ಶುಕ್ರವಾರ, ಡಿಸೆಂಬರ್ 01, 2006

ಕರ್ನಾಟಕದ ಮುಕುಟಕ್ಕೆ ಪ್ರವಾಸ - ೩


ಕೋಟೆಯಿಂದ ಹೊರಬಂದು ಒಂದು ರಿಕ್ಷಾ ನಿಲ್ಲಿಸಿದೆ. 'ಅಶ್ತೂರ್-ಗೆ ಪಚಾಸ್ ರುಪ್ಯಾ ಆಗುತ್ತೆ ಸರ' ಆಂದ. ಅಲ್ಲಿಂದ ವಾಪಸ್ ಬೀದರ್ ಬರೊದಾದ್ರೆ? 'ಇನ್ನೊಂದು ಪಚಾಸ್ ರುಪ್ಯಾ ಆಗುತ್ತೆ ಸರ' ಅಂದ. ಅಶ್ತೂರ್-ನಲ್ಲಿರುವುದು ಬೀದರ್ ಆಳಿದ ಬಹಮನಿ ಸುಲ್ತಾನರ ಗೋರಿಗಳು. ಒಂಬತ್ತನೇ ಬಹಮನಿ ಸುಲ್ತಾನ ಒಂದನೇ ಶಿಯಾಬುದ್ದೀನ್ ಅಹ್ಮದ್ ಶಾ ವಾಲಿಯ ಗೋರಿಯಲ್ಲಿ ಪ್ರತಿ ವರ್ಷ ಊರುಸ್ ನಡೆಯುತ್ತದೆ. ಈತನನ್ನು ಹಿಂದುಗಳು 'ಅಲ್ಲಮ ಪ್ರಭು' ಎಂದು ಗುರುತಿಸಿ ಪೂಜಿಸುತ್ತಾರೆ. ಹನ್ನೊಂದನೇ ಬಹಮನಿ ಸುಲ್ತಾನ ಅಲ್ಲಾವುದ್ದೀನ್ ಹುಮಾಯೂನ್ ಝಾಲಿಮ್ ಶಾನ ಗೋರಿ ಮಿಂಚು ಹೊಡೆದು ಹಾನಿಗೊಳಗಾಗಿದ್ದರೂ, ತನ್ನ ಈಗಿನ ಅವತಾರದಲ್ಲಿ ಆಕರ್ಷಕವಾಗಿ ಕಾಣಿಸುತ್ತಿದೆ. ನನ್ನ ರಿಕ್ಷಾ ಚಾಲಕ ಮೊಹಮ್ಮದ್ ಸಮದ್-ನೊಂದಿಗೆ ಮಾತುಕತೆಗಿಳಿದು ನೋಡಬೇಕಾದ ಉಳಿದೆಲ್ಲಾ ಸ್ಥಳಗಳಿಗೂ ಕರೆದೊಯ್ಯುವಂತೆ ಒಪ್ಪಿಸಿದೆ.


ಅಶ್ತೂರ್ ಗೋರಿಗಳನ್ನು ನೋಡಿದ ಬಳಿಕ ಅಲ್ಲೇ ಸಮೀಪದಲ್ಲಿರುವ 'ಚೌಖಂಡಿ'ಗೆ ತೆರಳಿದೆ. ಇದು ೧೦ನೇ ಬಹಮನಿ ಸುಲ್ತಾನ ಎರಡನೇ ಅಲ್ಲಾವುದ್ದೀನ್ ಅಹ್ಮದ್ ಶಾ, ತನ್ನ ಧಾರ್ಮಿಕ ಗುರುವಾಗಿದ್ದ ಹಝ್ರತ್ ಖಲೀಲುಲ್ಲಾನಿಗೆ ಕಟ್ಟಿಸಿದ ಗೋರಿ. ಸುಲ್ತಾನರ ಗೋರಿಗಳಿಗಿಂತಲೂ ಇದು ಆಕರ್ಷಕವಾಗಿದೆ. ಗರ್ಭಗುಡಿಯಲ್ಲಿ ಖಲೀಲುಲ್ಲಾ ಮತ್ತು ಆತನ ಇಬ್ಬರು ಹೆಣ್ಣು ಮಕ್ಕಳ ಗೋರಿಯಿದ್ದರೆ, ಹೊರಗಡೆ ಆತನ ಎಲ್ಲಾ ಸಂಬಂಧಿಕರ ಗೋರಿಗಳಿವೆ. ಅಲ್ಲಿ ಒಂದು ಗೋರಿಯ ಬದಿಯಲ್ಲಿ ನಿಂತು ಇಬ್ಬರು ಹೆಂಗಸರು ಅಳುತ್ತಿದ್ದರೊ ಅಥವಾ ಪ್ರಾರ್ಥಿಸುತ್ತಿದ್ದರೊ ಎಂದು ತಿಳಿಯದೆ ಸಮದ್-ನಲ್ಲಿ ಕೇಳಿದಾಗ 'ಅವ್ರು ದುವಾ ಕೇಳಾಕ್-ಹತಾರ್ರೀ ಸರ' ಅಂದ. 'ದುವಾ ಅಲ್ಲಾಹ್-ನಲ್ಲಿ ಕೇಳಬೇಕಲ್ಲವೇ...ಈ ಗೋರಿಯ ಕೆಳಗಡೆ ಮಲಗಿದವನಲ್ಲಿ ಏನು ದುವಾ ಕೇಳೋದು' ಎಂದು ಕೇಳಿದರೆ ಸಮದ್-ನಲ್ಲಿ ಉತ್ತರವಿಲ್ಲ.

ಚೌಖಂಡಿಯ ಮೇಲೆ ತೆರಳಲು ಮೆಟ್ಟಿಲುಗಳನ್ನು ಹುಡುಕತೊಡಗಿದರೆ, ಸಿಗುತ್ತಲೇ ಇರಲಿಲ್ಲ. ಗರ್ಭಗುಡಿಗೆ ೩ ಸುತ್ತು ಹೊಡೆದರೂ ಮೆಟ್ಟಿಲುಗಳು ಸಿಗಲಿಲ್ಲ. ಹೊರಬಂದು ಚೌಖಂಡಿಗೆ ಸುತ್ತು ಹಾಕಿದರೂ ಮೆಟ್ಟಿಲುಗಳ ಪತ್ತೆ ಇಲ್ಲ. ಸಮದ್-ನನ್ನು ಕೇಳಿದರೆ 'ಪತಾ ನಹೀ ಸಾಬ್' ಎಂದು ಮೂರ್ಖ ನಗು ಕೊಟ್ಟ. ಈ ಮೆಟ್ಟಿಲುಗಳು ಮತ್ತೆ ವಿಸ್ಮಯವನ್ನುಂಟುಮಾಡಲಾರಂಭಿಸಿದವು. ಆಗ ಸಮದ್ ಅಲ್ಲೇ ಆಟವಾಡುತ್ತಿದ್ದ ಇಬ್ಬರು ಹೆಣ್ಣು ಮಕ್ಕಳನ್ನು ಕೇಳಿದಾಗ, ಅವರು ಮೆಟ್ಟಿಲು ಇರುವ ಜಾಗ ತೋರಿಸಿದರು. ನಿಜಕ್ಕೂ ಅದ್ಭುತ! 'ಕತ್ತಲೆ ಇದೆ ಸರ, ಅಂಧೇರಾ, ನಾ ಬರಂಗಿಲ್ಲ ಸರ. ಅಂದರ್ ಬಾವ್ಲಿ ಅದಾವು ಸರ. ಆ ಬಾವ್ಲಿಗಳು ಕಾನ್ ಪಕಡ್ತೆ ಸಾಬ್' ಎಂದು ಮತ್ತೆ ಮೂರ್ಖನ ಹಾಗೆ ಸಮದ್ ತೊದಲಿದ. ನಾನು ಹುಂಬ ಧೈರ್ಯದಿಂದ 'ನೀ ಬರೋದಿದ್ರೆ ಬಾ' ಎಂದು ಕಡಿದಾಗಿ ಕೆತ್ತಿದ ಮೆಟ್ಟಿಲುಗಳನ್ನೇರಿದೆ. ಅದ್ಭುತವಾಗಿ ಕೆತ್ತಿದ ಮೆಟ್ಟಿಲುಗಳು. ಮೊದಲನೇ ಮಹಡಿ ತಲುಪಿ, ಹಿಂತಿರುಗಿ ನೋಡಿದರೆ, ಸಮದ್ ಎರಡೂ ಕಿವಿಗಳನ್ನು ಕೈಗಳಿಂದ ಮುಚ್ಚಿಕೊಂಡು ಬರುತ್ತಾ ಇದ್ದ! ಹಾಗೇ ಮೊದಲನೇ ಮಹಡಿಗೆ ಸುತ್ತು ಹಾಕುತ್ತಿರುವಾಗ, ತಾರಸಿಗೆ ತೆರಳುವ ಮೆಟ್ಟಿಲುಗಳು ಕಾಣಿಸಿದವು. ಕೆಳಗಿಳಿಯುವಾಗ ಮೆಟ್ಟಿಲುಗಳು ಸಿಗದೆ ಉಂಟಾದ ಗಾಬರಿ ನಂತರ, ಸಿಕ್ಕ ಮೇಲೆ ಇಳಿದು ಏರಿ ಮತ್ತೆ ಇಳಿದು ಉಂಟಾದ 'ಕನ್-ಫ್ಯೂಶನ್' ಹೇಳಿ ಪ್ರಯೋಜನವಿಲ್ಲ, ಅನುಭವಿಸಬೇಕು.


ನಂತರ ತೆರಳಿದ್ದು ನರಸಿಂಹ ಝರಣಿಗೆ. ಇದೊಂದು ಗುಹಾ ದೇವಸ್ಥಾನ. ನರಸಿಂಹ ದೇವರನ್ನು ಗುಹೆಯ ಒಳಗೆ ಗೋಡೆಯಲ್ಲಿ ಕೆತ್ತಲಾಗಿದೆ. ಆದರೆ ನರಸಿಂಹ ದೇವರ ದರ್ಶನ ಪಡೆಯಲು ೯೧ ಮೀಟರ್, ಪ್ರಾರಂಭದಲ್ಲಿ ಎದೆ ಮಟ್ಟಕ್ಕೆ ನಂತರ ಸೊಂಟ ಮಟ್ಟಕ್ಕಿರುವ ನೀರಿನಲ್ಲಿ ತೆರಳಬೇಕು. ಇದೊಂದು ಭೂಮಿಯ ಕೆಳಗಿರುವ ಕರ್ನಾಟಕದ ಏಕೈಕ (ಸಾಕ್ಷಿ ಆಧಾರಗಳಿಲ್ಲ) ತೊರೆ. ರವಿವಾರವಾದ್ದರಿಂದ ಭಕ್ತರ ಮಹಾಪೂರವೇ ಅಲ್ಲಿತ್ತು.


ನನಗೂ ಗುಹೆ ಒಳಗೆ ತೆರಳುವ ಆಸೆಯಿತ್ತು. ಆದರೆ, ದೇವರ ದರ್ಶನ ಪಡೆದು ಹೊರಬಂದವರನ್ನು ನೋಡಿ ಆ ಆಸೆಯನ್ನು ಕೈಬಿಟ್ಟೆ. ಹೆಂಗಸರು, ಗಂಡಸರು ಮತ್ತು ಮಕ್ಕಳು ಎಲ್ಲರೂ ತಲೆಯಿಂದ ಕಾಲಿನವರೆಗೆ ಪೂರ್ತಿಯಾಗೆ ಒದ್ದೆಯಾಗಿ ಗುಹೆಯಿಂದ ಹೊರಬರುತ್ತಿದ್ದರು. ಇನ್ನೂ ಸುಮಾರು ಸ್ಥಳಗಳನ್ನು ನೋಡುವುದು ಬಾಕಿ ಇದ್ದಿದ್ದರಿಂದ, ಮೈ ತೋಯಿಸಿಕೊಂಡು ದೇವರ ದರ್ಶನ ಮಾಡುವ ಮನಸ್ಸಾಗದೆ, ಗುಹೆಯ ದ್ವಾರದಿಂದಲೇ ನರಸಿಂಹ ದೇವರಿಗೆ ನಮಸ್ಕರಿಸಿ ಸಮದ್-ನ ರಿಕ್ಷಾಗೆ ಹಿಂತಿರುಗಿದೆ.


ನಂತರದ ಸರದಿ ಗುರು ನಾನಕ್ ಝೀರಾದ್ದು. ಸಿಖ್ ಗುರು, ಗುರು ನಾನಕ್-ರ ಬೀದರ್ ಭೇಟಿಯ ಸ್ಮಾರಕವಾಗಿ ಸ್ಥಾಪಿಸಲಾದ ಸಣ್ಣ ಗುರುದ್ವಾರ, ಇಂದು ಭವ್ಯವಾದ ಬಿಳಿ ಬಣ್ಣದ ಸುಂದರ ಗುರುದ್ವಾರವಾಗಿದೆ. ಶೂ ತೆಗೆದರೆ ಸಾಲದು ಸಾಕ್ಸ್ ಕೂಡಾ ತೆಗೆದು, ತಲೆಗೆ ರುಮಾಲೊಂದನ್ನು ಸುತ್ತಿ, ಮೆಟ್ಟಿಲುಗಳ ಮೊದಲೇ ಇದ್ದ ನೀರಿನಲ್ಲಿ ಕಾಲು ತೊಳೆದುಕೊಂಡೇ ನಾನು ಒಳಹೊಕ್ಕಬೇಕೆಂದು ಅಲ್ಲಿದ್ದವನೊಬ್ಬ ಒತ್ತಾ(ಸತಾ)ಯಿಸುತ್ತಿದ್ದ. ಪ್ರಥಮ ಬಾರಿಗೆ ಗುರುದ್ವಾರವೊಂದನ್ನು ಸಮೀಪದಿಂದ ನೋಡಿದೆ, ಒಳ ಹೊಕ್ಕಿದೆ. ನೀಡಿದ ಪ್ರಸಾದ ಮಾತ್ರ ಬಹಳ ರುಚಿಯಾಗಿತ್ತು. ನಾಚಿಕೆ ಬಿಟ್ಟು ಪ್ರಸಾದವನ್ನು ಮತ್ತೊಮ್ಮೆ ಕೇಳಿದೆ. ನಗುತ್ತಲೇ ಆತ ನೀಡಿದ. ಮತ್ತೆ ಕೇಳಬೇಕೆಂದು ಅನಿಸಿದರೂ, ಅಷ್ಟೂ ನಾಚಿಕೆ ಬಿಟ್ಟವನಾಗುವುದು ಬೇಡವೆಂದು ಸುಮ್ಮನುಳಿದೆ. ಯಾವಾಗಲೂ ಪ್ರಸಾದ ಹೀಗೆ ಮಾಡುತ್ತೀರಾ ಎಂದು ಕೇಳಿದಾಗ ಆತ ಹೌದೆಂದ. ಈ ಗುರುದ್ವಾರಕ್ಕೆ ಏನಿಲ್ಲವೆಂದರೂ ಪ್ರಸಾದ ತಿನ್ನುವುದಕ್ಕಾದರೂ ಹೋಗಲೇಬೇಕು.


ಗುರುದ್ವಾರದಿಂದ ಸಮದ್ ತೆರಳಿದ್ದು ಬಾರಿದ್ ಪಾರ್ಕಿಗೆ. ಆದರೆ ಪಾರ್ಕ್ ತೆರೆಯುವುದೇ ಸಂಜೆ ೫ ಗಂಟೆಗಾದ್ದರಿಂದ ಮತ್ತು ಸಮಯವಿನ್ನೂ ೪.೪೫ ಆಗಿದ್ದರಿಂದ, ಸಮದ್, ರಿಕ್ಷಾವನ್ನು ಪಾಪನಾಶ ಶಿವ ದೇವಸ್ಥಾನದತ್ತ ಓಡಿಸಿದ. ಬೀದರ್ ನಗರದ ಮಧ್ಯದಲ್ಲೇ ಒಂದು ಪ್ರಶಾಂತ ಕಣಿವೆಯಲ್ಲಿ ಪಾಪನಾಶ ಶಿವ ದೇವಸ್ಥಾನವಿದೆ. ಈ ದೇವಸ್ಥಾನದ ವೈಶಿಷ್ಟ್ಯವೆಂದರೆ, ಭಕ್ತರು ಗರ್ಭಗುಡಿಯ ಒಳಗೆ ಹೋಗಿ ಶಿವಲಿಂಗವನ್ನು ಮುಟ್ಟಿ ನಮಸ್ಕರಿಸಬಹುದು. ಶ್ರೀ ರಾಮನು ಲಂಕಾದಿಂದ ಹಿಂತಿರುಗುವಾಗ ಈ ಶಿವಲಿಂಗವನ್ನು ಪ್ರತಿಷ್ಠಾಪಿಸಿದನು ಎಂಬುದು ಪ್ರತೀತಿ. ಸರ್ಪಕಾವಲಿನ ಈ ಶಿವಲಿಂಗ ಬಹಳ ಸುಂದರವಾಗಿದೆ. ಬೀದರ್ ನಗರದಲ್ಲಿ ಇಂತಹ ಸುಂದರ ಸ್ಥಳ ಇರಬಹುದು ಎಂದು ಕಲ್ಪಿಸಿರಲಿಲ್ಲ.


ಮತ್ತೆ ಬಾರಿದ್ ಪಾರ್ಕಿಗೆ ಹಿಂತಿರುಗಿದೆ. ಈ ಸ್ಥಳವನ್ನು ಬೀದರ್ ನಗರಪಾಲಿಕೆ, ಒಂದು ಸುಂದರ ಉದ್ಯಾನವನವನ್ನಾಗಿ ಮಾರ್ಪಡಿಸಿ ಸಾರ್ವಜನಿಕರ ಭೇಟಿಗೆ ಅವಕಾಶ ನೀಡಿದೆ. ನನಗೆ ಎರಡನೇ ಕಾಸಿಮ್ ಬಾರಿದ್ ಶಾ ಹಾಗೂ ಅಲಿ ಬಾರಿದ್ ಶಾ ಇವರುಗಳ ಗೋರಿಗಳನ್ನು ನೋಡಬೇಕಿತ್ತು. ಇವೆರಡು ಬಾರಿದ್ ಪಾರ್ಕಿನಲ್ಲಿರಬಹುದೆಂದು ಒಳ ಹೊಕ್ಕರೆ ಅಲ್ಲಿ ಎರಡನೇ ಕಾಸಿಮ್ ಬಾರಿದ್-ನ್ ಮಡದಿ ಚಾಂದ್ ಬೀಬಿ ಹಾಗೂ ಸಂಸಾರದ ಇತರ ಸದಸ್ಯರ ಗೋರಿಗಳು ಮಾತ್ರ ಇದ್ದವು. ನಿರಾಸೆಯಿಂದ ಪಾರ್ಕಿನಿಂದ ಹೊರಬಂದಾಗ ದೂರದಲ್ಲಿ ಒಂದು ವಿಶಾಲವಾದ ತೋಪಿನ ಮತ್ತೊಂದು ತುದಿಯಲ್ಲಿ ಎರಡು ದೊಡ್ಡ ಗೋರಿಗಳು ಕಂಡವು. ಸಮದ್-ನಿಗೆ ಅಲ್ಲಿ ಒಯ್ಯಲು ಹೇಳಿದೆ. ಇಲ್ಲಿದ್ದವು ನಾನು ನೋಡಬೇಕೆಂದ ಎರಡು ಗೋರಿಗಳು. ಅದ್ಭುತವಾಗಿ ರಚಿಸಲಾಗಿರುವ ಈ ಎರಡು ಬಾರಿದ್ ಶಾಹಿ ವಂಶದ ಸುಲ್ತಾನರ ಗೋರಿಗಳು, ಬಹಮನಿ ಸುಲ್ತಾನರ ಗೋರಿಗಳನ್ನು ಮೀರಿಸಿ ನಿಂತಿವೆ. ಸಮೀಪದಲ್ಲೇ ಇತ್ತು ಸ್ಮಶಾನದ ಮಸೀದಿ.


ಮರಳಿ ವಸತಿಗೃಹಕ್ಕೆ ಬಂದಾಗ ಸಂಜೆ ೬.೩೦. ಮಧ್ಯಾಹ್ನ ೧.೩೦ರಿಂದ ಸಂಜೆ ೬.೩೦ರ ವರೆಗೆ ನನ್ನೊಂದಿಗಿದ್ದು ಸುಮಾರು ೪೦ ಕಿ.ಮಿ.ಗಳಷ್ಟು ದೂರ ರಿಕ್ಷಾ ಓಡಿಸಿದ ಸಮದ್ ಕೇಳಿದ್ದು ಕೇವಲ ೩೫೦ ರೂಪಾಯಿ.

೭.೦೦ ಗಂಟೆಗೆ ಬೀದರ್-ನಿಂದ ಬಸವಕಲ್ಯಾಣ ಬಸ್ಸಿನಲ್ಲಿ ಹೊರಟು ಹುಮ್ನಾಬಾದ್ ಮೂಲಕ ರಾತ್ರಿ ೯.೧೫ಕ್ಕೆ ಬಸವಕಲ್ಯಾಣ ತಲುಪಿ ಮತ್ತೊಂದು ವಸತಿಗೃಹಕ್ಕೆ ಹೊಕ್ಕು, ಜವಾರಿ ರೊಟ್ಟಿ, ಶೇಂಗಾ ಚಟ್ನಿ, ಮೊಸರು, ಬೆಂಡೆಕಾಯಿ ಪಲ್ಯಗಳ ಭರ್ಜರಿ ಊಟ ಮಾಡಿ ಪ್ರಯಾಣದ ಎರಡನೇ ದಿನ ಮುಗಿಸಿದಾಗಲೇ ನೆನಪು, ಮಧ್ಯಾಹ್ನ ಊಟಾನೇ ಮಾಡಲಿಲ್ಲ ಎಂದು.

ಮುಂದುವರಿಯುವುದು... ೪ನೇ ಭಾಗದಲ್ಲಿ.

ಒಂದನೇ ಭಾಗ ಇಲ್ಲಿದೆ. ಎರಡನೇ ಭಾಗ ಇಲ್ಲಿದೆ.

ಕಾಮೆಂಟ್‌ಗಳಿಲ್ಲ: