗಳನ್ನು ಸಮಾಧಾನಪಡಿಸುವುದು. ಈ ಕೋತಿಗಳಿಗೆ ಶಿಗ್ಗಾವಿ ಮಾಸ್ತರರೆಂದರೆ ಅತಿ ಅಚ್ಚುಮೆಚ್ಚು. ಅವರೊಂದಿಗೆ ಬೆಳೆಸಿಕೊಂಡಷ್ಟು ಸಲುಗೆಯನ್ನು ಉಳಿದವರೊಂದಿಗೆ ಈ ಕೋತಿಗಳು ಬೆಳೆಸಿಕೊಂಡಿಲ್ಲ. ರೊಟ್ಟಿ ಈ ಕೋತಿಗಳ ಅಚ್ಚುಮೆಚ್ಚಿನ ತಿಂಡಿಯಂತೆ. ರೊಟ್ಟಿಯನ್ನು ಚೂರು ಮಾಡಿ ಚಾಪೆಯ ಮೇಲೆ ಇಟ್ಟರೆ, ಬಂದ ಎಲ್ಲಾ ಕೋತಿಗಳು ಸಾವಕಾಶವಾಗಿ ಹಂಚಿಕೊಂಡು ತಿನ್ನುತ್ತಿದ್ದವಂತೆ.


ಇಷ್ಟನ್ನೆಲ್ಲಾ ಓದಿದ ಬಳಿಕ ಗುತ್ತಲದ ಶಿಗ್ಗಾವಿ ಮಾಸ್ತರರ ಮನೆಗೆ ಭೇಟಿ ನೀಡಲೇಬೇಕೆಂದು ನಿರ್ಧಾರ ಮಾಡಿದ್ದೆ. ಹಾಗೇನೆ ನಾವು ಗುತ್ತಲ ತಲುಪಿದಾಗ ೪ ಗಂಟೆಯಾಗಿತ್ತು. ಕೋತಿಗಳು ಸಂಜೆಯ ಊಟಕ್ಕೆ ಬರುವ ಸಮಯ. ಅಲ್ಲಲ್ಲಿ ಕೇಳಿ ಶಿಗ್ಗಾವಿ ಮಾಸ್ತರರ ಮನೆ ತಲುಪಿದಾಗ ಅಲ್ಲಿ ಕೋತಿಗಳೇ ಇಲ್ಲ! ಮನೆಯೆಡೆ ನಡೆದುಕೊಂಡು ಹೋದರೆ ಯಾರ ಸುಳಿವೂ ಇಲ್ಲ. ಕಡೆಗೆ ನಿಧಾನವಾಗಿ ಅನುಸೂಯಮ್ಮನವರು ಹೊರಗಡೆ ಬಂದರು. ಅವರ ಹಣೆ ಮೇಲೆ ಕುಂಕುಮ ಮರೆಯಾಗಿರುವುದನ್ನು ಗಮನಿಸಿದ ಕೂಡಲೇ ಕೋತಿಗಳ ಗೈರುಹಾಜರಿಗೆ ಕಾರಣ ತಿಳಿದುಬಿಟ್ಟಿತು. ಶಿಗ್ಗಾವಿ ಮಾಸ್ತರರು ತೀರಿಕೊಂಡಿರಬೇಕು ಎಂದು ಊಹಿಸಿದೆ. ನನ್ನ ಊಹೆ ಸರಿಯಾಗಿತ್ತು. ಶಿಗ್ಗಾವಿ ಮಾಸ್ತರರು ಒಂದು ವರ್ಷದ ಹಿಂದೆ ತೀರಿಕೊಂಡರು. ಅವರ ಮರಣದ ಬಳಿಕ ಒಂದೆರಡು ಬಾರಿ ಆಗಮಿಸಿದ ಕೋತಿಗಳು ನಂತರ ಬರಲೇ ಇಲ್ಲ. ಈಗಲೂ ೧೫ ದಿನಗಳಿಗೊಮ್ಮೆ ಮನೆಯ ಮುಂದಿರುವ ಮರಗಳ ಮೇಲೆ ನಾಲ್ಕೈದು ಕೋತಿಗಳು ಬಂದು ಮನೆಯಡೆ ನೋಡಿ ಹಾಗೆ ಹೊರಟುಹೋಗುತ್ತವೆಯೋ ವಿನ: ಮನೆಯೊಳಗೆ ಬರುವುದಿಲ್ಲ.


ಶಿಗ್ಗಾವಿ ಮಾಸ್ತರರ ಮರಣದ ಬಳಿಕ ಒಂದೆರಡು ಬಾರಿ ಮನೆಯೊಳಗೆ ಬಂದ ಕೋತಿಗಳಿಗೆ ತಮ್ಮ ಪ್ರೀತಿಯ ಶಿಗ್ಗಾವಿ ಮಾಸ್ತರರು ಇಲ್ಲದ ಮನೆ ಬೀಕೋ ಅನಿಸಿರಬೇಕು ಅಥವಾ ಅವರು ನೀಡಿದ ಪ್ರೀತಿ, ಪ್ರೀತಿಯ ಮಾತುಗಳು ಮತ್ತು ಸಲುಗೆ ಉಳಿದವರಿಂದ ಸಿಗದೇ ಇರಲು ಬರುವುದನ್ನೇ ನಿಲ್ಲಿಸಿರಬಹುದು. ಈಗಲೂ ಆಗಾಗ ಬಂದು ಇಣುಕಿ ಹೋಗುವುದರ ಹಿಂದೆ ಏನು ಕಾರಣವಿರಬಹುದು...ಆ ಕೋತಿಗಳಿಗೇ ಗೊತ್ತು. ಶಿಗ್ಗಾವಿ ಮಾಸ್ತರರು ಅನಾರೋಗ್ಯದ ಕಾರಣ ತೀರಿಕೊಂಡಾಗ ಅವರ ದೇಹವನ್ನು ಮಣ್ಣು ಮಾಡಲು ಒಯ್ದಾಗ ಕೋತಿಗಳಿಗೆ ಹೇಗೆ ಸುದ್ದಿ ಸಿಕ್ಕಿತೋ ದೇವರೇ ಬಲ್ಲ. ಮುಂಜಾನೆ ೧೧ ಕ್ಕೆ ಆಗಮಿಸಿ ಊಟ ಮುಗಿಸಿ ಕೋತಿಗಳು ತೆರಳಿದ ಸ್ವಲ್ಪವೇ ಸಮಯದ ಬಳಿಕ ಶಿಗ್ಗಾವಿ ಮಾಸ್ತರರು ಕೊನೆಯುಸಿರೆಳೆದಿದ್ದಾರೆ. ಸಂಜೆ ಊರ ಹೊರಗೆ ಅವರ ಅಂತ್ಯಕ್ರಿಯೆಯ ನಡೆಯುವ ಸ್ಥಳದಲ್ಲಿ ಸುತ್ತಲಿರುವ ಮರಗಳ ಮೇಲೆ ಕೋತಿಗಳು ತುಂಬಿಕೊಂಡಿದ್ದವು! ಅಂತ್ಯಕ್ರಿಯೆಯ ಬಳಿಕ ಜನರೆಲ್ಲಾ ಮರಳಿದರೂ ಕೋತಿಗಳು ಅಲ್ಲೇ ಠಿಕಾಣಿ ಹೂಡಿದ್ದವು. ಎಲ್ಲಿಯ ಸಂಬಂಧ!


ಇದನ್ನೆಲ್ಲಾ ಅನುಸೂಯಮ್ಮನವರ ಜೊತೆಗೆ ಮಾತುಕತೆಗೆ ಇಳಿದಾಗ ಅವರು ಹೇಳಿದ ವಿಷಯಗಳು. ನಂತರ ಒಂದಷ್ಟು ಫೋಟೋಗಳನ್ನು ಅವರು ತೋರಿಸಿದರು. ಶಿಗ್ಗಾವಿ ಮಾಸ್ತರರನ್ನು ಮತ್ತು ಕೋತಿಗಳನ್ನು ಕಾಣಲು, ಫೋಟೋ ತೆಗೆಯಲು ಬಂದ ನಾನು ಈಗ ಬರೀ ಫೋಟೋಗಳನ್ನೇ ನೋಡಿ ತೃಪ್ತಿಪಡಬೇಕಾಯಿತು. ಇದ್ದ ಎಲ್ಲಾ ಫೋಟೋಗಳ 'ಫೋಟೋ' ತೆಗೆದೆ, ಆಷ್ಟಾದರೂ ಇರಲಿ ಎಂದು.


ಈ ಫೋಟೋಗಳನ್ನು ನೋಡಿದರೇ ತಿಳಿಯುವುದು, ಎಷ್ಟರ ಮಟ್ಟಿಗೆ ಕೋತಿಗಳು ಶಿಗ್ಗಾವಿ ಮಾಸ್ತರರೊಂದಿಗೆ ಸಲುಗೆ ಬೆಳೆಸಿಕೊಂಡಿದ್ದವೆಂದು. ಸಣ್ಣ ಮರಿ ಇರುವ ತಾಯಿ ಮಂಗಗಳೂ ಶಿಗ್ಗಾವಿ ಮಾಸ್ತರರ ಬಳಿ ಬಂದು ಕುಳಿತುಕೊಳ್ಳುವುದಾದರೆ ಅಲ್ಲಿರುವ ನಂಬಿಕೆ ಯಾವ ಮಟ್ಟದ್ದಿರಬಹುದು ಎಂದು ತಿಳಿದುಕೊಳ್ಳಬಹುದು.


ಸುಮಾರು ೪೫ ನಿಮಿಷಗಳ ಕಾಲ ಅನುಸೂಯಮ್ಮನವರೊಡನೆ ಮಾತನಾಡಿ, ಚಹಾ ಕುಡಿದು, ಅವರಿಗೆ ವಿದಾಯ ಹೇಳಿ ಹೊರಟೆವು. ಮನದ ತುಂಬಾ ಶಿಗ್ಗಾವಿ ಮಾಸ್ತರರೇ ತುಂಬಿಕೊಂಡಿದ್ದರು.

ಬುಧವಾರ, ಮಾರ್ಚ್ 19, 2008

ಮೇಗಣಿ ಯಾತ್ರೆ


ಕಾಡಿನ ನಡುವೆ ಇರುವ ಮೇಗಣಿಗೆ ಚಾರಣ ಮಾಡಬೇಕೆಂದು ನಮ್ಮ ರಾಘವೇಂದ್ರ ಬಹಳ ಕಾಡುತ್ತಿದ್ದರು. ಹಾಗೆಂದೇ ಮಾರ್ಚ್ ೨೦೦೮ ರ ಉಡುಪಿ ಯೂತ್ ಹಾಸ್ಟೆಲ್ ಕಾರ್ಯಕ್ರಮವನ್ನು ೧೬ರಂದು ಈ ಹಳ್ಳಿಗೆ ಇಡಲಾಯಿತು. ನಮ್ಮಲ್ಲಿ ಯಾರೂ ಈ ದಾರಿಯಲ್ಲಿ ಚಾರಣ ಮಾಡಿರಲಿಲ್ಲ. ಬೆಟ್ಟದ ತಪ್ಪಲಿನ ಊರಿಗೆ ತಲುಪಿ ಚಾರಣ ಆರಂಭಿಸಿದಾಗ ೧೦ಗಂಟೆ ಆಗಿತ್ತು. ಈ ಊರಿನವರ ಪ್ರಕಾರ ನಾವು ಮೇಗಣಿ ತಲುಪಿ ಹಿಂತಿರುಗುವುದು ಅಸಾಧ್ಯದ ಮಾತಾಗಿತ್ತು. ಅಲ್ಲದೇ ನಮ್ಮಿಂದ ಅಷ್ಟು ದೂರ ಕ್ರಮಿಸುವುದೂ ಕಷ್ಟಸಾಧ್ಯ ಎಂಬುದು ಅವರ ಅನಿಸಿಕೆ. ಆದರೂ ನಮಗಂತೂ ಕಾಡೊಳಗೆ ಹೋಗಲೇಬೇಕಿತ್ತು. ಆ ಊರಿನಲ್ಲಿ ಅಂದು ನಾಗಮಂಡಲ ಕಾರ್ಯಕ್ರಮವಿದ್ದುದರಿಂದ ನಮಗೆ ಮಾರ್ಗದರ್ಶಕರನ್ನು ಹುಡುಕುವುದೇ ದೊಡ್ಡ ಕೆಲಸವಾಯಿತು. ಅಂತೂ ಕೊನೆಗೆ ಸಿಕ್ಕರು 'ಪುಟ್ಟಯ್ಯ' ಎಂಬ ಅಸಾಮಾನ್ಯ ಮಾರ್ಗದರ್ಶಿ.

ಅರ್ಧ ಗಂಟೆಯೊಳಗೆ ನಾನು ಸುಸ್ತು. ಮುಂದಕ್ಕೆ ಹೋಗಬೇಕೋ ಬೇಡವೋ ಎಂದು ಒಂದೈದು ನಿಮಿಷ ಅಲ್ಲೇ ನಿಂತು ಯೋಚಿಸಿ ನಂತರ ಮುಂದುವರಿದೆ. ಉಳಿದವರೆಲ್ಲಾ ಮುಂದಕ್ಕೆ ಹೋಗಿಯಾಗಿತ್ತು. ನಂತರ ೭೫ ನಿಮಿಷಗಳ ಕಾಲ ನಾನೊಬ್ಬನೇ ಕಾಡಿನ ಆ ದಾರಿಯಲ್ಲಿ ಅಳುಕುತ್ತಾ ಸಾಗಿದೆ. ದಾರಿ ತಪ್ಪುವ ಸಾಧ್ಯತೆ ಇರಲಿಲ್ಲ. ನಾಟಾ ಸಾಗಿಸಲು ಬಲೂ ಹಿಂದೆ ಮಾಡಿದ ರಸ್ತೆಯಿತ್ತು. ಈಗ ಸಂಚಾರವಿಲ್ಲದೆ ರಸ್ತೆಯನ್ನು ಕಾಡು ನುಂಗುತ್ತಿದೆ. ಅಲ್ಲಲ್ಲಿ ಮರಗಳು ಉರುಳಿಬಿದ್ದಿವೆ. ರಸ್ತೆಯ ಇಕ್ಕೆಲಗಳಲ್ಲಿ ದಟ್ಟ ಕಾಡು. ಅಲ್ಲಲ್ಲಿ ಕೂತು ವಿಶ್ರಮಿಸುತ್ತಾ, ಕಾಡಿನ ಸುಂದರ ಮೌನವನ್ನು ಆನಂದಿಸುತ್ತಾ ನಿಧಾನವಾಗಿ ಮುನ್ನಡೆದೆ.


ಈಗ ಒಂದೆರಡು ದಿನಗಳಿಂದ ರಾತ್ರಿ ಮಳೆ ಬೀಳುತ್ತಿದ್ದರಿಂದ ಕಾಡೆಲ್ಲಾ ತಂಪಾಗಿತ್ತು. ಸೂರ್ಯನ ಬಿಸಿಲಿನ ಝಳ ನಮಗೆ ತಾಗುತ್ತಿರಲಿಲ್ಲ. ಮೌನ ಕಾಡಿನ ಸೌಂದರ್ಯವೇ ಅಮೋಘ. ಅದನ್ನು ಅನುಭವಿಸಿದಷ್ಟು ಕಡಿಮೆ. ಒಂದೆಡೆ ದಾರಿಯಲ್ಲಿದ್ದ ಸಣ್ಣ ಬಂಡೆಯ ಮೇಲೆ ವಿಶ್ರಮಿಸೋಣವೆಂದು ಕೂತರೆ, ಐದು ಅಡಿ ದೂರದಲ್ಲಿ ಆನೆಯ ಲದ್ದಿ! ಕೂತಲ್ಲೇ ಮೆಲ್ಲನೆ ಹೆದರಿಕೆ ಶುರುವಾಯಿತು. ಕೂತಲ್ಲಿಂದಲೇ ಸುತ್ತಲು ಕಣ್ಣಾಡಿಸಿದೆ. ರಸ್ತೆಯ ಆಚೀಚೆ ಎಲ್ಲೆಡೆ ದಟ್ಟ ಕಾಡು. ನನ್ನ ಏದುಸಿರಿನ ಸದ್ದು ಬಿಟ್ಟರೆ ಬೇರಾವ ಸದ್ದೂ ಇಲ್ಲ. ಹಿಂತಿರುಗಿ ನೋಡಲೂ ಅಳುಕು. ಚಿಟ್ಟೆ ಹುಲಿ ಎಲ್ಲಾದರೂ ಮರದ ಮೇಲಿಂದ ನನ್ನ ಮೇಲೆ ಜಿಗಿದುಬಿಟ್ಟರೆ..., ಸುಮ್ಮನೆ ನಿಂತಿರುವ ಆನೆ ನಾನು ಕೂತಿರುವುದನ್ನು ಕಂಡು ದಾಳಿ ಮಾಡಿದರೆ...ಎಂಬಿತ್ಯಾದಿ ಭಯ ಹುಟ್ಟಿಸುವ ಯೋಚನೆಗಳು ಮನದೊಳಗೆ ಅಲೆದಾಡಲು ಆರಂಭಿಸಿದವು. ಅಲ್ಲೇ ಕುಳಿತರೆ ಇಂಥವೇ ವಿಚಾರಗಳು ನನ್ನನ್ನು ಇನ್ನಷ್ಟು ಗಾಬರಿಗೊಳ್ಳುವಂತೆ ಮಾಡಿಬಿಡುತ್ತವೆ ಎಂದು ಅಲ್ಲಿಂದ ಮುಂದುವರಿದೆ.

ಬೆವರಿನಿಂದ ಬಟ್ಟೆಯೆಲ್ಲಾ ತೊಯ್ದುಹೋಗಿದ್ದವು. ದಾರಿ ಅಷ್ಟೇನು ಕಷ್ಟದ್ದಾಗಿರಲಿಲ್ಲ. ಮುಖದ ಮೇಲೆಲ್ಲಾ ಬೆವರಿನ ಗೆರೆಗಳು. ಮೌನ ಸಾಮ್ರಾಜ್ಯದಲ್ಲಿ ನಿಧಾನವಾಗಿ ಮುಂದುವರಿಯುತ್ತಿದ್ದಾಗ ಎಡ ಪಾರ್ಶ್ವದಲ್ಲಿ ಅದೇನೋ ಸದ್ದು. ಬೆಚ್ಚಿ ಬಿದ್ದು ಆ ಕಡೆ ನೋಡಿದರೆ 'ಓತಿಕ್ಯಾತ' ತರದ ಜಂತು. ಆನೆಯ ವಿಚಾರ ಮನದಲ್ಲೇ ಸ್ವಲ್ಪ ಸುಳಿದಾಡುತ್ತಿದ್ದರಿಂದ ಸಣ್ಣ ಸದ್ದಾದರೂ ಬೆಚ್ಚಿ ಬೀಳುತ್ತಿದ್ದೆ. ಇನ್ನೂ ಸ್ವಲ್ಪ ಮುಂದೆ ಸಾಗಿ ವಿಶ್ರಮಿಸಲು ನಿಂತುಕೊಂಡೆ. ಸೊಂಟದ ಮೇಲೆ ಕೈಗಳನ್ನಿಟ್ಟು ಆಗಸದೆಡೆ ಮುಖ ಮಾಡಿ ಬಾಯಿ ತೆರೆದು ಏದುಸಿರು ಬಿಡುತ್ತಾ ನಿಂತಾಗ...... ಅದೆಲ್ಲಿಂದಲೋ ತಂಪಾದ ನೀರಿನ ಹನಿಯೊಂದು ಹಣೆ ಮತ್ತು ಮೂಗು ಸಂಧಿಸುವಲ್ಲಿ ಬಿದ್ದು ಹಾಗೆ ಕೆನ್ನೆಯ ಮೇಲೆ ಹರಿದಾಡಿ ಕತ್ತಿನೆಡೆ ಸರಿದುಹೋಯಿತು. ಆಗ ಸಿಕ್ಕ ಸುಖ.....ಅನುಭವಿಸಿದರೇ ತಿಳಿಯುವುದು. ಒಂದೈದು ಕ್ಷಣ ಆ ತಂಪಾದ ಅನುಭವ ನನ್ನನ್ನು ಸುಖದ ಸುಪ್ಪತ್ತಿಗೆಯಲ್ಲಿ ತೇಲಾಡಿಸಿತು. ದಣಿದು ಬಸವಳಿದಿದ್ದ ನನಗೆ ಆ ಒಂದು ನೀರಿನ ಹನಿ ನೀಡಿದ 'ಎನರ್ಜಿ' ಯನ್ನು ಬಣ್ಣಿಸಲಸಾಧ್ಯ.


ಈಗ ಸಮತಟ್ಟಾದ ದಾರಿಯಾಗಿದ್ದರಿಂದ ಬೇಗನೇ ಮುಂದುವರಿದೆ. ಇನ್ನೊಂದೆಡೆ ಆನೆಯ ಲದ್ದಿ ಕಾಣಸಿಕ್ಕಿತು. ಮುಂದೆ ಸಿಗುವ ಮುಕ್ತಿಹೊಳೆ ಎಂಬ ತೊರೆಯೊಂದರ ಬಳಿ ತಂಡದ ಉಳಿದವರು ವಿಶ್ರಮಿಸುತ್ತಿದ್ದರು. ಅಲ್ಲಿಂದ ಸ್ವಲ್ಪ ಮುಂದೆ ನಡೆದಾಗ ಕಾಡು ಒಮ್ಮೆಲೇ ಸರಿದು ವಿಶಾಲ ಬಯಲು ಪ್ರದೇಶಕ್ಕೆ ಎಡೆಮಾಡಿಕೊಟ್ಟಿತು. ಅದ್ಭುತವಾದ ದೃಶ್ಯ. ಬಲಕ್ಕೆ ದೂರದವರೆಗೆ ಹಬ್ಬಿಕೊಂಡಿದ್ದ ವಿಶಾಲವಾದ ಬೆಟ್ಟ. ನೇರವಾಗಿ ಮುಂದಕ್ಕೆ ದೂರದಲ್ಲಿ ಕೊಡಚಾದ್ರಿಯ ರಮ್ಯ ನೋಟ. ವಿರುದ್ಧ ದಿಕ್ಕಿನಲ್ಲಿ ೨ ಬೆಟ್ಟಗಳು ಸಂಧಿಸುವಲ್ಲಿ ಉಂಟಾಗಿರುವ 'ವಿ' ಆಕಾರದ ಆಕೃತಿಯ ಮೂಲಕ ಅರಬ್ಬಿ ಸಮುದ್ರದ ನೋಟ (ಮೇಲಿನ ಚಿತ್ರ). ಇಲ್ಲಿ ಸುಮಾರು ೧೫ ನಿಮಿಷಗಳಷ್ಟು ಕಾಲ ಪ್ರಕೃತಿಯ ಮತ್ತು ಹಸಿರಿನ ವೈಭವವನ್ನು ಕಣ್ತುಂಬಾ ಆನಂದಿಸಿ ಮುಂದುವರಿದೆವು.

ನಂತರ ಸಿಕ್ಕಿದ ದೇವರಹಳ್ಳದಲ್ಲಿ ಊಟದ ಸಮಯ. ದೇವರಹಳ್ಳದಲ್ಲಿ ನೀರಿನ ಹರಿವು ಕಡಿಮೆಯಿತ್ತು. ಸ್ಥಳ ಬಹಳ ಸುಂದರವಾಗಿತ್ತು. ಭೋಜನ ವಿರಾಮವೆಂದು ೩೦ ನಿಮಿಷಗಳಷ್ಟು ಸಮಯವನ್ನು ದೇವರಹಳ್ಳದಲ್ಲಿ ಕಳೆದೆವು. ಕಡವೆಯ ಕೋಡೊಂದು ಅಲ್ಲಿ ಬಿದ್ದಿತ್ತು. ಬಹಳ ಸುಂದರವಾಗಿದ್ದ ಈ ಕೋಡನ್ನು ಒಯ್ಯಲು ನಮ್ಮವರು ಉತ್ಸುಕರಾಗಿದ್ದರು. ಆದರೆ ಈ ಕೋಡು ಬಹಳ ದೊಡ್ಡದಾಗಿದ್ದರಿಂದ ಯಾರದೇ ಬ್ಯಾಗಿನಲ್ಲಿ ಅದನ್ನು ಬಚ್ಚಿಟ್ಟು ಒಯ್ಯುವುದು ಅಸಾಧ್ಯದ ಮಾತಾಗಿತ್ತು. ದಾರಿಯಲ್ಲಿ ಎಲ್ಲಾದರೂ ಅರಣ್ಯ ಇಲಾಖೆಯವರು ನಮಗೆ ಸಿಕ್ಕಿಬಿಟ್ಟರೆ ನೇರವಾಗಿ ಜೇಲಿಗೆ ಹೋಗಬೇಕಾದ ಪರಿಸ್ಥಿತಿಯನ್ನು ಎದುರಿಸಲು ಯಾರೂ ತಯಾರಿರಲಿಲ್ಲವಾದ್ದರಿಂದ ಆ ಸುಂದರ ಕೋಡನ್ನು ಅಲ್ಲೇ ಬಿಟ್ಟು ಬಂದೆವು. ನಂತರ ದೇವರಹಳ್ಳದಗುಂಟ ಸ್ವಲ್ಪ ಮುಂದೆ ನಡೆದಾಗ ಜಲಧಾರೆ! ದೇವರಹಳ್ಳ ಸ್ವಲ್ಪ ಮುಂದಕ್ಕೆ ಸುಮಾರು ೬೦ ಅಡಿ ಎತ್ತರದ ಜಲಧಾರೆಯೊಂದನ್ನು ನಿರ್ಮಿಸುತ್ತದೆ. ಈಗ ನೀರಿನ ಪ್ರಮಾಣ ಕಡಿಮೆಯಾಗಿದ್ದರಿಂದ ಜಲಧಾರೆ ಸೊರಗಿತ್ತು. ಜಲಧಾರೆಯ ಬುಡಕ್ಕೆ ತೆರಳಲು ಕಷ್ಟಪಡಬೇಕಾಗುತ್ತದೆ.

ಮುಂದೆ ಕಾಡಿನ ದಾರಿಯ ಬಳಿಕ ಮತ್ತೆ ಬಯಲು ಪ್ರದೇಶ ನಂತರ ಮತ್ತೆ ಕಾಡು. ಈಗ ಕಾಡಿನಲ್ಲೇ ಕೊನೆಯ ೩೦ನಿಮಿಷಗಳ ಚಾರಣ. ಈ ಕಾಡಿನೊಳಗೆ ನಡೆಯುವಾಗ ಆಗಸದಲ್ಲಿ ಗುಡುಗಿನ ಹಾವಳಿ. ಮಳೆ ಅಪ್ಪಳಿಸುವ ತಯಾರಿ ಜೋರಾಗಿ ನಡೆದಿತ್ತು. ವೇಗವಾಗಿ ನಡೆಯಲಾರಂಭಿಸಿದೆವು. ಸಂಪೂರ್ಣ ಇಳಿಜಾರಿನ ಹಾದಿ. ಹಾದಿ ಕೊನೆಗೊಳ್ಳುತ್ತಿದ್ದಂತೆ ಮೇಗಣಿ! ತೊರೆಯನ್ನು ದಾಟಿದ ಕೂಡಲೇ ಹಳ್ಳಿಯೊಳಗೆ ಪ್ರವೇಶ. ನಾವೆಲ್ಲರೂ ತೊರೆ ದಾಟಿದ ಕೂಡಲೇ ಮಳೆ ಬೀಳಲಾರಂಭಿಸಿತು. ನಮಗೆ ಸಿಗುವ ಮೊದಲ ಮನೆ ಇನ್ನೂ ೫ ನಿಮಿಷ ದೂರವಿತ್ತು. ಮಳೆಯಲ್ಲೇ ಮುನ್ನಡೆದೆವು.


ಆ ಮನೆ ತಲುಪಿದಾಗ ಸಮಯ ೩.೩೦. ಮಳೆ ಕಡಿಮೆಯಾದ ನಂತರ ಹಳ್ಳಿಯೊಳಗೆ ತೆರಳಿದೆವು. ಅಲ್ಲಿಂದ ಘಟ್ಟದ ಕೆಳಗೆ ಫೋನ್ ಮಾಡಿ ಜೀಪ್-ಗೆ ಬರಹೇಳಿದೆವು. ಮೇಗಣಿಗೆ ೨ ದಾರಿಗಳಿವೆ. ಒಂದು ದಾರಿ ಕೇವಲ ಚಾರಣಕ್ಕೆ ಸೀಮಿತವಾದರೆ ಮತ್ತೊಂದು ದಾರಿ ವಾಹನ ಸಂಚಾರಕ್ಕೆ ಯೋಗ್ಯ.

ಈ ಕಾಡಿನಲ್ಲಿ ಒಂಟಿ ಸಲಗವೊಂದಿತ್ತು. ನಾವು ಬರುವಾಗ ನೋಡಿದ್ದ ಲದ್ದಿ ಈ ಸಲಗದ್ದೇ. ಇದೊಂದೇ ಆನೆ ಈ ಕಾಡಿನಲ್ಲಿದ್ದದ್ದು. ಅದು ಹೇಗೆ ಇಲ್ಲಿ ಬಂತು ಎಂದು ಯಾರಿಗೂ ಗೊತ್ತಿಲ್ಲ. ಬಹಳ ಪ್ರಾಯವಾಗಿದ್ದ ಆನೆಯಾಗಿತ್ತು. ಹಳ್ಳಿಗೆ ಆಗಾಗ ದಾಳಿಯಿಟ್ಟು ಬೆಳೆಗಳನ್ನು ನಾಶ ಮಾಡಿ ಹೊಟ್ಟೆ ತುಂಬಿಸಿಕೊಳ್ಳುತ್ತಿತ್ತು. ಹಳ್ಳಿಗರಿಂದ ತಿಳಿದು ಬಂದದ್ದೇನೆಂದರೆ ಜನವರಿ ೨೭, ೨೦೦೮ರಂದು ಹಳ್ಳಿಯ ಸಮೀಪವೇ ಈ ಆನೆ ಅನಾರೋಗ್ಯದಿಂದ ತೀರಿಕೊಂಡಿತು ಮತ್ತು ಅರಣ್ಯ ಇಲಾಖೆಯವರು ಬಂದು ದಂತವನ್ನು ಕೊಂಡೊಯ್ದರು ಎಂದು.

ಇಲ್ಲಿಗೆ ಬರುವ ಚಾರಣದ ಹಾದಿ ಅಪ್ರತಿಮ. ಈ ಹಾದಿಯನ್ನು ಮನಸಾರೆ ಅನುಭವಿಸಲು, ಆನಂದಿಸಲು ಮತ್ತು ಕಾಡಿನ ಸೌಂದರ್ಯವನ್ನು ಕಾಣುವ ಸಲುವಾಗಿ ಈ ಹಾದಿಯಲ್ಲಿ ಮಾತ್ರ ಬರಬೇಕು. ಡಿಸೆಂಬರ್ ತಿಂಗಳಲ್ಲಿ ಗಂಗಡಿಕಲ್ಲಿಗೆ ಚಾರಣ ಮಾಡಿದ ಬಳಿಕ ೩ ತಿಂಗಳ ನಂತರ ಕೈಗೊಂಡ ಈ ಚಾರಣ ದೇಹವನ್ನು ನೆಟ್ಟಗಾಗಿಸಿತು. ಈ ಹಳ್ಳಿಯಲ್ಲಿರುವುದು ೭ ಕುಟುಂಬಗಳು. ನಾಲ್ಕು ಮೈಲಿ ನಡೆದರೆ ಸಾಗರ ತಾಲೂಕಿನ ಕಾರ್ಣಿ ಗ್ರಾಮ. ಎಲ್ಲಾ ೭ ಕುಟುಂಬಗಳ ಜಮೀನುಗಳನ್ನು ಉದ್ಯಮಿಯೊಬ್ಬರು ಖರೀದಿಸಿದ್ದಾರೆ. ಇಲ್ಲೊಂದು ರೆಸಾರ್ಟ್ ಆರಂಭಿಸುವ ಇರಾದೆ ಇದೆ ಈ ಉದ್ಯಮಿಗೆ. ಅದುವರೆಗೆ ಮೇಗಣಿ ಚಂದ. ಸುತ್ತಮುತ್ತಲಿನ ಕಾಡು ಚಂದ.

ಮಂಗಳವಾರ, ಮಾರ್ಚ್ 18, 2008

ನೀವು ಇಷ್ಟು ಓಲ್ಡ್ .....

ನನ್ನನ್ನು ನೋಡಿದವರು ಯಾರೂ ನನಗೆ ವಯಸ್ಸು ೩೪ ಎಂದರೆ ನಂಬಲು ಸಾಧ್ಯವೇ ಇಲ್ಲ. ಹುಬ್ಬೇರಿಸುವವರೇ ಹೆಚ್ಚು. ಸಂಶಯದ ನಗು ಬೀರುವವರು ಇನ್ನೂ ಹೆಚ್ಚು. ೨೫ರ ತರುಣನಂತೆ ನಾನೇನು ಕಾಣುತ್ತಿಲ್ಲ ಬದಲಾಗಿ ೪೫ರ ವಯಸ್ಕನಂತೆ ಕಾಣುತ್ತೇನೆ! ಮದುವೆಯ ಮೊದಲು, ನಾನಿನ್ನೂ ಅವಿವಾಹಿತ ಎಂದರೆ 'ತಮಾಷೆ ಮಾಡ್ಬೇಡಿ' ಎನ್ನುವವರೇ ಎಲ್ಲರೂ.

ಬೆಂಗಳೂರಿನಿಂದ ಪ್ರಶಾಂತ್ ಮತ್ತು ಶ್ರೀಕಾಂತ್ ಉಡುಪಿಗೆ ಬಂದಿದ್ದರು. ಭೇಟಿಯಾಗೋಣವೆಂದಾಗ ಅವರು ತಂಗಿದ್ದ ಹೋಟೇಲಿಗೆ ತೆರಳಿ ಕಾಯತೊಡಗಿದೆ. ನನ್ನನ್ನು ಕಂಡು ಅವರಿಬ್ಬರು ಯಾವ ರೀತಿ ಪ್ರತಿಕ್ರಿಯಿಸಬಹುದು ಎಂದು ಯೋಚಿಸತೊಡಗಿದೆ. ನಾನು 'ರಾಜೇಶ್' ಇರಲಾರೆನು ಎಂದು ಬೇರೆ ಯಾರಿಗಾದರೂ ಅವರ ಕಣ್ಣುಗಳು ಹುಡುಕಬಹುದು ಅಥವಾ ಇಲ್ಲಿ ಬೇರೆ ಯಾರೂ ಇಲ್ಲ ಆದ್ದರಿಂದ ಇತನೇ ರಾಜೇಶ್ ಎಂದು ಅವರು ನನ್ನನ್ನು ಮಾತನಾಡಿಸಬಹುದು ಎಂಬ ೨ ಸಾಧ್ಯತೆಗಳ ಬಗ್ಗೆ ಯೋಚಿಸತೊಡಗಿದೆ.

ಹಾಗೇನೇ ಆಯಿತು. ಮೊದಲು ಬಂದ ಪ್ರಶಾಂತ್, ನನ್ನನ್ನು ಕಂಡು, ನಾನು ರಾಜೇಶ್ ಇರಲಾರೆನು ಎಂದು ನೇರವಾಗಿ ಕೌಂಟರ್ ಸಮೀಪ ರೂಮಿನ ಕೀ ಕೊಡಲು ತೆರಳಿದರು. ಅವರ ಹಿಂದೆ ಬಂದ ಶ್ರೀಕಾಂತ್, ಅಲ್ಲಿ ನನ್ನ ಹೊರತಾಗಿ ಬೇರೆ ಯಾರೂ ಇರಲಿಲ್ಲವಾದ್ದರಿಂದ....ನಿಧಾನವಾಗಿ ಒಂದೆರಡು ಹೆಜ್ಜೆ ಇಟ್ಟು...'ರಾಜೇಶ್...?' ಎಂದು ತನ್ನ ಬಹಳ ಮೃದು ದನಿಯಲ್ಲಿ ಕೇಳಿದರು. 'ಹೌದು..ರಾಜೇಶ್' ಎಂದು ಕೈ ಕುಲುಕಿದೆ. ಅಷ್ಟರಲ್ಲಿ ಸಮೀಪ ಬಂದ ಪ್ರಶಾಂತ್,'ನೀವು ಇಷ್ಟು ಓಲ್ಡ್ ಎಂದು ನಾನು ಕಲ್ಪಿಸಿರಲಿಲ್ಲ.....ನಿಮ್ಮ ವಾಯ್ಸ್ ಕೂಡಾ ತುಂಬಾ ಯಂಗ್ ಇದೆ...ಅದ್ದರಿಂದ ಫೋನಿನಲ್ಲಿ ಮಾತನಾಡುವಾಗ ನೀವು ಇಷ್ಟು ಓಲ್ಡ್ ಎಂಬ ಕಲ್ಪನೆ ಬರಲು ಸಾಧ್ಯವೇ ಇಲ್ಲ' ಎಂದರು.

ಇದೇನೂ ನನಗೆ ಹೊಸತಲ್ಲ. ನನ್ನ ಬಳಿ ದೂರವಾಣಿಯಲ್ಲಿ ಮಾತನಾಡಿ ನಂತರ ಭೇಟಿಯಾದಾಗ ಅವಾಕ್ಕಾಗುವುದು, ನನ್ನ 'ವೆರಿ ವೆರಿ ಸೀನಿಯರ್ ಅಂಕಲ್ ಲುಕ್' ಕಂಡು ಮದುವೆ ಹೆಣ್ಣುಗಳು ಪಲಾಯನ ಮಾಡಿದ್ದು, ಹೆಣುಮಕ್ಕಳ ಹೆತ್ತವರು, ನನ್ನ ಹೆತ್ತವರಲ್ಲಿ 'ನಿಮ್ಮ ಮಗನಿಗೆ ನಿಜವಾಗ್ಲೂ ಇಷ್ಟೇ ವಯಸ್ಸಾ' ಎಂದು ಸಂಶಯ ವ್ಯಕ್ತಪಡಿಸಿದ್ದು, ಇತ್ಯಾದಿಗಳನ್ನು ಕಳೆದ ಐದಾರು ವರ್ಷದಿಂದ ನೋಡಿ ಆನಂದಿಸುತ್ತಾ ಇದ್ದೇನೆ. ಆನಂದಿಸದೇ ಬೇರೆ ವಿಧಾನವೇ ಇಲ್ಲವೇ!!!

ಆದರೂ 'ವಾಯ್ಸ್ ಯಂಗ್' ಎಂದಾಗ ಮಾತ್ರ ಹಬ್ಬ.

ಸೋಮವಾರ, ಮಾರ್ಚ್ 10, 2008

ಅಕ್ಷರ ಅವಾಂತರ ೫ - ಓಂಕಿರಾಣಿ!!!


ಲಕ್ಷ್ಮೇಶ್ವರದಲ್ಲಿ ಓಂಕಿರಾಣಿ! ಹಾಗೇನೇ ಓದಿಬಿಟ್ಟೀರಾ? ನಾನು ಹಾಗೆ ಓದಿದ್ದೆ. ಸ್ವಲ್ಪ ತಲೆ ಕೆರೆದುಕೊಂಡ ಬಳಿಕ ತಿಳಿಯಿತು. ಇದು 'ಓಂ ಕಿರಾಣಿ ಸ್ಟೋರ್ಸ್' ಎಂದು.

ಶುಕ್ರವಾರ, ಮಾರ್ಚ್ 07, 2008

ನದಿಯಾಚೆ ಕಡಲ ತೀರ


ಈ ಕಡಲತೀರ ಎಲ್ಲಿದೆ ಎಂದು ಶ್ರೀಕಾಂತ್ ಕೇಳಿದಾಗ 'ನಡೀರಿ. ನಾನೂ ಬರ್ತೇನೆ' ಎಂದು ಅವರೊಂದಿಗೆ ಹೊರಟೆ. ಪಾಪನಾಶಿನಿ ನದಿಯನ್ನು ದಾಟಿದರೆ ಈ ಸಮುದ್ರ ತೀರ. ನದಿಯನ್ನು ದಾಟಿಯೇ ಹೋಗಬೇಕೆಂದಿಲ್ಲ. ಸುತ್ತಿ ಬಳಸಿ ಬಲೂ ದೂರದ ದಾರಿಯ ರಸ್ತೆಯಿದೆ. ಆದರೆ ದೋಣಿ ಪ್ರಯಾಣದ ಮಜಾನೇ ಬೇರೆ. ನದಿ ದಾಟಿ, ರಸ್ತೆ ದಾಟಿದರೆ ಆಚೆ ಕಡಲ ತೀರ. ನನ್ನ ಮೊದಲ ಭೇಟಿ. ಸುಂದರ ಸ್ವಚ್ಛ ನಿರ್ಜನ ಕಡಲ ತೀರ.

ಶ್ರೀಕಾಂತ್ ಸುಂದರವಾಗಿ ಬರೆದಿದ್ದಾರೆ. ಇಲ್ಲಿ ಓದುವಿರಂತೆ.

ಸೋಮವಾರ, ಮಾರ್ಚ್ 03, 2008

ಬಳ್ಳಿಗಾವಿಯ ದೇವಾಲಯಗಳು


ಕಲ್ಯಾಣಿ ಚಾಲುಕ್ಯರ ದಕ್ಷಿಣ ಭಾಗದ ನಾಡಿನ ರಾಜಧಾನಿಯಾಗಿತ್ತು ಬಳ್ಳಿಗಾವಿ. ಈ ಪುಟ್ಟ ಊರು ಚಾಲುಕ್ಯ ಮತ್ತು ಹೊಯ್ಸಳ ಕಾಲದ ಹಲವು ದೇವಾಲಯಗಳನ್ನು ಹೊಂದಿದೆ. ಕಲ್ಯಾಣಿ ಚಾಲುಕ್ಯರ ಕಾಲದಲ್ಲಿ ಪ್ರಮುಖ ಸಾಂಸ್ಕೃತಿಕ ಕೇಂದ್ರವಾಗಿದ್ದ ಬಳ್ಳಿಗಾವಿಯನ್ನು ೧೨ನೇ ಶತಮಾನದಲ್ಲಿ 'ಪ್ರಾಚೀನ ಊರುಗಳಲ್ಲೇ ಶ್ರೇಷ್ಠ’ ಎಂದು ಕರೆಯಲಾಗುತ್ತಿತ್ತು. ಪ್ರಖ್ಯಾತ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಕೇಂದ್ರವಾಗಿಯೂ ಮೆರೆದಿದ್ದ ಬಳ್ಳಿಗಾವಿಯನ್ನು ’ದಕ್ಷಿಣ ಕೇದಾರ’ವೆಂದು ಕರೆಯಲಾಗುತ್ತಿತ್ತು.


ಶಿರಾಳಕೊಪ್ಪದಿಂದ ಕೆರೆಯ ಬದಿಯಲ್ಲೇ ಬರುವಾಗ ಮೊದಲಿಗೆ ಗೋಚರಿಸುವುದು ಕೇದಾರೇಶ್ವರ ದೇವಸ್ಥಾನ. ಈ ದೇವಸ್ಥಾನದಲ್ಲಿರುವ ಲಿಂಗವನ್ನು ಚಾಲುಕ್ಯರು ಪ್ರತಿಷ್ಠಾಪಿಸಿದರೆ, ನಂತರ ಇಸವಿ ೧೦೫೯ರಲ್ಲಿ ದೇವಾಲಯವನ್ನು ತ್ರಿಕೂಟಾಚಲ ಶೈಲಿಯಲ್ಲಿ ನಿರ್ಮಿಸಿ ಪೂರ್ಣಗೊಳಿಸಿದವರು ಹೊಯ್ಸಳರು.


ಸಳ ಮಹಾರಾಜ ಹುಲಿ ಕೊಲ್ಲುವ ದೃಶ್ಯದ ಕೆತ್ತನೆ ಪ್ರಮುಖ ಗರ್ಭಗುಡಿಯ ಗೋಪುರದ ಮುಂಭಾಗದಲ್ಲಿ ರಾರಾಜಿಸುತ್ತಿದೆ. ಈ ದೇವಾಲಯದ ಮುಖಮಂಟಪ ದೇವಾಲಯಕ್ಕೆ ತಾಗಿಕೊಂಡು ಇಲ್ಲ. ಮುಖಮಂಟಪ ಮತ್ತು ದೇವಾಲಯಕ್ಕೆ ಸುಮಾರು ೧೫ ಅಡಿಗಳ ಅಂತರವಿದೆ. ಸಾಧಾರಣವಾಗಿರುವ ೧೬ ಕಂಬಗಳ ಮುಖಮಂಟಪವನ್ನು ದಾಟಿ ಬಂದರೆ ದೇವಾಲಯದ ಸುಖನಾಸಿಯೊಳಗೆ ಪ್ರವೇಶ. ಸುಖನಾಸಿಯ ಆರಂಭದಲ್ಲೇ ನಂದಿ ಆಸೀನನಾಗಿದ್ದಾನೆ. ಹೆಚ್ಚಾಗಿ ನಂದಿ ಮುಖಮಂಟಪದ ಆಸುಪಾಸಿನಲ್ಲಿ ಇರುತ್ತದಾದರೂ, ಈ ದೇವಾಲಯ ಒಂದು ಅಪವಾದ.


ಸುಖನಾಸಿಯ ನಂತರ ೪೪ ಕಂಬಗಳ ನವರಂಗ. ನಂತರ ಅಂತರಾಳ ಮತ್ತು ಪ್ರಮುಖ ಗರ್ಭಗುಡಿ. ಗರ್ಭಗುಡಿಯಲ್ಲಿ ಕೇದಾರೇಶ್ವರ ಲಿಂಗ. ಎಡಕ್ಕಿರುವ ಗರ್ಭಗುಡಿಯಲ್ಲಿ ವಿಷ್ಣುವಿನ ವಿಗ್ರಹ ಮತ್ತು ಬಲಕ್ಕಿರುವ ಗರ್ಭಗುಡಿಯಲ್ಲಿ ಬ್ರಹ್ಮೇಶ್ವರ ಲಿಂಗವಿದೆ. ನವರಂಗದಲ್ಲಿ ೨೫ಕ್ಕೂ ಅಧಿಕ ಚಾಲುಕ್ಯ ಶೈಲಿಯ ಪ್ರತಿಬಿಂಬ ನೇರವಾಗಿಯೂ ತಲೆಕೆಳಗಾಗಿಯೂ ಕಾಣುವ ಕಂಬಗಳು. ಒತ್ತೊತ್ತಾಗಿ ನಿಲ್ಲಿಸಲಾಗಿರುವ ಈ ಕಂಬಗಳ ಸಮೂಹವನ್ನು ನೋಡುವುದೇ ಚಂದ. ಈ ದೇವಾಲಯವು ಪ್ರಸಿದ್ಧ ಶಿಕ್ಷಣ ಕೇಂದ್ರವಾಗಿತ್ತು.


ಕೇದಾರೇಶ್ವರ ದೇವಾಲಯದ ಪಕ್ಕದಲ್ಲಿರುವುದೇ ಅಲ್ಲಮ ಪ್ರಭು ದೇವಾಲಯ. ಬಳ್ಳಿಗಾವಿ ಅಲ್ಲಮ ಪ್ರಭು ಜನಿಸಿದ ಸ್ಥಳ. ಈ ಗುಡಿಯಲ್ಲಿ ಶಿವಲಿಂಗವನ್ನು ಪ್ರತಿಷ್ಠಾಪಿಸಿದ್ದರೂ, ಪ್ರಖ್ಯಾತ ವಚನಕಾರ ಅಲ್ಲಮ ಪ್ರಭು ತನ್ನ ಹೆಚ್ಚಿನ ಸಮಯವನ್ನು ಇದೇ ಗುಡಿಯಲ್ಲಿ ಕಳೆಯುತ್ತಿದ್ದರಿಂದ ಆತನ ಹೆಸರಿಂದಲೇ ಈ ಗುಡಿಯನ್ನು ಗುರುತಿಸಲಾಗುತ್ತದೆ. ಅಲ್ಲಮ ಪ್ರಭು ದೇವಾಲಯ ಎಂದು ಕರೆಯುವ ಮೊದಲು, ಗೋಪುರರಹಿತ ತ್ರಿಕೂಟಾಚಲ ರಚನೆಯುಳ್ಳ ಈ ದೇವಾಲಯವನ್ನು ನಗರೇಶ್ವರ ದೇವಾಲಯವೆಂದು ಕರೆಯಲಾಗುತ್ತಿತ್ತು ಮತ್ತು ಬಳ್ಳಿಗಾವಿಯ ಮೂಲ ದೇವಸ್ಥಾನವೂ ಇದೇ. ಪಟ್ಟದಕಲ್ಲಿನ ವ್ಯಾಪಾರಿ ಸಮುದಾಯದವರಾದ ವೀರ ಬಣಂಜರು ೧೨ನೇ ಶತಮಾನದಲ್ಲಿ ನಗರೇಶ್ವರ ದೇವಾಲಯವನ್ನು ನಿರ್ಮಿಸಿದರು ಎಂದು ಶಾಸನಗಳು ತಿಳಿಸುತ್ತವೆ. ಪುಟ್ಟದಾಗಿರುವ ಈ ದೇಗುಲ ಮುಖಮಂಟಪ, ನವರಂಗ ಮತ್ತು ೩ ಗರ್ಭಗುಡಿಗಳನ್ನು ಹೊಂದಿದೆ.


ಬಳ್ಳಿಗಾವಿ ಊರಿನ ಮಧ್ಯದಲ್ಲಿರುವುದು ತ್ರಿಪುರಾಂತಕೇಶ್ವರ ದೇವಾಲಯ. ಹೊರಗಿನಿಂದ ನೋಡಿದರೆ ಏನೂ ವಿಶೇಷವಿಲ್ಲದಂತೆ ತೋರುವ ಈ ದೇವಸ್ಥಾನ ಒಳಹೊಕ್ಕರೆ ವಿಸ್ಮಯಗಳ ರಾಶಿಯನ್ನೇ ಕಣ್ಣೆದುರಿಗೆ ಇಡುತ್ತದೆ. ಸಂಪೂರ್ಣವಾಗಿ ಕುಸಿದಿದ್ದ ಈ ದೇವಸ್ಥಾನವನ್ನು ಭಾರತೀಯ ಪುರಾತತ್ವ ಇಲಾಖೆ ಮೂಲ ರಚನೆಗೆ ತಕ್ಕಂತೆ ಪುನ: ನಿರ್ಮಿಸಿದೆ. ಹಾಗಿದ್ದರೂ ದೇವಾಲಯ ಕುಸಿದು ಬಿದ್ದಿರುವಂತೆಯೇ ತೋರುತ್ತದೆ. ಹಾಗೆಂದುಕೊಂಡೇ ದೇವಾಲಯದ ಸಮೀಪ ತೆರಳಿದ ನಮಗೆ, ಸಂಪೂರ್ಣವಾಗಿ ಕುಸಿದಿದ್ದನ್ನು ಈ ಮಟ್ಟಕ್ಕೆ ಪುನ: ನಿರ್ಮಿಸಲಾಗಿದೆ ಎಂದು ಅಲ್ಲಿನ ಉದ್ಯೋಗಿ ತಿಳಿಸಿದರು.


ತ್ರಿಪುರಾಂತಕೇಶ್ವರ ದೇವಾಲಯವನ್ನು ಇಸವಿ ೧೦೩೯ರಲ್ಲಿ ನಿರ್ಮಿಸಲಾಗಿತ್ತು. ಹೊಯ್ಸಳ ಶೈಲಿಯ ನಕ್ಷತ್ರಾಕಾರದ ಅಡಿಪಾಯ ಈ ದೇವಾಲಯಕ್ಕಿದೆ. ೨ ದ್ವಾರಗಳಿರುವ ಈ ದೇವಸ್ಥಾನದ ಪ್ರಮುಖ ದ್ವಾರ ಯಾವುದೆಂದು ತಿಳಿದುಕೊಳ್ಳುವುದೇ ಸಮಸ್ಯೆ. ನಂತರ ನಂದಿ ಇದ್ದ ದ್ವಾರವೇ ಪ್ರಮುಖ ದ್ವಾರ ಎಂದು ತಿಳಿದುಬಂತು. ಇದೊಂದು ವಿಚಿತ್ರ ಶೈಲಿಯ ತ್ರಿಕೂಟಾಚಲ ದೇವಸ್ಥಾನ. ಎಲ್ಲಾ ತ್ರಿಕೂಟಾಚಲ ದೇವಸ್ಥಾನಗಳು ಅಂಗ್ಲ ಅಕ್ಷರಮಾಲಿಕೆಯ ’ವಿ’ ಆಕಾರದಲ್ಲಿದ್ದರೆ, ಈ ದೇವಾಲಯ ’ಎಲ್’ ಆಕಾರದಲ್ಲಿತ್ತು! 

ನಂದಿ ಮುಖ ಮಾಡಿ ನಿಂತಿರುವ ಪ್ರಮುಖ ಗರ್ಭಗುಡಿಯಲ್ಲಿ ಶಿವಲಿಂಗವಿದೆ. ಇದರ ಬಲಕ್ಕೆ ತ್ರಿಕೂಟಾಚಲ ಶೈಲಿಗೆ ತಕ್ಕಂತೆ ಇರುವ ಗರ್ಭಗುಡಿಯಲ್ಲಿ ವಿಷ್ಣುವಿನ ವಿಗ್ರಹವಿದೆ. ತ್ರಿಕೂಟಾಚಲ ರಚನೆಯಂತೆ ಪ್ರಮುಖ ಗರ್ಭಗುಡಿಯನ್ನು ಹೊರತುಪಡಿಸಿ ಉಳಿದೆರಡು ಗರ್ಭಗುಡಿಗಳು ಎದುರುಬದುರಾಗಿರಬೇಕು.

ಆದರೆ ಈ ೩ನೇ ಗರ್ಭಗುಡಿ, ವಿಷ್ಣು ಇರುವ ಗರ್ಭಗುಡಿಗೆ ಮುಖ ಮಾಡಿರುವುದರ ಬದಲಾಗಿ ಪ್ರಮುಖ ಗರ್ಭಗುಡಿಗೆ ತಾಗಿಕೊಂಡೇ ಇದೆ ಮತ್ತು ನಂದಿ ಇರುವ ದಿಕ್ಕಿಗೇ ಮುಖಮಾಡಿಕೊಂಡು ಇದೆ!! ಇಷ್ಟೇ ಅಲ್ಲದೆ ಈ ೩ನೇ ಗರ್ಭಗುಡಿಗೆ ಬೇರೇನೆ ಆದ ನವರಂಗ ಮತ್ತು ಉಳಿದ ೨ ಗರ್ಭಗುಡಿಗಳಿಗೆ ಬೇರೇನೇ ನವರಂಗ. ಈ ದೇವಾಲಯದಲ್ಲಿ ೨ ನವರಂಗಗಳು! ಪ್ರಮುಖ ಶಿವಲಿಂಗ ಮತ್ತು ವಿಷ್ಣು ಇರುವ ಗರ್ಭಗುಡಿಗಳ ನವರಂಗವನ್ನು ನಾಟ್ಯರಂಗವೆಂದೂ, ೩ನೇ ಗರ್ಭಗುಡಿಯ ಮುಂದಿರುವ ನವರಂಗವನ್ನು ಸಭಾರಂಗವೆಂದೂ ಕರೆಯುತ್ತಾರೆ. ದೇವಾಲಯದ ಪ್ರಮುಖ ದ್ವಾರ ತೆರೆದುಕೊಳ್ಳುವುದು ನಾಟ್ಯರಂಗಕ್ಕೆ.


ನಾಟ್ಯರಂಗದಿಂದ ಸಭಾರಂಗಕ್ಕೆ ಬರಲು ದ್ವಾರವಿದೆ. ಈ ದ್ವಾರದಲ್ಲಿ ಸುಂದರವಾಗಿ ಕೆತ್ತಲಾಗಿರುವ ’ದ್ವಾರಪಾಲಕಿ’ಯರಿದ್ದಾರೆ. ದ್ವಾರಪಾಲಕಿಯರ ಬದಿಯಲ್ಲಿರುವ ಕಿಟಕಿಗಳ ಮೇಲೆ ಕೆತ್ತನೆ ಅದ್ಭುತ. ನಾಟ್ಯರಂಗದಿಂದ ೨ ಗರ್ಭಗುಡಿಗಳಿಗೆ ಮತ್ತು ಸಭಾರಂಗಕ್ಕೆ ತೆರೆದುಕೊಳ್ಳುವ ದ್ವಾರಗಳು ೫ ತೋಳಿನವು. ಪ್ರತಿ ತೋಳಿನಲ್ಲೂ ಉನ್ನತ ಮಟ್ಟದ ಕೆತ್ತನೆ ಕೆಲಸ.


ಇದೊಂದು ಮೂಲತ: ದ್ವಿಕೂಟ ರಚನೆಯಾಗಿದ್ದು, ೩ನೇ ಗರ್ಭಗುಡಿಯನ್ನು ನಂತರ ಸೇರಿಸಲಾಗಿದೆ ಎಂಬ ಮಾತೂ ಇದೆ. ದೇವಾಲಯದ ವಿಚಿತ್ರ ತ್ರಿಕೂಟ ರಚನೆಯನ್ನು ಗಮನಿಸಿದರೆ ಈ ವಾದವನ್ನು ತಳ್ಳಿಹಾಕುವಂತಿಲ್ಲ. ಸಾಮಾನ್ಯವಾಗಿ ತ್ರಿಕೂಟ ರಚನೆಯಲ್ಲಿ ಒಂದೇ ನವರಂಗವಿರುತ್ತದೆ ಮತ್ತು ೩ ಗರ್ಭಗುಡಿಗಳು ಈ ನವರಂಗಕ್ಕೇ ತೆರೆದುಕೊಳ್ಳುತ್ತವೆ. ಇಲ್ಲಿ ೨ ಗರ್ಭಗುಡಿಗಳು ಮಾತ್ರ ನವರಂಗಕ್ಕೆ ತೆರೆದುಕೊಳ್ಳುತ್ತವೆ. ನಂತರ ನಿರ್ಮಿಸಲಾದ ೩ನೇ ಗರ್ಭಗುಡಿಗೆ ಬೇರ್‍ಏನೆ ನವರಂಗವನ್ನು ನಿರ್ಮಿಸಿರುವಂತೆ ಕಾಣಬರುತ್ತದೆ ಮತ್ತು ದ್ವಿಕೂಟ ದೇವಾಲಯದ ಎರಡನೇ ದ್ವಾರವನ್ನು ಈ ನವರಂಗಕ್ಕೆ ತೆರೆದುಕೊಳ್ಳುವಂತೆ ಮಾಡಲಾಗಿದೆ. ಮೇಲ್ನೋಟಕ್ಕೆ ಈ ವಾದವೇ ಸರಿ ಎಂದು ಕಾಣಬಹುದು. ಆದರೆ ಏನೇ ಇರಲಿ, ಪ್ರಾಚೀನ ದೇವಾಲಯಗಳಲ್ಲಿ ಆಸಕ್ತಿ ಇರುವವರಿಗೆ ಬಳ್ಳಿಗಾವಿಯ ತ್ರಿಪುರಾಂತಕೇಶ್ವರ ದೇವಾಲಯ ಒಂದು ಸೋಜಿಗ.

ತ್ರಿಪುರಾಂತಕೇಶ್ವರ ದೇವಾಲಯದ, ಪ್ರಮುಖ ಗರ್ಭಗುಡಿಯ ಅಂತರಾಳಕ್ಕೆ ತೆರೆದುಕೊಳ್ಳುವ ದ್ವಾರದ ಮೇಲೆ ಅತ್ಯದ್ಭುತ ಕೆತ್ತನೆ ಮತ್ತು ನಾಟ್ಯರಂಗದಲ್ಲಿ ೪ ಬೃಹತ್ ಪ್ರತಿಬಿಂಬ ನೇರವಾಗಿಯೂ ತಲೆಕೆಳಗಾಗಿಯೂ ಕಾಣುವ ಕಂಬಗಳಿವೆ. ನಾಲ್ಕು ಕಂಬಗಳಲ್ಲೂ ಪ್ರಭಾವಳಿಯಂತೆ ಬೇರೆ ಬೇರೆ ಕೆತ್ತನೆಗಳು. ಒಂದರಲ್ಲಿ ವಿಷ್ಣುವಿನ ಅವತಾರಗಳಿಗೆ ಸಂಬಂಧಿಸಿದ ಕೆತ್ತನೆಗಳು, ಇನ್ನೊಂದರಲ್ಲಿ ಶ್ರೀ ಕೃಷ್ಣನ ವಿವಿಧ ಲೀಲೆಗಳು, ಮತ್ತೊಂದರಲ್ಲಿ ಶಿವ, ಪಾರ್ವತಿ ಮತ್ತು ಷಣ್ಮುಖರ ಕೆತ್ತನೆಗಳು ಹಾಗೂ ಕೊನೆಯದರಲ್ಲಿ ಜೈನ ತೀರ್ಥಂಕರರ ಕೆತ್ತನೆಗಳು. ಈ ನಾಟ್ಯರಂಗದಲ್ಲೇ ಹೊಯ್ಸಳ ದೊರೆ ಬಿಟ್ಟಿದೇವ ತನ್ನ ಪ್ರಮುಖ ರಾಣಿ ಶಾಂತಲಾದೇವಿಯನ್ನು ಪ್ರಥಮ ಬಾರಿಗೆ ನೋಡಿದ್ದು!


ಅದೊಂದು ದಿನ ಬೇಲೂರಿಗೆ ಹಿಂತಿರುಗುತ್ತಿದ್ದ ಬಿಟ್ಟಿದೇವ, ಬಳ್ಳಿಗಾವಿಯಲ್ಲಿ ತಂಗಿದ್ದನು. ಮುಂಜಾನೆ ತ್ರಿಪುರಾಂತಕೇಶ್ವರ ದೇವಾಲಯದಿಂದ ಕೇಳಿಬರುತ್ತಿದ್ದ ತಾಳ, ರಾಗಗಳ ಸದ್ದಿಗೆ ದೇವಸ್ಥಾನದ ಕಡೆಗೆ ಬಂದ ಬಿಟ್ಟಿದೇವ ನಾಟ್ಯರಂಗದಲ್ಲಿ ನೃತ್ಯ ಮಾಡುತ್ತಿದ್ದ ಶಾಂತಲಾದೇವಿಯನ್ನು ಕಂಡು ಅವಳಲ್ಲಿ ಮೋಹಿತನಾದ. ಶಾಂತಲಾದೇವಿ ಬಳ್ಳಿಗಾವಿಯ ನಿವಾಸಿಯಾಗಿದ್ದಳು ಮತ್ತು ಆಕೆ ಒಬ್ಬ ಜೈನ ಧರ್ಮೀಯಳಾಗಿದ್ದಳು. ಬಿಟ್ಟಿದೇವ ಹಿಂದೂ ಧರ್ಮೀಯನಾಗಿದ್ದ. ತನ್ನನ್ನು ವರಿಸಬೇಕಾದರೆ ಜೈನ ಧರ್ಮಕ್ಕೆ ಮತಾಂತರಗೊಳ್ಳಬೇಕೆಂದು ಶಾಂತಲಾದೇವಿ ಬಿಟ್ಟಿದೇವನಲ್ಲಿ ಹೇಳಿದಾಗ, ಬಿಟ್ಟಿದೇವ ವಿಷ್ಣುವರ್ಧನನಾದ ಮತ್ತು ಶಾಂತಲಾದೇವಿ ಹೊಯ್ಸಳ ರಾಜ್ಯದ ಪ್ರಮುಖ ರಾಣಿಯಾದಳು.


ಸಭಾರಂಗದಲ್ಲೂ ಮತ್ತವೇ ಚಾಲುಕ್ಯ ಶೈಲಿಯ ೪ ಕಂಬಗಳಿವೆ. ಛಾವಣಿಯಲ್ಲಿ ಬೆರಗುಗೊಳಿಸುವ ಕೆತ್ತನೆ ಇದೆ. ದೇವಾಲಯದ ಹೊರಗೋಡೆಯಲ್ಲಿ ವಿವಿಧ ಕೆತ್ತನೆಗಳಿವೆ. ರಾಮಾಯಣದ ದೃಶ್ಯಗಳನ್ನು ಬಿಂಬಿಸುವ ಕೆತ್ತನೆಗಳಿವೆ. ದರ್ಪಣ ಸುಂದರಿಯರಿದ್ದಾರೆ. ದತ್ತು ಕೊಡುವ ಪದ್ಧತಿಯನ್ನು ಬಿಂಬಿಸುವ ’ದತ್ತು ಕಲ್ಲು’ ಇದೆ.


ವಿವಿಧ ಭಂಗಿಗಳಲ್ಲಿ ಮಿಥುನ ಶಿಲ್ಪಗಳಿವೆ. ಚಕ್ರಾಸನ(!?!?)ವೆಂಬ ಆಸನದ ಅಪರೂಪದ ಕೆತ್ತನೆಯೂ ಇದೆ. ಆ ಕಾಲದಲ್ಲಿ ಹೆಂಗಸರ ಮೇಲೆ ನಡೆಯುತ್ತಿದ್ದ ದೌರ್ಜನ್ಯವನ್ನು ಬಿಂಬಿಸುವ ಕೆತ್ತನೆಯಿದೆ.


ತ್ರಿಪುರಾಂತಕೇಶ್ವರ ದೇವಾಲಯದ ಎದುರಿಗೇ ಸಭಾಮಂಟಪವಿದೆ. ಅಲ್ಲಿಂದ ಸ್ವಲ್ಪ ಮುಂದೆ ವೀರಭದ್ರಸ್ವಾಮಿ ದೇವಸ್ಥಾನವಿದೆ. ಇದು ಇತ್ತೀಚೆಗಿನ ದೇವಸ್ಥಾನ. ಆದರೆ, ಇಲ್ಲಿ ಹಸಿರು ಬಣ್ಣದ ಶಿವಲಿಂಗವೊಂದಿದೆ. ಈ ಶಿವಲಿಂಗ, ಪಚ್ಚೆ ನೀಲಕಂಠೇಶ್ವರ ದೇವಾಲಯದಲ್ಲಿತ್ತು. ಯಾರೋ ಅದನ್ನು ಕದ್ದೊಯ್ಯುತ್ತಿರುವಾಗ ಸಿಕ್ಕುಬಿದ್ದು, ಈಗ ಅದನ್ನು ಊರಿನ ದೇವಸ್ಥಾನದಲ್ಲಿ ಜೋಪಾನವಾಗಿ ಇಡಲಾಗಿದೆ.


ತ್ರಿಪುರಾಂತಕೇಶ್ವರ ದೇವಾಲಯದಿಂದ ಸ್ವಲ್ಪ ಮುಂದೆ ಭೇರುಂಡೇಶ್ವರ ಸ್ತಂಭ ಅಥವಾ ವಿಜಯ ಸ್ತಂಭ ಇರುವುದು. ೩ ಮೀಟರ್ ಎತ್ತರದ ಪೀಠದ ಮೇಲೆ ಇರುವ ಈ ಸ್ತಂಭ ೯.೭೫ ಮೀಟರ್ ಎತ್ತರವಿದೆ. ಇದನ್ನು ಚಾಲುಕ್ಯ ದೊರೆ ತ್ರಿಲೋಕಮಲ್ಲನ ದಂಡನಾಯಕನಾಗಿದ್ದ ಚಾವುಂಡರಾಯ ಅರಸನು ತನ್ನ ವಿಜಯದ ಸ್ಮರಣಾರ್ಥ ನಿರ್ಮಿಸಿದ್ದಾನೆ.

ಮಾಹಿತಿ: ಸೌಮ್ಯ ಎಸ್.ವಿ,  ಶ್ರೀಕಂಠ ಹೊಸನಗರ ಮತ್ತು ಪ್ರಾಚ್ಯ ವಸ್ತು ಇಲಾಖೆ.