ಗುರುವಾರ, ಜನವರಿ 25, 2007

ಕರ್ನಾಟಕ ಕ್ರಿಕೆಟ್ - ೪

ಈಗಾಗಲೇ ರಾಜ್ಯ ತಂಡವನ್ನು ರಣಜಿ ಪಂದ್ಯಾಟಗಳಲ್ಲಿ ಪ್ರತಿನಿಧಿಸಿದ ಮತ್ತು ಮುಂದೆ ಪ್ರತಿನಿಧಿಸಬಹುದಾದ ಕೆಲವು ಪ್ರತಿಭಾವಂತ ಯುವ ಆಟಗಾರರೆಡೆ ಒಂದು ನೋಟ.

ಸುಧೀಂದ್ರ ಪ್ರಕಾಶ್ ಶಿಂದೆ: ಕೆ.ಎಸ್.ಸಿ.ಎ ಬೆಂಗಳೂರು ಲೀಗ್ ನಲ್ಲಿ ಸೋಷಲ್ ಕ್ರಿಕೆಟರ್ಸ್ ಪರವಾಗಿ ಆಡುವ ೨೬ ವರ್ಷ ವಯಸ್ಸಿನ ಸುಧೀಂದ್ರ ಶಿಂದೆ ಭರವಸೆ ಮೂಡಿಸಿದ ಉತ್ತಮ ದಾಂಡಿಗ. ಪ್ರಭಾವೀ ಸಂಪರ್ಕವುಳ್ಳ ಅಪ್ಪಂದಿರು ತಮ್ಮ ಮಕ್ಕಳನ್ನು ಆಡಿಸಲು ಮಾಡಿದ ಕುತಂತ್ರಗಳಿಂದಾಗಿ ಶಿಂದೆಗೆ ಸತತ ಅವಕಾಶಗಳು ಸಿಗಲಿಲ್ಲ. ಸಿಕ್ಕ ಅವಕಾಶಗಳನ್ನು ಬಹಳಷ್ಟು ಮಟ್ಟಿಗೆ ಸದುಪಯೋಗವೂ ಮಾಡಿಕೊಳ್ಳಲಿಲ್ಲ. ಪ್ರಸಿದ್ಧ ಆಪ್ಪಂದಿರ ತಗಡು ಮಕ್ಕಳನ್ನು ಆಡಿಸುವ ಅನಿವಾರ್ಯತೆ ಇದ್ದಿದ್ದರಿಂದ ಶಿಂದೆ ತನ್ನ ಚೊಚ್ಚಲ ಪಂದ್ಯವನ್ನು ಆಡಲು ಒಂದು ವರ್ಷ ಕಾಯಬೇಕಾಯಿತು. ಪರೀಕ್ಷೆಯಲ್ಲಿ ಅನುತ್ತೀರ್ಣನಾಗದೆ ಮುಂದಿನ ಹಂತಕ್ಕೆ ತೆರಳಲು ಒಂದು ವರ್ಷ ಕಾಯಬೇಕಾದ ಅಸಹನೀಯ ಅನಿವಾರ್ಯತೆ! ೨೦೦೨-೦೩ ಋತುವಿನಲ್ಲಿ ಬೆಂಗಳೂರಿನಲ್ಲಿ ನಡೆದ ಪ್ಲೇಟ್ ಲೀಗ್ ಫೈನಲ್ ಪಂದ್ಯದಲ್ಲಿ ಕೇರಳ ವಿರುದ್ಧ ರಣಜಿಗೆ ಪಾದಾರ್ಪಣ ಮಾಡಿದ ಶಿಂದೆ, ೮೪ ಓಟಗಳನ್ನು ಗಳಿಸುವುದರೊಂದಿಗೆ ಪ್ರಥಮ ಪಂದ್ಯದಲ್ಲೇ ಉತ್ತಮ ನಿರ್ವಹಣೆ ತೋರಿದ್ದರು. ೨೦೦೩-೦೪ ಋತುವಿನಲ್ಲಿ ೪ ಪಂದ್ಯಗಳಲ್ಲಾಡಿದ ಶಿಂದೆ, ೧೮.೧೬ ಸರಾಸರಿಯಲ್ಲಿ ಕೇವಲ ೧೦೯ ಓಟಗಳನ್ನು ಗಳಿಸಿ ವಿಫಲರಾದರು. ೨೦೦೪-೦೫ರಲ್ಲಿ ಆಡಿದ ೩ ಪಂದ್ಯಗಳಲ್ಲಿ ಹೇಳಿಕೊಳ್ಳುವಂತಹ ವಿಶೇಷ ಪ್ರದರ್ಶನ ಶಿಂದೆ ಮಾಡಲಿಲ್ಲ. ನಂತರ ೨೦೦೫-೦೬ರಲ್ಲಿ ಎಲ್ಲಾ ೭ ಪಂದ್ಯಗಳಲ್ಲೂ ಆಡಿದ ಶಿಂದೆ ೨೦.೭೭ ಸರಾಸರಿಯ ಕಳಪೆ ಪ್ರದರ್ಶನ ನೀಡಿದರು. ಈ ಋತುವಿನಲ್ಲಿ ಸಿಕ್ಕಿದ ಅವಕಾಶಗಳ ಸದುಪಯೋಗ ಮಾಡಿಕೊಂಡಿದ್ದರೆ ಶಿಂದೆ ಕರ್ನಾಟಕ ತಂಡದಲ್ಲಿ ತನ್ನ ಸ್ಥಾನವನ್ನು ಭದ್ರ ಮಾಡಿಕೊಳ್ಳಬಹುದಾಗಿತ್ತು. ಪ್ರಸಕ್ತ ಋತುವಿನಲ್ಲಿ ಶಿಂದೆ ತಂಡಕ್ಕೆ ಆಯ್ಕೆಯಾಗಲಿಲ್ಲ.

ಕೇಕಡ ಶ್ಯಾಮ್ ಪೊನ್ನಪ್ಪ: ಕೆ.ಎಸ್.ಸಿ.ಎ ಬೆಂಗಳೂರು ಲೀಗ್ ನಲ್ಲಿ ವಿಜಯಾ ಬ್ಯಾಂಕ್ ಪರವಾಗಿ ಆಡುವ ಶ್ಯಾಮ್ ಒಬ್ಬ ಆರಂಭಿಕ ದಾಂಡಿಗ. ಬೌಲರ್ ಗಳನ್ನು ಬೇಕಾಬಿಟ್ಟಿ ದಂಡಿಸುವುದೇ ದಾಂಡಿಗರ ಪ್ರಥಮ ಕರ್ತವ್ಯ ಎಂಬುದು ೨೭ರ ಹರೆಯದ ಶ್ಯಾಮ್ ಪೊನ್ನಪ್ಪನ ಬಲವಾದ ನಂಬಿಗೆ. ಅವರು ಆಡುವುದೇ ಹಾಗೆ. ಹಾಗಾಗಿಯೇ ಇವರಿಂದ ಚಚ್ಚಿಸಿಕೊಂಡ ಬೆಂಗಳೂರು ಲೀಗ್ ನ ಬೌಲರ್ ಗಳು 'ಅತ್ತ ಉತ್ತಪ್ಪ ಇತ್ತ ಪೊನ್ನಪ್ಪ ರಕ್ಷಣೆ ಎಲ್ಲಪ್ಪ' ಎನ್ನುತ್ತಾರೆ. ಲೀಗ್ ಪಂದ್ಯಗಳಲ್ಲಿ ಮನಸೋ ಇಚ್ಛೆ ಓಟಗಳನ್ನು ಸೂರೆಗೈದ ಶ್ಯಾಮ್ ಅದೇಕೋ ಕರ್ನಾಟಕದ ಪರವಾಗಿ ರಣಜಿ ಪಂದ್ಯಾಟಗಳಲ್ಲಿ ಆಡುವಾಗ ವೈಫಲ್ಯವನ್ನು ಕಂಡರು. ಚೊಚ್ಚಲ ಪಂದ್ಯವನ್ನು ೨೨ರ ಹರೆಯದಲ್ಲಿ ೨೦೦೧-೦೨ ಋತುವಿನಲ್ಲಿ ಅಂಧ್ರದ ವಿರುದ್ಧ ಕರ್ನೂಲ್ ನಲ್ಲಿ ಆಡಿದ ಶ್ಯಾಮ್ ೧೬ ಮತ್ತು ಅಜೇಯ ೯ ಓಟಗಳನ್ನು ಗಳಿಸಿದರು. ಆಡಿದ ೩ ಪಂದ್ಯಗಳಲ್ಲಿ ೨೮.೨೫ ಸರಾಸರಿಯೊಂದಿಗೆ ೧೧೩ ಓಟಗಳು. ೨೦೦೨-೦೩ರಲ್ಲಿ ೨ ಪಂದ್ಯಗಳಲ್ಲಿ ೧೨.೦೦ ಸರಾಸರಿ. ಈ ವೈಫಲ್ಯಗಳಿಂದ ಶ್ಯಾಮ್ ೨೦೦೩-೦೪ರಲ್ಲಿ ಆಯ್ಕೆಯಾಗಲಿಲ್ಲ. ಲೀಗ್ ನಲ್ಲಿ ನೀಡಿದ ಉತ್ತಮ ಪ್ರದರ್ಶನದಿಂದ ೨೦೦೪-೦೫ರಲ್ಲಿ ಮತ್ತೆ ಆಯ್ಕೆಯಾದ ಶ್ಯಾಮ್ ಆಡಿದ ೨ ಪಂದ್ಯಗಳಲ್ಲಿ ೧೩.೦೦ ಸರಾಸರಿಯಂತೆ ೫೨ ಓಟಗಳನ್ನು ಗಳಿಸಿ ಮತ್ತೆ ವಿಫಲರಾದರು. ನಂತರ ಅವರು ಅಯ್ಕೆಯಾಗಿಲ್ಲ. ಸ್ವಲ್ಪ ಸಂಯಮದಿಂದ ಆಡಿ ಸಿಕ್ಕ ಅವಕಾಶಗಳ ಸದುಪಯೋಗ ಮಾಡಿಕೊಂಡಿದಿದ್ದರೆ ಕರ್ನಾಟಕಕ್ಕೆ ಒಬ್ಬ ಹೊಡೆಬಡಿಯ ಆರಂಭಿಕ ದಾಂಡಿಗ ಸಿಗುತ್ತಿದ್ದ.

ಕೆ.ಬಿ.ಪವನ್: ೧೯ರ ಹರೆಯದ ಮೈಸೂರಿನ ಹುಡುಗ ಪವನ್ ಒಬ್ಬ ವಿಕೆಟ್ ಕೀಪರ್ ಬ್ಯಾಟ್ಸ್ ಮನ್. ಕರ್ನಾಟಕದ ಪರವಾಗಿ ಅಂಡರ್-೧೫, ಅಂಡರ್-೧೭ ಮತ್ತು ಅಂಡರ್-೧೯ ಹೀಗೆ ಎಲ್ಲಾ ವಯಸ್ಸಿನ ಕಿರಿಯರ ಪಂದ್ಯಾಟಗಳಲ್ಲಿ ಆಡಿ ಅತ್ಯುತ್ತಮ ನಿರ್ವಹಣೆ ನೀಡಿ ಆಯ್ಕೆಗಾರರ ಗಮನ ಸೆಳೆದರು. ಕರ್ನಾಟಕ ತಂಡದಲ್ಲಿ ಇಬ್ಬರು ರೆಗ್ಯುಲರ್ ವಿಕೆಟ್ ಕೀಪರ್ ಗಳಿದ್ದರೂ (ತಿಲಕ್ ನಾಯ್ಡು ಮತ್ತು ದೇವರಾಜ್ ಪಾಟೀಲ್) ತನ್ನ ಭರ್ಜರಿ ಬ್ಯಾಟಿಂಗ್ ಪ್ರದರ್ಶನದಿಂದ ಒಬ್ಬ ದಾಂಡಿಗನಾಗಿಯೇ ರಣಜಿ ತಂಡಕ್ಕೆ ಆಯ್ಕೆಯಾಗಿದ್ದು ಪವನ್ ಹೆಗ್ಗಳಿಕೆ. ಕೆ.ಎಸ್.ಸಿ.ಎ ಮೈಸೂರು ಲೀಗ್ ನಲ್ಲಿ ಸರಸ್ವತಿಪುರಮ್ ಕ್ರಿಕೆಟ್ ಕ್ಲಬ್ ಪರವಾಗಿ ಆಡುವ ಪವನ್ ಅಲ್ಲಿ ತೋರಿದ ಉತ್ತಮ ನಿರ್ವಹಣೆಯಿಂದ ಮೈಸೂರು ವಲಯಕ್ಕೆ ಆಯ್ಕೆಯಾದರು. ಕೆ.ಎಸ್.ಸಿ.ಎ ನಡೆಸುವ ಶಫಿ ದಾರಾಶಾಹ ಟ್ರೋಫಿಗಾಗಿ ನಡೆಯುವ ಅಂತರ್ ವಲಯ ಪಂದ್ಯಾಟಗಳಲ್ಲಿ ಮೈಸೂರು ವಲಯದ ಪರವಾಗಿ ಆಡಿ ತೋರಿದ ಉತ್ತಮ ನಿರ್ವಹಣೆ ಆಯ್ಕೆಗಾರರಿಗೆ ಪವನ್ ಬಗ್ಗೆ ಇದ್ದ ಅಲ್ಪ ಸ್ವಲ್ಪ ಶಂಕೆಗಳನ್ನು ಕೂಡಾ ದೂರ ಮಾಡಿತು. ಸರಸ್ವತಿಪುರಮ್ ಕ್ರಿಕೆಟ್ ಕ್ಲಬ್, ಮೈಸೂರು ವಲಯ ಮತ್ತು ರಾಜ್ಯ ಕಿರಿಯರ ತಂಡದ ಪರವಾಗಿ ಆಡುವ ಎಲ್ಲಾ ಪಂದ್ಯಗಳಲ್ಲೂ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಆಗಿ ಆಡಿದ್ದ ಪವನ್, ತನ್ನ ಚೊಚ್ಚಲ ರಣಜಿ ಪಂದ್ಯವನ್ನು ಒಬ್ಬ ಬ್ಯಾಟ್ಸ್ ಮನ್ ಆಗಿ ಆಡಿದ್ದು ವಿಶೇಷ. ಇಲ್ಲಿ ಆಯ್ಕೆಗಾರರನ್ನು ಮೆಚ್ಚಬೇಕು. ರಣಜಿ ಸೆಮಿಫೈನಲ್ ನಂತಹ ಪ್ರಮುಖ ಪಂದ್ಯದಲ್ಲಿ ೧೯ರ ಹರೆಯದ ಹುಡುಗನೊಬ್ಬನಿಗೆ ಆಡಿಸಿದ್ದು ಪವನ್ ಆಟದ ಮೇಲೆ ಆಯ್ಕೆಗಾರರಿಗಿರುವ ನಂಬಿಕೆಯನ್ನು ತೋರಿಸುತ್ತದೆ. ಪವನ್ ತನ್ನ ಪ್ರಥಮ ಪಂದ್ಯದಲ್ಲಿ ಎಷ್ಟೇ ಓಟಗಳನ್ನು ಗಳಿಸಲಿ ಅದು ಮುಖ್ಯವಲ್ಲ. ಆ ಪಂದ್ಯದ ಪ್ರಾಮುಖ್ಯತೆ, ಗೆಲ್ಲಲೇಬೇಕಾದ ಅನಿವಾರ್ಯತೆ ಇರುವುದರಿಂದ ಚೆನ್ನಾಗಿ ಆಡಲೇಬೇಕಾದ ಒತ್ತಡ (ಲೀಗ್ ಹಂತದಲ್ಲಾದರೆ ಒಂದು ಪಂದ್ಯ ಸೋತರೆ ಮುಂದಿನ ಪಂದ್ಯ ಗೆಲ್ಲುವ ಪ್ರಯತ್ನ ಮಾಡಬಹುದು) ಮತ್ತು ದೂರದ ಬಂಗಾಲದಲ್ಲಿ ಆಡುವ ಅನುಭವ ಇವೆಲ್ಲಾ ಪವನ್ ಗೆ ತನ್ನ ಚೊಚ್ಚಲ ಪಂದ್ಯದಲ್ಲೇ ಅನುಭವವಾಗುತ್ತಿರುವುದು ಆತನ ಕ್ರಿಕೆಟ್ ಬೆಳವಣಿಗೆ ದೃಷ್ಟಿಯಲ್ಲಿ ಒಳ್ಳೆಯದು.

ಶ್ರೀನಿವಾಸ ಧನಂಜಯ: ೨೪ರ ಹರೆಯದ ಧನಂಜಯ್ ಮೈಸೂರಿನವರು. ಸ್ವಲ್ಪ ತಡವಾಗಿ ಕ್ರಿಕೆಟ್ ನಲ್ಲಿ ಯಶಸ್ಸು ಕಂಡವರು. ಕೆ.ಎಸ್.ಸಿ.ಎ ಮೈಸೂರು ಲೀಗ್ ನಲ್ಲಿ ಇವರು ಮೈಸೂರು ವಿಶ್ವವಿದ್ಯಾನಿಲಯ ಸಾಂಸ್ಕೃತಿಕ ಮತ್ತು ಕ್ರೀಡಾ ಸಂಘ (ಕ್ಲಬ್) ಪರವಾಗಿ ಆಡುತ್ತಾರೆ. ಇವರ ಆಯ್ಕೆ ಅನಿರೀಕ್ಷಿತ. ತಂಡದಲ್ಲಿ ಈಗಾಗಲೇ ೩ ವೇಗದ ಬೌಲರ್ ಗಳಿರುವಾಗ ಇವರ ಆಯ್ಕೆಯ ನಿರೀಕ್ಷೆ ಇರಲಿಲ್ಲ. ಅಖಿಲ್ ಮತು ರಾಜು ಭಟ್ಕಲ್ ಇಬ್ಬರದ್ದೂ ಮಧ್ಯಮ ವೇಗದ ಬೌಲಿಂಗ್. ಕೋಚ್ ವೆಂಕಿಗೆ ವಿನಯ್ ಕುಮಾರ್ ರಂತೆಯೇ ವೇಗದ ಬೌಲರ್ ಬೇಕಿತ್ತು ಮತ್ತು ಅದಕ್ಕಾಗಿಯೇ ಅವರು ಹಟ ಮಾಡಿದಾಗ ಆಯ್ಕೆಗಾರರು ಅಂತರ್ ವಲಯ ಪಂದ್ಯಾಟಗಳಲ್ಲಿ ಮೈಸೂರು ವಲಯದ ಪರವಾಗಿ ಆಡಿ ಉತ್ತಮ ನಿರ್ವಹಣೆ ತೋರಿದ್ದ ಧನಂಜಯರನ್ನು ಆಯ್ಕೆ ಮಾಡಿ ಕೋಲ್ಕತ್ತಾಗೆ ಕಳಿಸಿದರು. ಕಿರಿಯರ ಪಂದ್ಯಾಟಗಳಲ್ಲಿ ರಾಜ್ಯದ ಪರವಾಗಿ ಧನಂಜಯ ಆಡಿರುವುದು ನನಗೆ ತಿಳಿದಿಲ್ಲ. ಆದರೆ ಶಫಿ ದಾರಾಶಹ ಅಂತರ್ ವಲಯ ಪಂದ್ಯಾಟಗಳಲ್ಲಂತೂ ಉತ್ತಮ ಬೌಲಿಂಗ್ ಪ್ರದರ್ಶನ ಕಳೆದ ೨-೩ ವರ್ಷಗಳಿಂದ ನೀಡಿದ್ದರು. ಮೈಸೂರು ಮತ್ತು ಧಾರವಾಡ ಲೀಗ್ ತಂಡಗಳ ಕೆಲವು ಉತ್ತಮ ಆಟಗಾರರನ್ನು ಒಳಗೊಂಡ ತಂಡವನ್ನು 'ಬ್ಯಾಂಗಲೋರ್ ಒಕೇಶನಲ್ಸ್' ಎಂಬ ಹೆಸರಿನಡಿ ಕೆಲವೊಮ್ಮೆ ಕೆ.ಎಸ್.ಸಿ.ಎ ಬೆಂಗಳೂರು ಲೀಗ್ ನಲ್ಲಿ ಆಡಿಸಲಾಗುತ್ತದೆ. ಈ ತಂಡದ ಪರವಾಗಿ ಆಡಿ ಧನಂಜಯ ಬೆಂಗಳೂರು ಲೀಗ್ ನ ತಂಡಗಳ ನುರಿತ ಬ್ಯಾಟ್ಸ್ ಮನ್ ಗಳನ್ನು ತೊಂದರೆಗೆ ಸಿಲುಕಿಸಿದ್ದನ್ನೂ ಆಯ್ಕೆಗಾರರು ಗಮನಿಸಿದ್ದಿರಬಹುದು. ಅದೇನಿದ್ದರೂ ಧನಂಜಯ ತನ್ನ ಚೊಚ್ಚಲ ಪಂದ್ಯದಲ್ಲಿ ಉತ್ತಮ ನಿರ್ವಹಣೆಯನ್ನೇ ನೀಡಿದ್ದಾರೆ.

ಅಮಿತ್ ವರ್ಮ: ಅಮಿತ್ ಒಬ್ಬ ಬಲಗೈ ದಾಂಡಿಗ ಮತ್ತು ಉಪಯುಕ್ತ ಆಫ್ ಸ್ಪಿನ್ ಎಸೆಗಾರನೂ ಹೌದು. ಈತ ಕೆ.ಎಸ್.ಸಿ.ಎ ಬೆಂಗಳೂರು ಲೀಗ್ ನಲ್ಲಿ ಆಡುವುದು ಸ್ವಸ್ತಿಕ್ ಯುನಿಯನ್ ಎರಡನೇ ತಂಡಕ್ಕಾಗಿ. ಕಳೆದ ಒಂದೆರಡು ವರ್ಷಗಳಿಂದ ಅತ್ಯುತ್ತಮ ನಿರ್ವಹಣೆ ನೀಡಿರುವ ಅಮಿತ್ ರನ್ನು ಆಯ್ಕೆಗಾರರು ಈ ಋತುವಿನ ರಣಜಿ ಸೆಮಿಫೈನಲ್ ಪಂದ್ಯಕ್ಕೆ ಆಯ್ಕೆ ಮಾಡಿದ್ದಾರೆ. ಅಮಿತ್ ತನ್ನ ಚೊಚ್ಚಲ ಪಂದ್ಯಕ್ಕಾಗಿ ಸ್ವಲ್ಪ ಕಾಯಬೇಕಾಗಬಹುದು. ಕಿರಿಯ ಪಂದ್ಯಾಟಗಳಲ್ಲಿ ರಾಜ್ಯವನ್ನು ಪ್ರತಿನಿಧಿಸಿ ಉತ್ತಮ ನಿರ್ವಹಣೆ ತೋರಿದ್ದಾರೆ. ಇವರ ಆಯ್ಕೆಯ ಉದ್ದೇಶ ತನ್ನ ಪ್ರತಿಭೆಗೆ ತಕ್ಕದಾಗಿ ಆಡದೇ ಇರುವ್ ದೀಪಕ್ ಚೌಗುಲೆಗೆ ಸ್ವಲ್ಪ ನಯವಾದ ಎಚ್ಚರಿಕೆ ನೀಡುವುದಿರಬಹುದು ಮತ್ತು ಜೊತೆಗೆ ಒಂದು ಪ್ರಮುಖ ಪಂದ್ಯವನ್ನು ಹತ್ತಿರದಿಂದ ವೀಕ್ಷಿಸಿ ಸ್ವಲ್ಪ ಅನುಭವ ಗಳಿಸುವ ಇರಾದೆಯೂ ಇರಬಹುದು. ಮುಂದಿನ ಋತುವಿನಲ್ಲಂತೂ ಅಮಿತ್ ಕರ್ನಾಟಕಕ್ಕಾಗಿ ಆಡುವ ಎಲ್ಲಾ ಸಾಧ್ಯತೆಗಳಿವೆ.

ಶುಕ್ರವಾರ, ಜನವರಿ 19, 2007

ದೇವಕಾರ - ಶಾಪಗ್ರಸ್ತ ಸ್ವರ್ಗ


ಸುಮಾರು ೩ ವರ್ಷಗಳ ಹಿಂದೆ ಉದಯವಾಣಿಯಲ್ಲಿ ದೇವಕಾರದ ಬಗ್ಗೆ ಸೀತಾರಾಮ ಭಟ್ಟರ ಲೇಖನವೊಂದು ಬಂದಿತ್ತು. ದೇವಕಾರಿಗೆ ಭೇಟಿ ನೀಡಬೇಕೆಂದು ಅಂದೇ ನಿರ್ಧರಿಸಿಯಾಗಿತ್ತು.

ನನ್ನ ೩ ಭೇಟಿಗಳಲ್ಲಿ ಮೊದಲ ಭೇಟಿಯೇ ಅವಿಸ್ಮರಣೀಯ. ಅಕ್ಟೋಬರ್ ೨, ೨೦೦೪ರಂದು ನಾವು ದೇವಕಾರ ಕಡವು ತಲುಪಿದಾಗ ಸಂಜೆ ೫ ಆಗಿತ್ತು. ದೋಣಿಯವನಿಗೆ 'ಕೂ' ಹಾಕಿ, ಆತ ಬಂದು ನಮ್ಮನ್ನು ಕದ್ರಾ ಹಿನ್ನೀರು ದಾಟಿಸಿ, ನಾವು ದೇವಕಾರ ಹಳ್ಳಿಯೊಳಗೆ ಪ್ರವೇಶಿಸಿದಾಗ ೬.೦೦ ದಾಟಿತ್ತು. ಗೆಳೆಯ ಲಕ್ಷ್ಮೀನಾರಾಯಣನಿಗೆ ರಾತ್ರಿಯ ಊಟ ಮತ್ತು ಮಲಗುವ ಸ್ಥಳದ ಬಗ್ಗೆ ಚಿಂತೆ. ದೋಣಿಯವನಲ್ಲಿ 'ಮಧುಕರ್ ಕಳಸ್' ಬಗ್ಗೆ ಕೇಳಿದಾಗ ಆತ ಮುಂದೆ ಹೋಗಿ ಅಲ್ಲಿ ಸಿಗುತ್ತಾರೆ ಎಂದು ನಮ್ಮನ್ನು ಸಾಗಹಾಕಿದ.

ಮುಂದೆ ಮನೆಯೊಂದರಿಂದ ಹತ್ತಾರು ಜನರು ಜೋರಾಗಿ ಮಾತಾಡುವ ಸದ್ದು. ನಮ್ಮನ್ನು ನೋಡಿದ ಕೂಡಲೇ ಮಾತು ಬಂದ್. ಸುಮಾರು ೨೦ರಷ್ಟು ಕಣ್ಣುಗಳು ನಮ್ಮನ್ನೇ ದಿಟ್ಟಿಸಿ ನೋಡುತ್ತಿದ್ದವು. ಮಧುಕರ್ ಅಲ್ಲೇ ಇದ್ದರು. ಅವರ ಪರಿಚಯವಾಗಿ ನಂತರ ನಮ್ಮನ್ನೂ ಅಲ್ಲೇ ಕುತ್ಕೊಳ್ಳಿಸಿ ಮಾತುಕತೆ ಮುಂದುವರಿಯಿತು. ಮಾತುಕತೆ ನಿಧಾನವಾಗಿ ದೇವಕಾರದ ಕಡೆ ತಿರುಗಿತು.

ದೇವಕಾರಿನಲ್ಲಿ ರಸ್ತೆಗಳಿಲ್ಲ, ಅಂಗಡಿಗಳಿಲ್ಲ, ವಿದ್ಯುತ್ ಸಂಪರ್ಕವಿಲ್ಲ, ವಾಹನಗಳಿಲ್ಲ, ದೂರವಾಣಿ ಇಲ್ಲ, ಆಸ್ಪತ್ರೆಯಿಲ್ಲ ಮತ್ತು ನಾಲ್ಕನೇ ತರಗತಿಯ ನಂತರ ಶಾಲೆಯಿಲ್ಲ. ಹೆಚ್ಚಿನ ಹಳ್ಳಿಗರು ನಾಲ್ಕನೆ ತರಗತಿಯ ತನಕ ಓದಿದವರು. ಸುಮಾರು ೩೫೦ರಷ್ಟು ಜನಸಂಖ್ಯೆಯುಳ್ಳ ಪುಟ್ಟ ಗ್ರಾಮವಿದು. ಒಂದು ಕಡೆಯಿಂದ ಕದ್ರಾ ಜಲಾಶಯದ ಹಿನ್ನೀರು, ಮತ್ತೊಂದು ಕಡೆಯಿಂದ ಕೊಡಸಳ್ಳಿ ಜಲಾಶಯದ ಹಿನ್ನೀರು ಮತ್ತು ಮಗದೊಂದು ಕಡೆಯಿರುವುದೇ ಕೈಗಾ ಎಂಬ ಅಣುಭೂತ. ಯಲ್ಲಾಪುರ ತಾಲೂಕಿನ ಬಾರೆ ಸಮೀಪದಿಂದ ೩ ತಾಸುಗಳ ಕಾಲುದಾರಿಯಿದೆ ದೇವಕಾರಿಗೆ. ಇರುವ ನೇರ ಸಂಪರ್ಕವೆಂದರೆ ಇದೊಂದೆ. ಹಳ್ಳಿಗರ ಜೀವನ ಭತ್ತದ ಒಂದು ಬೆಳೆಯ ಮೇಲೆ ನಿರ್ಭರ. ಕೈಗಾದಿಂದ ವಿದ್ಯುತ್ ತಂತಿಗಳು 'ಸುಂಯ್' ಎಂದು ಶಬ್ದ ಮಾಡುತ್ತಾ ದೇವಕಾರ್ ಮೂಲಕ ಹಾದುಹೋದರೂ ಇಲ್ಲಿ ವಿದ್ಯುತ್ ಸಂಪರ್ಕ ಇಲ್ಲ!

ಇಲ್ಲಿಗಿರುವುದು ಕೂಡಾ ಒಂದೇ ಬಸ್. ರಾತ್ರಿ ೮-೮.೩೦ ರ ಸುಮಾರಿಗೆ ಕದ್ರಾದಿಂದ ಹೊರಡುವ ಈ ಬಸ್ಸು ಸುಮಾರು ೯-೯.೧೫ಕ್ಕೆ ದೇವಕಾರು ಕಡವಿನಿಂದ ಒಂದು ಕಿಮಿ ದೂರವಿರುವ ಬಸ್ ನಿಲ್ದಾಣದಲ್ಲಿ ಹಳ್ಳಿಗರನ್ನು ಇಳಿಸಿ ಹಾಗೆ ಮುಂದೆ ಕೊಡಸಳ್ಳಿಗೆ ತೆರಳಿ ಅಲ್ಲೇ ಹಾಲ್ಟ್. ಮರುದಿನ ಮುಂಜಾನೆ ೬.೧೫ರ ಸುಮಾರಿಗೆ ದೇವಕಾರು ಕಡವಿನ ಸಮೀಪದಿಂದ ಹಾದುಹೋಗುತ್ತದೆ. ಮುಂಜಾನೆಯ ಈ ಬಸ್ಸಿಗಾಗಿ ೫ ಗಂಟೆಗೇ ದೋಣಿಯವನನ್ನು ಎಬ್ಬಿಸಿ ಕರ್ರಗೆ ಭಯಾನಕವಾಗಿ ಕಾಣುವ ಕಾಳಿ ಹಿನ್ನೀರನ್ನು ದಾಟಿ ನಂತರ ೧ ಕಿಮಿ ನಡೆದು ರಸ್ತೆಯ ಬಳಿ ಬರಬೇಕು. ಈ ಬಸ್ಸು ಎಲ್ಲಾದರೂ ತಪ್ಪಿದರೆ ೨೫ಕಿಮಿ ನಡೆದೇ ಕದ್ರಾ ತಲುಪಬೇಕು ಅಥವಾ ಮರಳಿ ನಾಳೆ ಬರಬೇಕು. ಈ ಬಸ್ಸಿನಲ್ಲಿ ಕದ್ರಾಕ್ಕೆ ತೆರಳಿ ಮುಂಜಾನೆ ೧೦-೧೧ರ ಹಾಗೆ ತಮಗಿದ್ದ ಎಲ್ಲಾ ಕೆಲಸಗಳನ್ನು ಮುಗಿಸಿ ಮರಳಿ ಬರಲು ಹಳ್ಳಿಗರು ಮತ್ತೆ ರಾತ್ರಿ ೮.೩೦ರ ವರೆಗೆ ಕಾಯಬೇಕು! ರಾತ್ರಿ ಸುಮಾರು ೯.೩೦ಕ್ಕೆ ಕಡವಿನ ಬಳಿ ಆಗಮಿಸಿ ಮತ್ತದೇ ಪೆಟ್ರೊಮ್ಯಾಕ್ಸ್ ದೀಪದ ಸಹಾಯದಿಂದ ಕತ್ತಲಲ್ಲಿ ದೋಣಿಯಲ್ಲಿ ಹಿನ್ನೀರು ದಾಟುವುದು.

ಸಂಸದರಾಗಿದ್ದ ದಿವಂಗತ ವಸಂತ ಕುಮಾರ್ ಅಸ್ನೋಟಿಯವರು ದೇವಕಾರಿನ ಪುನರ್ವಸತಿಗೆ ಪ್ರಯತ್ನ ಮಾಡುತ್ತಿದ್ದರು. ಅವರ ಮರಣದ ನಂತರ ಈ ಹಿಂದೆ ಜಿಲ್ಲಾಧಿಕಾರಿಯಾಗಿದ್ದ ರಾಕೇಶ್ ಶರ್ಮರವರು ಜನರ ಪುನರ್ವಸತಿಗೆ ಯತ್ನಿಸುತ್ತಿದ್ದರು. ಇವರಿಗೆ ವರ್ಗವಾದ ನಂತರ ಯಾರಿಗೂ ದೇವಕಾರದಲ್ಲಿರುವವರ ಬಗ್ಗೆ ಆಸಕ್ತಿ ಇಲ್ಲ. ಹತ್ತು ವರ್ಷಗಳ ಮೊದಲು ಕೈಗಾ ಕೇವಲ ಒಂದು ತಾಸಿನ ನಡಿಗೆಯಾಗಿತ್ತು. ಆದರೆ ಅಣುಸ್ಥಾವರ ಬಂದ ಮೇಲೆ ಆ ದಾರಿಯಲ್ಲಿ ತಿರುಗಾಟ ನಿಷೇಧಿಸಲಾಗಿದೆ. ಕದ್ರಾಗೆ ಇದ್ದ ನೇರ ರಸ್ತೆ ಸಂಪರ್ಕವನ್ನು ಕದ್ರಾ ಆಣೆಕಟ್ಟು ನುಂಗಿಹಾಕಿತು. ಯಲ್ಲಾಪುರಕ್ಕೆ ಇದ್ದ ಸಂಪರ್ಕ ಕೊಡಸಳ್ಳಿ ಆಣೆಕಟ್ಟಿನಿಂದ ಕಡಿದುಹೋಯಿತು. ದೇವಕಾರದ ಈ ತ್ರಿಶಂಕು ಸ್ಥಿತಿಗೆ ತನ್ನ ಆಣುಸ್ಥಾವರ ಪರೋಕ್ಷವಾಗಿ ಕಾರ್‍ಅಣವಾಗಿದೆ ಎಂಬುದನ್ನು ಅರಿತಿರುವ ಕೈಗಾ ಅಣುಸ್ಥಾವರ ಸಂಸ್ಥೆ ಒಂದಷ್ಟು ಮೊತ್ತವನ್ನು ಜಿಲ್ಲಾಧಿಕಾರಿ ಕಛೇರಿಯಲ್ಲಿ ಇಡುಗಂಟು ರೂಪದಲ್ಲಿ, ಪುನರ್ವಸತಿ ಸಮಯದಲ್ಲಿ ಬಳಸುವ ಸಲುವಾಗಿ ಇರಿಸಿದೆ. ಆದರೆ ಎರಡು ಆಣೆಕಟ್ಟುಗಳನ್ನು ನಿರ್ಮಿಸಿ ದೇವಕಾರಿನ ಇಂದಿನ ಸ್ಥಿತಿಗೆ ಪ್ರತ್ಯಕ್ಷವಾಗಿ ಕಾರಣವಾಗಿರುವ ಕರ್ನಾಟಕ ವಿದ್ಯುತ್ ನಿಗಮ ಮಾತ್ರ ತೆಪ್ಪಗೆ ಕುಳಿತಿದೆ. ಇರುವ ಒಂದೇ ಬಸ್ಸನ್ನು ರದ್ದುಮಾಡಲು ಕ.ರಾ.ರ.ಸಾ.ಸಂ ಕಾರಣವನ್ನು ಹುಡುಕುತ್ತಿದೆ.

ನಂತರ ಮಧುಕರ್ ನಮ್ಮನ್ನು ಅವರ ಮನೆಗೆ ಕರೆದೊಯ್ದು, ಭರ್ಜರಿ ಉಪಚಾರ ಮಾಡಿದರು. ಆ ಊಟದ ರುಚಿಯನ್ನು ಈಗಲೂ ಮರೆಯಲಾಗುತ್ತಿಲ್ಲ. ಮರುದಿನ ಮುಂಜಾನೆಯ ನೋಟ ಅದ್ಭುತ. ಎಲ್ಲಾ ಕಡೆಗಳಿಂದಲೂ ಬೆಟ್ಟಗಳಿಂದ ಆವೃತವಾಗಿರುವ ದೇವಕಾರು ಮುಂಜಾನೆಯ ಸಮಯ ಮಂಜಿನಲ್ಲಿ ಮುಳುಗಿ ಸ್ವರ್ಗಲೋಕದಲ್ಲಿ ನಡೆಯುವ ಅನುಭವ ನೀಡುತ್ತಿತ್ತು. ಮಂತ್ರಮುಗ್ಧರಂತೆ ನಾವಿಬ್ಬರು ಮಧುಕರ್ ರವರ ಮನೆಯಿಂದ ಸ್ವಲ್ಪ ದೂರ ಹರಿಯುವ ದೇವಕಾರ ಹಳ್ಳದ ದಂಡೆಯಲ್ಲಿರುವ ಬಂಡೆಯ ಮೇಲೆ ಕುಳಿತು ದೇವಕಾರದ ಸೌಂದರ್ಯವನ್ನು ಸವಿಯುತ್ತಿದ್ದೆವು. ಹಸಿರು ತುಂಬಿ ತುಳುಕುತ್ತಿದ್ದ ಗದ್ದೆಗಳ ಪರಿಧಿಯ ಆಚೆ ಹಸಿರಿನ ಮತ್ತೊಂದು ರಂಗನ್ನು ಹೊತ್ತು ನಿಂತಿರುವ ಬೆಟ್ಟಗಳು. ಆ ಬೆಟ್ಟಗಳನ್ನು ಅರ್ಧದಷ್ಟು ಮರೆಮಾಚಿರುವ ಮುಂಜಾನೆಯ ಮಂಜು. ಸುಮಾರು ೪೫ ನಿಮಿಷ ಹಾಗೇ ಮಾತನಾಡದೇ ಪ್ರಕೃತಿಯ ಪವಿತ್ರತೆಯನ್ನು ಆರಾಧಿಸುತ್ತ ಕುಳಿತ ನಮಗೆ ಮಧುಕರ್ 'ಕೂ' ಹಾಕಿ ಬೆಳಗ್ಗಿನ ಉಪಹಾರಕ್ಕಾಗಿ ಕೈ ಬೀಸಿ ಕರೆದಾಗಲೇ ಎಚ್ಚರವಾದದ್ದು.

ನೀರು ದೋಸೆಯ ಜೊತೆಗೆ ಬೆಲ್ಲ, ತುಪ್ಪದ ಮುಂಜಾನೆಯ ಉಪಹಾರ ರುಚಿಯೋ ರುಚಿ. ನಾವಿಬ್ಬರೂ ಸಿಕ್ಕಿದ್ದೇ ಅವಕಾಶ ಎಂದು ಭರ್ಜರಿಯಾಗಿ ಕಟದೇಬಿಟ್ಟೆವು. ನಂತರ ಮಧುಕರ್ ನಮ್ಮನ್ನು ದೇವಕಾರ ಜಲಪಾತ ನೋಡಲು ಕರೆದೊಯ್ದರು. ಸುಮಾರು ೭೫ ನಿಮಿಷಗಳ ಚಾರಣ. ೩೦೦ ಅಡಿಯಷ್ಟು ಎತ್ತರವಿರುವ ದೇವಕಾರ ಜಲಪಾತವನ್ನು ಅಕ್ಟೋಬರ್ ನಿಂದ ಜನವರಿಯವರೆಗೆ ಸಂದರ್ಶಿಸಬಹುದು. ನಂತರ ಮನೆಗೆ ಮರಳಿದ ಬಳಿಕ ನಮಗೆ ಬಿಸಿನೀರಿನ ಸ್ನಾನದ ವ್ಯವಸ್ಥೆ. ನಂತರ ಮತ್ತೆ ಊಟ. ಮಧುಕರ್ ಮತ್ತು ಅವರ ಮಡದಿ ನಮ್ಮನ್ನು ಉಪಚರಿಸಿದ ರೀತಿಗೆ ಹೇಗೆ ಧನ್ಯವಾದಗಳನ್ನು ತಿಳಿಸುವುದೆಂದು ಅರ್ಥವಾಗದೇ ಚಡಪಡಿಸುತ್ತಿದ್ದೆವು. ಹಣ ನೀಡಲು ಇಚ್ಛಿಸಿದಾಗ ಅವರು ತೆಗೆದುಕೊಳ್ಳಲು ನಿರಾಕರಿಸಿದರು. ಆದರೂ ಬಲವಂತದಿಂದ ಅವರ ಕಿಸೆಗೆ ತುರುಕಿ ಅಲ್ಲಿಂದ ಹೊರಟೆವು.

ಆನಂತರ ಗೆಳೆಯರೊಂದಿಗೆ ಗುಂಪು ಕಟ್ಟಿ ಫೆಬ್ರವರಿ ೨೦೦೫ ಮತ್ತು ಮಾರ್ಚ್ ೨೦೦೬ರಲ್ಲಿ ಮತ್ತೆ ದೇವಕಾರಿಗೆ ತೆರಳಿದ್ದೇನೆ. ಈ ಎರಡೂ ಸಂದರ್ಭಗಳಲ್ಲಿ ದೇವಕಾರ ಹಳ್ಳದ ದಂಡೆಯಲ್ಲಿ ನಾವು ಡೇರೆ ಹಾಕಿ ರಾತ್ರಿ ಕಳೆದಿದ್ದೆವು. ಕಳೆದ ವರ್ಷ ೩ನೇ ಬಾರಿ ತೆರಳಿದಾಗ ಮಧುಕರ್ ಅವರ ಮೊಬೈಲ್ ನಂಬ್ರ ನೀಡಿದರು. ಕೈಗಾದಲ್ಲಿ ಬಿ.ಎಸ್.ಎನ್.ಎಲ್ ಟವರ್ ಸ್ಥಾಪನೆಯಾಗಿದ್ದರಿಂದ ಸಿಗ್ನಲ್ ಈಗ ಸಿಗುತ್ತೆ ಎಂದು ಸಂತೋಷದಿಂದ ನುಡಿದರು.

ಈಗ ಎಲ್ಲಾದರೂ ತುರ್ತಾಗಿ ಆಸ್ಪತ್ರೆಗೆ ಹೋಗಬೇಕಾದರೆ, ಕದ್ರಾಗೆ ದೂರವಾಣಿ ಕರೆ ಮಾಡಿ ರಿಕ್ಷಾ/ಟೆಂಪೊ ವನ್ನು ಬರಹೇಳಿದರೆ, ಇತ್ತ ದೋಣಿ ದಾಟಿ ಆ ಕಡೆ ಕಡವು ತಲುಪುವಷ್ಟರಲ್ಲಿ ಆತ್ತ ಕದ್ರಾದಿಂದ ವಾಹನ ಬಂದಿರುತ್ತದೆ. ಮಧುಕರ್ ಮುಖದ ಮೇಲಿನ ಸಂತೋಷಕ್ಕೆ ಇದೇ ಪ್ರಮುಖ ಕಾರಣವಾಗಿತ್ತು.

ಬುಧವಾರ, ಜನವರಿ 17, 2007

ಕರ್ನಾಟಕ ಕ್ರಿಕೆಟ್ ೩ - ಯೆರೆ ಗೌಡ

ಇವರ ಪೂರ್ಣ ಹೆಸರು ಯೀರೆ ಕಾರೆಕಲ್ಲು ತಿಪ್ಪಣ್ಣ ಗೌಡ. ರಾಯಚೂರಿನಿಂದ ಉದ್ಭವಿಸಿದ ಅತ್ಯುತ್ತಮ ಸೆಲ್ಫ್ ಮೇಡ್ ಆಟಗಾರ. ಹೆಚ್ಚಿನ ಪ್ರತಿಭೆ ಇಲ್ಲದೆ ಸ್ವಂತ ಪರಿಶ್ರಮದಿಂದ ಕಷ್ಟಪಟ್ಟು ಕ್ರಿಕೆಟ್ ಜಗತ್ತಿನಲ್ಲಿ ವೇಗವಾಗಿ ಮೇಲೇರಿದ ಅಸಾಧಾರಣ ಶ್ರಮಜೀವಿ. ಪ್ರಸಕ್ತ ರಣಜಿ ಋತುವಿನಲ್ಲಿ ಕರ್ನಾಟಕ ತಂಡದ ನಾಯಕರಾಗಿರುವ ಗೌಡರಿಗೆ ೩೫ ವರ್ಷ ವಯಸ್ಸು.

೯೦ ರ ದಶಕದ ಪ್ರಾರಂಭದಲ್ಲಿ ದಕ್ಷಿಣ ವಲಯದ ತಂಡಗಳ ನಡುವೆ ೨೩ ವರ್ಷದೊಳಗಿನವರಿಗಾಗಿ ಪಿ.ರಾಮಚಂದ್ರ ರಾವ್ ಟ್ರೋಫಿ ಪಂದ್ಯಾಟ ನಡೆಯುತ್ತಿತ್ತು. ಹೆಸರಿಗೆ ದಕ್ಷಿಣ ವಲಯ ಎಂದಿದ್ದರೂ ಕೇವಲ ೩ ತಂಡಗಳು - ಕರ್ನಾಟಕ, ಹೈದರಾಬಾದ್ ಮತ್ತು ತಮಿಳುನಾಡು - ಮಾತ್ರ ಇದರಲ್ಲಿ ಭಾಗವಹಿಸುತ್ತಿದ್ದವು. ೯೨-೯೩, ೯೩-೯೪, ಮತ್ತು ೯೪-೯೫ ಈ ೩ ಋತುಗಳಲ್ಲೂ ಕರ್ನಾಟಕ ಯೀರೆ ಗೌಡರ ನೇತೃತ್ವದಲ್ಲಿ ಪಿ.ರಾಮಚಂದ್ರ ರಾವ್ ಟ್ರೋಫಿಯನ್ನು ಗೆದ್ದಿತ್ತು. ಪ್ರತಿ ಋತುವಿನಲ್ಲೂ ಯೀರೆ ಗೌಡ ಫೈನಲ್ ಪಂದ್ಯದಲ್ಲಿ ಶತಕ ಬಾರಿಸಿದ್ದರು. ಹಾಗೇನೇ ಪ್ರತೀ ಋತುವಿನಲ್ಲಿ ಕರ್ನಾಟಕ ರಣಜಿ ತಂಡಕ್ಕೆ ಆ ಶತಕದ ಆಧಾರದ ಮೇಲೆ ಆಯ್ಕೆಯಾಗುತ್ತಿದ್ದರು. ಬರೀ ಆಯ್ಕೆ ಆಗುತ್ತಿದ್ದರು ಅಷ್ಟೆ, ಆಡಲು ಅವಕಾಶ ಸಿಗುತ್ತಿರಲಿಲ್ಲ. ಮತ್ತೆ ಕರ್ನಾಟಕದ ಪರವಾಗಿ ಮುಂದಿನ ಋತುವಿನ ಪಿ.ರಾಮಚಂದ್ರ ರಾವ್ ಟ್ರೋಫಿ ಪಂದ್ಯಾಟದಲ್ಲೇ ಆಡುವುದು!

೯೨-೯೩ ಮತ್ತು ೯೩-೯೪ ಋತುಗಳಲ್ಲಿ ಆಯ್ಕೆಗಾರರು ಯೀರೆ ಗೌಡರಿಗೆ ಒಂದೇ ಒಂದು ಪಂದ್ಯವನ್ನು ಆಡಲು ಕೊಡಲಿಲ್ಲ. ಪಾನೀಯ ಹೊರುವುದು, ಪೆವಿಲಿಯನ್ ನಿಂದ ಬ್ಯಾಟಿಂಗ್ ಮಾಡುತ್ತಿದ್ದವರಿಗೆ ಸಂದೇಶ ರವಾನಿಸುವುದು, ಇವಿಷ್ಟೇ ಈ ೨ ವರ್ಷಗಳಲ್ಲಿ ಗೌಡರು ಮಾಡಿದ್ದು. ಗೌಡರಿಗಿಂತ ಕಡಿಮೆ ಅರ್ಹತೆ ಹೊಂದಿದ್ದ ಇತರ ಆಟಗಾರರು ಕರ್ನಾಟಕವನ್ನು ಈ ಅವಧಿಯಲ್ಲಿ ಪ್ರತಿನಿಧಿಸಿದರು. ಅದಾಗಲೇ ಯೀರೆ ಬಹಳಷ್ಟು 'ಫ್ರಸ್ಟ್ರೇಟ್' ಆಗಿದ್ದರು.

೯೪-೯೫ ರ ಋತುವಿನಲ್ಲಿ ಮೊದಲ ೩ ಪಂದ್ಯಗಳಲ್ಲಿ ಅಂತಿಮ ಹನ್ನೊಂದರಲ್ಲಿ ಮತ್ತೆ ಗೌಡರಿಗೆ ಸ್ಥಾನವಿಲ್ಲ. ನಾಲ್ಕನೇ ಪಂದ್ಯ ಹೈದರಾಬಾದ್ ವಿರುದ್ಧ ಬಿಜಾಪುರದಲ್ಲಿತ್ತು. ಉತ್ತರ ಕರ್ನಾಟಕದವರಾದ ಯೀರೆ ಗೌಡರನ್ನು ಆ ಭಾಗದಲ್ಲೇ ನಡೆಯುವ ಪಂದ್ಯದಲ್ಲಿ ಅಂತೂ ಕೊನೆಗೆ ಆಡಿಸಲಾಯಿತು. ಆದರೆ ಯೀರೆ ಕೇವಲ ೧೬ ಓಟ ಗಳಿಸಿದರು. ನಂತರ ಪಲಕ್ಕಾಡ್ ನಲ್ಲಿ ನಡೆದ ಕೇರಳ ವಿರುದ್ಧದ ಪಂದ್ಯದಲ್ಲಿ ಮತ್ತೆ ವೈಫಲ್ಯ. ಗಳಿಸಿದ್ದು ೦ ಮತ್ತು ೩೭. ನಂತರ ಪಂಜಾಬ್ ವಿರುದ್ಧ ಮೊಹಾಲಿಯಲ್ಲಿ ನಡೆದ ಕ್ವಾ.ಫೈನಲ್ ಪಂದ್ಯದಲ್ಲಿ ಮೊದಲ ಇನ್ನಿಂಗ್ಸ್ ನಲ್ಲಿ ಯೀರೆ ಗಳಿಸಿದ್ದು ೨೪ ಓಟ. ಕರ್ನಾಟಕ ಗಳಿಸಿದ್ದೇ ೧೭೧ ಓಟ. ಸುನಿಲ್ ಜೋಶಿಯ ೭೮ ರ ನಂತರದ ಮೊತ್ತವೇ ಗೌಡರದ್ದು. ಇದನ್ನು ವೈಫಲ್ಯವೆಂದು ಪರಿಗಣಿಸಲಾಗದು. ಆದರೆ ಆಯ್ಕೆಗಾರರು ಎಂಬ ಹಾಸ್ಯಗಾರರಿಗೆ ಇದೆಲ್ಲಿ ತಿಳಿಯಬೇಕು. ದ್ವೀತಿಯ ಇನ್ನಿಂಗ್ಸ್ ನಲ್ಲಿ ಯೀರೆ ಗಳಿಸಿದ್ದು ಅಜೇಯ ೧೬ ಓಟಗಳು. ೩ ಪಂದ್ಯಗಳಲ್ಲಿ ೨೩.೨೫ ಸರಾಸರಿಯಲ್ಲಿ ೯೩ ಓಟಗಳು.

ಹುಡುಗನಲ್ಲಿ ಕ್ಷಮತೆ ಇದೆ, ಸ್ವಲ್ಪ ಪ್ರೋತ್ಸಾಹ, ಉತ್ತೇಜನ ನೀಡಿದರೆ ಕರ್ನಾಟಕಕ್ಕೆ ಉತ್ತಮ ಆಟಗಾರನೊಬ್ಬ ಯೀರೆ ಗೌಡರ ರೂಪದಲ್ಲಿ ಸಿಗುತ್ತಾನೆ ಎಂಬ ದೂರದೃಷ್ಟಿ ಯಾವುದೇ ಆಯ್ಕೆಗಾರನಿಗೆ ಇರದೇ ಇದ್ದದ್ದು ಕರ್ನಾಟಕದ ದುರಾದೃಷ್ಟ. ಅವರು ನೌಕರಿ ಮಾಡುತ್ತಿದ್ದ ಬೆಂಗಳೂರಿನ 'ವ್ಹೀಲ್ ಎಂಡ್ ಎಕ್ಸೆಲ್' ಸಂಸ್ಥೆ ಇಂಡಿಯನ್ ರೈಲ್ವೇಸ್ ಗೆ ಸೇರಿದ್ದರಿಂದ, ಯೀರೆ ರೈಲ್ವೇಸ್ ಪರವಾಗಿ ಆಡಲು ಎಲ್ಲಾ ರೀತಿಯಲ್ಲೂ ಅರ್ಹರಾಗಿದ್ದರು. ಆದರೂ ಕರ್ನಾಟಕವನ್ನು ಪ್ರತಿನಿಧಿಸಬೇಕು ಎಂಬ ಬಲವಾದ ಹಂಬಲದಿಂದ ೩ ವರ್ಷ ಕಾದರು. ಎಷ್ಟೇ ವೈಫಲ್ಯ ಕಂಡರೂ ಆಡುತ್ತಿದ್ದ ಇತರರು ಮತ್ತು ೨ ವೈಫಲ್ಯ ಕಂಡ ತನಗೆ ತೋರಿಸುತ್ತಿದ್ದ ನಿರ್ಲಕ್ಷ್ಯದಿಂದ ಕಡೆಗೆ ಬೇಸತ್ತು ೯೫-೯೬ ಋತುವಿನಲ್ಲಿ ರೈಲ್ವೇಸ್ ಪರವಾಗಿ ಆಡಿದರು. ೧೧ ವರ್ಷಗಳವರೆಗೆ ಸತತವಾಗಿ ರೈಲ್ವೇಸ್ ತಂಡವನ್ನು ಹೆಮ್ಮೆಯಿಂದ ಪ್ರತಿನಿಧಿಸಿದರು. ಆ ತಂಡದ 'ಬ್ಯಾಟಿಂಗ್ ಬ್ಯಾಕ್-ಬೋನ್' ಆಗಿದ್ದರು ನಮ್ಮ ಯೀರೆ ಗೌಡ.

ಕಳೆದ ೧೦ ವರ್ಷಗಳಲ್ಲಿ ರೈಲ್ವೇಸ್ ೩ ಬಾರಿ ರಣಜಿ ಟ್ರೋಫಿಯನ್ನು ಗೆದ್ದಿದೆ ಮತ್ತು ೨ ಬಾರಿ ಫೈನಲ್ ತಲುಪಿದೆ. ರೈಲ್ವೇಸ್ ತಂಡದ ಈ ಸಾಧನೆಗೆ ಯೀರೆ ಗೌಡರ ಕೊಡುಗೆ ಅಪಾರವಾದದ್ದು. ಗೌಡರಲ್ಲೊಂದು ಸ್ಕಿಲ್ ಇದೆ. ಅದೆಂದರೆ ಬಾಲಂಗೋಚಿಗಳನ್ನು ಒಂದೆಡೆ ನಿಲ್ಲಿಸಿ ಆಡಿಸುವುದು. ಈ ಸ್ಕಿಲ್ ಅತೀ ಕಡಿಮೆ ಆಟಗಾರರಿಗೆ ಇರುತ್ತೆ. ಬೇಗನೆ ೫-೬ ಹುದ್ದರಿಗಳು ಉರುಳಿದರೆ, ಬಾಲಂಗೋಚಿಗಳ ಸಹಾಯದಿಂದ ತಂಡವನ್ನು ಉತ್ತಮ ಮೊತ್ತದೆಡೆ ಕೊಂಡುಯ್ಯುವುದನ್ನು ರೈಲ್ವೇಸ್ ಗೆ ಗೌಡರು ಕಳೆದ ದಶಕದಲ್ಲಿ ಮಾಡುತ್ತಾ ಬಂದಿದ್ದಾರೆ.

೨೦೦೪-೦೫ ರ ರಣಜಿ ಫೈನಲ್ ಪಂದ್ಯ ಪಂಜಾಬ್ ವಿರುದ್ಧ ಮೊಹಾಲಿಯಲ್ಲಿ. ನಾಲ್ಕನೇ ದಿನದ ಭೋಜನ ವಿರಾಮದವರೆಗೆ ರೈಲ್ವೇಸ್ ತನ್ನ ಎರಡನೇ ಬಾರಿಯಲ್ಲಿ ೬ ಹುದ್ದರಿಗಳನ್ನು ಕಳಕೊಂಡು ಒಟ್ಟಾರೆ ಕೇವಲ ೨೮೨ ಓಟಗಳಿಂದ ಮುಂದಿತ್ತು. ಇನ್ನೂ ಒಂದುವರೆ ದಿನಗಳ ಆಟ ಉಳಿದಿತ್ತು. ಆಗ ತನ್ನ ಸ್ಕಿಲ್ ತೋರ್ಪಡಿಸಿದ ಯೀರೆ ಮರುದಿನ ಭೋಜನ ವಿರಾಮದ ನಂತರ ಸುಮಾರು ೭೦ ನಿಮಿಷಗಳವರೆಗೆ ನೆಲಕಚ್ಚಿ ನಿಂತು ಆಡಿದರು. ಕೊನೆಯ ಹುದ್ದರಿ ಉರುಳಿದಾಗ ತಂಡದ ಒಟ್ಟಾರೆ ಮುನ್ನಡೆ ೫೧೭ ಓಟಗಳಷ್ಟು ಆಗಿತ್ತು. ಯೀರೆ ಗಳಿಸಿದ್ದು ಅಜೇಯ ೧೩೮ ಓಟಗಳನ್ನು. ಕೊನೆಯ ೪ ಹುದ್ದರಿಗಳೊಂದಿಗೆ ಸೇರಿಸಿದ್ದು ೨೩೫ ಓಟಗಳನ್ನು. ಪಂಜಾಬ್ ಗೆಲ್ಲುವ ಚಾನ್ಸೇ ಇರಲಿಲ್ಲ. ಇಂತಹ ಅನೇಕ ಬಾರಿಗಳನ್ನು ಯೀರೆ ರೈಲ್ವೇಸ್ ಗೆ ಆಡಿದ್ದಾರೆ. ಕಳೆದ ದಶಕದಲ್ಲಿ ಕರ್ನಾಟಕ ಕಳಕೊಂಡ 'ಕ್ಲಾಸ್ ಒನ್' ಆಟಗಾರ ಯೀರೆ.

ಈ ಮಧ್ಯೆ ಕರ್ನಾಟಕದ ವಿರುದ್ಧ ರೈಲ್ವೇಸ್ ಒಂದೆರಡು ಬಾರಿ ಆಡಿದೆ. ೨೦೦೦-೦೧ ಋತುವಿನಲ್ಲಿ ಕ್ವಾ,ಫೈನಲ್ ಪಂದ್ಯದಲ್ಲಿ ಕರ್ನಾಟಕ ರೈಲ್ವೇಸ್ ವಿರುದ್ಧ ಮೊದಲ ಬಾರಿಯ ಮುನ್ನಡೆ ಆಧಾರದಲ್ಲಿ ಸೋತಿತು. ರೈಲ್ವೇಸ್ ಪರವಾಗಿ ಯೀರೆ ೨೬ ಮತ್ತು ೯೨ ಓಟ ಗಳಿಸಿದ್ದರು. ೨೦೦೪-೦೫ ರಲ್ಲಿ ಮತ್ತೆ ನಡೆದ ಮುಖಾಮುಖಿಯಲ್ಲಿ ಪಂದ್ಯ ಡ್ರಾ ಆಯಿತು. ಯೀರೆ ೩೦ ಓಟ ಗಳಿಸಿದ್ದರು.
೧೯೯೮-೯೯ ರ ನಂತರ ಕರ್ನಾಟಕ ರಣಜಿ ಟ್ರೋಫಿಯಲ್ಲಿ ವಿಫಲವಾಗುತ್ತಾ ಇತ್ತು. ಆತ್ತ ರೈಲ್ವೇಸ್ ಪರವಾಗಿ ಯೀರೆ ಉತ್ತಮ ಪ್ರದರ್ಶನ ನೀಡುತ್ತಿದ್ದರು. ಹಳೆಯ ಗೆಳೆಯರಾದ ಅನಿಲ್ ಕುಂಬ್ಳೆ ಮತ್ತು ಜಾವಗಲ್ ಶ್ರೀನಾಥ್, ಯೀರೆ ಮತ್ತೆ ಕರ್ನಾಟಕಕ್ಕಾಗಿ ಆಡಬೇಕು ಎಂದು ಮುಕ್ತವಾಗಿ ಹೇಳಿಕೆಗಳನ್ನು ಕೊಟ್ಟಿದ್ದರು. ಮಧ್ಯ ಕ್ರಮಾಂಕದಲ್ಲಿ ಒಬ್ಬ ಉತ್ತಮ ಆಟಗಾರನ ಕೊರತೆ ಕರ್ನಾಟಕಕ್ಕೆ ಇತ್ತು. ವೈಯುಕ್ತಿಕವಾಗಿ ತನ್ನ ಹಳೆ ಗೆಳೆಯರಿಬ್ಬರು ಕರ್ನಾಟಕಕ್ಕೆ ಆಡುವಂತೆ ಕೇಳಿಕೊಂಡಾಗ, ಯೀರೆ ನಯವಾಗಿ ನಿರಾಕರಿಸಿದ್ದರು.

ಕರ್ನಾಟಕಕ್ಕೆ ಆಡಬೇಕು ಎಂಬ ಹಂಬಲ ಮನದಾಳದಲ್ಲಿದ್ದರೂ, ಹೆಸರು ಮತ್ತು ಯಶಸ್ಸು ತಂದುಕೊಟ್ಟ ರೈಲ್ವೇಸ್ ನ್ನು ಒಮ್ಮೇಲೆ ಬಿಟ್ಟುಬಿಡಲು ಗೌಡರು ತಯಾರಿರಲಿಲ್ಲ. ಯೀರೆಯನ್ನು ಎಲ್ಲರು ಮೆಚ್ಚುವುದು ಅವರ ಇದೇ ಗುಣಕ್ಕಾಗಿ. ಆದರೂ ಶ್ರೀನಾಥ್ ಪಟ್ಟು ಬಿಡಲಿಲ್ಲ. ಮತ್ತೆ ಮತ್ತೆ ತನ್ನ ಗೆಳೆಯನನ್ನು ಕೇಳಿಕೊಂಡರು. ಯೀರೆ ೨೦೦೩ ರಿಂದ ನಿರಾಕರಿಸುತ್ತಲೇ ಇದ್ದರು, ಶ್ರೀನಾಥ್ ಕೇಳುತ್ತಲೇ ಇದ್ದರು. ಅಂತೂ ಕೊನೆಗೆ ೩ ವರ್ಷಗಳ ಪ್ರಯತ್ನದ ಬಳಿಕ ಈ ಋತುವಿನಲ್ಲಿ ಕರ್ನಾಟಕಕ್ಕಾಗಿ ಆಡಲು ಯೀರೆ ಗೌಡ ಒಪ್ಪಿದರು. ಈ ಬಾರಿ ನಿರಾಕರಿಸಲಾಗದಂತಹ 'ಆಫರ್' ಅವರಿಗೆ ಕೊಡಬೇಕು ಎಂದು ನಿರ್ಧರಿಸಿದ ಕೆ.ಎಸ್.ಸಿ.ಎ, ಕರ್ನಾಟಕದ ನಾಯಕತ್ವದ 'ಆಫರ್' ನ್ನು ಅವರ ಮುಂದಿರಿಸಿದಾಗ, ಮೊದಲೇ ಗೆಳೆಯರ ವಿನಂತಿಗಳಿಗೆ ೮೦% ಸೋತಿದ್ದ ಯೀರೆ ಸಂಪೂರ್ಣವಾಗಿ ಸೋತರು.

ಈ ಋತುವಿನ ಮೊದಲ ಪಂದ್ಯದಲ್ಲಿ ಬರೋಡ ವಿರುದ್ಧ ಕರ್ನಾಟಕಕ್ಕೆ ಡಬಲ್ ಶಾಕ್. ಕರ್ನಾಟಕದ ಪರವಾಗಿ ಯೀರೆ ಗೌಡ ಆಡಲಿಕ್ಕೆ ರೈಲ್ವೇಸ್-ನ್ 'ನೋ ಒಬ್ಜೆಕ್ಷನ್ ಸರ್ಟಿಫಿಕೇಟ್', ಬಿ.ಸಿ.ಸಿ.ಐ ಗೆ ತಲುಪದಿದ್ದ ಕಾರಣ ಯೀರೆ ಮೊದಲ ಪಂದ್ಯವನ್ನು ಆಡಲಾಗಲಿಲ್ಲ. ಕರ್ನಾಟಕ ಈ ಪಂದ್ಯವನ್ನು ಹೀನಾಯವಾಗಿ ಸೋತಿತು. ನಂತರದ ಪಂದ್ಯಗಳಲ್ಲಿ ಆಂಧ್ರದ ವಿರುದ್ಧ ಸ್ವಲ್ಪ ಮೈ ಮರೆತದ್ದನ್ನು ಬಿಟ್ಟರೆ ನಮ್ಮ ಹುಡುಗರು ಗೌಡರ ನಾಯಕತ್ವದಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ.

ವೆಲ್ ಕಮ್ ಬ್ಯಾಕ್ ಯೀರೆ ಗೌಡ.

ಸೋಮವಾರ, ಜನವರಿ 15, 2007

ಕರ್ನಾಟಕ ಕ್ರಿಕೆಟ್ - ೨

ಯೆರೆ ಗೌಡರ ಸಮರ್ಥ ನೇತೃತ್ವದಲ್ಲಿ ಕರ್ನಾಟಕ ಈ ಋತುವಿನ (೨೦೦೬-೦೭) ರಣಜಿ ಟ್ರೋಫಿ ಸೆಮಿಫೈನಲ್ ತಲುಪಿದೆ. ಎಲೀಟ್ ಲೀಗ್ ನ ತನ್ನ ಗುಂಪಿನಲ್ಲಿ ಆಡಿದ ೭ ಪಂದ್ಯಗಳಲ್ಲಿ ೩ ಗೆಲುವು (ಹರ್ಯಾನ, ಉತ್ತರ ಪ್ರದೇಶ ಮತ್ತು ತಮಿಳುನಾಡು ವಿರುದ್ಧ), ೩ ಡ್ರಾ (ದೆಹಲಿ, ಅಂಧ್ರ ಪ್ರದೇಶ ಮತ್ತು ಸೌರಾಷ್ಟ್ರ ವಿರುದ್ಧ) ಮತ್ತು ೧ ಸೋಲಿನ (ಬರೋಡ ವಿರುದ್ಧ) ಸಾಧನೆಯೊಂದಿಗೆ ದ್ವೀತಿಯ ಸ್ಥಾನ ಪಡೆದಿದೆ.

ಜನವರಿ ೨೩ ರಿಂದ ೨೭ ರವರೆಗೆ ನಡೆಯಲಿರುವ ಸೆಮಿಫೈನಲ್ ಪಂದ್ಯದಲ್ಲಿ ಕರ್ನಾಟಕ, ಬಂಗಾಲವನ್ನು ಎದುರಿಸಲಿದೆ. ಈ ಪಂದ್ಯ ಕೊಲ್ಕತ್ತಾದಲ್ಲಿ ನಡೆಯುವ ಎಲ್ಲಾ ಸಾಧ್ಯತೆಗಳಿವೆ. ಕರ್ನಾಟಕಕ್ಕೆ 'ಹೋಮ್ ಅಡ್ವಾಂಟೇಜ್' ಇರುವುದಿಲ್ಲ. ಬಂಗಾಲ, ಬ್ಯಾಟಿಂಗ್ ಹಾಗೂ ಬೌಲಿಂಗ್ ನಲ್ಲಿ ಕರ್ನಾಟಕಕ್ಕಿಂತ ಬಲಶಾಲಿಯಾಗಿರುವ ತಂಡ. ರಾಬಿನ್ ಉತ್ತಪ್ಪ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಿರುವ ಕಾರಣ ಅವರ ಅನುಪಸ್ತಿತಿ ಕರ್ನಾಟಕಕ್ಕೆ ದುಬಾರಿಯಾಗಬಹುದು. ಈ ದೊಡ್ಡ ಸವಾಲನ್ನು ಕರ್ನಾಟಕದ ಆಟಗಾರರು ಹೇಗೆ ಸ್ವೀಕರಿಸುತ್ತಾರೆ ಎಂದು ಕಾದು ನೋಡೋಣ. ರಣಜಿ ಟ್ರೋಫಿ ಇತಿಹಾಸದಲ್ಲಿ ಸೆಮಿಫೈನಲ್ ನಲ್ಲಿ ಕರ್ನಾಟಕ ೩ ಸಲ ಬಂಗಾಲದೊಂದಿಗೆ ಆಡಿದ್ದು ಎರಡು ಬಾರಿ ಸೋತು ಒಂದು ಬಾರಿ ಗೆದ್ದಿದೆ.

ಸದ್ಯಕ್ಕೆ ನಾಯಕ ಯೆರೆ ಗೌಡ, ಕೋಚ್ ವೆಂಕಟೇಶ್ ಪ್ರಸಾದ್, ಮ್ಯಾನೇಜರ್ ರಘುರಾಮ್ ಭಟ್ ಮತ್ತು ತಂಡದ ಎಲ್ಲಾ ಸದಸ್ಯರಿಗೆ ರಣಜಿ ಟ್ರೋಫಿ ಸೆಮಿಫೈನಲ್ ತಲುಪಿದ್ದಕ್ಕೆ ಅಭಿನಂದನೆಗಳು ಮತ್ತು ಬಂಗಾಲ ವಿರುದ್ಧದ ಪಂದ್ಯಕ್ಕೆ ಶುಭ ಹಾರೈಕೆಗಳು.

೧೯೯೯-೨೦೦೦ ಋತುವಿನಲ್ಲಿ ಬೆಂಗಳೂರಿನಲ್ಲಿ ನಡೆದ ರಣಜಿ ಸೆಮಿಫೈನಲ್ ನಲ್ಲಿ ಹೈದರಾಬಾದ್ ಗೆ ಪ್ರಥಮ ಬಾರಿಯ ಮುನ್ನಡೆಯ ಆಧಾರದಲ್ಲಿ ಸೋತ ೭ ವರ್ಷಗಳ ಬಳಿಕ ಕರ್ನಾಟಕ, ಈ ಋತುವಿನಲ್ಲಿ ಸೆಮಿಫೈನಲ್ ತಲುಪಿದೆ. ಕಾಕತಾಳೀಯವೆಂದರೆ ಆಗ ಹೈದರಾಬಾದ್ ವಿರುದ್ಧ ಸೆಮಿಫೈನಲ್ ಪಂದ್ಯದಲ್ಲಿ ತಂಡದ ನಾಯಕರಾಗಿದ್ದ ವೆಂಕಿ, ಇಂದು ಕೋಚ್ ಆಗಿದ್ದಾರೆ. ಈಗ ತಂಡದಲ್ಲಿರುವ ಮತ್ತು ೭ ವರ್ಷಗಳ ಹಿಂದಿನ ಸೆಮಿಫೈನಲ್ ನಲ್ಲಿ ಆಡಿದ ಆಟಗಾರರೆಂದರೆ ಬ್ಯಾರಿಂಗ್ಟನ್ ರೋಲಂಡ್, ಬಾಲಚಂದ್ರ ಅಖಿಲ್, ಸುನಿಲ್ ಜೋಶಿ ಮತ್ತು ತಿಲಕ್ ನಾಯ್ಡು.

ರಣಜಿ ಟ್ರೋಫಿ ಪಂದ್ಯಾಟದಲ್ಲಿ ಕರ್ನಾಟಕಕ್ಕಿದು ೨೬ನೇ ಸೆಮಿಫೈನಲ್ ಪ್ರವೇಶ. ರಣಜಿ ಟ್ರೋಫಿ ಆರಂಭವಾದದ್ದು ೧೯೩೪-೩೫ರಲ್ಲಿ. ೭೩ ಋತುಗಳಲ್ಲಿ ಕರ್ನಾಟಕ ೨೬ ಸಲ ಸೆಮಿಫೈನಲ್ ಪ್ರವೇಶಿಸಿದಂತಾಯಿತು. ಕರ್ನಾಟಕ ೧೧ ಬಾರಿ ಸೆಮಿಫೈನಲ್ ನಲ್ಲಿ ಗೆದ್ದರೆ, ೧೪ ಬಾರಿ ಸೋತಿದೆ. ಈ ಬಾರಿ ಏನಾಗಬಹುದು?

೧೯೭೩-೭೪ ಋತುವಿನಲ್ಲಿ ಪ್ರಥಮ ಬಾರಿಗೆ ನಮ್ಮ ರಣಜಿ ತಂಡವನ್ನು 'ಕರ್ನಾಟಕ'ವೆಂದು ಕರೆಯಲಾಯಿತು. ಅದುವರೆಗೆ ನಮ್ಮ ತಂಡವನ್ನು 'ಮೈಸೂರು' ಎಂದು ಕರೆಯಲಾಗುತ್ತಿತ್ತು. ಮೈಸೂರು ಎಂದು ಕರೆಯಲಾಗುತ್ತಿದ್ದಾಗ ೧೨ ಬಾರಿ ಸೆಮಿಫೈನಲ್ ಪ್ರವೇಶವಾಗಿ ೨ ಬಾರಿ ಸೆಮಿಫೈನಲ್ ಗೆದ್ದರೆ, ಕರ್ನಾಟಕ ನಾಮಧೇಯದೊಂದಿಗೆ ೧೩ ಬಾರಿ ಸೆಮಿಫೈನಲ್ ಪ್ರವೇಶವಾಗಿ ೯ ಬಾರಿ ಸೆಮಿಫೈನಲ್ ಗೆಲ್ಲಲಾಗಿದೆ.

ಆಸಕ್ತಿಯುಳ್ಳವರಿಗಾಗಿ ಕರ್ನಾಟಕ ಸೆಮಿಫೈನಲ್ ತಲುಪಿದ ಋತುಗಳ ಪಟ್ಟಿ ಮತ್ತು ಸೆಮಿಫೈನಲ್ ಪಂದ್ಯಗಳ ಫಲಿತಾಂಶ ಈ ಕೆಳಗಿದೆ.

ಋತು ನಾಯಕ ವಿರೋಧಿ ತಂಡ ಫಲಿತಾಂಶ

೧೯೪೧-೪೨ ಶಫಿ ದಾರಾಶಾಹ ಬಂಗಾಲ ಗೆಲುವು
೧೯೪೫-೪೬ ಬಿ.ಕೆ.ಗರುಡಾಚಾರ್ ಹೋಳ್ಕರ್ ಸೋಲು
೧೯೫೧-೫೨ ಪಿ.ಆರ್.ಶ್ಯಾಮಸುಂದರ್ ಮುಂಬಾಯಿ ಸೋಲು
೧೯೫೨-೫೩ ಪಿ.ಆರ್.ಶ್ಯಾಮಸುಂದರ್ ಬಂಗಾಲ ಸೋಲು
೧೯೫೯-೬೦ ಎ.ಎಸ್.ಕೃಷ್ಣಸ್ವಾಮಿ ಬಿಹಾರ ಗೆಲುವು
೧೯೬೩-೬೪ ವಿ.ಸುಬ್ರಮಣ್ಯ ಮುಂಬಾಯಿ ಸೋಲು
೧೯೬೫-೬೬ ವಿ.ಸುಬ್ರಮಣ್ಯ ರಾಜಸ್ಥಾನ ಸೋಲು
೧೯೬೬-೬೭ ವಿ.ಸುಬ್ರಮಣ್ಯ ಮುಂಬಾಯಿ ಸೋಲು
೧೯೬೮-೬೯ ವಿ.ಸುಬ್ರಮಣ್ಯ ಬಂಗಾಲ ಸೋಲು
೧೯೬೯-೭೦ ಇ.ಎ.ಎಸ್.ಪ್ರಸನ್ನ ಮುಂಬಾಯಿ ಸೋಲು
೧೯೭೦-೭೧ ಪಿ.ಆರ್.ಅಶೋಕಾನಂದ್ ಮಹಾರಾಷ್ಟ್ರ ಸೋಲು
೧೯೭೧-೭೨ ಇ.ಎ.ಎಸ್.ಪ್ರಸನ್ನ ಮುಂಬಾಯಿ ಸೋಲು
೧೯೭೩-೭೪ ಇ.ಎ.ಎಸ್.ಪ್ರಸನ್ನ ಮುಂಬಾಯಿ ಗೆಲುವು
೧೯೭೪-೭೫ ಇ.ಎ.ಎಸ್.ಪ್ರಸನ್ನ ದೆಹಲಿ ಗೆಲುವು
೧೯೭೫-೭೬ ವಿ.ಎಸ್.ವಿಜಯ್ ಕುಮಾರ್ ಬಿಹಾರ ಸೋಲು
೧೯೭೭-೭೮ ಇ.ಎ.ಎಸ್.ಪ್ರಸನ್ನ ದೆಹಲಿ ಗೆಲುವು
೧೯೭೮-೭೯ ಜಿ.ಆರ್.ವಿಶ್ವನಾಥ್ ಬರೋಡ ಗೆಲುವು
೧೯೮೧-೮೨ ಜಿ.ಆರ್.ವಿಶ್ವನಾಥ್ ಮುಂಬಾಯಿ ಗೆಲುವು
೧೯೮೨-೮೩ ಬೃಜೇಶ್ ಪಟೇಲ್ ಹರ್ಯಾನ ಗೆಲುವು
೧೯೮೪-೮೫ ಜಿ.ಆರ್.ವಿಶ್ವನಾಥ್ ದೆಹಲಿ ಸೋಲು
೧೯೮೬-೮೭ ಸದಾನಂದ್ ವಿಶ್ವನಾಥ್ ದೆಹಲಿ ಸೋಲು
೧೯೯೫-೯೬ ರಾಹುಲ್ ದ್ರಾವಿಡ್ ಹೈದರಾಬಾದ್ ಗೆಲುವು
೧೯೯೭-೯೮ ರಾಹುಲ್ ದ್ರಾವಿಡ್ ಹೈದರಾಬಾದ್ ಗೆಲುವು
೧೯೯೮-೯೯ ಸುಜಿತ್ ಸೋಮಸುಂದರ್ ಪಂಜಾಬ್ ಗೆಲುವು
೯೯-೨೦೦೦ ವೆಂಕಟೇಶ್ ಪ್ರಸಾದ್ ಹೈದರಾಬಾದ್ ಸೋಲು
೨೦೦೬-೦೭ ಯೆರೆ ಗೌಡ ಬಂಗಾಲ ?

ಶನಿವಾರ, ಜನವರಿ 13, 2007

ಕರ್ನಾಟಕ ಕ್ರಿಕೆಟ್ - ೧

ಕರ್ನಾಟಕ ಕ್ರಿಕೆಟ್ ಬಗ್ಗೆ ನನಗೆ ತಿಳಿದಷ್ಟು.......

ವೀಕ್ಷಕ ವಿವರಣೆ - ಆಗ ಬೆಂಗಳೂರು ಮತ್ತು ಧಾರವಾಡ ಆಕಾಶವಾಣಿ ಕೇಂದ್ರಗಳಲ್ಲಿ ಕರ್ನಾಟಕದಲ್ಲಿ ನಡೆಯುತ್ತಿದ್ದ ಎಲ್ಲಾ ರಣಜಿ ಪಂದ್ಯಗಳ ವೀಕ್ಷಕ ವಿವರಣೆ ಕನ್ನಡದಲ್ಲಿ ಇರುತ್ತಿತ್ತು. ನನಗೆ ಸಮೀಪವಿದ್ದ ಮಂಗಳೂರು ಆಕಾಶವಾಣಿ ಕೇಂದ್ರ ಕೆಲವೊಂದು ಆಯ್ದ ಪಂದ್ಯಗಳ ವೀಕ್ಷಕ ವಿವರಣೆಯನ್ನು ಮಾತ್ರ ಪ್ರಸಾರ ಮಾಡುತ್ತಿತ್ತು. ಕಷ್ಟದಿಂದ ಬೆಂಗಳೂರು ಅಥವಾ ಧಾರವಾಡ ಕೇಂದ್ರಗಳ ಸಿಗ್ನಲ್ ಸಿಗುತ್ತಿತ್ತು. ಆದರೂ ಬಿಡದೆ ವೀಕ್ಷಕ ವಿವರಣೆ ಕೇಳುವ ಗೀಳು ಹತ್ತಿತ್ತು. "ಮತ್ತೊಮ್ಮೆ ರಘುರಾಮ್ ಭಟ್, ಈ ಬಾರಿ ಕ್ರೀಸ್ ಹಿಂದಿನಿಂದ ಎಸೆದ ಎಸೆತ, ಆಫ್ ಸ್ಟ್ಂಪಿನ ಹೊರಗೆ ಪುಟಿದು ಮತ್ತಷ್ಟು ಹೊರಕ್ಕೆ ತೆರಳುತ್ತಿದ್ದ ಚೆಂಡನ್ನು ಹರಿಹರನ್ ಆಡದೆ ಹಾಗೆ ಬಿಟ್ಟಿದ್ದಾರೆ. ಚೆಂಡು ನೇರವಾಗಿ ಸದಾನಂದ್ ವಿಶ್ವನಾಥ್ ಕೈಗೆ..." ಹೀಗಿರುತ್ತಿತ್ತು ಕನ್ನಡ ವೀಕ್ಷಕ ವಿವರಣೆ. ಇನ್ನೆಲ್ಲಿ ಅದನ್ನು ಕೇಳುವ ಭಾಗ್ಯ?

ಪ್ರದೇಶ ಸಮಾಚಾರ - ಕರ್ನಾಟಕದಿಂದ ಹೊರಗೆ ನಡೆಯುತ್ತಿದ್ದ ಕರ್ನಾಟಕ ಆಡುತ್ತಿದ್ದ ಪಂದ್ಯಗಳ ಬಗ್ಗೆ ವಿವರವನ್ನು ಸಂಜೆ ೦೬.೪೦ ರ ಪ್ರದೇಶ ಸಮಾಚಾರವನ್ನು ತಪ್ಪದೆ ಕೇಳಿ ಪಡೆದುಕೊಳ್ಳುತ್ತಿದ್ದೆ. ಪ್ರದೇಶ ಸಮಾಚಾರ ಓದುವವರಲ್ಲಿ ಒಬ್ಬರಿದ್ದರು. ಅವರ ಹೆಸರು ಕೃಷ್ಣಕಾಂತ್ (ಹೆಸರು ನೆನಪು ಮಾಡಿದ್ದು ಸಂಪದ ಓದುಗ ಶ್ರೀವತ್ಸ ಜೋಶಿಯವರು). ಇವರೆಲ್ಲಾದರೂ ಮಧ್ಯಾಹ್ನದ ೨.೨೫ಕ್ಕೆ ಪ್ರಸಾರವಾಗುವ ಪ್ರದೇಶ ಸಮಾಚಾರ ಓದುವವರಾಗಿದ್ದಲ್ಲಿ ಕರ್ನಾಟಕದ ಹೊರಗೆ ನಡೆಯುತ್ತಿದ್ದ ರಣಜಿ ಪಂದ್ಯದ ಭೋಜನ ವಿರಾಮದ ತನಕದ ಸ್ಕೋರ್-ನ್ನು ತಪ್ಪದೆ ತಿಳಿಸುತ್ತಿದ್ದರು. ಇವರನ್ನು ಬಿಟ್ಟು ಬೇರೆ ಯಾರಾದರು ಓದಲು ಬಂದಲ್ಲಿ ಮಧ್ಯಾಹ್ನದ ಪ್ರದೇಶ ಸಮಾಚಾರ ಕೇಳುವುದೇ 'ವೇಸ್ಟ್' ಎಂದೆನಿಸುತ್ತಿತ್ತು. "ಆಕಾಶವಾಣಿ. ಪ್ರದೇಶ ಸಮಾಚಾರ. ಓದುತ್ತಿರುವವರು ಕೃಷ್ಣಕಾಂತ್." ಎಂಬ ಧ್ವನಿ ಕೇಳಿದಾಗ ಅದೆಷ್ಟು ಆನಂದವಾಗುತ್ತಿತ್ತು.

ದಿನಪತ್ರಿಕೆಗಳು - ಉದಯವಾಣಿಗೆ ಮೊದಲಿಂದಲೂ ರಣಜಿ ಪಂದ್ಯಗಳೆಂದರೆ ನಂಬಲಾಗದಷ್ಟು ನಿರ್ಲಕ್ಷ್ಯ, ಈಗಲೂ ಅಷ್ಟೆ. ಕರ್ನಾಟಕ ಆಡುವ ರಣಜಿ ಪಂದ್ಯಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪ್ರಜಾವಾಣಿ/ ಡೆಕ್ಕನ್ ಹೆರಾಲ್ಡ್ ನಷ್ಟು ಚೆನ್ನಾಗಿ ಬೇರೆ ಯಾವ ದಿನಪತ್ರಿಕೆಯೂ ವಿವರಿಸುವುದಿಲ್ಲ. ಆದರೆ ಇಲ್ಲಿ 'ದ ಹಿಂದೂ' ಪತ್ರಿಕೆಯನ್ನು ಮೆಚ್ಚಲೇಬೇಕು. ದಕ್ಷಿಣ ವಲಯದ ಯಾವುದೇ ರಣಜಿ ಪಂದ್ಯವಿರಲಿ, ಯಾವುದೇ ತಂಡಗಳ ನಡುವೆ ಇರಲಿ, ಪ್ರತಿಯೊಂದು ಪಂದ್ಯಕ್ಕೆ ವರದಿಗಾರರನ್ನು ಕಳಿಸಿ ಪ್ರತಿಯೊಂದು ಪಂದ್ಯದ ಸಂಪೂರ್ಣ ವಿವರವನ್ನು ಸ್ಕೋರ್ ಪಟ್ಟಿಯ ಸಹಿತ ಪಂದ್ಯದ ಎಲ್ಲಾ ದಿನಗಳಲ್ಲೂ 'ದ ಹಿಂದೂ' ನೀಡುತ್ತದೆ. ಇದಕ್ಕೆ ಕಾರಣ 'ದ ಹಿಂದೂ' ಸಂಪಾದಕ ಎನ್.ರಾಮ್ ಓರ್ವ ಮಾಜಿ ತಮಿಳುನಾಡು ರಣಜಿ ಆಟಗಾರ (ವಿಕೆಟ್ ಕೀಪರ್ ಬ್ಯಾಟ್ಸ್-ಮನ್).

ರಂಜಿತ್ ಕನ್ವಿಲ್ಕರ್ - ಗುಂಗುರು ಕೂದಲಿನ, ೬.೫ ಅಡಿ ಎತ್ತರದ ಆಕರ್ಷಕ ವ್ಯಕ್ತಿತ್ವದ ಕನ್ವಿಲ್ಕರ್, ಸವ್ಯಸಾಚಿಯ ರೂಪದಲ್ಲಿ ಕರ್ನಾಟಕ ತಂಡದ ಮಧ್ಯ ಕ್ರಮಾಂಕದಲ್ಲಿ ಆಡುತ್ತಿದ್ದರು. ರೋಜರ್ ಬಿನ್ನಿ, ಶರದ್ ರಾವ್ ಇವರೊಂದಿಗೆ ಜೊತೆಯಾಗಿ ಆರಂಭಿಕ ಬೌಲರ್ ಆಗಿ ಯಶಸ್ಸನ್ನು ಕಂಡಿದ್ದ ಆಟಗಾರ. ಬಿರುಸಿನ ಬ್ಯಾಟಿಂಗ್ ಮಾಡುತ್ತಿದ್ದ ಮತ್ತು ವಿಕೆಟ್ ಟೇಕರ್ ಬೌಲರ್ ಆಗಿದ್ದ ಕನ್ವಿಲ್ಕರ್ ೧೯೮೨ರಿಂದ ೧೯೮೭ರವರೆಗೆ ಕರ್ನಾಟಕ ತಂಡದ ಪ್ರಮುಖ ಸದಸ್ಯರಾಗಿದ್ದರು. ನಾನು ಕನ್ವಿಲ್ಕರ್ ಅಭಿಮಾನಿಯಾಗಿದ್ದೆ. ಇಟ್ ವಾಸ್ ೧೯೮೮ ಜುಲೈ. ನಾನಾಗ ೧೦ನೇ ತರಗತಿಯಲ್ಲಿದ್ದೆ. ಆ ಋತುವಿನ ರಣಜಿ ಪಂದ್ಯಗಳು ಶುರುವಾಗಲು ಇನ್ನೂ ೪ ತಿಂಗಳಿದ್ದವು. ೧೯೮೮ರ ಜುಲೈ ತಿಂಗಳ ೯ನೇ ತಾರೀಕು. ಆ ದಿನ ಎಲ್ಲಾ ದಿನಪತ್ರಿಕೆಗಳಲ್ಲಿ ಬೆಂಗಳೂರು - ಕನ್ಯಾಕುಮಾರಿ ಐಲ್ಯಾಂಡ್ ಎಕ್ಸ್-ಪ್ರೆಸ್ ರೈಲು ಕೋಯಿಕ್ಕೋಡ್ ಸಮೀಪವಿರುವ ಅಷ್ಟಮುಡಿ ಕೆರೆಯ ಸೇತುವೆಯಿಂದ ಹಳಿ ತಪ್ಪಿ ಹಲವಾರು ಬೋಗಿಗಳು ಕೆರೆಗೆ ಉರುಳಿ ಸುಮಾರು ೧೦೦ ಪ್ರಯಾಣಿಕರು ಮೃತಪಟ್ಟ ಸುದ್ದಿ. ಅದೇ ರೈಲಿನಲ್ಲಿ ಕನ್ವಿಲ್ಕರ್ ಪ್ರಯಾಣಿಸುತ್ತಿದ್ದು ಅಪಘಾತದಲ್ಲಿ ಅವರು ಮೃತಪಟ್ಟಿರುವ ಸುದ್ದಿ ಮರುದಿನ ಮತ್ತೆ ಎಲ್ಲಾ ದಿನಪತ್ರಿಕೆಗಳಲ್ಲಿ. ರಂಜಿತ್ ಕನ್ವಿಲ್ಕರ್ ವಾಸ್ ಒನ್ಲೀ ೨೮. ಆ ದಿನಗಳಲ್ಲಿ ನಾನು ಬಹಳ ನೊಂದುಕೊಂಡಿದ್ದೆ. ಕನ್ವಿಲ್ಕರ್ ಮೃತರಾಗಿ ಇದೀಗ ಎರಡು ದಶಕಗಳೇ ಕಳೆದಿವೆ. ಆದರೂ ಕರ್ನಾಟಕಕ್ಕೆ ಇನ್ನೂ ಒಬ್ಬ ಸಮರ್ಥ ಸವ್ಯಸಾಚಿ ಆಟಗಾರ ಸಿಕ್ಕಿಲ್ಲ. ಜೆ ಅಭಿರಾಮ್ ಉತ್ತಮ ಬ್ಯಾಟಿಂಗ್ ಮಾಡುತ್ತಿದ್ದರು ಆದರೆ ಅವರ ಮಧ್ಯಮ ವೇಗದ ಬೌಲಿಂಗ್ ಅತಿ ಸಾಧಾರಣವಾಗಿತ್ತು. ಕಾರ್ತಿಕ್ ಜಸ್ವಂತ್ ಧೀರ ಹಾಗೂ ಉನ್ನತ ದರ್ಜೆಯ ಬ್ಯಾಟ್ಸ್-ಮನ್ ಆಗಿದ್ದರು ಆದರೆ ಅವರ ಸ್ಪಿನ್ ಬೌಲಿಂಗ್ ಕನ್ವಿಲ್ಕರ್-ರ್ ವೇಗದ ಬೌಲಿಂಗ್-ನಷ್ಟು ವಿಕೆಟ್ ಗಳಿಸುತ್ತಿರಲಿಲ್ಲ. ಈಗಿರುವ ಬಾಲಚಂದ್ರ ಅಖಿಲ್ ಹೆಚ್ಚು ಕಡಿಮೆ ಅಭಿರಾಮ್ ಹಾಗೇನೇ. ಕನ್ವಿಲ್ಕರ್ ಅಕಾಲಿಕ ಮರಣ ಆಗಿನ ದಿನಗಳಲ್ಲಿ ಕರ್ನಾಟಕ ಕ್ರಿಕೆಟ್-ಗೆ ದೊಡ್ಡ ನಷ್ಟವಾಗಿತ್ತು.