ಸೋಮವಾರ, ಮೇ 14, 2007

ಚೆಲುವಿನ ಜಲಧಾರೆ


ಒತ್ತಿನೆಣೆ ಗುಡ್ಡದಿಂದ ದೂರದಲ್ಲಿ ಪಶ್ಚಿಮ ಘಟ್ಟಗಳೆಡೆ ನೋಡಿದರೆ ಎತ್ತರದಿಂದ ನೀರು ಬೀಳುವುದು ಜೂನ್ ತಿಂಗಳಿಂದ ಜನವರಿಯವರೆಗೆ ಕಾಣುವುದು.

ಸಣ್ಣಂದಿನಿಂದಲೂ ಪ್ರತಿ ವರ್ಷ ಗಣೇಶನ ಹಬ್ಬಕ್ಕೆ ಮತ್ತು ದಸರಾ ರಜೆಗೆ ಊರಾದ ಹಳದೀಪುರಕ್ಕೆ ತೆರಳುವಾಗ ಒತ್ತಿನೆಣೆ ಗುಡ್ಡ ಬರುವುದನ್ನೇ ಕಾದು ಕುಳಿತಿರುತ್ತಿದ್ದೆ. ಆ ಬದಿಯ ಸೀಟನ್ನೆ ಅಪ್ಪ ಅಮ್ಮನನ್ನು ಪೀಡಿಸಿ, ಗದ್ದಲ ಮಾಡಿ ಹಿಡಿಯುತ್ತಿದ್ದೆ. ಒತ್ತಿನೆಣೆ ಗುಡ್ಡದ ಮೇಲೆ ಬಸ್ಸು ತಲುಪಿದಾಗ ದೂರದಲ್ಲಿ ಜಲಪಾತ ನೋಡಿದ ಸಂತೋಷ. ಇಪ್ಪತ್ತು ವರ್ಷ ಬರೀ ಹೀಗೆ ಬಸ್ಸಿನಿಂದಲೇ ನೋಡುತ್ತ ಕಾಲ ಕಳೆದೆ. ತಮ್ಮನ ಬೈಕ್ ಕೈಗೆ ಬಂದಂತೆ ಅಲ್ಲಿಗೆ ತೆರಳುವ ಸ್ಕೆಚ್ ಹಾಕಿಬಿಟ್ಟೆ. ಆದರೆ ಹಳ್ಳಗುಂಟ ಚಾರಣ ಮಾಡಬೇಕಾದ್ದರಿಂದ ನೀರಿನ ಹರಿವು ಕಡಿಮೆಯಾಗುವವರೆಗೆ ಅನಿವಾರ್ಯವಾಗಿ ಕಾಯಲೇಬೇಕಾಗಿತ್ತು. ಕಡೆಗೂ ನವೆಂಬರ್ ೨೩, ೨೦೦೩ರಂದು ಆ ಜಲಪಾತ ನೋಡಲು ಹೊರಟಾಗ ವಿಪರೀತ ಉತ್ಸಾಹ, ಸಂಭ್ರಮ. ಕಳೆದ ೨೦ ವರ್ಷಗಳಿಂದ ದೂರದಿಂದ ನೋಡುತ್ತಿದ್ದ ಜಲಪಾತವನ್ನು ಈಗ ಸಮೀಪದಿಂದ ನೋಡಲು ಹೋಗುವ ಸಮಯ ಬಂದಿತ್ತು. ಜೋಗವನ್ನು ಹೊರತುಪಡಿಸಿ ಕರ್ನಾಟಕದಲ್ಲಿ ಇದುವರೆಗೆ ನಾನು ನೋಡಿದ 'ದಿ ಬೆಸ್ಟ್' ಜಲಪಾತ.

ತೂದಳ್ಳಿವರೆಗೆ ಟಾರು ರಸ್ತೆ. ನಂತರ ಮಣ್ಣು ರಸ್ತೆಯಲ್ಲಿ ೪ಕಿಮಿ ಕ್ರಮಿಸಿದರೆ ೩ ಮನೆಗಳ ಕಲ್ಲಿಕೋಣೆ ಎಂಬ ಸ್ಥಳ. ತೂದಳ್ಳಿಯಲ್ಲಿ ಎತ್ತ ಹೋಗುವುದು ಎಂದು ತಿಳಿಯದೆ ನೇರವಾಗಿ ಟಾರು ರಸ್ತೆಯಲ್ಲಿ ಯಮಾಹ ಓಡಿಸಿದೆ. ಸ್ವಲ್ಪ ದೂರ ಕ್ರಮಿಸಿದ ಬಳಿಕ ಮನೆಯೊಂದರಲ್ಲಿ ದಾರಿ ಕೇಳಿದಾಗ 'ಕಲ್ಲಿಕೋಣೆಗೆ ತೆರಳಿ ಅಲ್ಲಿಂದ ಹಳ್ಳದ ದಾರಿಯಲ್ಲಿ ಜಲಪಾತದೆಡೆ ನಡೆಯಬೇಕು' ಎಂದು ಹೇಳಲಾಯಿತು. 'ಕಲ್ಲಿಕೋಣೆಗೆ ತೆರಳಲು ಮರಳಿ ತೂದಳ್ಳಿಗೆ ಹೋಗಿ ಬಳಿಕ ಮಣ್ಣಿನ ರಸ್ತೆಯಲ್ಲಿ ತೆರಳಿ' ಎಂದ ಆ ಮನೆಯ ಯಜಮಾನ ಸಡನ್ನಾಗಿ ಚೇಳು ಕಡಿದವನಂತೆ ಕುರ್ಚಿಯಿಂದ ಜಿಗಿದೆದ್ದು 'ಬೇಗ ಹೋಗಿ, ನಾರಾಯಣ ಕಲ್ಲಿಕೋಣೆ ಅಲ್ಲೇ ತೂದಳ್ಳಿಯಲ್ಲಿ ಸೊಸೈಟಿಯಲ್ಲವ್ನೆ. ಅವ್ನ ಮನೆಯಿಂದ್ಲೇ ನಡ್ಕಂಡು ಹೋಗ್ಬೇಕ್' ಎಂದ. ವೇಗವಾಗಿ ಮರಳಿ ತೂದಳ್ಳಿಗೆ ಬಂದು ಸೊಸೈಟಿಯಲ್ಲಿ ನಾರಾಯಣ ಕಲ್ಲಿಕೋಣೆ ಬಗ್ಗೆ ವಿಚಾರಿಸಿದರೆ ಅಲ್ಲೇ ಬದಿಯಲ್ಲಿ 'ನಾನೆ' ಅಂದ ಒಬ್ಬ ಕುಬ್ಜ.


ನಾರಾಯಣನನ್ನು ಹಿಂದೆ ಕೂರಿಸಿ ಕಲ್ಲಿಕೋಣೆಯ ಅವನ ಮನೆಯತ್ತ ಮಣ್ಣು ರಸ್ತೆಯಲ್ಲಿ ಸಾಗುತ್ತಿರಬೇಕಾದರೆ ಜಲಪಾತ ಆಗಾಗ ದರ್ಶನ ನೀಡುತ್ತಿತ್ತು. ಕೆಲವೊಂದು ಕಡೆಯಿಂದ ಸ್ವಲ್ಪ ಬೇರೆ ತರಹ ಕಾಣುತ್ತಿತ್ತು. ನಾರಾಯಣನಲ್ಲಿ ಅದ್ಯಾಕೆ ಹಾಗೆ ಎಂದು ವಿಚಾರಿಸಿದಾಗ 'ಹೆ ಹೆ ಹೆ ಅದು ಬ್ಯಾರೆನೇ ಇದು ಬ್ಯಾರೆನೇ' ಎಂದ. ಮತ್ತೊಂದು ಜಲಪಾತವೇ ಎಂದು ಆಶ್ಚರ್ಯ ಮತ್ತು ಸಂತೋಷ ಎರಡೂ ಆಯಿತು. ಆ ಮತ್ತೊಂದು ಜಲಪಾತ ನಾಲ್ಕಾರು ಕಿಮಿ ದೂರವಿರುವ ಚಕ್ತಿಕಲ್ ಎಂಬ ಹಳ್ಳಿಯಿಂದ ಚಾರಣಗೈಯುವ ಇನ್ನೊಂದು ಜಲಪಾತವಾಗಿತ್ತು.


ನಾರಾಯಣ ತನ್ನ ಕಿರಿಯ ಮಗ ಲಕ್ಷ್ಮಣನನ್ನು ನನಗೆ ಜಲಪಾತ ತೋರಿಸಲು ಕಳಿಸಿದ. ಮನೆಯಿಂದ ೨೦೦ಮೀಟರ್ ದೂರದಲ್ಲಿ ಹರಿಯುವ ಹಳ್ಳದ ಮಧ್ಯ ನಿಲ್ಲಿಸಿ ಕಾಡಿನ ನಡುವಿಂದ ದೂರದಲ್ಲಿ ರಾಜಗಾಂಭೀರ್ಯದಿಂದ ಧುಮುಕುತ್ತಿದ್ದ ಜಲಧಾರೆಯ ಪ್ರಥಮ ಹಂತವನ್ನು ತೋರಿಸಿ 'ಅದೇ ಅಲ್ಲಿ' ಎಂದು ಜಲಪಾತ ತೋರಿಸಿದ ಲಕ್ಷ್ಮಣನಲ್ಲಿ, ನನಗೆ 'ಅಲ್ಲಿ' ಹೋಗ್ಬೇಕು ಎಂದಾಗ ಆತ ನಂಬಲೇ ಇಲ್ಲ. ಆತನ ಪ್ರಕಾರ ನಾನು ನೋಡಲು ಬಂದಿದ್ದು ಇಷ್ಟೇ, ದೂರದಿಂದ! ನಾನ್ ಸೆನ್ಸ್.

ಆತ 'ಒಬ್ರೇ ಇದೀರಾ', ಎಂದಾಗ ನಾನು, 'ಇಲ್ವಲ್ಲಾ ನೀನೂ ಬಾ, ಇಬ್ರಾಗ್ತೀವಿ' ಎಂದೆ. 'ಮನೆ ಕಡೆ ಹೇಳಿ ಬರ್ತೆ' ಎಂದು ಮನೆಗೆ ಹೋಗಿ ಬಂದು ನನ್ನ ಮಾರ್ಗದರ್ಶಿಯಾಗಿ ಬಂಡೆಯಿಂದ ಬಂಡೆಗೆ ದಾರಿಮಾಡಿಕೊಂಡು ಮುನ್ನಡೆದ. ಬರೀ ನೀರಿನ ಹರಿವಿನ ಶಬ್ದ ಮಾತ್ರ. ಎಲ್ಲಾ ಗಾತ್ರದ ಮತ್ತು ರೂಪದ ಬಂಡೆಗಳು ದಾರಿಯುದ್ದಕ್ಕೂ. ಆದಷ್ಟು ಸುಲಭದ ದಾರಿಯಿಂದ ಲಕ್ಷ್ಮಣ ಕರೆದೊಯ್ದ. ಹಳ್ಳದ ಎರಡೂ ಬದಿ ದಟ್ಟ ಕಾಡು ಮತ್ತು ಸ್ವಲ್ಪ ಮೋಡ ಕವಿದಂತಿದ್ದರಿಂದ ಅಷ್ಟು ಬೆಳಕಿರಲಿಲ್ಲ. ಬಂಡೆಗಳ ಮೇಲಿಂದ ಜಿಗಿದು ಜಿಗಿದು ಸಾಗುತ್ತಿದ್ದೆವು. ಅಲ್ಲಲ್ಲಿ ಕೆಲವು ಆಳ ಗುಂಡಿಗಳು. ದಾರಿಯಲ್ಲಿ ಲಕ್ಷ್ಮಣನ ಪ್ರಶ್ನೆ 'ನೀವೊಬ್ರೆ ಯಾಕ್ಬಂದ್ರಿ?' ಎಂದು. 'ನಾನು ಪ್ರಕೃತಿ, ಪರಿಸರ ಇತ್ಯಾದಿಗಳನ್ನು ಇಷ್ಟ ಪಡುತ್ತೇನೆ......' ಎಂದು ಉತ್ತರ ಹೇಳುತ್ತಿದ್ದರೆ ಆತ ಅರ್ಥ ಆಗದೆ ತಲೆ ಕೆರೆದುಕೊಳ್ಳುತ್ತಿದ್ದ. ಹಲವಾರು ಉತ್ತರಗಳನ್ನು ನೀಡಿದರೂ ಆತನಿಗೆ ಸಮಾಧಾನವಾಗದೇ ಮತ್ತದೇ 'ನೀವೊಬ್ರೆ.......'? ಕಡೆಗೂ ನಾನು ಒಬ್ನೇ ಯಾಕ್ಬಂದೆ ಎನ್ನುವುದನ್ನು ಆತನಿಗೆ ತಿಳಿಹೇಳಲು ನನಗೆ ಸಾಧ್ಯವಾಗಲೇ ಇಲ್ಲ.


ಸುಮಾರು ೭೫ ನಿಮಿಷದ ಬಳಿಕ ಜಲಪಾತದ ೬ನೇ ಹಂತದ ದರ್ಶನ. ಕಾಡು ತೆರವುಗೊಂಡು, ಮೋಡಗಳೂ ಚದುರಿ, ಜಲಪಾತ ಅದ್ಭುತವಾಗಿ ವಿಜೃಂಭಿಸುತ್ತಿತ್ತು ಸೂರ್ಯನ ಬೆಳಕಿನಲ್ಲಿ. ಮೇಲೆ ಮೊದಲ ಹಂತದ ತುದಿಭಾಗ ಮಾತ್ರ ಗೋಚರಿಸುತ್ತಿತ್ತು.


ಆರನೇ ಹಂತ ಸುಮಾರು ೫೦ಅಡಿ ಎತ್ತರವಿದ್ದು ಹೆಣ್ಣಿಗಿರುವ ಬಳುಕು, ವೈಯ್ಯಾರ, ಅಂದ ಎಲ್ಲವೂ ಇದಕ್ಕಿದೆ. ಹೊರಚಾಚಿರುವ ಕಲ್ಲಿನ ಪದರಗಳನ್ನು ಸ್ಪರ್ಶಿಸುತ್ತಾ, ಬಳುಕುತ್ತಾ, ವೈಯ್ಯಾರದಿಂದ ಕೆಳಗಿಳಿಯುವ ಇದರ ಅಂದಕ್ಕೆ ಸೋತುಹೋದೆ. ಲಕ್ಷ್ಮಣ ಅಲ್ಲೇ ಬದಿಯಲ್ಲಿ ಗಲ್ಲದ ಮೇಲೆ ಕೈಯಿಟ್ಟು ಕೂತು ಆಶ್ಚರ್ಯಚಕಿತ ಮುಖಭಾವದಿಂದ ನನ್ನನ್ನು ನೋಡುತ್ತಿದ್ದರೆ ನಾನು ಆಚೀಚೆ ಓಡಾಡುತ್ತ ಈ ಸುಂದರಿಯ ಫೋಟೊ ತೆಗೆಯುವುದರಲ್ಲಿ ಮಗ್ನನಾದೆ.



ನಂತರ ೧೦ನಿಮಿಷ ಗುಡ್ಡದ ಬದಿಯಲ್ಲೇ 'ವಿ' ಆಕಾರದಲ್ಲಿ ನಡೆದು ಐದನೇ ಹಂತದ ಬಳಿ ತಲುಪಿದೆವು. ಇಲ್ಲಿ ವಿಶಾಲವಾದ ಜಾಗವಿದೆ. ಇಲ್ಲೇ ಸ್ವಲ್ಪ ಬಂಡೆಗಳನ್ನು ಹತ್ತಿ ನಿಂತರೆ ಮೊದಲನೇ ಹಂತದ ಅರ್ಧಭಾಗದವರೆಗೆ ಕಾಣುತ್ತದೆ. ಬದಿಯಲ್ಲೇ ಇರುವ ಮರಗಳ ನೆರಳಿನಲ್ಲಿ ಕೂತು ಆಯಾಸ ಪರಿಹಾರ ಮಾಡುತ್ತ ಕಾಲ ಕಳೆಯಲು ಪ್ರಶಸ್ತ ಜಾಗ. ಈ ಹಂತ ಸುಮಾರು ೧೦೦ಅಡಿಯಷ್ಟು ಎತ್ತರವಿದ್ದು ರಭಸವಾಗಿ ಮತ್ತು ಆಲ್ಮೋಸ್ಟ್ ನೇರವಾಗಿ ಧುಮುಕುತ್ತದೆ. ತಳದಲ್ಲಿರುವ ಸಣ್ಣ ಗುಂಡಿ ಜಲಕ್ರೀಡೆಯಾಡಲು ಸೂಕ್ತ ಸ್ಥಳ. ಈ ಹಂತದಿಂದ ಜಲಪಾತದ ವಿಹಂಗಮ ನೋಟ ಲಭ್ಯ. ಮೇಲೆ ದೂರದಲ್ಲಿ ಧುಮುಕುತ್ತಿರುವ ಪ್ರಥಮ ಹಂತ ಮತ್ತು ಕಣಿವೆಯ ಸಂಪೂರ್ಣ ಮತ್ತು ಸುಂದರ ನೋಟವನ್ನು 'ಪೋಸ್ಟ್ ಕಾರ್ಡ್' ನೋಟ ಎನ್ನಬಹುದು.

ಹೆಚ್ಚಿನ ಚಾರಣಿಗರು ಇಲ್ಲೇ ತಮ್ಮ ಚಾರಣವನ್ನು ನಿಲ್ಲಿಸಿಬಿಡುತ್ತಾರೆ. ಕಲ್ಲಿಕೋಣೆಯಿಂದ ೯೦ನಿಮಿಷ ನಡೆದು ಸುಸ್ತಾಗಿ ಇಲ್ಲೇ ಹೆಚ್ಚಿನವರು ವಿಶ್ರಾಂತಿ ಪಡೆದು ಹಿಂತಿರುಗುತ್ತಾರೆ. ಲಕ್ಷ್ಮಣನನ್ನು ನಾನು ಮತ್ತೂ ಮೇಲಕ್ಕೆ ಹೋಗುವ ಎಂದು ಒಪ್ಪಿಸಿದೆ. ಏರುಹಾದಿಯಲ್ಲಿ ಕೇವಲ ೨ನಿಮಿಷ ನಡೆದಾಗ, ಲಕ್ಷ್ಮಣ ಗಕ್ಕನೆ ನಿಂತುಬಿಟ್ಟ. ಪ್ರಶ್ನಾರ್ಥಕವಾಗಿ ಆತನೆಡೆ ನೋಡಲು ದಾರಿಯಲ್ಲೇ ಇರುವ ಮರವೊಂದರ ಕೊಂಬೆಯೆಡೆ ಕೈ ಮಾಡಿ ತೋರಿಸಿದಾಗ ಹೆದರಿಬಿಟ್ಟೆ. ಅಲ್ಲಿತ್ತೊಂದು ರಸೆಲ್ಸ್ ವೈಪರ್. ಕನ್ನಡಿ ಹಾವು ಎನ್ನುತ್ತಾರೆ. ೩-೪ ಅಡಿ ಉದ್ದದ ಬಲೂ ಅಪಾಯಕಾರಿ ಜಂತು. ತನ್ನ ತ್ರಿಕೋನಾಕಾರದ ಚಪ್ಪಟೆ ತಲೆಯನ್ನು ನಮ್ಮತ್ತ ಮುಂದೆ ಹಿಂದೆ ಚಲಿಸುತ್ತಾ ತನ್ನ ದೇಹದ ಹಿಂಭಾಗವನ್ನಷ್ಟೆ ಕೊಂಬೆಗೆ ಆಧಾರವಾಗಿ ಸುತ್ತಿ ಮುಂಭಾಗವನ್ನು 'ಎಸ್' ಆಕಾರದಲ್ಲಿಟ್ಟು ದಾಳಿ ಮಾಡಲು ಸನ್ನದ್ಧ ರೀತಿಯಲ್ಲಿ ತೂಗಾಡುತ್ತಿತ್ತು. ಈ ಹಾವಿಗೆ ಹಗಲಲ್ಲಿ ಕಣ್ಣು ಕಾಣದಿದ್ದರೂ, ಮನುಷ್ಯನ ದೇಹ ಹೊರಸೂಸುವ ಶಾಖವನ್ನು ಗ್ರಹಿಸಿ ದಾಳಿ ಮಾಡುತ್ತದೆ. ಮೊದಲೇ ಹಾವು ಎಂದರೆ ದೂರ ಓಡುವ ನಾನು ಆ ದೃಶ್ಯ ನೋಡಿ ಕಂಗಾಲಾಗಿ, ಹಿಂತಿರುಗುವಂತೆ ಲಕ್ಷ್ಮಣನಿಗೆ ಸೂಚಿಸಿ ಮರಳಿ ಕಲ್ಲಿಕೋಣೆಗೆ ನಡೆದೇಬಿಟ್ಟೆ.

ಮರುದಿನ ಚಿತ್ರಗಳನ್ನು ಗೆಳೆಯ ದಿನೇಶ್ ಹೊಳ್ಳರಿಗೆ ತೋರಿಸುತ್ತಿರುವಾಗ, ಸ್ಥಳದ ಸೌಂದರ್ಯಕ್ಕೆ ಮಾರುಹೋದ ಅವರು ಮುಂದಿನ ತಿಂಗಳ ಮಂಗಳೂರು ಯೂತ್ ಹಾಸ್ಟೆಲ್ ಚಾರಣ ಈ ಜಲಪಾತಕ್ಕೇ ಎಂದು ನಿರ್ಧರಿಸಿಬಿಟ್ಟರು. ಅಂತೆಯೇ ಶನಿವಾರ ಡಿಸೆಂಬರ್ ೨೦, ೨೦೦೩ರಂದು ೮ ಜನರ ನಮ್ಮ ತಂಡ ನಾರಾಯಣ ಕಲ್ಲಿಕೋಣೆಯ ಮನೆ ತಲುಪಿ ಅಲ್ಲಿ ರಾತ್ರಿ ಕ್ಯಾಂಪ್ ಹಾಕಿತು. ನಾರಾಯಣ ನಮ್ಮನ್ನು ಸಂತೋಷದಿಂದಲೇ ಬರಮಾಡಿಕೊಂಡರು. ಊಟಕ್ಕೆ ನಾವೇ ವ್ಯವಸ್ಥೆ ಮಾಡಿಕೊಂಡಿದ್ದು, ಪ್ಲೇಟ್, ಪಾತ್ರೆ ಇತ್ಯಾದಿಗಳನ್ನು ನೀಡಿ ಸಹಕರಿಸಿದರು. ರಾತ್ರಿ ಸುಮಾರು ಹೊತ್ತಿನವರೆಗೆ ನಮ್ಮೊಂದಿಗೆ ಸೇರಿ ಕೊರೆದರು. ಬೆಳಗ್ಗೆ ೭ಕ್ಕೆ ಸರಿಯಾಗಿ ಮತ್ತೆ ಲಕ್ಷ್ಮಣನ ಮಾರ್ಗದರ್ಶನದಲ್ಲಿ ಜಲಪಾತದೆಡೆ ಹೊರಟೆವು. ಈ ಸಲ ಲಕ್ಷ್ಮಣ ನನ್ನಲ್ಲಿ ಯಾವುದೇ ಪ್ರಶ್ನೆ ಕೇಳಲಿಲ್ಲ. ಗುಂಪಿನಲ್ಲಿ ಜನರು ಇಂತಹ ಸ್ಥಳಗಳಿಗೆ ತೆರಳುವುದು ಸಾಮಾನ್ಯ ಎಂದು ಆತನ ಅಭಿಪ್ರಾಯವಾಗಿದ್ದಿರಬಹುದು.


೯೦ ನಿಮಿಷದಲ್ಲಿ ಐದನೇ ಹಂತ ತಲುಪಿದೆವು. ಈ ಬಾರಿ ಯಾವುದೇ ಜಂತುಗಳು ನಮ್ಮ ದಾರಿಗೆ ಅಡ್ಡ ಬರಲಿಲ್ಲ. ಹೆಚ್ಚಿನ ಚಾರಣಗಳು ಐದನೇ ಹಂತದಲ್ಲೇ ಕೊನೆಗೊಳ್ಳುತ್ತವೆ. ಲಕ್ಷ್ಮಣನ ಪ್ರಕಾರ ಐದನೇ ಹಂತದ ನಂತರ ಮುಂದೆ ತೆರಳಿದವರು ವಿರಳ. ಐದನೇ ಹಂತದ ಮೇಲೆ ತೆರಳುವ ಹಾದಿ ಕಠಿಣ ಏರುದಾರಿ. ಬಂಡೆಗಳು, ಮರಗಳು, ಕೊಂಬೆ ಇತ್ಯಾದಿಗಳನ್ನು ಆಧಾರವಾಗಿ ಬಳಸಿ ಮೇಲೇರುತ್ತಿದ್ದೆವು. ಈ ಹಾದಿಯಲ್ಲಿ ೧೦ ನಿಮಿಷದ ಬಳಿಕ ಬೃಹತ್ ಬಂಡೆಯೊಂದು ದಾರಿಗಡ್ಡವಾಗಿ ಸಿಗುತ್ತೆ. ಇದಕ್ಕೆ ಸುತ್ತುಹಾಕಿ ಮೇಲೆ ತೆರಳಲು ಆಸ್ಪದವಿರಲಿಲ್ಲ. ವಿಸ್ಮಯವೆಂಬಂತೆ ಈ ಬಂಡೆಯ ಮಧ್ಯದಿಂದಲೇ ಸಣ್ಣ ಮರವೊಂದು ಜನ್ಮತಾಳಿದ್ದು ಇದರ ಎರಡು ಬೇರುಗಳು ಬಂಡೆಯ ಎರಡು ದಿಕ್ಕಿಗೆ ತೆವಳಿ ಅದನ್ನು ಆವರಿಸಿಕೊಂಡಿವೆ. ಈ ಮರವನ್ನು ಆಧಾರವಾಗಿ ಬಳಸಿಯೇ ಈ ಬಂಡೆಯನ್ನು ದಾಟಲು ಇರುವ ಏಕೈಕ ದಾರಿ. ಕೆಲವರು ಈ ಬಂಡೆಯನ್ನು ದಾಟಲಾಗದೇ ಇಲ್ಲಿಂದ ಹಿಂತಿರುಗುತ್ತಾರೆ. ನಮ್ಮಲ್ಲಿ ಹಿರಿಯರಾದ ರಮೇಶ್ ಕಾಮತ್ ತಾನು ಕೆಳಗೆ ಐದನೇ ಹಂತದ ಬಳಿ ಕಾಯುತ್ತಿರುತ್ತೇನೆ ಎಂದು ಹಿಂತಿರುಗಿದರೆ ಉಳಿದವರು ಮುನ್ನಡೆದರು.

ನಂತರ ಮತ್ತೆ ದಟ್ಟಕಾಡು ಮತ್ತು ಏರುಹಾದಿ. ಕಷ್ಟಪಟ್ಟು ಏನೇನನ್ನೋ ಆಧಾರವಾಗಿ ಬಳಸಿ ಉಸ್ಸಪ್ಪಾ ಎನ್ನುತ್ತ ಮುಂದುವರಿಯುತ್ತಿದ್ದೆವು. ಆ ಬೃಹತ್ ಬಂಡೆಯನ್ನು ದಾಟಿ ೧೫ ನಿಮಿಷಗಳ ಬಳಿಕ ಬರುವುದು ಮತ್ತೊಂದು ತೊಡಕು. ಇಲ್ಲಿ ಕ್ಲಿಫ್ ಒಂದರ ತುದಿಗೆ ಬಂದು ಹಾದಿ ಕೊನೆಗೊಳ್ಳುತ್ತೆ. ಐದನೇ ಹಂತದ ನೆತ್ತಿಯ ಮೇಲೆ ತಲುಪಬೇಕಾದರೆ ಈಗ ಸುಮಾರು ೨೫ಅಡಿ ಕಲ್ಲಿನ ಮೇಲ್ಮೈ ಬಳಸಿ ಕಣಿವೆಯಲ್ಲಿಳಿಯಬೇಕು. ಲ್ಯಾಡರ್ ಟೆಕ್ನಿಕ್ (ಏಣಿ ಇಳಿಯುವ ಶೈಲಿ) ಬಳಸಿಯೇ ಇಲ್ಲಿ ಕೆಳಗಿಳಿಯಬೇಕು. ಎಚ್ಚರಿಕೆಯಿಂದ ಇಳಿದರೆ ಐದನೇ ಹಂತದ ನೆತ್ತಿಯ ಮೇಲೆ. ಒಂದು ಹೆಜ್ಜೆ ತಪ್ಪಿದರೆ ನೇರವಾಗಿ ಐದನೇ ಹಂತದ ಬುಡಕ್ಕೆ! ನಿಧಾನವಾಗಿ ಎಲ್ಲ ೭ ಮಂದಿ ಕೆಳಗಿಳಿದೆವು. ಕೆಳಗೆ ರಮೇಶ ಕಾಮತ್ ಆರಾಮವಾಗಿ ಮಲಗಿ ನಮ್ಮತ್ತ ಕೈ ಬೀಸುತ್ತಿದ್ದರು.


ನಂತರ ಸಿಗುವ ೩೦-೪೦ ಅಡಿಗಳಷ್ಟು ಎತ್ತರವಿರುವ ನಾಲ್ಕನೇ, ಮುರನೇ ಮತ್ತು ಎರಡನೇ ಹಂತಗಳನ್ನು ದಾಟಿ ೧೫ ನಿಮಿಷದಲ್ಲಿ ಪ್ರಥಮ ಹಂತದ ಬುಡ ತಲುಪಿದೆವು. ಸುಮಾರು ೨೫೦ಅಡಿ ಎತ್ತರದಿಂದ ಬೀಳುತ್ತಿರುವ ಜಲಧಾರೆ. ಆ ಅಂದವನ್ನು ವರ್ಣಿಸುವಷ್ಟು ಪಾಂಡಿತ್ಯ ನನ್ನಲಿಲ್ಲ. ಅಷ್ಟು ಎತ್ತರದಿಂದ ನೀರು ಬೀಳುತ್ತಿರುವಾಗ ಸಮೀಪ ನಿಂತು ಕತ್ತು ಮೇಲೆತ್ತಿ ನೋಡುವುದೇ ಖುಷಿ. ಜಲಪಾತದ ಮುಂದೆಯೇ ಬಂಡೆಗಳಿಂದ ಕೂಡಿದ ಸಣ್ಣ ದಿಬ್ಬವೊಂದಿದ್ದು ಅದರ ಮೇಲೆ ಅಲ್ಲಲ್ಲಿ ಕುಳಿತು ಕೂಸಳ್ಳಿಯ ಅದ್ಭುತ ಸೌಂದರ್ಯವನ್ನು ಮನಸಾರೆ ಸವಿದೆವು. ಪ್ರಕೃತಿಯ ಮುಂದೆ ನಾವು ಅದೆಷ್ಟು ಸಣ್ಣವರು ಎಂಬ ಯೋಚನೆ ಬರದೇ ಇರಲಿಲ್ಲ. ಎಲ್ಲರೂ ಆ ಎತ್ತರ ಕಂಡು ಮಂತ್ರಮುಗ್ಧರಾಗಿದ್ದರು. ಬೀಸುತ್ತಿದ್ದ ಗಾಳಿಗೆ ಓಲಾಡುತ್ತಿದ್ದ ಜಲಪಾತದ ನೀರ ಹನಿಗಳು ನಮ್ಮ ಮೇಲೆ ಸಿಂಚನಗೊಳ್ಳುತ್ತಿರುವಾಗ, 'ನನ್ನ ನೋಡ ಬಂದಿರಿ, ಮನಸಾರೆ ನೋಡಿ ಸುರಕ್ಷಿತವಾಗಿ ಹಿಂದಿರುಗಿರಿ, ನಿಮಗೆ ಒಳ್ಳೆಯದಾಗಲಿ' ಎಂದು ಜಲಧಾರೆ ನಮ್ಮನ್ನು ಆಶೀರ್ವದಿಸಿ, ಪ್ರೋಕ್ಷಣೆ ಮಾಡಿದಂತೆ ನನಗನ್ನಿಸಿತು. ಒಂದು ತಾಸು ಹಾಗೇ ಕುಳಿತು ಜಲಪಾತದ ಅದ್ಭುತ ನೃತ್ಯವನ್ನು ವೀಕ್ಷಿಸಿದ ಬಳಿಕ ಒಲ್ಲದ ಮನಸ್ಸಿನಿಂದ ಹಿಂತಿರುಗಿದೆವು. ಅಗಾಗ ಹಿಂದೆ ತಿರುಗುತ್ತಾ ಮತ್ತೆ ಮತ್ತೆ ನೋಡುತ್ತಿದ್ದೆ ಜಲಧಾರೆಯ ಚೆಲುವನ್ನು.


ಐದನೇ ಹಂತದ ನೆತ್ತಿಯ ಮೇಲೆ ಬಂದಾಗ ಕೆಳಗೆ ನೋಡಿದರೆ ರಮೇಶ್ ಕಾಮತರಿಗೆ ಜೋರು ನಿದ್ರೆ. ಕೂ ಹಾಕಿದಾಗ ಗಾಬರಿಯಿಂದ ಎದ್ದು ಕೂತರು. ಬರುವಾಗ ಹೆದರಿ ಹೆದರಿ ಇಳಿದಿದ್ದ ಕ್ಲಿಫ್ ನ್ನು ಈಗ ಎಲ್ಲರೂ ಸಲೀಸಾಗಿ ಮೇಲೇರಿ ಕಾಡನ್ನು ಹೊಕ್ಕಿ ಅಲ್ಲಲ್ಲಿ ಜಾರಿ ಉರುಳುತ್ತಾ ಆ ಬೃಹತ್ ಬಂಡೆಯಿದ್ದೆಡೆ ತಲುಪಿದೆವು. ಇಲ್ಲಿ ಸ್ವಲ್ಪ ತೊಡಕಾದರೂ ಕೆಳಗಿಳಿದು ಐದನೇ ಹಂತ ತಲುಪಿ ಮನಸಾರೆ ಎಲ್ಲರೂ ಜಲಕ್ರೀಡೆಯಾಡಿ ಮತ್ತೊಂದು ತಾಸಿನ ಬಳಿಕ ಕಲ್ಲಿಕೋಣೆಯತ್ತ ಹೆಜ್ಜೆ ಇಟ್ಟೆವು. ೨೦ ವರ್ಷಗಳಿಂದ ದೂರದಿಂದ ನೋಡಿ ನೋಡಿ ಅಂತೂ ಕಡೆಗೆ ಈ ಜಲಧಾರೆಯ ಸಮೀಪ ತೆರಳಿ ಧನ್ಯನಾದೆ.

ರಾತ್ರಿ ಮನೆ ತಲುಪಿದಾಗಲೇ ಅರಿವು - ನನ್ನ ನೆಚ್ಚಿನ ಹೊದಿಕೆಯನ್ನು ಕಲ್ಲಿಕೋಣೆಯಲ್ಲೇ ಮರೆತಿದ್ದೆನೆಂದು. ಮುನ್ನಾ ದಿನ ರಾತ್ರಿ ನಾರಾಯಣರ ಮನೆಯಲ್ಲಿ ಮಲಗುವಾಗ ಬ್ಯಾಗ್ ನಿಂದ ಹೊರತೆಗೆದ ಹೊದಿಕೆಯನ್ನು ಮುಂಜಾನೆ ಮರಳಿ ಬ್ಯಾಗ್ ನೊಳಗೆ ಇಡಲು ಮರೆತುಬಿಟ್ಟಿದ್ದೆ. ನಾನು ಹುಟ್ಟಿದ ದಿನದಂದು ಅಪ್ಪ ಆ ಹೊದಿಕೆಯನ್ನು ನನಗಾಗಿ ಹಳಿಯಾಳದಲ್ಲಿ ಖರೀದಿಸಿದ್ದರಿಂದ ನನ್ನಷ್ಟೆ ವಯಸ್ಸು ಅದಕ್ಕೆ. ಮರುದಿನ ಆಫೀಸಿಗೆ 'ಹಾಫ್ ಡೇ' ರಜಾ ಹಾಕಿ ಮತ್ತೆ ನನ್ನ ಯಮಾಹಾವನ್ನು ಕಲ್ಲಿಕೋಣೆಗೆ ದೌಡಾಯಿಸಿದೆ. ಮುಂಜಾನೆ ೯ಕ್ಕೆ ನನ್ನನ್ನು ಅಲ್ಲಿ ಕಂಡು ನಾರಾಯಣನ ಮನೆಯವರು ಅಶ್ಚರ್ಯಚಕಿತರಾದರು. ಒಂದು ಹಳೆಯ, ಬಣ್ಣ ಮಾಸಿದ, ಒಂದೆರಡು ತೂತುಗಳಿರುವ ಹೊದಿಕೆಗೋಸ್ಕರ ನಾನಿಷ್ಟು ದೂರ ಬರಬಹುದೆಂದು ಅವರೆಣಿಸಿರಲಿಲ್ಲ. ಅವರ ಎರಡನೇ ಮಗ ಅಂದೇ ಮುಂಜಾನೆ ೧೦.೩೦ರ ಬಸ್ಸಿಗೆ ಮುಂಬೈಗೆ ಹೊರಡುವುದರಲ್ಲಿದ್ದ. ಐ ವಾಸ್ ದೆರ್ ಜಸ್ಟ್ ಇನ್ ಟೈಮ್. ನನ್ನ ಹೊದಿಕೆ ಆತನ ಬ್ಯಾಗ್ ನಲ್ಲಿ ನೀಟಾಗಿ ಪ್ಯಾಕ್ ಆಗಿ ಮುಂಬೈಗೆ ಪ್ರಯಾಣ ಮಾಡಲು ತಯಾರಾಗಿ ಕೂತಿತ್ತು. 'ಉಡುಪಿಯಿಂದ ಇವತ್ತೇ ಅದು ಕೂಡಾ ಬೆಳ್ಗೆನೇ ಬಂದ್ರೆಂದ್ರೆ ಆ ಹೊದ್ಕೆಯಲ್ಲಿ ಬಹ್ಳ ವಿಶೇಷವಿರ್ಬೆಕೆನೋ' ಅಂತ ನಾರಾಯಣ ನಗುತ್ತ, ಆದರೂ ಒಲ್ಲದ ಮನಸ್ಸಿನಿಂದ ಮಗನ ಬ್ಯಾಗ್ ನಿಂದ ತೆಗೆದು ನನ್ನ ಕೈಗೆ ನನ್ನ ಮೆಚ್ಚಿನ ಹೊದಿಕೆಯನ್ನು ನೀಡಿದಾಗಲೇ ನನಗೆ ಸಮಾಧಾನವಾದದ್ದು.

ಈ ಜಲಧಾರೆಗೆ ಕಿರು ವಿದ್ಯುತ್ ಯೋಜನೆಯನ್ನು ಜಾರಿಗೊಳಿಸುವ ದುಷ್ಟ ಯೋಚನೆ ಸಂಬಂಧಪಟ್ಟವರ ತಲೆಯಲ್ಲಿ ಸುಳಿದಾಡುತ್ತಿದೆ. ಆ ಬಗ್ಗೆ ಕಳೆದೊಂದು ವರ್ಷದಿಂದ ಸ್ಥಳೀಯ ಪತ್ರಿಕೆಗಳಲ್ಲಿ ವರದಿ ಮತ್ತು ಉಹಾಪೋಹಗಳು. ಸುತ್ತಮುತ್ತಲ ಹಳ್ಳಿಗರು ತಮ್ಮದೇ ಒಕ್ಕೂಟ ರಚಿಸಿ ಈ ಯೋಜನೆಯ ವಿರುದ್ಧ ಹೋರಾಟ ನಡೆಸುತ್ತಾ ಇದ್ದಾರೆ. ಆದರೆ ಏನನ್ನೂ ಹೇಳಲಾಗದು.

6 ಕಾಮೆಂಟ್‌ಗಳು:

ಸಿಂಧು sindhu ಹೇಳಿದರು...

ಮಂತ್ರಮುಗ್ಧ!

ಅಪರೂಪದ ಜಲಪಾತದ ವಿಶಿಷ್ಟ ವಿವರಣೆ.

ನಿಮ್ಮ ಚಾರಣ ಸ್ಥಳಗಳು ಮತ್ತು ವಿವರಣೆ ಎರಡೂ, ಪ್ರತಿಸಲವೂ ಹೊಸಲೋಕವನ್ನೇ ಪರಿಚಯಿಸುತ್ತವೆ.

ಧನ್ಯವಾದಗಳು.

Sushrutha Dodderi ಹೇಳಿದರು...

ಜಲಪಾತ ತೋರಿಸಿದ್ದಕ್ಕೆ ತುಂಬಾ ಥ್ಯಾಂಕ್ಸ್. ಮುಂದಿನ್ಸಲ ಹೋಗ್ಬೇಕಾದ್ರೆ ನನ್ನೂ ಕರ್ಕೊಂಡ್ ಹೋಗಿ ಆಯ್ತಾ?

ಮನಸ್ವಿನಿ ಹೇಳಿದರು...

ಬರವಣಿಗೆ ,ಚಿತ್ರ ತುಂಬಾ ಚೆನ್ನಾಗಿವೆ

'ಅದೇ ಅಲ್ಲಿ' ಎಂದು ಜಲಪಾತ ತೋರಿಸಿದ ಲಕ್ಷ್ಮಣನಲ್ಲಿ, ನನಗೆ 'ಅಲ್ಲಿ' ಹೋಗ್ಬೇಕು ಎಂದಾಗ ಆತ ನಂಬಲೇ ಇಲ್ಲ. ಆತನ ಪ್ರಕಾರ ನಾನು ನೋಡಲು ಬಂದಿದ್ದು ಇಷ್ಟೇ, ದೂರದಿಂದ! ನಾನ್ ಸೆನ್ಸ್. :))))

ಸಿಲ್ಲಿ ಲಲ್ಲಿ ನೆನಪಾಯ್ತು ನನಗೆ

ರಾಜೇಶ್ ನಾಯ್ಕ ಹೇಳಿದರು...

ಮನಸ್ವಿನಿ,

ನೀವಂದಂತೆ ಅದೊಂದು 'ಸಿಲ್ಲಿ' ಮೊಮೆಂಟ್ ಆಗಿತ್ತು.
ಪ್ರೋತ್ಸಾಹಕ್ಕೆ ಧನ್ಯವಾದಗಳು.

ಅನಾಮಧೇಯ ಹೇಳಿದರು...

ರಾಜೇಶ್,

ಅದ್ಭುತ ಚಿತ್ರಗಳು.
ಲೀನಾ

ಅನಾಮಧೇಯ ಹೇಳಿದರು...

Hi Rajesh


Very nice ephotographs

Thanks!!

Regards
Gopal