ಶುಕ್ರವಾರ, ಮಾರ್ಚ್ 02, 2007

ಇಲ್ಲೊಂದು ಜೋಗ!


ವಿಚಿತ್ರ ಹೆಸರಿನ ವಿಶಿಷ್ಟ ಜಲಪಾತ ಇದು. ವರ್ಷದ ಯಾವುದೇ ಸಮಯದಲ್ಲೂ ನೀರಿರುವ 'ಆಲ್ ಸೀಸನ್' ಜಲಪಾತ ಈ ಜೋಗ. ಸುಂದರ ಕಣಿವೆಯಲ್ಲಿ ನಾಲ್ಕು ಹಂತಗಳಲ್ಲಿ ಭೋರ್ಗರೆಯುತ್ತ ವರ್ಷದ ಎಲ್ಲಾ ಸಮಯದಲ್ಲಿ ತನ್ನನ್ನು ವೀಕ್ಷಿಸಲು ಬರುವವರನ್ನು ನಿರಾಸೆಗೊಳಿಸದ ಈ ಜಲಧಾರೆ, ಮಳೆಗಾಲ ಮತ್ತು ನಂತರದ ಎರಡು ತಿಂಗಳಲ್ಲಿ ತನ್ನ ಹತ್ತಿರ ಯಾರನ್ನೂ ಸುಳಿಯಲು ಬಿಡದಷ್ಟು ರೌದ್ರಾವತಾರವನ್ನು ತಾಳಿರುತ್ತದೆ.

ಮೊದಲ ಹಂತ ಸುಮಾರು ೨೦೦ ಅಡಿಯಷ್ಟು ಎತ್ತರವಿದ್ದು ೪ ಹಂತಗಳನ್ನು ಒಳಗೊಂಡಿದೆ. ನಂತರ ಸ್ವಲ್ಪ ಮುಂದೆ ಅಷ್ಟೇನು ಆಕರ್ಷಕವಲ್ಲದ ದ್ವಿತೀಯ ಹಂತ. ಸುಮಾರು ೧೩೦ ಕೋನದ ಆಕಾರದಲ್ಲಿ ರಭಸವಾಗಿ ಹರಿಯುವ ಈ ಹಂತ ತನ್ನ ಇಕ್ಕೆಲಗಳಲ್ಲಿ ಬಂಡೆಗಳನ್ನು ಹೊಂದಿರುವುದರಿಂದ ವಿಪರೀತ ಶಬ್ದವನ್ನು ಮಾಡುತ್ತಾ ತಾನು ತನ್ನ ೩ ಸೋದರರಿಗಿಂತ ಕಮ್ಮಿಯಿಲ್ಲ ಸದ್ದು ಮಾಡುವುದರಲ್ಲಾದರೂ ಎನ್ನುತ್ತಾ ಹರಿಯುತ್ತದೆ.


ನಂತರ ಮುಂದೆ ಕಣಿವೆಯಲ್ಲಿ ಇನ್ನಷ್ಟು ಆಳಕ್ಕೆ ೩ನೇ ಹಂತ ಧುಮುಕುತ್ತದೆ. ಈ ಹಂತವನ್ನು ತಳದಿಂದ ವೀಕ್ಷಿಸಬೇಕಾದಲ್ಲಿ ಸ್ವಲ್ಪ ಧೈರ್ಯ ಮಾಡಿ ಕೆಳಗಿಳಿಯಬೇಕಾಗುತ್ತದೆ. ಇದು ಸುಮಾರು ೮೦-೧೦೦ ಅಡಿ ಎತ್ತರವಿದ್ದು ನೇರವಾಗಿ ಧುಮುಕದೆ ಸ್ವಲ್ಪ ಓರೆಯಾಗಿ ಧುಮುಕುತ್ತದೆ. ನಂತರ ಸುಮಾರು ೧೫೦ ಆಡಿ ಆಳಕ್ಕೆ ನಾಲ್ಕನೇ ಹಂತ ಹಾರುತ್ತದೆ. ಈ ಹಂತದ ಮೇಲ್ಭಾಗದ ಪಾರ್ಶ್ವ ನೋಟ ಮಾತ್ರ ಲಭ್ಯ. ಬಹಳ ಆಳಕ್ಕೆ ಧುಮುಕುವ ನಾಲ್ಕನೇ ಹಂತದ ಸಂಪೂರ್ಣ ನೋಟ ಬೇಕಾದಲ್ಲಿ ಹಳ್ಳಗುಂಟ ನೀರಿನ ಹರಿವಿನ ವಿರುದ್ಧ ದಿಕ್ಕಿನಲ್ಲಿ ನಡೆದು ಮೇಲ್ಭಾಗಕ್ಕೆ ಬರಬೇಕಾಗುತ್ತದೆ. ಬೇಸಗೆಯಲ್ಲಿ ಈ ಚಾರಣ ಮಾಡುವ ಇರಾದೆ ಇದೆ.


ನಂತರ ಹಾಗೇ ಮುಂದೆ ಕಣಿವೆಯಲ್ಲಿ ಬಳುಕುತ್ತಾ ಹರಿಯುವ ಇಳಿಮನೆ ಹಳ್ಳ ಮುಂದೆ ಅಘನಾಶಿನಿ ನದಿಯನ್ನು ಸೇರುತ್ತದೆ. ೩ನೇ ಹಂತದ ಬದಿಯಿಂದ ಇಳಿಮನೆ ಹಳ್ಳ ಕಣಿವೆಯಲ್ಲಿ ಮುಂದಕ್ಕೆ ಹರಿಯುವ ದೃಶ್ಯ ಸುಂದರ.

ಮಾಹಿತಿ: ಅ.ನಾ.ರಾವ್ ಜಾದವ್

ಕಾಮೆಂಟ್‌ಗಳಿಲ್ಲ: