ಮಂಗಳವಾರ, ಏಪ್ರಿಲ್ 17, 2007

ಮಡೆನೂರು ಮಾಡಿದ ಮೋಡಿ - ಭಾಗ ೧


ನನ್ನ ಪ್ರಥಮ ಪ್ರಯಾಣ/ಚಾರಣ ಜೂನ್ 1, 2003ರಂದು. ಅದುವರೆಗೆ ಶಾಲಾ ಕಾಲೇಜು ಪ್ರವಾಸಗಳನ್ನು ಬಿಟ್ಟರೆ ಎಲ್ಲೂ ಹೋಗಿರಲಿಲ್ಲ. ಇಲ್ಲೇ ಸಮೀಪ ಎಲ್ಲಾದರೂ ಹೋಗಿಬರೋಣ ಎಂದರೆ ನನ್ನಲ್ಲಿ ದ್ವಿಚಕ್ರ ವಾಹನವೂ ಇದ್ದಿರಲಿಲ್ಲ. ಯೂತ್ ಹಾಸ್ಟೆಲ್ ಎಂಬ ಚಾರಣ ಆಯೋಜಿಸುವ ಒಕ್ಕೂಟ ಅಸ್ತಿತ್ವದಲ್ಲಿದೆ ಎಂಬುದು ಮೊದಲೇ ತಿಳಿದಿರಲಿಲ್ಲ. ಆದ್ದರಿಂದ ಮುಂದೆ ಪ್ರಯೋಜನವಾಗಬಹುದು ಎಂದು ಎಲ್ಲಾ ಮಾಹಿತಿಗಳನ್ನು ಸಂಗ್ರಹಿಸಿಟ್ಟುಕೊಳ್ಳುತ್ತಿದ್ದೆ. ಮೇ ೨೦೦೩ರಂದು ನನ್ನ ತಮ್ಮ ತನ್ನಲ್ಲಿದ್ದ ಸೆಕೆಂಡ್ ಹ್ಯಾಂಡ್ ಯಮಾಹ ಅರ್.ಎಕ್ಸ್.ಜಿ ಬೈಕ್-ನ್ನು ನನಗೆ ದಾನವಾಗಿ ನೀಡಿದಾಗ ಆದ ಸಂತೋಷಕ್ಕೆ ಮಿತಿಯಿಲ್ಲ. ಕೈಗೆ ಬೈಕ್ ಸಿಕ್ಕಿದ ಕೂಡಲೇ ಎಲ್ಲಾದರೂ ತಿರುಗಾಡಲು ಹೋಗುವ ತುಡಿತ.

ಮೇ 2003ರಲ್ಲಿ ವಿಜಯ ಕರ್ನಾಟಕದಲ್ಲಿ ಮಡೆನೂರು ಅಣೆಕಟ್ಟಿನ ಬಗ್ಗೆ ಲೇಖನ ಬಂದಿತ್ತು. ಕೆಲವು ದಿನಗಳ ಬಳಿಕ ದ ಹಿಂದೂ ಪತ್ರಿಕೆಯಲ್ಲೂ ಮಡೆನೂರು ಅಣೆಕಟ್ಟಿನ ಬಗ್ಗೆ ಲೇಖನ ಬಂದಾಗ 'ನೋಡೇಬಿಡಾಣ...' ಎಂದು ನಿರ್ಧಾರ ಮಾಡಿ ನನ್ನ ಪ್ರಥಮ ಜರ್ನಿಗೆ ಅಣಿಯಾದೆ. ಸಹೋದ್ಯೋಗಿ ಪ್ರಶಾಂತ್ ಬರಲು ಒಪ್ಪಿಕೊಂಡ.

ಮಡೆನೂರು ಅಣೆಕಟ್ಟಿನ ಬಗ್ಗೆ ಒಂದಿಷ್ಟು: ಮಡೆನೂರು ಅಣೆಕಟ್ಟನ್ನು ಶರಾವತಿಯ ಉಪನದಿ ಎಣ್ಣೆಹೊಳೆಗೆ ಅಡ್ಡಲಾಗಿ 1939ರಲ್ಲಿ ನಿರ್ಮಿಸಲು ಆರಂಭಿಸಿ 1948ರಲ್ಲಿ ಪೂರ್ಣಗೊಳಿಸಲಾಗಿತ್ತು. ಜೋಗದಿಂದ ನದಿಗುಂಟ 20ಕಿಮಿ ಮೇಲ್ಭಾಗದಲ್ಲಿರುವ ಈ ಅಣೆಕಟ್ಟಿನ ಪ್ರಮುಖ ಉದ್ದೇಶ ಜೋಗದಲ್ಲಿ ಹೊಸದಾಗಿ ನಿರ್ಮಿಸಲಾಗಿದ್ದ ವಿದ್ಯುತ್ ಉತ್ಪಾದನಾ ಕೆಂದ್ರಕ್ಕೆ ನೀರು ಸರಬರಾಜು ಮಾಡುವುದಾಗಿತ್ತು. 2ನೇ ಫೆಬ್ರವರಿ 1948ಕ್ಕೆ ವಿದ್ಯುತ್ ಉತ್ಪಾದನಾ ಕೆಂದ್ರ ಮತ್ತು ಅಣೆಕಟ್ಟಿನ ಉದ್ಘಾಟನೆ ನಡೆಯಬೇಕಿತ್ತು ಆದರೆ ಮಹಾತ್ಮಾ ಗಾಂಧಿಯವರ ನಿಧನದಿಂದ ನಡೆಯಲಿಲ್ಲ. ಕೃಷ್ಣರಾಜೇಂದ್ರ ಒಡೆಯರ್ ಹೈಡ್ರೊಎಲೆಕ್ಟ್ರಿಕ್ ಪ್ರೊಜೆಕ್ಟ್ ಎಂದು ನಾಮಕರಣ ಮಾಡಿದ್ದ ವಿದ್ಯುತ್ ಉತ್ಪಾದನಾ ಕೆಂದ್ರವನ್ನು ಮಹಾತ್ಮಾ ಗಾಂಧಿ ಹೈಡ್ರೊಎಲೆಕ್ಟ್ರಿಕ್ ಪ್ರೊಜೆಕ್ಟ್ ಎಂದು ಮರುನಾಮಕರಣ ಮಾಡಿ, ಮಡೆನೂರು ಅಣೆಕಟ್ಟಿನೊಂದಿಗೆ 21ನೇ ಫೆಬ್ರವರಿ 1949ರಲ್ಲಿ ಉದ್ಘಾಟಿಸಲಾಯಿತು. ನಂತರ 60ರ ದಶಕದಲ್ಲಿ ಲಿಂಗನಮಕ್ಕಿ ಅಣೆಕಟ್ಟು ನಿರ್ಮಾಣವಾದಾಗ ಅದರ ಅಗಾಧ ಹಿನ್ನೀರಿನಲ್ಲಿ ಮಡೆನೂರು ಅಣೆಕಟ್ಟು ತನ್ನ ಪ್ರಾಮುಖ್ಯತೆ ಮತ್ತು ಅಸ್ತಿತ್ವ ಎರಡನ್ನೂ ಕಳಕೊಂಡು ಮುಳುಗಿಹೋಯಿತು. ಲಿಂಗನಮಕ್ಕಿ ತನ್ನ ಗರಿಷ್ಟ ಮಟ್ಟ 1819ಅಡಿ ತಲುಪಿದಾಗ ಮಡೆನೂರು ಅಣೆಕಟ್ಟಿನ ಮೇಲೆ 15ಅಡಿ ನೀರು ನಿಂತಿರುತ್ತದೆ.

ಸಾಗರದಿಂದ 32ಕಿಮಿ ದೂರದಲ್ಲಿದೆ ಹೊಳೆಬಾಗಿಲು. ಈ ದಾರಿಯಲ್ಲಿ 30ಕಿಮಿ ಕ್ರಮಿಸಿದ ಬಳಿಕ ಬಲಕ್ಕೆ ಸಿಗುವ ಅರಣ್ಯ ಇಲಾಖೆಯ ದ್ವಾರದೊಳಗೆ ತಿರುವು ತಗೊಂಡು 6ಕಿಮಿ ಕ್ರಮಿಸಿದರೆ ಅಣೆಕಟ್ಟು ಇರುವ ಸ್ಥಳ ತಲುಪಬಹುದೆಂದು ಎರಡೂ ಲೇಖನಗಳು ತಿಳಿಸಿದ್ದರಿಂದ, ಸಾಗರಕ್ಕೆ ಹೋಗಿಯೇ ಮಡೆನೂರು ಅಣೆಕಟ್ಟಿರುವ ಸ್ಥಳಕ್ಕೆ ತೆರಳಬೇಕೆಂದು ಗ್ರಹಿಸಿ ಮೊದಲ ತಪ್ಪು ಮಾಡಿದೆ. ಭಟ್ಕಳದ ಮುಖಾಂತರ ಸಾಗರಕ್ಕೆ ತೆರಳುವ ನಿರ್ಧಾರ ಮಾಡಿ ಎರಡನೇ ತಪ್ಪು ಮಾಡಿದೆ. ಭಟ್ಕಳ - ಸಾಗರ ಅಂತರ ಹೆಚ್ಚೆಂದರೆ 50ಕಿಮಿ ಇರಬಹುದೆಂದು ಗೆಸ್ ಮಾಡಿ ಬೆಳಗ್ಗೆ 7ಕ್ಕೆ ಉಡುಪಿಯಿಂದ ರಿಲ್ಯಾಕ್ಸ್ ಆಗಿ ಹೊರಟೆವು. ಭಟ್ಕಳದಿಂದ 17ಕಿಮಿ ಮೊದಲು ಒತ್ತಿನೆಣೆಯಲ್ಲಿರುವ ಕ್ಷಿತಿಜ ನೇಸರ ಧಾಮಕ್ಕೆ ತೆರಳಿ ಒಂದು ತಾಸಿನಷ್ಟು ಸಮಯವನ್ನು ಕಳೆದು 3ನೇ ತಪ್ಪು ಮಾಡಿದೆ. ಈ ಒಂದು ತಾಸು ಕಡೆಗೆ ನನ್ನನ್ನು ಬಹಳ ಕಾಡಿತು, ಈಗಲೂ ಕಾಡುತ್ತಿದೆ (ಕೆಳಗಿರುವ ಚಿತ್ರ - ಕ್ಷಿತಿಜ ನೇಸರ ಧಾಮದಿಂದ ಕಾಣುವ ನೋಟ).


ಭಟ್ಕಳದಿಂದ ಹೊರಟಾಗಲೇ 11.30 ಆಗಿತ್ತು. ಸಾಗರ ದಾರಿಯಲ್ಲಿ ಕೇವಲ 1ಕಿಮಿ ಸಾಗಿದ್ದೇವಷ್ಟೆ, ಆಲ್ಲೊಂದು ದಾರಿಸೂಚಿಯಲ್ಲಿ ಬರೆದಿತ್ತು 'ಸಾಗರ - 110ಕಿಮಿ' ಎಂದು! 'ಯಪ್ಪಾ' ಎಂದು ಅಲ್ಲೇ ಬೈಕ್ ನಿಲ್ಲಿಸಿ, ಇಬ್ಬರೂ ಸಮಾಲೋಚಿಸಿ, ರಾತ್ರಿ ಉಡುಪಿ ತಲುಪುವಾಗ ಮಧ್ಯರಾತ್ರಿ ದಾಟಬಹುದು ಎಂದು ತಿಳಿದು ಮುಂದುವರಿಸುವ ನಿರ್ಧಾರ ಮಾಡಿದೆವು. ಈ ಕೋಗಾರ ಘಟ್ಟದ ರಸ್ತೆ ಬಹಳ ಕೆಟ್ಟಿತ್ತು. ಸುಡು ಬಿಸಿಲು ಬೇರೆ. 45ಕಿಮಿ ಬಳಿಕ ರಸ್ತೆಯಿಂದ 2ಕಿಮಿ ಒಳಗೆ ಭೀಮೇಶ್ವರಕ್ಕೆ ತೆರಳುವ ಮಣ್ಣಿನ ದಾರಿ ಬಂದಾಗ ಅಲ್ಲಿಗೆ ತೆರಳಿದೆವು. ಸುಂದರವಾದ ಶಿವ ದೇವಾಲಯ. ಅಲ್ಲೇ ಒಂದು ಸಣ್ಣ 40ಅಡಿ ಜಲಪಾತ. ಆಗ ನೀರಿರಲಿಲ್ಲ. (ನಂತರ ಹಲವಾರು ಬಾರಿ ಭೀಮೇಶ್ವರಕ್ಕೆ ತೆರಳಿದ್ದೇನೆ. ಅಲ್ಲೊಂದು ರಾತ್ರಿ ಕಳೆದದ್ದು ನೆನಪಿನಲ್ಲುಳಿಯುವಂತದ್ದು. ಜಲಪಾತ ಸಣ್ಣದಾದರೂ ನೋಡಲು ಸುಂದರವಾಗಿದೆ). ಭೀಮೇಶ್ವರ ಜಲಪಾತದ ಒಂದು ಚಿತ್ರ ಕೆಳಗಿದೆ.


ಕಾರ್ಗಲ್ ನಿಂದ ನೇರವಾಗಿ ಸಾಗರಕ್ಕೆ ತೆರಳಬಹುದಿತ್ತಾದರೂ, ಪ್ರಶಾಂತ್ ಜೋಗ ನೋಡುವ ಇಚ್ಛೆ ವ್ಯಕ್ತಪಡಿಸಿದಾಗ ಜೋಗಕ್ಕೆ ತೆರಳಿ ಸಾಗರ ತಲುಪಿದಾಗ ಸಮಯ 3.45 ಮತ್ತು ಕ್ರಮಿಸಿದ ದಾರಿ 206ಕಿಮಿ. ಇಂಧನ ತುಂಬಿಸಿ, ಮಾರಿಗುಡಿಯ ಮುಂದೆ ಬಂದು ಬಲಕ್ಕೆ ಹೊರಳಿ ಹೊಳೆಬಾಗಿಲಿನ ರಸ್ತೆಯಲ್ಲಿ ಬೈಕು ಓಡಿಸಿದೆ. 4.40ಕ್ಕೆ ಅರಣ್ಯ ಇಲಾಖೆಯ ದ್ವಾರದ ಬಳಿ ಬಂದಾಗ 7 ಬೈಕುಗಳಲ್ಲಿ 14 ಯುವಕರು ಮುಚ್ಚಿದ ದ್ವಾರದ ಒಳಗೆ ನುಗ್ಗಲು ತಯಾರಾಗಿ ನಿಂತಿದ್ದರು. ಅವರಲ್ಲೊಬ್ಬ ಹೊಳೆಬಾಗಿಲಿನಿಂದ ಅರಣ್ಯ ಇಲಾಖೆಯ ಸಿಬ್ಬಂದಿಯೊಬ್ಬನನ್ನು ತನ್ನ ಬೈಕಿನಲ್ಲಿ ಕರೆದುಕೊಂಡು ಬರುವುದಕ್ಕೂ, ನಾವು ಅಲ್ಲಿ ತಲುಪುವುದಕ್ಕೂ ಸರಿಹೋಯಿತು. ಒಳಗೆ ತೆರಳಲು ಹೊಳೆಬಾಗಿಲಿನಲ್ಲಿರುವ ಅರಣ್ಯ ಇಲಾಖೆಯ ಕಛೇರಿಯಿಂದ ಅನುಮತಿ ಪಡೆಯಬೇಕೆಂದು ನಮಗೆ ತಿಳಿದಿರಲಿಲ್ಲ. ಗೇಟು ತೆರೆದ ಆ ಸಿಬ್ಬಂದಿ, ನಾವೂ ಅದೇ ಗುಂಪಿನವರಿರಬಹುದೆಂದು ನಮ್ಮನ್ನೂ ಒಳಬಿಟ್ಟ. ಸಮ್ ಲಕ್!

ಈ 6ಕಿಮಿ ದಾರಿ ಕಚ್ಚಾ ರಸ್ತೆ. 4ಕಿಮಿ ಬಳಿಕ ರಸ್ತೆಯ ಮಧ್ಯದಲ್ಲೇ ಒಂದು ದೊಡ್ಡ ಮರ. ಅದಕ್ಕೊಂದು ಕಟ್ಟೆ. ಕಟ್ಟೆಯ ಮೇಲೆ ಬರೆದಿತ್ತು 'ಮಡೆನೂರು ಸಂತೆ ನಡೆಯುತ್ತಿದ್ದ ಸ್ಥಳ'. ಆಗಿನ ಮಡೆನೂರು ಹಳ್ಳಿಯೊಳಗಿನ ಪ್ರಮುಖ ವೃತ್ತ ಇದಾಗಿತ್ತು. ನಮ್ಮೊಂದಿಗಿದ್ದ ಬೈಕ್ ಯುವಕರು ಮುಂದೆ ಹೋಗಿದ್ದರಿಂದ ಅಲ್ಲಿ ನಾವಿಬ್ಬರೆ. ನೀರವ ಮೌನ. ತರಗೆಲೆಗಳಿಂದ ಆವೃತವಾಗಿದ್ದ ನೆಲ. ಬಲಕ್ಕೊಂದು ಕಲ್ಲು, ಹುಲ್ಲು, ಮುಳ್ಳುಗಳಿಂದ ಮುಚ್ಚಿಹೋಗಿದ್ದ ಕವಲೊಡೆದ ದಾರಿ. ಈ ದಾರಿಯಲ್ಲಿ ಸ್ವಲ್ಪ ದೂರ ನಡೆದು, ಆ ಮೌನ ಹೆದರಿಕೆ ಹುಟ್ಟಿಸುತ್ತಿದ್ದರಿಂದ ಮುಂದೆ ಸಾಗಲು ಧೈರ್ಯ ಸಾಲದೆ ಮರಳಿ ಕಟ್ಟೆ ಮೇಲೆ ಬಂದು ಕೂತೆವು. ಆಗಿನ ಕಾಲದಲ್ಲಿ ಅದು ಮಡೆನೂರಿನಿಂದ ತಾಳಗುಪ್ಪಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಾಗಿತ್ತು ಎಂದು ಎಲ್ಲೋ ಓದಿದ ನೆನಪು.

ಕಟ್ಟೆ ಮೇಲೆ ಕುಳಿತು ಸಂತೆ ಹೇಗೆ ಕಾಣುತ್ತಿರಬಹುದೆಂದು ಮಾತನಾಡತೊಡಗಿದೆವು. ನನಗಂತೂ ಆಗಿನ ಕಾಲದ ದಿರಿಸು ಧರಿಸಿದ್ದ ಜನರು 'ಏನು ಕೊಳ್ಳಲಿ' ಎಂದು ಯೋಚಿಸುತ್ತ ಕೈಯಲ್ಲೊಂದು ಚೀಲ ಹಿಡಿದು ಕೈಯನ್ನು ಹಿಂದಕ್ಕೆ ಕಟ್ಟಿ ನಿಧಾನವಾಗಿ ಅಚೀಚೆ ನಡೆದಾಡುವುದು, ತರಕಾರಿ-ಸೊಪ್ಪು ಇತ್ಯಾದಿಗಳನ್ನು ಮಾರಾಟ ಮಾಡುವ ಹೆಂಗಸರು, ಅವರೊಂದಿಗೆ ಖರೀದಿಸುವ ಸಲುವಾಗಿ ಚೌಕಾಶಿ ಮಾಡುತ್ತಿರುವವರು, ಕಟ್ಟೆ ಮೇಲೆ ಕುಳಿತು ಹರಟೆ ಹೊಡೆಯುತ್ತಿದ್ದ ಹಿರಿಯರು, ಅಲ್ಲೇ ಅಲೆದಾಡುತ್ತಿದ್ದ ಪಡ್ಡೆಗಳು, ಮಕ್ಕಳ ಚಿಲಿಪಿಲಿ, ಏನಾದರೂ ತಿನ್ನಲು ಸಿಗಬಹುದೋ ಎಂದು ಜೊಲ್ಲು ಸುರಿಸುತ್ತ ನಿಂತಿದ್ದ ದನಗಳು, ತಾಳಗುಪ್ಪ ರಸ್ತೆಯಲ್ಲಿ ಹೊರಡಲು ಅನುವಾಗಿ ನಿಂತಿದ್ದ ಎತ್ತಿನಗಾಡಿಗಳು ಇತ್ಯಾದಿಗಳ ಚಿತ್ರಣ ಮನದಲ್ಲಿ ಬರುತ್ತಿತ್ತು; ಎಲ್ಲಾ 55-60 ವರ್ಷಗಳ ಹಿಂದೆ ಮಡೆನೂರು ಎಂಬ ಸಮೃದ್ಧ ಹಳ್ಳಿಯ ತುಂಬಿದ ಸಂತೆಯಲ್ಲಿ.

5 ಗಂಟೆಯ ಹೊತ್ತಿಗೆ ಅಣೆಕಟ್ಟು ಇದ್ದಲ್ಲಿ ತಲುಪಿದೆವು. ನೀರಿನ ಮಟ್ಟ ಬಹಳ ಕಡಿಮೆ ಇದ್ದಿದ್ದರಿಂದ(ಮೊದಲ ಚಿತ್ರ ಮಡೆನೂರು ಹಿನ್ನೀರಿದ್ದು) ಬಹಳ ಮುಂದಿನವರೆಗೆ ಯಮಾಹ ಓಡಿತು. ಒಂದು ದಿಬ್ಬದ ಹಿಂದೆ ಅಣೆಕಟ್ಟು ಇದ್ದಿದ್ದರಿಂದ ಅದಿನ್ನೂ ನಮಗೆ ಕಾಣಿಸುತ್ತಿರಲಿಲ್ಲ. ದಿಬ್ಬದ ಈ ಬದಿಯಲ್ಲಿ ಮನೆ, ರಸ್ತೆಗಳಿದ್ದ ಕುರುಹುಗಳು. ಆಗಿನ ಕಾಲದ ಟಾರು ರಸ್ತೆ ಮಣ್ಣಿನಿಂದ ಮೇಲೆದ್ದು ಸ್ವಲ್ಪ ದೂರ ಸಾಗಿ ಮತ್ತೆ ಮಣ್ಣಿನೊಳಗೆ ಮಾಯವಾಗಿತ್ತು. ಈ ಟಾರು ರಸ್ತೆಯ ಮೇಲೆ ಬೈಕ್ ನಿಲ್ಲಿಸಿ ಅಣೆಕಟ್ಟಿನೆಡೆ ಹೆಜ್ಜೆ ಹಾಕಿದೆವು. ದಿಬ್ಬ ದಾಟಿ ಐದೇ ನಿಮಿಷದಲ್ಲಿ ನಾವು ಅಣೆಕಟ್ಟಿನ ಮೇಲಿದ್ದೆವು. ಪ್ರಥಮ ನೋಟದಲ್ಲೇ ಮಡೆನೂರು ಅಣೆಕಟ್ಟಿನ ಸೌಂದರ್ಯಕ್ಕೆ ನಾನು ಕ್ಲೀನ್ ಬೌಲ್ಡ್! ಐವತ್ತಕ್ಕೂ ಹೆಚ್ಚಿನ ವರ್ಷ ನೀರಿನಡಿ ಇದ್ದು, ಕಿಂಚಿತ್ತೂ ಹಾನಿಯಾಗದೇ ತನ್ನ ಒರಿಜಿನಲ್ ಸೌಂದರ್ಯವನ್ನು ಉಳಿಸಿಕೊಂಡು ಇನ್ನೂ ಗಟ್ಟಿಮುಟ್ಟಾಗಿರುವ ಈ ಅಣೆಕಟ್ಟು, ಸೈಫನ್ ಮಾದರಿ ಬಳಸಿ ನಿರ್ಮಿಸಿದ ಗಣೇಶ್ ಅಯ್ಯರ್ ಎಂಬವರ ನಿರ್ಮಾಣ ನೈಪುಣ್ಯತೆಗೆ ಸಾಕ್ಷಿ.
ಮುಂದುವರಿಯುವುದು...

2 ಕಾಮೆಂಟ್‌ಗಳು:

Srik ಹೇಳಿದರು...

Superb narration. Feels like me traveling there, along with u :)

McRand ಹೇಳಿದರು...
ಬ್ಲಾಗ್‌ನ ನಿರ್ವಾಹಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.