ಬುಧವಾರ, ಅಕ್ಟೋಬರ್ 10, 2007

ನಾಮದ ಜಲಧಾರೆ


೨೦೦೩ರ ಜೂನ್ ತಿಂಗಳ ಅದೊಂದು ಆದಿತ್ಯವಾರ ನಾನು, ನನ್ನ ಸಂಬಂಧಿ ಅರುಣಾಚಲ ಹಾಗೂ ಆತನ ಗೆಳೆಯ ಅನಿಲ್ ಕಡ್ಲೆ ವಿಭೂತಿ ಜಲಧಾರೆಯತ್ತ ತೆರಳಿದ್ದೆವು. ಮುನ್ನಾ ದಿನ ಸಂಜೆಯೇ ನಾನು ಕುಮಟಾಗೆ ಬಂದಿದ್ದೆ.

ಮಾಬಗೆಯಿಂದ ಮಣ್ಣಿನ ರಸ್ತೆಯಲ್ಲಿ ೧ಕಿಮಿ ಚಲಿಸಿದ್ದೇವಷ್ಟೇ, ನಾನು ಚಲಾಯಿಸುತ್ತಿದ್ದ ಅನಿಲನ ಬೈಕು ಆಚೀಚೆ ಓಲಾಡಲು ಶುರುವಾಯಿತು. ಪಂಕ್ಚರ್ ಆಗಿರಬಹುದು ಎಂದು ನಿಲ್ಲಿಸಿದರೆ, ಊಹೆ ಸರಿಯಾಗಿತ್ತು. ಮುಂದಿನ ಚಕ್ರದೊಳಗೆ ದೈತ್ಯಾಕಾರದ ಮುಳ್ಳೊಂದು ನುಗ್ಗಿತ್ತು. ಕೂಡಲೇ ಗಾಲಿಯನ್ನು ಕಳಚಿ, ಅರುಣಾಚಲನ ಬೈಕಿನಲ್ಲಿ ಆತ ಮತ್ತು ಅನಿಲ, ೩ಕಿಮಿ ದೂರವಿರುವ ಚನ್ನಗಾರಕ್ಕೆ ತೆರಳಿದರು. ಆದಿತ್ಯವಾರವಾಗಿದ್ದರಿಂದ ಪಂಕ್ಚರ್ ರಿಪೇರಿ ಮಾಡುವ ಅಂಗಡಿಯವನಿಗೆ ರಜೆ. ಆತನ ಮನೆ ಹುಡುಕಿಕೊಂಡು ಹೋದರೆ, ಆತ ಹಿಲ್ಲೂರಿಗೆ ಮದುವೆಯೊಂದಕ್ಕೆ ತೆರಳಿದ್ದಾನೆಂದು ತಿಳಿದುಬಂತು. ಇವರಿಬ್ಬರು ಪಂಕ್ಚರ್ ಆದ ಗಾಲಿ ಸಮೇತ ಅಲ್ಲಿಂದ ೧೧ಕಿಮಿ ದೂರದ ಹಿಲ್ಲೂರಿಗೆ ದೌಡಾಯಿಸಿದರು. ಅಲ್ಲಿ ಮದುವೆ ಮಂಟಪದೊಳಗೆ ಆ ಗಾಲಿ ಸಮೇತ ನುಗ್ಗಿ, ಆತನನ್ನು ಹುಡುಕಿ ತೆಗೆದರು. ನಂತರ ಆತನಿಗೆ 'ಡಬ್ಬಲ್ ಚಾರ್ಜ್' ಕೊಡುವುದಾಗಿ ಪುಸಲಾಯಿಸಿ, ಆತನನ್ನು ಮರಳಿ ಚನ್ನಗಾರಕ್ಕೆ ಕರೆಸಿ, ಅಂಗಡಿ ತೆರೆಸಿ, ಪಂಕ್ಚರ್ ರೆಪೇರಿ ಮಾಡಿ, ಮರಳಿ ನಾನು ಒಂಟಿ ಗಾಲಿಯ ಬೈಕಿನೊಂದಿಗೆ ಕಾಯುತ್ತಿದ್ದಲ್ಲಿಗೆ ಬಂದು, ರಿಪೇರಿಯಾದ ಗಾಲಿಯನ್ನು 'ಫಿಕ್ಸ್' ಮಾಡುವಷ್ಟರಲ್ಲಿ ೧೧೦ನಿಮಿಷ ಕಳೆದುಹೋಗಿತ್ತು.


ಮತ್ತೊಂದು ಕಿಮಿ ಚಲಿಸಿದ ಬಳಿಕ ರಸ್ತೆ ಅಂತ್ಯ. ಅಲ್ಲೊಂದು ಮನೆ. ಬಳಿಯಲ್ಲೇ ಹರಿಯುತ್ತಿದ್ದ ಸಣ್ಣ ಪ್ರಮಾಣದ ನೀರು. ಇಲ್ಲಿಂದ ೨೦ ನಿಮಿಷ ನಡೆದ ಬಳಿಕ ಜಲಧಾರೆಯತ್ತ ಬಂದೆವು. ವರ್ಷಪೂರ್ತಿ ನೀರಿರುವ ವಿಭೂತಿ ಜಲಧಾರೆ ಈಗ ಮೈದುಂಬಿ ಭೋರ್ಗರೆಯುತ್ತಿತ್ತು. ಜಲಧಾರೆ ಕಂಡ ಕೂಡಲೇ ಬಟ್ಟೆ ಕಳಚುವ ಅನಿಲ, ಕ್ಷಣಾರ್ಧದಲ್ಲಿ ನೀರಿನಲ್ಲಿದ್ದ. ಅರುಣಾಚಲನಿಗೆ ನೀರಿಗಿಳಿದು ಜಲಕ್ರೀಡೆಯಾಡುವ ಆಸೆ ಆದರೆ ಅಷ್ಟೇ ಹೆದರಿಕೆ, ಯಾವುದಾದರೂ ಜಂತು ಕಚ್ಚಬಹುದೆಂದು!

ದೇವನಳ್ಳಿ ಸಮೀಪದ ಕಾಡಿನಿಂದ ಮತ್ತು ಮಂಜುಗುಣಿ ಹಿಂಭಾಗದ ಕಾಡಿನಿಂದ ಹರಿದು ಬರುವ ಕೆಲವು ತೊರೆಗಳು ಯಾಣದ ಸಮೀಪ ಜೊತೆಗೂಡಿ ಉಂಟಾಗುವ ಹಳ್ಳ, ವಡ್ಡಿ ಹಳ್ಳಿಯ ಮೂಲಕ ಹರಿದು, ಘಟ್ಟದ ಕೆಳಗೆ ಬರುವಾಗ ಮಾಬಗೆ ಸಮೀಪ ಜಿಗಿದು ವಿಭೂತಿ ಜಲಧಾರೆಯನ್ನು ನಿರ್ಮಿಸುತ್ತದೆ. ಈ ಜಲಧಾರೆಗೆ ಮಾಬಗೆ ಜಲಧಾರೆಯೆಂದೂ ಕರೆಯುತ್ತಾರೆ. ನಂತರ ಈ ಹಳ್ಳವು ಹಾಗೆ ಮುಂದೆ ಚನ್ನಗಾರದ ಮೂಲಕ ಹರಿದು, ಹೊಸಕಂಬಿಯ ಬಳಿ, ಮಾಗೋಡಿನಲ್ಲಿ ಜಲಧಾರೆಯನ್ನು ನಿರ್ಮಿಸಿ ಹರಿದುಬರುವ ಗಂಗಾವಳಿ ನದಿಯನ್ನು ಸೇರುತ್ತದೆ.


ಒಂದೆರಡು ಚಿತ್ರಗಳನ್ನು ತೆಗೆದು ಅಲ್ಲೇ ಬಂಡೆಯೊಂದರ ಮೇಲೆ ಕುಳಿತೆ. ಅನಿಲ ಉತ್ಸಾಹದಿಂದ ಜಲಕ್ರೀಡೆಯಾಡುತ್ತಿದ್ದರೆ, ಅರುಣಾಚಲ ನೀರಿಗಿಳಿಯಲೋ ಬೇಡವೋ ಎಂಬ ನಿರ್ಧಾರ ಮಾಡುವುದರಲ್ಲೇ ಕಾಲಹರಣ ಮಾಡುತ್ತಿದ್ದ. ಕಡೆಗೂ ಆತ ನೀರಿಗಿಳಿಯಲಿಲ್ಲ. ಸುಮಾರು ೧೦೦ ಅಡಿ ಎತ್ತರವಿರುವ ಜಲಧಾರೆ ಸಮೀಪ ತೆರಳುವುದು ಮಳೆಗಾಲದಲ್ಲಿ ಕಷ್ಟ. ಸ್ವಲ್ಪ ದೂರ ನಿಂತೇ ನೋಡಬೇಕಾಗಬಹುದು. ನೀರು ಧುಮುಕುವಲ್ಲಿ ನೀರಿಗಿಳಿಯುವುದು ಅಪಾಯ. ಸ್ವಲ್ಪ ಮುಂದೆ ಗುಂಡಿಯೊಂದಿರುವುದು. ಇಲ್ಲಿ ಮನಸಾರೆ ಮೀಯಬಹುದು. ಜಲಧಾರೆಯ ಸದ್ದು ಮತ್ತು ಕಾಡಿನ ವಿಚಿತ್ರ ಮೌನ ಸದ್ದು. ಇವೆರಡರ ಮಧ್ಯೆ ನಾವು ಮೂವ್ವರು. ಸ್ವಲ್ಪ ಸಮಯ ಕಾಲ ಕಳೆದು ಮರಳಿದೆವು ಆ ಮನೆಯ ಬಳಿ. ಜಲಪಾತದಲ್ಲಿ ಜಳಕ ಮಾಡದ ಅರುಣಾಚಲ, ಇಲ್ಲಿ ಮನೆಯ ಬಳಿ ಹರಿಯುತ್ತಿದ್ದ ಸಣ್ಣ ಪ್ರಮಾಣದ ನೀರಿನಲ್ಲಿ, ಆ ಮನೆಯವರಿಂದ ಬಕೆಟೊಂದನ್ನು ಎರವಲು ಪಡೆದು, ನೀರನ್ನು ಪದೇ ಪದೇ ಆ ಬಕೆಟಿನಲ್ಲಿ ತುಂಬಿಸಿ ಸ್ನಾನ ಮಾಡಿದ! ನಂತರ ಸಮಯವಿದ್ದುದರಿಂದ ಮತ್ತಿಘಟ್ಟ ಮತ್ತು ಮಂಜುಗುಣಿಗೆ ಭೇಟಿ ನೀಡಿ, ರಾಗಿಹೊಸಳ್ಳಿಯ ಮೂಲಕ ಕುಮಟಾ ತಲುಪಿದೆವು.

ಎಪ್ರಿಲ್ ೨೦೦೬ರ ಉಡುಪಿ ಯೂತ್ ಹಾಸ್ಟೆಲ್ ಕಾರ್ಯಕ್ರಮವನ್ನು ಮರ್ಕಾಲ್ ಗುಡ್ಡ ಜಲಧಾರೆಗೆ ಎಂದು ನಿಗದಿಸಲಾಗಿತ್ತು. ಅಂತೆಯೇ ಎಪ್ರಿಲ್ ೨೩ರಂದು ಬೆಳಗ್ಗೆ ೭ ಗಂಟೆಗೆ ಉಡುಪಿ ಬಸ್ಸು ನಿಲ್ದಾಣದ ಸಮೀಪವಿರುವ ಯೂತ್ ಹಾಸ್ಟೆಲ್ ಕಚೇರಿಗೆ ಬಂದರೆ ಮಾಧವ್ ಮಾತ್ರ ಅಲ್ಲಿ ಇದ್ದರು. ಉಳಿದವರದ್ದು ಪತ್ತೆನೇ ಇಲ್ಲ. ಸ್ವಲ್ಪ ಸಮಯದ ಬಳಿಕ ಅನಂತ ಮತ್ತು ಸಂದೀಪ ಬಂದರು. ಗಂಟೆ ೮ ಆದರೂ ಇನ್ನೂ ಆಯೋಜಕರದ್ದು ಸುಳಿವಿಲ್ಲ. ಯೂತ್ ಹಾಸ್ಟೆಲ್ ಪದಾಧಿಕಾರಿಗಳ ಮತ್ತು ಸಂಬಂಧಪಟ್ಟವರ ಮೊಬೈಲ್ ಫೋನ್ ಎಲ್ಲಾ ಸ್ವಿಚ್ ಆಫ್. ನಾವ್ಯಾರೂ ಮರ್ಕಾಲ್ ಗುಡ್ಡಕ್ಕೆ ಹೋದವರಲ್ಲ. ಈ ಮೊದಲು ಹೋಗಿದ್ದ ಯೂತ್ ಹಾಸ್ಟೇಲಿನ ಆರೇಳು ಸದಸ್ಯರಲ್ಲಿ ಒಬ್ಬನಾದರೂ ಬಂದಿದ್ದರೆ ಸಾಕಿತ್ತು. ಆದರೆ ಒಬ್ಬನ ಸುಳಿವೂ ಇಲ್ಲ. ಕನಿಷ್ಟ ಪಕ್ಷ ಒಂದು ಫೋನಾದರೂ ಮಾಡಿ ಕಾರ್ಯಕ್ರಮ ರದ್ದಾಗಿದೆ ಎಂದು ತಿಳಿಸುವ ಸೌಜನ್ಯ/ ಜವಾಬ್ದಾರಿ ಕೂಡಾ ಇರಲಿಲ್ಲ. ಉಡುಪಿ ಯೂತ್ ಹಾಸ್ಟೆಲಿನ ಪ್ರಮುಖ ಸದಸ್ಯರಾಗಿರುವ ಶ್ರೀ ಸೂರ್ಯನಾರಾಯಣ ಅಡಿಗರು ಆ ಸಮಯದಲ್ಲಿ ಅಲ್ಲೆಲ್ಲೋ ಉತ್ತರ ಭಾರತದಲ್ಲಿ ಚಾರಣ ಮಾಡುತ್ತಿದ್ದರು. 'ಅವರಾದರೂ ಇದ್ದಿದ್ದರೆ' ಎಂದು ಮನಸ್ಸು ಪದೇ ಪದೇ ಹೇಳುತ್ತಿತ್ತು. ಇಂತಹ ಸನ್ನಿವೇಶ ಬಂದಾಗ ಅಡಿಗರು ಪರಿಚಯದವರ ತಂಡವೊಂದನ್ನು ಸಿದ್ಧಪಡಿಸಿ ಹೊರಟೇಬಿಡುತ್ತಿದ್ದರು. ಕಡೆಗೆ ಬೇರೆ ದಾರಿ ಕಾಣದೆ ನಾವು ನಾಲ್ಕು ಮಂದಿ ಸಮಾಲೋಚಿಸಿ ವಿಭೂತಿ ಜಲಧಾರೆಗೆ ಹೋಗುವ ನಿರ್ಧಾರ ಮಾಡಿದೆವು.


ಎರಡು ಬೈಕುಗಳಲ್ಲಿ ೯ಕ್ಕೆ ಉಡುಪಿ ಬಿಟ್ಟ ನಾವು ಮಧ್ಯಾಹ್ನ ೩ ಗಂಟೆಗೆ ಮಾಬಗೆ ತೆಲುಪಿದೆವು. ಮಳೆಗಾಲದಲ್ಲಿ ವಿಶಾಲವಾಗಿ ನಾಲ್ಕೈದು ಕವಲುಗಳಲ್ಲಿ ಧುಮ್ಮಿಕ್ಕುವ ಜಲಧಾರೆ ಈಗ ಒಂದೇ ಕವಲಲ್ಲಿ ಕೆಳಗಿಳಿಯುತ್ತಿತ್ತು. ಈಗಿನ ಅಂದವೇ ಬೇರೆ. ಜಲಧಾರೆಯ ಸನಿಹಕ್ಕೆ ತೆರಳಿದೆವು. ಅಲ್ಲಿ ನೀರಿಗಿಳಿಯಲು ಯಾರಿಗೂ ಧೈರ್ಯ ಸಾಲಲಿಲ್ಲ. ಆ ಗುಂಡಿಯ ತಳ ಕಾಣುತ್ತಿರಲಿಲ್ಲ ಮತ್ತು ಅಲ್ಲಿ ಹಿಡಿದುಕೊಳ್ಳಲು ಯಾವುದೇ ಆಧಾರವಿರಲಿಲ್ಲ. ಮೆಲ್ಲಗೆ ಮೇಲೆ ಏರಿ ಜಲಧಾರೆಯ ನಡುವಿಗೆ ತೆರಳಿ ಅಲ್ಲಿ ಒಂದು ಸಣ್ಣ 'ಪ್ಲ್ಯಾಟ್-ಫಾರ್ಮ್'ನ ಮೇಲೆ ನಿಂತು ಸ್ನಾನ ಮುಗಿಸಿದರು. ಸಂಜೆ ೫ಕ್ಕೆ ಅಲ್ಲಿಂದ ಹೊರಟ ನಾವು, ದಾರಿಯಲ್ಲಿ ಸಿಗುವ ಮಿರ್ಜಾನ ಕೋಟೆಗೆ ಭೇಟಿ ನೀಡಿ ಉಡುಪಿ ತಲುಪಿದಾಗ ಮಧ್ಯರಾತ್ರಿ ೧೨. ಆ ತಿಂಗಳ ಉಡುಪಿ ಯೂತ್ ಹಾಸ್ಟೆಲ್ ಕಾರ್ಯಕ್ರಮ ಅಂತೂ ರದ್ದಾಗಲಿಲ್ಲ!

ಮಾಹಿತಿ: ರಾಘವೇಂದ್ರ ಬೆಟ್ಟಕೊಪ್ಪ

ಕಾಮೆಂಟ್‌ಗಳಿಲ್ಲ: